ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಸಂತನ್‌ ಸಾವು

ಮರಣೋತ್ತರ ಪರೀಕ್ಷೆ ನಂತರ ಮೃತದೇಹ ಶ್ರೀಲಂಕಾಕ್ಕೆ ಹಸ್ತಾಂತರ;

Update: 2024-02-28 07:47 GMT
ಸಂತನ್‌

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಂತನ್ ಅಲಿಯಾಸ್ ಟಿ ಸುತೇಂದ್ರರಾಜ (55) ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಶ್ರೀಲಂಕಾ ಮೂಲದ ಸಂತನ್ ಅಲಿಯಾಸ್ ಟಿ ಸುತೇಂದ್ರರಾಜ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಅಪರಾಧಿಯಾಗಿದ್ದ. 1991ರಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಸಂತನ್‌ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದರು. 2022ರಲ್ಲಿ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದ ಏಳು ವ್ಯಕ್ತಿಗಳಲ್ಲಿ ಸಂತನ್‌ ಸಹ ಒಬ್ಬರಾಗಿದ್ದರು.

ಸಂತನ್‌ ಲಿವರ್‌ ಸಮಸ್ಯೆಯಿಂದ ಸಹ ಬಳಲುತ್ತಿದ್ದರು. ಆದರೆ, ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿ, ಅಗತ್ಯ ಚಿಕಿತ್ಸೆ ನೀಡಲಾಗಿತ್ತು. ಅಲ್ಲದೇ ವೆಂಟಿಲೇಟರ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಸಂತನ್ ಬಧವಾರ ಬೆಳಿಗ್ಗೆ 7.50ಕ್ಕೆ ಮೃತಪಟ್ಟಿದ್ದಾರೆ ಎಂದು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯ ಡೀನ್ ಇ ತೇರನಿರಾಜನ್ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಶ್ರೀಲಂಕಾಕ್ಕೆ ಕಳುಹಿಸುವುದಾಗಿ ತೇರನಿರಾಜನ್ ಮಾಹಿತಿ ನೀಡಿದ್ದಾರೆ.  

Tags:    

Similar News