ಕೇಂದ್ರ ಸರ್ಕಾರದ ಹೊಸ ಕಾನೂನು | ಕೆಲವು ಉತ್ತಮ ಅಂಶಗಳೂ ಇವೆ: ಗೃಹ ಸಚಿವ ಜಿ. ಪರಮೇಶ್ವರ್
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾನೂನುಗಳಿಗೆ ಕೆಲವು ನಿರ್ದಿಷ್ಟ ತಿದ್ದುಪಡಿಗಳನ್ನು ತರುವುದಾಗಿ ಹೇಳಿದೆ. ಇದರ ನಡುವೆಯೇ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಕೇಂದ್ರ ಸರ್ಕಾರ ಹೊಸ ಕಾನೂನಿನಲ್ಲಿ ಉತ್ತಮ ಅಂಶಗಳೂ ಇವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.;
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾನೂನುಗಳಿಗೆ ಕೆಲವು ನಿರ್ದಿಷ್ಟ ತಿದ್ದುಪಡಿಗಳನ್ನು ತರುವುದಾಗಿ ಹೇಳಿದೆ. ಇದರ ನಡುವೆಯೇ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಕೇಂದ್ರ ಸರ್ಕಾರ ಹೊಸ ಕಾನೂನಿನಲ್ಲಿ ಉತ್ತಮ ಅಂಶಗಳೂ ಇವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೊಸ ಕಾನೂನಿನ ಜಾರಿಯ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಾತನಾಡಿದ್ದು, ನೂತನ ಮೂರು ಕಾನೂನಿನ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಹೊಸ ಕಾನೂನು ಚರ್ಚೆಯಾಗಬೇಕು
ʻಹೊಸ ಕಾನೂನುಗಳು ಒಂದು ರಾಜ್ಯಕ್ಕೆ ಮಾತ್ರ ಸಂಬಂಧಪಟ್ಟಿದ್ದರೆ ವಾಪಸ್ ಪಡೆಯುವಂತೆ ಹೇಳಬಹುದಿತ್ತು. ಇದು ಇಡೀ ದೇಶಕ್ಕೆ ಸಂಬಂಧಿಸಿದೆʼ ಎಂದು ಜಿ ಪರಮೇಶ್ವರ್ ಹೇಳಿದ್ದಾರೆ.
ʻಹೊಸ ಕಾನೂನಿನ ಅಡಿಯಲ್ಲಿ ಕರ್ನಾಟಕದಲ್ಲಿ 80 ಪ್ರಕರಣಗಳು, ಬೆಂಗಳೂರು ನಗರದಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳು ಸೋಮವಾರ (ಜುಲೈ 1) ದಾಖಲಾಗಿವೆ. ಮುಂದಿನ ದಿನಗಳಲ್ಲಿ ಲಕ್ಷಾಂತರ ಪ್ರಕರಣಗಳು ದಾಖಲಾಗುತ್ತವೆ. ಇದೆಲ್ಲವನ್ನು ಹೊಸ ಕಾನೂನಿನ ಅಡಿ ದಾಖಲಿಸಬೇಕು. ಈ ನಿಟ್ಟಿನಲ್ಲಿ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಅವರು ಹೊಸ ಕಾನೂನುಗಳನ್ನು ಪಾಲಿಸಲಿದ್ದಾರೆʼ ಎಂದರು.
ಉಪವಾಸ ಸತ್ಯಾಗ್ರಹ ಮಾಡಿದರೆ ಆತ್ಮಹತ್ಯೆ ಪ್ರಕರಣ ದಾಖಲಾಗುವ ಕುರಿತು ಮಾತನಾಡಿ, ʻಈ ರೀತಿ ಅನೇಕ ವಿಚಾರಗಳ ಕುರಿತು ಚರ್ಚೆ ಮಾಡಬಹುದು. ಕೆಲವು ಉತ್ತಮವಾದ ಅಂಶಗಳು ಇವೆ. ಎಲ್ಲವನ್ನೂ ತೆಗೆದು ಹಾಕಲು ಆಗುವುದಿಲ್ಲ. ಬ್ರಿಟಿಷ್ ಕಾಲದಲ್ಲಿ ಇದ್ದ ಕಾನೂನುಗಳನ್ನು ಬದಲಾವಣೆ ಮಾಡಿ, ಆಧುನಿಕ ಜಗತ್ತಿಗೆ ಬೇಕಾದ ಕಾನೂನುಗಳನ್ನು ಅಳವಡಿಸಲಾಗಿದೆ; ಎಂದು ತಿಳಿಸಿದರು.
ʻಕೆಲವನ್ನು ನಾನು ಈಗಲೇ ಹೇಳುವುದಿಲ್ಲ. ಹೇಳಿದರೆ ಬೇರೆ ರೀತಿಯ ಅರ್ಥ ಬರುತ್ತದೆ. ಕೆಲವು ಕಾನೂನಿನ ಪ್ರಾವಿಷನ್ಸ್ ಸರಿಯಾಗಿ ಕಾಣಿಸುವುದಿಲ್ಲ. ಈ ಹಿಂದೆ ದಾಖಲಿಸುತ್ತಿದ್ದ ಪ್ರಕರಣಗಳು, ಈಗ ದಾಖಲಿಸಬೇಡಿ ಎಂಬರ್ಥದಲ್ಲಿವೆ. ಅವುಗಳ ಬಗ್ಗೆ ಚರ್ಚೆಯಾಗಬೇಕಿದೆʼ ಎಂದರು.
ʻನಾವು ಕೆಲವು ವ್ಯಕ್ತಿಗಳನ್ನು ಬಂಧಿಸಿ, ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ತನಿಖೆ ನಡೆಯುತ್ತಿದೆ. ಅಂತವುಗಳನ್ನು ಬಿಟ್ಟು ಬಿಡಬೇಕು ಎಂದು ಹೊಸ ಕಾನೂನಿನಲ್ಲಿ ಬಂದಿದೆ. ಮುಂದೆ ಅಂತಹ ಪ್ರಕರಣ ಬಂದಾಗ ದಾಖಲಿಸಬೇಡಿ ಎಂಬ ಲೆಕ್ಕದಲ್ಲಿವೆ. ಆದ್ದರಿಂದ ಇಂತಹ ವಿಚಾರಗಳ ಬಗ್ಗೆ ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ತಿಳಿಸಬೇಕಾಗುತ್ತದೆ. ಇದರಂತೆ ಸರಿಪಡಿಸಿಕೊಳ್ಳಬೇಕುʼ ಎಂದು ಅಭಿಪ್ರಾಯಪಟ್ಟರು.
ಮೂಡಾ ಅಕ್ರಮದ ಬಗ್ಗೆ ಮಾತನಾಡಿದ ಪರಮೇಶ್ವರ್ ಅವರು, ʻಸಾಕ್ಷ್ಯಗಳನ್ನು ನಾಶ ಮಾಡುತ್ತಾರೆ ಎಂಬ ಕಾರಣದಿಂದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ. ಆರೋಪಗಳು ಕೇಳಿ ಬಂದಾಗ ನಡೆಯುವ ಸಾಮಾನ್ಯ ಪ್ರಕ್ರಿಯೆ ಇದಾಗಿದೆ. ಮುಂದೆ ಇಲಾಖೆಯ ವಿಚಾರಣೆಯಲ್ಲಿ ಅಕ್ರಮ ನಡೆದಿರುವುದು ಕಂಡು ಬಂದರೆ, ಪೊಲೀಸ್ ತನಿಖೆಗೆ ವಹಿಸುವ ಬಗ್ಗೆ ಅವರು ತೀರ್ಮಾನ ಮಾಡುತ್ತಾರೆʼ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಎಚ್.ವಿಶ್ವನಾಥ್ ಆರೋಪಕ್ಕೆ ಪ್ರತಿಕ್ರಿಯಿಸಿ, ಕೆಲವರು ಹೇಳಿದ್ದೆಲ್ಲವು ಸತ್ಯವಲ್ಲ. ತನಿಖೆ ಮಾಡಿ, ಸತ್ಯಾಂಶಗಳು ಬೆಳಕಿಗೆ ಬಂದ ನಂತರ ಯೋಚಿಸೋಣ ಎಂದರು.
ವಿಶೇಷ ಸತ್ಕಾರವಿಲ್ಲ:- ದರ್ಶನ್‌ಗೆ ಜೈಲಿನಲ್ಲಿ ಯಾವುದೇ ರೀತಿಯ ವಿಶೇಷ ಸತ್ಕಾರ ಕೊಡುತ್ತಿಲ್ಲ. ಇದರ ಬಗ್ಗೆ ಅಂದೇ ಸ್ಪಷ್ಟಪಡಿಸಿದ್ದೇನೆ. ಬಿರಿಯಾನಿ ಅವೆಲ್ಲ ಏನೂ ಕೊಡುತ್ತಿಲ್ಲ. ಜೈಲಿನ ಒಳಗೂ ಬಿರಿಯಾನಿ ಕೊಡುತ್ತಿಲ್ಲ. ಬೇಕಾದರೆ ನನ್ನ ಜತೆ ಬನ್ನಿ, ಕರೆದುಕೊಂಡು ಹೋಗಿ ತೋರಿಸುತ್ತೇನೆ ಎಂದು ಹೇಳಿದರು.