ಬಿಜೆಪಿ– ಜೆಡಿಎಸ್ ಶಕ್ತಿ ಪ್ರದರ್ಶನ | ಕಾಂಗ್ರೆಸ್ ವಿರುದ್ಧ ನಿಖಿಲ್ ವಾಗ್ದಾಳಿ

ಕಾಂಗ್ರೆಸ್‌ನಿಂದ ರಾಮನಗರದಲ್ಲಿ ಸೀರೆ, ಬಟ್ಟೆ ಹಂಚಿಕೆ: ಆರೋಪ

Update: 2024-03-20 08:26 GMT
ನಿಖಿಲ್‌ ಕುಮಾರಸ್ವಾಮಿ

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ “ಜೆಡಿಎಸ್ ಸ್ವಯಂ ಆತ್ಮಹತ್ಯೆ (ಸೆಲ್ಪ್‌ ಸೂಸೈಡ್) ಮಾಡಿಕೊಳ್ಳುತ್ತಿದೆ” ಎನ್ನುವ ಹೇಳಿಕೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಅಪಸ್ವರ ಕೇಳಿ ಬಂದ ಬೆನ್ನಲ್ಲೇ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ರಾಮನಗರದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಬಿಜೆಪಿ-ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್ ಕುಮಾರ ಸ್ವಾಮಿ, ಡಿ.ಕೆ ಶಿವಕುಮಾರ್ ಅವರ ಹೇಳಿಕೆಯಲ್ಲಿ ಹತಾಶೆ ಎದ್ದು ಕಾಣ್ತಿದೆ. ಅವರ ಹೇಳಿಕೆಗಳಿಗೆ ಜನರೇ ಉತ್ತರಿಸಲಿದ್ದಾರೆ. ಸೆಲ್ಫ್ ಸೂಸೈಡ್ ಯಾರು ಮಾಡಿಕೊಳ್ಳಲಿದ್ದಾರೆ ಎನ್ನುವುದು ಗೊತ್ತಾಗಲಿದೆ ಎಂದು ತಿರುಗೇಟು ನೀಡಿದರು.

ಮಂಡ್ಯದಲ್ಲಿ ಅಭಿಪ್ರಾಯ ಸಂಗ್ರಹ

ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಯಾರು ಸ್ಪರ್ಧಿಸಬೇಕು ಎನ್ನುವ ವಿಚಾರವಾಗಿ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಇದನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಮಂಡ್ಯದಲ್ಲಿಯೇ ಸಮರ್ಥ ಅಭ್ಯರ್ಥಿಗಳಿದ್ದಾರೆ. ಆದರೆ, ಕಾರ್ಯಕರ್ತರಲ್ಲಿ ನಾನು ಕಳೆದ ಬಾರಿ ಸೋತ ಸೋಲಿನ ನೋವು ಹೋಗಿಲ್ಲ. ಹೀಗಾಗಿ, ನಾನೇ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ನಿಖಿಲ್ ತಿಳಿಸಿದ್ದಾರೆ.

ಒಬ್ಬ ಯುವ ಕಾರ್ಯಕರ್ತನಾಗಿ ಪಕ್ಷದ ಫಲಿತಾಂಶಕ್ಕೆ ಕೆಲಸ ಮಾಡ್ತೀನಿ. ಕಾರ್ಯಕರ್ತರ ಅಭಿಪ್ರಾಯವನ್ನೂ ಗೌರವಿಸಬೇಕು. ನಾನು ಮಂಡ್ಯದಲ್ಲಿ ಸ್ಪರ್ಧೆ ಮಾಡಿದರೆ, ಉಳಿದ ಕ್ಷೇತ್ರಕ್ಕೆ ಹೆಚ್ಚು ಸಮಯ ಕೊಡಲು ಆಗುವುದಿಲ್ಲ. ಕೋಲಾರ, ಹಾಸನ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲೂ ನಾನು ಸಂಘಟನೆ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್‌ನಿಂದ ಸೀರೆ ಹಂಚಿಕೆ: ಆರೋಪ

ಕಾಂಗ್ರೆಸ್ ಶಾಸಕರಿಂದ ಮತದಾರರಿಗೆ ಸೀರೆ ಹಂಚಿಕೆ ಮಾಡಲಾಗುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ. ರಾಮನಗರದ ವಾರ್ಡ್ ನಂ.1ರಲ್ಲಿ ಸೀರೆ, ಬಟ್ಟೆಗಳನ್ನು ಜಪ್ತಿ ಮಾಡಲಾಗಿದೆ. ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಸೀರೆಗಳನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ. ಆದರೆ, ಇಲ್ಲಿಯವರೆಗೂ ಕ್ರಮವಾಗಿಲ್ಲ ಎಂದು ದೂರಿದ್ದಾರೆ.

3700 ಉಡುಪುಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ. 14 ಲಕ್ಷ ಮೌಲ್ಯದ ವಸ್ತಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದೆಲ್ಲವೂ ಎಲ್ಲಿಂದ ಬಂತು ಹಾಗೂ ಯಾರಿಗೆ ಸೇರಿದ್ದು ಎನ್ನುವ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವಸ್ತುಗಳು ಎನ್.ಎಂ.ಗ್ರಾನೈಟ್ ಸಂಸ್ಥೆಗೆ ಸೇರಿದ್ದು, ಇದರ ಮಾಲೀಕರು ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಅವರ ಕಂಪನಿ ಹೆಸರಿನಲ್ಲೇ ಸೀರೆ ಬುಕ್ ಮಾಡಲಾಗಿದೆ ಎಂದು ಕೆಲವು ದಾಖಲೆಗಳನ್ನು ನಿಖಿಲ್ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಕಾರ್ಯಕರ್ತರು ದೂರು ನೀಡಿದರೂ, ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಯುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ನಾನು ಸಹ ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ. ಅಕ್ರಮವಾಗಿ ಹಣ ಲೂಟಿ ಮಾಡಿ, ಚುನಾವಣಾ ಅಕ್ರಮಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ಮೇಲೆ ಆರೋಪ ಮಾಡಿದರು.  

ಡಾ. ಮಂಜುನಾಥ್ ಅವರು ವೈದ್ಯಕೀಯ ಸೇವೆ ಮಾಡುವ ಮೂಲಕ ಖ್ಯಾತಿ ಗಳಿಸಿದ್ದಾರೆ. ಸಾವಿರಾರು ಬಡವರ ಪಾಲಿನ ದೇವರಾಗಿದ್ದಾರೆ. ಅವರನ್ನು ಕಾಂಗ್ರೆಸ್ ಶಾಸಕರು ಟೀಕಿಸುತ್ತಿದ್ದಾರೆ. ಮಾಗಡಿ ಶಾಸಕರು ಡಾ.ಮಂಜುನಾಥ್ ಅವರಿಗೆ ರಾಜಕೀಯ ತೆವಲು ಎಂದು ಹೇಳಿದ್ದಾರೆ. ತೆವಲು ಎನ್ನುವ ಪದದ ಅರ್ಥ ಆ ಶಾಸಕರಿಗೆ ಗೊತ್ತಿದೆಯೇ ಎಂದು ನಿಖಿಲ್ ಪ್ರಶಿಸಿದರು.

Tags:    

Similar News