ಹಮಾಸ್‌ನಿಂದ 17 ಥಾಯ್ ಒತ್ತೆಯಾಳು ಬಿಡುಗಡೆ: ಅದ್ಧೂರಿ ಸ್ವಾಗತ

ಏಳು ದಿನಗಳ ಕಾಲ ಕದನ ವಿರಾಮದಲ್ಲಿ ಹಮಾಸ್‌ನಿಂದ 81 ಒತ್ತೆಯಾಳುಗಳನ್ನು ಬಿಡುಗಡೆ;

Update: 2024-02-05 06:30 GMT

ಹಮಾಸ್‌ ಸೆರೆಯಿಂದ ಬಿಡುಗಡೆಗೊಂಡ 17 ಥಾಯ್ ಕಾರ್ಮಿಕರು ಗುರುವಾರ (ನವೆಂಬರ್ 30) ಬ್ಯಾಂಕಾಕ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ. ಅವರ ಕುಟುಂಬ ಮತ್ತು ಸ್ನೇಹಿತರು, ಅಧಿಕಾರಿಗಳು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.


ಥಾಯ್ ಪ್ರಜೆಗಳಲ್ಲಿ ಇದುವರೆಗೆ 17 ಮಂದಿ ಬಿಡುಗಡೆಗೊಂಡಿದ್ದಾರೆ, ಆರು ಮಂದಿ ಇಸ್ರೇಲ್‌ನಲ್ಲಿ ತಾತ್ಕಾಲಿಕವಾಗಿ ಉಳಿದುಕೊಂಡಿದ್ದಾರೆ. ಏಕೆಂದರೆ ಅವರ ಆರೋಗ್ಯ ಸ್ಥಿತಿ ಸರಿ ಇಲ್ಲದಿರುವುದರಿಂದ ಪ್ರಯಾಣ ಬೆಳೆಸುವುದು ಸರಿಯಲ್ಲ ಎಂದು ವೈದ್ಯರು ಹೇಳಿದ್ದಾರೆ. ಇನ್ನೂ ಒಂಬತ್ತು ಥಾಯ್ ಒತ್ತೆಯಾಳುಗಳನ್ನು ಗಾಜಾದಲ್ಲಿ ಈರಿಸಲಾಗಿದೆ ಎಂದು ಥಾಯ್ ಅಧಿಕಾರಿಗಳು ಹೇಳಿದ್ದಾರೆ.

17 ಮಂದಿ ಬ್ಯಾಂಕಾಕ್‌ನ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರ ಕುಟುಂಬಗಳು ಅವರನ್ನು ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದರು. 30 ವರ್ಷದ ಪೋರ್ನ್‌ಸಾವನ್ ಪಿನಾಕಲೋ ಅವರು ತಮ್ಮ ತಂದೆ ಕಾಂಗ್ ಪನಸುದ್ಲಮೈಯ ಬಳಿಗೆ ಓಡಿಹೋಗಿ ಅವರ ಮಂಡಿಗೆ ಬಿದ್ದು ಇಬ್ಬರು ತಬ್ಬಿಕೊಂಡು ಕಣ್ಣೀರಿಟ್ಟರು.

ಈ ವೇಳೆ ವಿಮಾನ ನಿಲ್ದಾಣದಲ್ಲಿ ಸೇರಿದ್ದರ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪೋರ್ನ್‌ಸಾವನ್ ಅವರು, ʼʼಈಗ ನಾನು ನನ್ನ ಜೀವನದಲ್ಲಿ ಅತ್ಯಂತ ಸಂತೋಷವಾಗಿದ್ದೇನೆ. ಆದರೆ ನನ್ನ ಸಹೋದ್ಯೋಗಿಗಳು ಯಾರೂ ಸಾಯದಿದ್ದರೆ ನಾನು ಹೆಚ್ಚು ಸಂತೋಷಪಡುತ್ತೇನೆʼʼ ಎಂದು ಹೇಳಿದರು.

ಬಿಡುಗಡೆಗೊಂಡ ಮತ್ತೊಬ್ಬ ಒತ್ತೆಯಾಳು ಉತೈ ಸಂಗ್ನುವಲ್ ಅವರು ಕಣ್ಣೀರು ಸುರಿಸುತ್ತಾ, ಹಮಾಸ್ದಾಳಿಯಲ್ಲಿ ಅಥವಾ ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಗುಂಪಿನ ನಡುವಿನ ಹೋರಾಟದಲ್ಲಿ ಸಾವಿಗೀಡಾದ 39 ಸಹವರ್ತಿ ಥಾಯ್‌ಗಳಿಗೆ ಗೌರವಾರ್ಥವಾಗಿ ಒಂದು ಕ್ಷಣ ಮೌನಕ್ಕೆ ಕರೆ ನೀಡಿದರು. ಅಕ್ಟೋಬರ್ 7 ರ ದಾಳಿಯಲ್ಲಿ 1,200ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಸಾವಿಗೀಡಾದರು.


"ನಮ್ಮ 39 ದೇಶವಾಸಿಗಳಿಗೆ ನನ್ನ ಆಳವಾದ ಸಂತಾಪವನ್ನು ತಿಳಿಸಲು ನಾನು ಬಯಸುತ್ತೇನೆ" ಎಂದು ಉಥಾಯ್ ಹೇಳಿದರು.

ಬಿಡುಗಡೆಯಾದ ಥಾಯ್ ಒತ್ತೆಯಾಳುಗಳನ್ನು ಭೇಟಿ ಮಾಡಲು ಇಸ್ರೇಲ್‌ಗೆ ಬಂದ ಥಾಯ್ ವಿದೇಶಾಂಗ ಸಚಿವ ಪರ್ನ್‌ಪ್ರೀ ಬಹಿದ್ಧಾ-ನುಕಾರ ಅವರು, ʼʼಬಿಡುಗಡೆಯಾದ 17 ಥಾಯ್ ಪ್ರಜೆಗಳನ್ನು ಭೇಟಿಯಾದಾಗಿರುವುದು ಅಪಾರ ಸಂತೋಷ ತಂದಿದೆ ಮತ್ತು ಸಮಾಧಾನವೂ ಆಗಿದೆʼʼ ಎಂದು ಪರ್ನ್‌ಪ್ರೀ ಸುದ್ದಿಗಾರರಿಗೆ ತಿಳಿಸಿದರು.

ಏಳು ದಿನಗಳ ಕಾಲ ಕದನ ವಿರಾಮದಲ್ಲಿ ಹಮಾಸ್ 81 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಇವರಲ್ಲಿ ಹೆಚ್ಚಾಗಿ ಇಸ್ರೇಲಿ ಪ್ರಜೆಗಳು ಆದರೆ ಇತರರನ್ನು ಸಹ ಬಿಡುಗಡೆ ಮಾಡಿದೆ. ಇತ್ತ ಇಸ್ರೇಲ್ 180 ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಬಿಡುಗಡೆ ಮಾಡಿದೆ.

Tags:    

Similar News