ಯುವ ಮತದಾರರು ಚುನಾವಣಾ ರಾಯಭಾರಿಗಳು: ತುಷಾರ್ ಗಿರಿನಾಥ್

ಲೋಕಸಭೆ ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ. ಯುವ ಮತದಾರರು ಚುನಾವಣಾ ರಾಯಭಾರಿಗಳು ಎಂದರು.;

Update: 2024-04-18 12:49 GMT
ತುಷಾರ್‌ ಗಿರಿನಾಥ್‌

ʻಪ್ರತಿಯೊಬ್ಬ ಯುವ ಮತದಾರರು ಚುನಾವಣಾ ರಾಯಭಾರಿಗಳಾಗಿದ್ದು, ಯಾವುದೇ ಆಮಿಷಕ್ಕೆ ಒಳಗಾಗದೆ ಮತಚಲಾಯಿಸಬೇಕುʼ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಲೋಕಸಭಾ ಚುನಾವಣೆಗೆ ಮತದಾನ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತ ಚುನಾವಣಾ ಆಯೋಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಮತದಾರರ ಸಾಕ್ಷರತಾ ಕ್ಲಬ್ ಸಹಯೋಗದಲ್ಲಿ ಎಂ.ಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನ ಸಭಾಂಗದಣದಲ್ಲಿ ಗುರುವಾರ  ʻನಮ್ಮ ನಡೆ ಮತಗಟ್ಟೆಯ ಕಡೆ ಜಾಗೃತಿʼ ಎನ್ನುವ ಅಭಿಯಾನವನ್ನು ಆಯೋಜಿಸಲಾಗಿತ್ತು. ಅಭಿಯಾನದಲ್ಲಿ ಮಾತನಾಡಿದ ಅವರು, ʻಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಸ್ವಇಚ್ಛೆಯಿಂದ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಮತ ಚಲಾಯಿಸಬೇಕು. ಕೆವೈಸಿ ತಂತ್ರಾಂಶದ ಮೂಲಕ ನಿಮ್ಮ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ತಿಳಿದುಕೊಂಡು ಮತದಾನ ಮಾಡಿʼ ಎಂದರು.

ʻಒಂದೊಮ್ಮೆ ನಿಮಗೆ ಕಣದಲ್ಲಿರುವ ಯಾವುದೇ ಅಭ್ಯರ್ಥಿಗೂ ಮತಚಲಾಯಿಸಬೇಕು ಎನ್ನುವ ಇಚ್ಛೆ ಇಲ್ಲದಿದ್ದರೆ, ನೋಟಾಗೆ ಮತ ಚಲಾಯಿಸುವ ಅವಕಾಶವಿದೆ. ನಮ್ಮ ಒಂದು ಮತದಿಂದ ಏನೂ ಬದಲಾವಣೆ ಆಗುವುದಿಲ್ಲ ಎನ್ನುವ ಮನೋಭಾವನೇ ಬೇಡ. ತಪ್ಪದೇ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿʼ ಎಂದು ಹೇಳಿದರು.

ʻಚುನಾವಣೆಯಲ್ಲಿ ಎಲ್ಲರೂ ಮತಗಟ್ಟೆಗಳಿಗೆ ಬಂದು ಮತದಾನ ಮಾಡಬೇಕೆಂಬುದು ಚುನಾವಣಾ ಆಯೋಗದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗವು ಸೂಕ್ತ ಕ್ರಮಗಳನ್ನು ಕೈಗೊಂಡು ಎಲ್ಲಾ ಸಮುದಾಯದವರನ್ನೂ ಮತದಾರರ ಪಟ್ಟಿಯಲ್ಲಿ ಸೇರಿಸುವ ಮೂಲಕ ಎಲ್ಲರಿಗೂ ಮತಚಲಾಯಿಸುವ ಅವಕಾಶ ಕಲ್ಪಿಸಲಾಗುತ್ತಿದೆʼ ಎಂದರು.

ಚುನಾವಣಾ ರಾಯಭಾರಿಯಾದ ನೀತು ವನಜಾಕ್ಷಿ ಮಾತನಾಡಿ, ʻಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುದು ಆತ್ಮವಿದ್ದಂತೆ, ಮತಗಳು ಉಸಿರಿದ್ದಂತೆ, ಅದಕ್ಕೆ ಜೀವ ಬರಬೇಕಾದರೆ ನೀವೆಲ್ಲರೂ ತಪ್ಪದೆ ಮತದಾನ ಮಾಡಬೇಕುʼ ಎಂದು ಹೇಳಿದರು.

2000 ವಿದ್ಯಾರ್ಥಿಗಳು ಭಾಗಿ

ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಏರ್ಪಡಿಸಿದ್ದ ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ ಕಾರ್ಯಕ್ರಮದಲ್ಲಿ ವೈದ್ಯಕೀಯ, ಕಾನೂನು, ವಾಣಿಜ್ಯ, ಮ್ಯಾನೇಜ್ಮೆಂಟ್ ಸೇರಿದಂತೆ 13 ವಿಭಾಗಗಳ ಅಂದಾಜು 2000 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಎಲ್ಲರೂ ತಪ್ಪದೇ ಮತದಾನ ಮಾಡುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಕಾಂತರಾಜು, ವಲಯ ಆಯುಕ್ತರಾದ ಡಾ. ಆರ್.ಎಲ್ ದೀಪಕ್, ಸ್ನೇಹಲ್, ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾನಿಲಯದ ಕುಲಪತಿ ಕೆ.ಕೆ ರೈನಾ, ಗೋಕುಲ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಶ್ರೀನಿವಾಸ್ ಮೂರ್ತಿ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ವೇಣುಗೋಪಾಲ್, ವಲಯ ಜಂಟಿ ಆಯುಕ್ತ ಯೋಗೇಶ್ ಸೇರಿದಂತೆ ಹಲವರು ಇದ್ದರು.

Tags:    

Similar News