ʼಧರ್ಮಸ್ಥಳ ಚಲೋ’ ಹೊರಟ ಯಲಹಂಕ ಬಿಜೆಪಿ ಮುಖಂಡರು, ಕಾರ್ಯಕರ್ತರು
ಧರ್ಮಸ್ಥಳ ಮತ್ತು ಅದರ ಪಾವಿತ್ರ್ಯತೆಯ ಕುರಿತು ಹರಡುತ್ತಿರುವ ಋಣಾತ್ಮಕ ಪ್ರಚಾರವನ್ನು ವಿರೋಧಿಸಿ ಈ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಹೇಳಿದೆ.;
'ಧರ್ಮಸ್ಥಳ ಚಲೋ' ಹೊರಡುವ ಮುನ್ನ ಶಾಸಕ ಎಸ್.ಆರ್. ವಿಶ್ವನಾಥ್ ಪೂಜೆ ಸಲ್ಲಿಸಿದರು.
ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮತ್ತು ಅವಹೇಳನಗಳನ್ನು ನಡೆಸಲಾಗುತ್ತಿದೆ ಎಂದಿರುವ ಬಿಜೆಪಿ ನಾಯಕರು, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರ ನೇತೃತ್ವದಲ್ಲಿ ಶನಿವಾರ 'ಧರ್ಮಸ್ಥಳ ಚಲೋ' ಹೊರಟಿದ್ದಾರೆ. ಬೆಳಗ್ಗೆ 6.30ಕ್ಕೆ ಬೆಂಗಳೂರಿನ ನೆಲಮಂಗಲ ಟೋಲ್ ಬಳಿಯಿಂದ ಹೊರಟ ಈ ಯಾತ್ರೆಯಲ್ಲಿ, ಯಲಹಂಕ ಕ್ಷೇತ್ರದ ನೂರಾರು ಭಕ್ತರು ಮತ್ತು ಬಿಜೆಪಿ ಕಾರ್ಯಕರ್ತರು 400ಕ್ಕೂ ಹೆಚ್ಚು ವಾಹನಗಳಲ್ಲಿ ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದ್ದಾರೆ.
ಧರ್ಮಸ್ಥಳ ಮತ್ತು ಅದರ ಪಾವಿತ್ರ್ಯತೆಯ ಕುರಿತು ಹರಡುತ್ತಿರುವ ಋಣಾತ್ಮಕ ಪ್ರಚಾರವನ್ನು ವಿರೋಧಿಸಿ ಈ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಹೇಳಿದೆ. ಪೂಜಾ ವಿಧಿವಿಧಾನಗಳೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ, ಸಂಜೆ ಧರ್ಮಸ್ಥಳಕ್ಕೆ ತಲುಪಿ ಶ್ರೀ ಮಂಜುನಾಥ ಸ್ವಾಮಿಯ ವಿಶೇಷ ದರ್ಶನ ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ, "ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು" ಎಂಬ ಬೇಡಿಕೆಯೊಂದಿಗೆ ಸಾಮೂಹಿಕ ಸಂಕಲ್ಪ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಶಾಸಕ ಎಸ್.ಆರ್. ವಿಶ್ವನಾಥ್ ಅವರೊಂದಿಗೆ, ಹಾಲು ಪ್ರಕೋಷ್ಠದ ರಾಜ್ಯ ಸಂಚಾಲಕ ಬೇಲೂರು ರಾಘವೇಂದ್ರ ಶೆಟ್ಟಿ, ಪಕ್ಷದ ಪ್ರಮುಖರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಬಿಜೆಪಿ ನಾಯಕರ ಉಪಸ್ಥಿತಿ
ಈ ಅಭಿಯಾನದ ಭಾಗವಾಗಿ, ಭಾನುವಾರ ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸೇರಿ ಪಕ್ಷದ ಶಾಸಕರು ಮಂಜುನಾಥನ ವಿಶೇಷ ದರ್ಶನ ಪಡೆಯಲು ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ.
ಕಳೆದ ಶುಕ್ರವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಾಸಕ ಎಸ್.ಆರ್. ವಿಶ್ವನಾಥ್, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ತಾವು ಧರ್ಮಸ್ಥಳಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದರು. ಅಲ್ಲದೆ, ಸಂಜೆ ಮಂಜುನಾಥ ಸ್ವಾಮಿಯ ದರ್ಶನ ಪಡೆದು ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಸಂಕಲ್ಪ ಮಾಡುವುದಾಗಿ ಪುನರುಚ್ಚರಿಸಿದ್ದರು.