BJP Infighting | ಶೋಕಾಸ್ ನೋಟಿಸ್‌ಗೆ ಐದು ಪುಟಗಳ ಖಡಕ್ ಉತ್ತರ ನೀಡಿದ ಯತ್ನಾಳ್; ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು
ಯತ್ನಾಳ್ ಅವರು ಶೋಕಾಸ್ ನೋಟಿಸ್ ತಲುಪಿದ ಮರುದಿನವೇ ಶಿಸ್ತು ಸಮಿತಿಗೆ ಐದು ಪುಟಗಳ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ.;
ಪಕ್ಷದ ನಿಯಮ ಉಲ್ಲಂಘಿಸದಂತೆ ಖಡಕ್ ಸೂಚನೆ ನೀಡಿದ ಹೊರತಾಗಿಯೂ ರಾಜ್ಯ ನಾಯಕತ್ವದ ವಿರುದ್ಧ ಟೀಕೆ ಮುಂದುವರಿಸಿದ ಕಾರಣ ಬಿಜೆಪಿ ಕೇಂದ್ರೀಯ ಶಿಸ್ತು ಪಾಲನಾ ಸಮಿತಿ ನೀಡಿದ್ದ ಶೋಕಾಸ್ ನೋಟಿಸ್‌ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಉತ್ತರ ನೀಡಿದ್ದಾರೆ.
ಯತ್ನಾಳ್ ಅವರಿಗೆ ಫೆ.10 ರಂದು ಶೋಕಾಸ್ ನೋಟಿಸ್ ನೀಡಿ 72 ಗಂಟೆಗಳಲ್ಲಿ ಉತ್ತರಿಸುವಂತೆ ಗಡುವು ನೀಡಲಾಗಿತ್ತು. ಗಡುವು ಮುಗಿದರೂ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿರಲಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ, ಯತ್ನಾಳ್ ಅವರು ಶೋಕಾಸ್ ನೋಟಿಸ್ ತಲುಪಿದ ಮರುದಿನವೇ ಶಿಸ್ತು ಸಮಿತಿಗೆ ಐದು ಪುಟಗಳ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಹುದ್ದೆಗೆ ಸಮರ್ಥರನ್ನು ಆಯ್ಕೆ ಮಾಡಬೇಕು. ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆ ನೀಡಿದ್ದರ ಸಂಬಂಧ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಯತ್ನಾಳ ಅವರಿಗೆ ಇದೇ 10ರಂದು ನೋಟಿಸ್ ನೀಡಿತ್ತು. 72 ಗಂಟೆಗಳಲ್ಲಿ ಉತ್ತರ ನೀಡುವಂತೆ ಸೂಚಿಸಿತ್ತು. ನೋಟಿಸ್ ದೊರೆತ ಮರುದಿನವೇ ಅವರು ಐದು ಪುಟಗಳಷ್ಟು ವಿವರವಾದ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೋಟಿಸ್‌ಗೆ ನೀಡಿದ ಉತ್ತರದಲ್ಲಿ ಏನಿದೆ?
ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಗೆ ಯತ್ನಾಳ್ ಅವರು ಸುದೀರ್ಘ ಉತ್ತರ ಬರೆದಿದ್ದು, "ನಾನು ಯಾವುದೇ ಬಣ ರಾಜಕಾರಣ ಮಾಡಿಲ್ಲ. ಪಕ್ಷದ ಚೌಕಟ್ಟಿನಲ್ಲೇ ವಕ್ಫ್ ಹೋರಾಟ ಮಾಡಿದ್ದೇವೆ. ಪಕ್ಷಕ್ಕೆ ಹಾನಿಯಾಗುವಂತಹ ಯಾವ ಕೆಲಸ ಮಾಡಿಲ್ಲ" ಎಂದು ತಿಳಿಸಿದ್ದಾರೆ.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ಹಿರಿಯರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಈ ಕಾರಣದಿಂದ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಕುಟುಂಬ ರಾಜಕಾರಣ ಮತ್ತು ಸ್ವಜನ ಪಕ್ಷಪಾತ ಕೊನೆಯಾಗಬೇಕಾದರೆ ವಿಜಯೇಂದ್ರ ಅವರನ್ನು ಬದಲಾಯಿಸಬೇಕು ಎಂದು ಯತ್ನಾಳ ಪ್ರತಿಪಾದಿಸಿದ್ದಾರೆ ಎಂದು ತಿಳಿದು ಬಂದಿದೆ.
"ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸ ಮರೆತು ಹಗರಣಗಳಲ್ಲಿ ತೊಡಗಿಸಿಕೊಂಡಿದೆ. ಇದರಿಂದ ಬಿಜೆಪಿಗೆ ಸಾಕಷ್ಟು ಹೋರಾಟದ ಅವಕಾಶಗಳು ದೊರೆತಿವೆ. ಆದರೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಅಸಮರ್ಥತೆ ಕಾರಣದಿಂದ ಯಾವುದೇ ಹೋರಾಟ ಫಲಪ್ರದವಾಗುತ್ತಿಲ್ಲ" ಎಂದು ಯತ್ನಾಳ್ ದೂರಿದ್ದಾರೆ.
"ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಪಕ್ಷವನ್ನು ಬಲಪಡಿಸಲು ಅಧ್ಯಕ್ಷರನ್ನು ಬದಲಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸುವವರಿಗೆ ಆ ಹೊಣೆಗಾರಿಕೆ ನೀಡಬೇಕು" ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಹಿಂದೆ ಕೂಡ ಶೋಕಾಸ್ ನೋಟಿಸ್ ಪಡೆದಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೇರವಾಗಿ ಶಿಸ್ತು ಸಮಿತಿ ಎದುರು ಹಾಜರಾಗಿ ಸ್ಪಷ್ಟನೆ ನೀಡಿದ್ದರು. ಈ ವೇಳೆ ಸೂಚ್ಯವಾಗಿ ಸಲಹೆ ನೀಡಿದ್ದ ವರಿಷ್ಠರು, ನಿಮಗೆ ಪಕ್ಷದಲ್ಲಿ ಉತ್ತಮ ಭವಿಷ್ಯವಿದೆ. ಸಂಯಮ ಕಾಯ್ದುಕೊಳ್ಳಿ. ಸಮಸ್ಯೆಗಳು ಏನೇ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಿ ಎಂದು ಬುದ್ದಿ ಮಾತು ಹೇಳಿದ್ದರು.
ಸಮಿತಿ ಮುಂದೆ ಹಾಜರಾಗಿ ನಗುತ್ತಲೇ ಹೊರಬಂದಿದ್ದ ಯತ್ನಾಳ್ ಅವರು ಎರಡು ದಿನದ ಬಳಿಕ ಮತ್ತೆ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಯತ್ನಾಳ್ ಬಣದ ನಾಯಕರು ಕೂಡ ಮೇಲಿಂದ ಮೇಲೆ ವಿಜಯೇಂದ್ರ ಬಣದ ನಾಯಕರ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದರು.