ಮದ್ಯದ ಪಾರ್ಟಿಯಲ್ಲಿ ಹುಟ್ಟಿತ್ತು 7 ಕೋಟಿ ದರೋಡೆ ಪ್ಲಾನ್: ಖಾಕಿ ಹಾಕಿಕೊಂಡೆ ಸ್ಕೆಚ್ ಹಾಕಿದ್ದ ಪೊಲೀಸ್!
ಹಾಡಹಗಲೇ ನಡೆದ 7.11 ಕೋಟಿ ರೂ. ದರೋಡೆ ಪ್ರಕರಣವನ್ನು ಪೊಲೀಸರು 60 ಗಂಟೆಯೊಳಗೆ ಭೇದಿಸಿದ್ದು, ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 5.76 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಹಾಡಹಗಲೇ ನಡೆದಿದ್ದ ಮತ್ತು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ 7.11 ಕೋಟಿ ರೂ. ಮೌಲ್ಯದ ನಗದು ವಾಹನ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದ ಕೇವಲ 60 ಗಂಟೆಗಳ ಒಳಗೆ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿರುವ ವಿಶೇಷ ತನಿಖಾ ತಂಡ, ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ 5.76 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಅಚ್ಚರಿಯ ಸಂಗತಿಯೆಂದರೆ, ಈ ಹೈಟೆಕ್ ದರೋಡೆಯ ಹಿಂದಿನ ಮಾಸ್ಟರ್ ಮೈಂಡ್ ಬೇರಾರೂ ಅಲ್ಲ, ಗೋವಿಂದಪುರ ಪೊಲೀಸ್ ಠಾಣೆಯ ಸಿಬ್ಬಂದಿ ಅಣ್ಣಪ್ಪ ನಾಯಕ್ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಬಂಧಿತರು ಯಾರು?
ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಪುರ ಠಾಣೆಯ ಕ್ರೈಂ ಸಿಬ್ಬಂದಿ ಅಣ್ಣಪ್ಪ ನಾಯಕ್, ಹಣ ಸಾಗಣೆ ಸಂಸ್ಥೆಯಾದ 'ಸಿಎಂಎಸ್' (CMS) ನ ವಾಹನ ಉಸ್ತುವಾರಿ ಗೋಪಾಲಕೃಷ್ಣ ಅಲಿಯಾಸ್ ಗೋಪಿ ಮತ್ತು ಇದೇ ಸಂಸ್ಥೆಯ ಮಾಜಿ ಉದ್ಯೋಗಿ ಝೇವಿಯರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಜಾಲದ ಪ್ರಮುಖ ಆರೋಪಿ ರವಿ ಮತ್ತು ಆತನ ಐವರು ಸಹಚರರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಘಟನೆಯ ಹಿನ್ನೆಲೆ
ನವೆಂಬರ್ 19 ರಂದು ಮಧ್ಯಾಹ್ನ 12:48ರ ಸುಮಾರಿಗೆ ಬೆಂಗಳೂರಿನ ಜಯನಗರ-ಡೇರಿ ಸರ್ಕಲ್ ಮಾರ್ಗದಲ್ಲಿ ಎಟಿಎಂಗೆ ಹಣ ತುಂಬಲು ತೆರಳುತ್ತಿದ್ದ ಸಿಎಂಎಸ್ ವಾಹನವನ್ನು ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿದ್ದರು. ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ಆರೋಪಿಗಳು, ವಾಹನದಲ್ಲಿದ್ದ ಸಿಬ್ಬಂದಿಗೆ ಗನ್ ತೋರಿಸಿ ಬೆದರಿಸಿ, ಕ್ಷಣಾರ್ಧದಲ್ಲಿ 7.11 ಕೋಟಿ ರೂ. ನಗದನ್ನು ದೋಚಿ ಪರಾರಿಯಾಗಿದ್ದರು. ಬೆಂಗಳೂರಿನ ದಕ್ಷಿಣ ವಿಭಾಗದ ಪೊಲೀಸರು ಬಸವನಗುಡಿ ಕಡಲೆಕಾಯಿ ಪರಿಷೆ ಬಂದೋಬಸ್ತ್‌ನಲ್ಲಿದ್ದ ಸಮಯವನ್ನೇ ಆರೋಪಿಗಳು ಕೃತ್ಯಕ್ಕೆ ಬಳಸಿಕೊಂಡಿದ್ದರು.
'ಎಣ್ಣೆ ಸಿಟ್ಟಿಂಗ್'ನಲ್ಲಿ ಹುಟ್ಟಿದ ಸಂಚು
ಪೊಲೀಸರ ವಿಚಾರಣೆ ವೇಳೆ ಈ ದರೋಡೆಗೆ ಕಾರಣವಾದ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಸಿಎಂಎಸ್ ವಾಹನದ ಚಲನವಲನಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಗೋಪಿ ಮತ್ತು ಮಾಜಿ ಉದ್ಯೋಗಿ ಝೇವಿಯರ್ ಆಪ್ತ ಸ್ನೇಹಿತರಾಗಿದ್ದರು. ಇವರಿಬ್ಬರೂ ಆಗಾಗ ಸೇರುತ್ತಿದ್ದ ಮದ್ಯಪಾನ ಕೂಟಗಳಲ್ಲಿ (ಎಣ್ಣೆ ಸಿಟ್ಟಿಂಗ್) ಕೋಟಿ ಕೋಟಿ ಹಣ ಸಾಗಾಟದ ಬಗ್ಗೆ ಚರ್ಚಿಸುತ್ತಿದ್ದರು. ಇದೇ ವೇಳೆ ಹಣ ದೋಚುವ ದುರಾಲೋಚನೆ ಅವರಿಗೆ ಬಂದಿತ್ತು.
ನಂತರ ಝೇವಿಯರ್, ತನಗೆ ಪರಿಚಯವಿದ್ದ ಪೊಲೀಸ್ ಪೇದೆ ಅಣ್ಣಪ್ಪ ನಾಯಕ್‌ನನ್ನು ಸಂಪರ್ಕಿಸಿದ್ದ. ಅಣ್ಣಪ್ಪ ನಾಯಕ್ ಸುಮಾರು 15 ದಿನಗಳ ಕಾಲ ಹಣ ಸಾಗಿಸುವ ಮಾರ್ಗ, ಸಿಸಿಟಿವಿ ಕ್ಯಾಮೆರಾ ಇಲ್ಲದ ಸ್ಥಳಗಳು ಮತ್ತು ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುವ ಮಾರ್ಗಗಳ ಬಗ್ಗೆ ಕೂಲಂಕಷ ಅಧ್ಯಯನ ನಡೆಸಿ, ದರೋಡೆಯ ಸಂಪೂರ್ಣ ನೀಲಿನಕ್ಷೆಯನ್ನು ಸಿದ್ಧಪಡಿಸಿದ್ದ.
ಪೊಲೀಸರ ಕಾರ್ಯಾಚರಣೆ ನಡೆದಿದ್ದು ಹೇಗೆ?
ಪ್ರಕರಣದ ಗಂಭೀರತೆಯನ್ನು ಅರಿತ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಮತ್ತು ಸಿಸಿಬಿ ಡಿಸಿಪಿ ಶ್ರೀಹರಿಬಾಬು ನೇತೃತ್ವದಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿಯ ವಿಶೇಷ ತಂಡವನ್ನು ರಚಿಸಿದ್ದರು. ಆರೋಪಿಗಳು ಮೊಬೈಲ್ ಫೋನ್ ಬಳಸದೆ, ವಾಹನದ ನಂಬರ್ ಪ್ಲೇಟ್ ಬದಲಿಸುತ್ತಾ ಆಂಧ್ರಪ್ರದೇಶದ ಕಡೆಗೆ ಪರಾರಿಯಾಗಿದ್ದರು.
ತಾಂತ್ರಿಕ ಸುಳಿವು ಮತ್ತು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆಂಧ್ರಪ್ರದೇಶದ ಚಿತ್ತಪಲ್ಲಿಯಲ್ಲಿರುವ ಪ್ರಮುಖ ಆರೋಪಿ ರವಿ ಎಂಬಾತನ ಮನೆಯ ಮೇಲೆ ದಾಳಿ ನಡೆಸಿದರು. ಅಲ್ಲಿ ಹಣ ತುಂಬಿದ್ದ ಖಾಲಿ ಟ್ರಂಕ್ ಪತ್ತೆಯಾಗಿದ್ದು, ಬಚ್ಚಿಟ್ಟಿದ್ದ 5.76 ಕೋಟಿ ರೂ. ನಗದನ್ನು ಜಪ್ತಿ ಮಾಡಲಾಗಿದೆ.
ಬಹುಮಾನ ಘೋಷಣೆ
ದರೋಡೆಕೋರರ ಜಾಡು ಹಿಡಿದು, ಕೇವಲ ಮೂರು ದಿನಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸ್ ತಂಡದ ಕಾರ್ಯಕ್ಷಮತೆಯನ್ನು ಮೆಚ್ಚಿರುವ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ತನಿಖಾ ತಂಡಕ್ಕೆ 5 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಶೋಧ ಮುಂದುವರಿದಿದೆ.