ಬಾಳೆಹೊನ್ನೂರಿನಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಬಲಿ
ಮೃತರನ್ನು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ವಟ್ಟಪುರ ಸಾಸ್ವೆಹಳ್ಳಿಯ ನಿವಾಸಿ ಹಾಲೇಶ್ ಅವರ ಪತ್ನಿ ಅನಿತಾ (25) ಎಂದು ಗುರುತಿಸಲಾಗಿದೆ.;
ಸಾಂದರ್ಭಿಕ ಚಿತ್ರ
ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಕಾರ್ಮಿಕ ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿ, ತುಳಿದು ಕೊಂದಿರುವ ದಾರುಣ ಘಟನೆ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ವಟ್ಟಪುರ ಸಾಸ್ವೆಹಳ್ಳಿಯ ನಿವಾಸಿ ಹಾಲೇಶ್ ಅವರ ಪತ್ನಿ ಅನಿತಾ (25) ಎಂದು ಗುರುತಿಸಲಾಗಿದೆ.
ಅನಿತಾ ಅವರು ಬನ್ನೂರು ಗ್ರಾಮದ ಶಶಿಶೇಖರ್ ಎಂಬುವವರ ಕಾಫಿ ತೋಟದಲ್ಲಿ ಕೆಲಸಕ್ಕಾಗಿ ತಮ್ಮ ಕುಟುಂಬದೊಂದಿಗೆ ಬಂದಿದ್ದರು. ಎಂದಿನಂತೆ ಕೆಲಸ ಮುಗಿಸಿ ಕಾರ್ಮಿಕರ ಲೈನ್ ಮನೆಗೆ ಹೋಗುವ ದಾರಿಯಲ್ಲಿ, ಏಕಾಏಕಿ ಕಾಡಾನೆ ಎದುರಾಗಿದೆ. ಆನೆಯು ಅನಿತಾ ಅವರ ಮೇಲೆ ದಾಳಿ ಮಾಡಿ, ತೀವ್ರವಾಗಿ ತುಳಿದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅನಿತಾ ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.