ಶ್ವೇತವರ್ಣದ ರಾಜಭವನ ಕಣ್ತುಂಬಲು ಶೀಘ್ರದಲ್ಲಿಯೇ ಸಾರ್ವಜನಿಕರಿಗೆ ಮುಕ್ತ?
ಮೊಟ್ಟಮೊದಲ ಬಾರಿಗೆ ಗೈಡ್ ಟೂರ್ ಹೆಸರಿನಲ್ಲಿ ರಾಜಭವನ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಈ ಮೂಲಕ ವಿಧಾನಸೌಧ ಮಾದರಿಯಲ್ಲಿ ವೀಕ್ಷಣೆಗೆ ಅವಕಾಶ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಕಲಾಕೌಶಲ್ಯದ ಅದ್ಭುತ ಕಟ್ಟಡವಾಗಿ ಇತಿಹಾಸದಲ್ಲಿ ದಾಖಲಾಗಿರುವ ಆಡಳಿತಸೌಧವಾದ ವಿಧಾನಸೌಧದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರಿಗೆ ಮುಕ್ತಗೊಳಿಸಿದ ಬಳಿಕ ಇದೀಗ ಅದೇ ರೀತಿಯಾಗಿ 19ನೇ ಶತಮಾನದ ಐತಿಹಾಸಿಕ ಕಟ್ಟಡ ರಾಜಭವನ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳ್ಳುತ್ತಿರುವುದಾಗಿ ವರದಿ ಆಗಿದೆ. ಆ ಮೂಲಕ ಜನರು ರಾಜಭವನವನ್ನು ಒಳಗಿನಿಂದ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.
ಬೆಂಗಳೂರಿನಲ್ಲಿನ ರಾಜಭವನವು ಜನಸಾಮಾನ್ಯರು ಭೇಟಿ ನೀಡುವಂಥ ಸ್ಥಳವಲ್ಲ. ಸಾಮಾನ್ಯ ಜನರಿಗೆ ಇದು ಇನ್ನೂ ನಿಗೂಢವಾಗಿದೆ. ವಸಾಹತುಶಾಹಿಯ ಕಾಲದಿಂದಲೂ ಈ ಕಟ್ಟಡವು ಯಾವಾಗಲೂ ಅಧಿಕಾರ ಕೇಂದ್ರಿತ ಸ್ಥಳವಾಗಿ ಉಳಿದಿದೆ. ಅಲ್ಲದೇ, ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದೆ. ರಾಜಭವನವು ಇತಿಹಾಸ ನಿಗೂಢ ಕುತೂಹಲಕರವಾಗಿಯೇ ಉಳಿದಿದೆ. ರಾಜಭವನವು ಬ್ರಿಟಿಷ್ ಯುಗವನ್ನು ಪ್ರತಿಬಿಂಬಿಸುತ್ತದೆ. ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಹಾದು ಕಮಿಷನರ್ ಆಳ್ವಿಕೆಯ ಮೂಲಕ ಬ್ರಿಟಿಷರ ನೇರ ಆಡಳಿತಕ್ಕೊಳಗಾಗಿ ನಂತರ ಭಾರತದ ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಿ ನಿಂತು ದೇಶದ ಗಣರಾಜ್ಯಕ್ಕೆ ಪದಾರ್ಪಣೆ ಮಾಡಿದೆ.
ಸ್ವಾತಂತ್ರ್ಯಪೂರ್ವದಲ್ಲಿ ನಿರ್ಮಿಸಲಾಗಿರುವ ರಾಜಭವನವು ತನ್ನ ಅಪೂರ್ವ ವಾಸ್ತುಶಿಲ್ಪ, ಶ್ವೇತ ವರ್ಣದಿಂದ ಎಲ್ಲರ ಗಮನ ಸೆಳೆಯುತ್ತಿದೆ. ರಾಜ್ಯಪಾಲರು ವಾಸಿಸುವ ರಾಜಭವನ ವೀಕ್ಷಿಸಬೇಕು ಎಂಬುದು ಹಲವರ ಜನರ ಮನದಾಸೆ. ಜನತೆಯ ಈ ಆಸೆ ನೆರವೇರುವ ಕಾಲ ಸನ್ನಿಹಿತವಾಗಿದೆ. ಮೊಟ್ಟಮೊದಲ ಬಾರಿಗೆ ಗೈಡ್ ಟೂರ್ ಹೆಸರಿನಲ್ಲಿ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಇಂತಹದೊಂದು ದಿಟ್ಟ ನಿರ್ಧಾರಕ್ಕೆ ಸರ್ಕಾರ ಮುಂದಾಗಿದ್ದು, ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಮಾಡಿಕೊಡಲು ರಾಜ್ಯಪಾಲರು ಸಹ ಅಂಕಿತ ಹಾಕಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಐತಿಹಾಸಿಕ ರಾಜಭವನದೊಳಗೆ ವೀಕ್ಷಣೆಗೆ ಜನತೆಯ ಮಾರ್ಗಸೂಚಿ ಸಿದ್ದತೆ ನಡೆಸುವ ಕಾರ್ಯ ಮಾಡುತ್ತಿದೆ. ಸುಮಾರು 16 ಎಕರೆ ಪ್ರದೇಶದಲ್ಲಿ ರಾಜಭವನ ಮತ್ತು ಉದ್ಯಾನವಿದೆ. ಭೇಟಿ ನೀಡುವ ಜನರು ಗುಲಾಬಿ, ಮಲ್ಲಿಗೆ ಸೇರಿದಂತೆ ವಿವಿಧ ಉದ್ಯಾನ, 19ನೇ ಶತಮಾನದ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಬಹುದು. ಹುಲ್ಲು ಹಾಸಿನ ಮೇಲೆ ಹೂಗಳಿಂದ ನಿರ್ಮಾಣ ಮಾಡಲಾದ ಆನೆ, ಬಾತುಕೋಳಿ, ಹಂಸ, ಜಿರಾಫೆ ಮುಂತಾದವುಗಳನ್ನು ವೀಕ್ಷಿಸಬಹುದು. ಇದಲ್ಲದೇ, 500 ವರ್ಷಗಳ ಮರಗಳಿದ್ದು, ಸಸ್ಯಶಾಸ್ತ್ರ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ.
ಸಾಧಕ-ಬಾಧಕಗಳ ಕುರಿತು ಚರ್ಚೆ:
ರಾಜಭವನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಜನತೆಗೆ ಪ್ರವೇಶಿಸುವ ಅನುಕೂಲ ಮಾಡುವ ಸಂಬಂಧ ಸಾಧಕ-ಭಾಧಕಗಳ ಬಗ್ಗೆ ಮಾತುಕತೆ ನಡೆದಿದೆ. ಇದರ ಹೊಣೆಯನ್ನು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವಹಿಸಿಕೊಳ್ಳಲಿದೆ. ಈ ಬಗ್ಗೆ ಮಾತನಾಡಿದ ಯೋಜನೆಯ ಉಸ್ತುವಾರಿ ಕೆಸ್‌ಟಿಡಿಸಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್.ಶ್ರೀನಾಥ್, ಸಂದರ್ಶಕ ಸ್ನೇಹಿ ಪ್ರದೇಶಗಳನ್ನು ಗುರುತಿಸಲು, ಪ್ರವಾಸ ಮಾರ್ಗ ಮತ್ತು ವೀಕ್ಷಣಾ ಸಮಯವನ್ನು ನಿಗದಿ ಪಡಿಸಲಾಗುತ್ತಿದೆ. ಪ್ರಸ್ತುತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ರಾಜಭವನವು ಐತಿಹಾಸಿಕ ಮಹತ್ವವನ್ನು ಹೊಂದಿದೆ. 1840 ಮತ್ತು 1842 ರ ನಡುವೆ ಸರ್ ಮಾರ್ಕ್ ಕಬ್ಬನ್ ನಿರ್ಮಿಸಿದ್ದ ಈ ನಿವಾಸವನ್ನು ಮೂಲತಃ ಬ್ರಿಟಿಷ್ ಆಯುಕ್ತರಿಗಾಗಿ ನಿರ್ಮಿಸಲಾಗಿತ್ತು. ಆಗ ರೆಸಿಡೆನ್ಸಿ ಎಂದು ಕರೆಯಲ್ಪಡುತ್ತಿದ್ದ ಇದು ನಂತರ ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಮತ್ತು ಅಮೆರಿಕದ ಪ್ರಥಮ ಮಹಿಳೆ ಎಲೀನರ್ ರೂಸ್ವೆಲ್ಟ್ ಅವರಂತಹ ಗಣ್ಯರಿಗೆ ಆತಿಥ್ಯ ವಹಿಸುವ ಉನ್ನತ ಮಟ್ಟದ ಅತಿಥಿ ಗೃಹವಾಗಿ ಪರಿವರ್ತನೆಗೊಂಡಿತ್ತು. ಸ್ವಾತಂತ್ರ್ಯಾನಂತರ ಇದನ್ನು ರಾಜಭವನವಾಗಿ ರೂಪಾಂತರಿಸಲಾಯಿತು. ಅಂತಿಮವಾಗಿ ಕರ್ನಾಟಕದ ರಾಜ್ಯಪಾಲರ ಅಧಿಕೃತ ನಿವಾಸವಾಯಿತು ಎಂದು ಹೇಳಿದರು.
ವಿ.ಎಸ್.ರಮಾದೇವಿ ಕಾಲದಲ್ಲಿ ʼಜನಭವನʼ
ಮಾಜಿ ರಾಜ್ಯಪಾಲರಾದ ದಿವಂಗತ ವಿ.ಎಸ್.ರಮಾದೇವಿ ಅವರ ಕಾಲದಲ್ಲಿ ರಾಜಭವನ ಒಂದು ರೀತಿ 'ಜನಭವನ' ಎಂಬ ವಾತಾವರಣ ನಿರ್ಮಿಸಿದ್ದರು. ಪ್ರತಿ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೆಲ ದಿನಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಮಾಡಿಕೊಟ್ಟಿದ್ದರು. ದೆಹಲಿಯ ರಾಷ್ಟ್ರಪತಿ ಭವನ ಮಾದರಿಯಲ್ಲಿ ರಾಜಭವನಕ್ಕೆ ಸಾರ್ವಜನಿಕರ ಪ್ರವೇಶಕ್ಕಾಗಿ ಅವಕಾಶ ಕಲ್ಪಿಸಲಾಗಿತ್ತು. ರಮಾದೇವಿ ನಂತರದ ಅವಧಿಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಮುಚ್ಚಲಾಯಿತು. ಬಳಿಕ ವಜುಬಾಯಿ ವಾಲಾ ಅವರು ಅವಕಾಶ ನೀಡಿದ್ದರು. ನಂತರ ಮತ್ತೆ ಮುಚ್ಚಲಾಯಿತು. ಈಗ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಸಹ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಅವಧಿಯಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶ ಒದಗಿಸಲಾಗಿದೆ. ಇದು ಕೇವಲ ಒಂದು ವಾರಗಳ ಕಾಲ ಮಾತ್ರ ಸಿಮೀತವಾಗಿದೆ. ಇದೀಗ ಪ್ರತಿನಿತ್ಯ ರಾಜಭವನ ವೀಕ್ಷಣೆಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಹೊಂದಲಾಗಿದೆ.
ಜನತೆ ವೀಕ್ಷಣೆಗಾಗಿ ಮನವಿ:
ಐತಿಹಾಸಿಕ ಕಟ್ಟಡ ರಾಜಭವನ ವೀಕ್ಷಿಸಲು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಮತ್ತು ಬ್ರಿಟಿಷ್ ಅಧಿಕಾರಿಗಳ ಅಂದಿನ ಅಧಿಕೃತ ನಿವಾಸವಾಗಿದ್ದ ರಾಜಭವನ ಪಾರಂಪರಿಕ ಕಟ್ಟಡ ಹೇಗಿದೆ ಅನ್ನೋದನ್ನ ಸಾರ್ವಜನಿಕರು ಕೂಡಾ ಕಣ್ತುಂಬಿಕೊಳ್ಳಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಜಯಪ್ರಕಾಶ್ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಂ. ಶಿವಕುಮಾರ್ ಪತ್ರ ಬರೆದಿದ್ದರು. ಪಾರಂಪರಿಕ ಕಟ್ಟಡದ ವೀಕ್ಷಣೆಯಿಂದ ಜನರಿಗಿದ್ದ ಕುತೂಹಲವೂ ಈಡೇರಿದಂತಾಗುತ್ತದೆ. ಜತೆಗೆ ಆವತ್ತಿನ ಕಟ್ಟಡದ ಶೈಲಿ, ರಚನೆ ತಿಳಿದುಕೊಳ್ಳಲು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರಾಜಭವನವನ್ನು ಮೈಸೂರು ಅರಮನೆಯಂತೆ ವೀಕ್ಷಣೆಗೆ ಅವಕಾಶ ನೀಡಬೇಕು. ಮಾಜಿ ರಾಜ್ಯಪಾಲರಾದ ರಮಾದೇವಿ ನಂತರ ಯಾವುದೇ ರಾಜ್ಯಪಾಲರು ರಾಜಭವನ ವೀಕ್ಷಣೆಗೆ ಅವಕಾಶ ನೀಡಿರಲಿಲ್ಲ. ಈಗ 2018ರಲ್ಲಿ ಅಂದಿನ ರಾಜ್ಯಪಾಲರಾಗಿದ್ದ ವಜುಬಾಯಿ ವಾಲಾ ಅವರು 15 ದಿನಗಳ ಕಾಲ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದರು ಎಂದಿದ್ದಾರೆ.
ಈ ಬಗ್ಗೆ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಬಿ.ಎಂ. ಶಿವಕುಮಾರ್, ಜನಸಾಮಾನ್ಯರ ತೆರಿಗೆ ಹಣದಿಂದ ನಿರ್ವಹಣೆ ಮಾಡುವ ರಾಜಭವನವನ್ನು ನೋಡುವ ಭಾಗ್ಯ ಜನಸಾಮಾನ್ಯರಿಗೆ ಲಭ್ಯವಾಗದೆ ಇರುವುದು ವಿಪರ್ಯಾಸ. ಜನತೆಯ ತೆರಿಗೆ ಹಣದಿಂದ ನಿರ್ವಹಣೆ ಮಾಡುತ್ತಿರುವ, 18ನೇ ಶತಮಾನದ ಐತಿಹಾಸಿಕ ಪಾರಂಪರಿಕೆ ಕಟ್ಟಡವಾದ ರಾಜಭವನವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ವೀಕ್ಷಿಸಲು ಅವಕಾಶ ನೀಡಬೇಕು. ಒಂದು ವೇಳೆ ರಾಜ್ಯಪಾಲರಿಗೆ ಸಾರ್ವಜನಿಕರು ರಾಜಭವನ ವೀಕ್ಷಿಸುವುದರಿಂದ ಕಿರಿಕಿರಿಯಾಗುತ್ತದೆಂದು ಸರ್ಕಾರದ ಭಾವನೆಯಾಗಿದ್ದರೆ, ಬೆಂಗಳೂರಿನಲ್ಲಿ ಹಲವಾರು ಸರ್ಕಾರಿ ಬಂಗಲೆಗಳಿವೆ. ಅಲ್ಲಿ ರಾಜ್ಯಪಾಲರಿಗೆ ವಸತಿ ಮತ್ತು ಕಚೇರಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಐತಿಹಾಸಿಕ ಪಾರಂಪರಿಕ ಕಟ್ಟಡವನ್ನು ವೀಕ್ಷಿಸುವ ಭಾಗ್ಯವನ್ನು ಕಲ್ಪಿಸಿಕೊಡಬೇಕು ಎಂಬುದಾಗಿ ಮನವಿ ಮಾಡುತ್ತೇವೆ ಎಂದರು.
ರಾಜಭವನದಲ್ಲಿ ಸುಮಾರು 500 ವಿವಿಧ ಜಾತಿಯ ಮರಗಳಿವೆ. ಸಾರ್ವಜನಿಕರಿಗೆ ಮುಕ್ತವಾಗುವುದರಿಂದ ಅಲ್ಲಿನ ಐತಿಹಾಸಿಕ ಕುರಿತು ತಿಳಿದುಕೊಳ್ಳಲು ಸಾಧ್ಯ. ವಿವಿಧ ಜಾತಿಯ ಮರಗಳನ್ನು ಅಧ್ಯಯನ ಮಾಡಲು ಸಸ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಅಲ್ಲದೇ, ಪ್ರವಾಸಿಗರಿಗೂ ಅನುಕೂಲವಾಗಿರುವುದಲ್ಲದೆ, ಇಂಜಿನಿಯರಿಂಗ್ ಆರ್ಕಿಟೆಕ್ಟ್ ವಿದ್ಯಾರ್ಥಿಗಳಿಗೂ ಆ ಪಾರಂಪರಿಕ ಕಟ್ಟಡದ ವಾಸ್ತುಶಿಲ್ಪ, ಅಂದಿನ ತಾಂತ್ರಿಕತೆ ಇವುಗಳನ್ನೆಲ್ಲ ಗಮನಿಸಿ ಅಧ್ಯಯನ ಮಾಡಲು ಅವಕಾಶವಾಗಿದೆ. ಬೆಂಗಳೂರಿನ ರಾಜಭವನವೂ ಕೂಡ ಮೈಸೂರಿನ ಅರಮನೆಗಿಂತ ಸುಮಾರು 6 ದಶಕಗಳ ಹಿಂದೆಯೇ ಸರ್.ಮಾರ್ಕ್ ಕಬ್ಬನ್ ರವರು ನಿರ್ಮಿಸಿದ ಪಾರಂಪರಿಕ ಕಟ್ಟಡವಾಗಿದೆ. ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಅದಷ್ಟು ಬೇಗ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜಭವನದ ಇತಿಹಾಸ:
ಶ್ವೇತ ವರ್ಣದ ರಾಜಭವನವು ಬ್ರಿಟಿಷ್ ಯುಗವನ್ನು ಪ್ರತಿಬಿಂಬಿಸುತ್ತದೆ. 1834ರಿಂದ 1861ರ ವರೆಗೆ ಬ್ರಿಟಿಷರ ಮೈಸೂರು ಪ್ರಾಂತ್ಯದ ಕಮೀಷನರ್ ಆಗಿದ್ದ ಸರ್. ಮಾರ್ಕ್ ಕಬ್ಬನ್ ಹಣ ನೀಡಿ ಈ ಸ್ವತ್ತನ್ನು ಖರೀದಿಸಿದರು. 1840-1842ರ ಅವಧಿಯಲ್ಲಿ ತಮ್ಮ ಅಭಿರುಚಿ ಮತ್ತು ಅವಶ್ಯಕತೆಗಳಿಗನುಗುಣವಾಗಿ ತಮ್ಮ ಸ್ವಂತ ಹಣದಿಂದ ಔಟ್‍ಹೌಸ್ ಮತ್ತು ಕುದುರೆ ಲಾಯಗಳೊಂದಿಗೆ ಈ ಬಂಗಲೆಯನ್ನು ಕಟ್ಟಿಸಿದರು. 1840ರಲ್ಲಿ ಮಾರ್ಕ್ ಕಬ್ಬನ್ ರವರು ಈ ಬಂಗಲೆಯನ್ನು ಕಟ್ಟಿಸಿದಾಗ, ಈ ಪ್ರದೇಶದಲ್ಲಿ ಯಾವುದೇ ಕಟ್ಟಡಗಳು ಇರಲಿಲ್ಲ.
ಕಬ್ಬನ್ ಬಳಿಕ ಮೇಜರ್ ಪ್ರೆಡೆರಿಕ್ ಗ್ರೇ ಅವರ ಉಸ್ತುವಾರಿಗೆ ಬಂದಿತು. ಆಗ ಬಂಗಲೆಯನ್ನು ಮಾರಾಟಕ್ಕೆ ಇಡಲಾಯಿತು. ಕಬ್ಬನ್ ನಂತರ ಕಮೀಷನ್‍ರ್ ಆಗಿ ಬಂದಂತಹ ಲೆವಿನ್ ಬೆಂಥಾಮ್ ಬೌರಿಂಗ್ ನ.13, 1862 ರಂದು ಅದರ ವಿಶಾಲವಾದ ಎಸ್ಟೇಟ್‍ನೊಂದಿಗೆ ಆ ಬಂಗಲೆಯನ್ನು ಖರೀದಿಸಿದರು. ಈ ಕಟ್ಟಡವನ್ನು ಖರೀದಿ ಮಾಡುವ ಮೊದಲು, ಕಮೀಷನರ್ ಅವರು ಕಟ್ಟಡಕ್ಕಾಗಿ ಮೇಜರ್ ಗ್ರೇ ಅವರಿಗೆ ತಿಂಗಳಿಗೆ 200 ರೂ. ಬಾಡಿಗೆಯನ್ನು ನೀಡುತ್ತಿದ್ದರು. ಆಗ ಬೌರಿಂಗ್‍ರವರು ಸರ್ಕಾರಕ್ಕೆ ಈ ಕಟ್ಟಡವನ್ನು ಖರೀದಿಸದಿದ್ದಲ್ಲಿ, ಈ ಬಂಗಲೆಯು ಇಂದಿಗೂ ಖಾಸಗಿ ಸ್ವತ್ತಾಗಿರುತ್ತಿತ್ತು..!
1831ರಲ್ಲಿ ಬೆಂಗಳೂರು ರೆಸಿಡೆನ್ಸಿ ಕೇಂದ್ರ ಸ್ಥಾನವಾದ ನಂತರ, ಬ್ರಿಟಿಷ್ ರೆಸಿಡೆಂಟ್ ಈಗ ಭಾರತೀಯ ಸ್ಟೇಟ್ ಬ್ಯಾಂಕ್ ಇರುವ ಕಟ್ಟಡದಲ್ಲಿ ನೆಲೆಸಿದ್ದರು. ಬೆಂಗಳೂರಿನಲ್ಲಿ ಬ್ರಿಟಿಷ್ ರೆಸಿಡೆಂಟರು 1831ರಿಂದ ಜ.1843ರ ವರೆಗೆ ರೆಸಿಡೆಂಟ್ ಹುದ್ದೆಯು ರದ್ದುಗೊಳ್ಳುವವರೆಗೂ ಈ ಕಟ್ಟಡವೇ ಅವರ ನಿವಾಸವಾಗಿತ್ತು. ರೆಸಿಡೆಂಟ್‍ರು ಈ ಕಟ್ಟಡದಲ್ಲಿ ನೆಲೆಸಿದ್ದಾಗ, ಮಾರ್ಕ್ ಕಬ್ಬನ್ ಕಮೀಷನರ್ ಬಂಗಲೆಯಲ್ಲಿ ವಾಸವಾಗಿದ್ದರು. 1881ರಲ್ಲಿ ಮೈಸೂರು ಮಹಾರಾಜರ ಕುಟುಂಬಕ್ಕೆ ಅಧಿಕಾರವನ್ನು ಮರಳಿ ಹಸ್ತಾಂತರಿಸುವುದರೊಂದಿಗೆ ಕಮೀಷನರ್ ಹುದ್ದೆಯನ್ನು ರದ್ದುಗೊಳಿಸಲಾಯಿತು ಹಾಗೂ ರೆಸಿಡೆಂಟ್ ಹುದ್ದೆಯನ್ನು ಪುನರ್ ಸೃಷ್ಟಿಸಲಾಯಿತು. ರೆಸಿಡೆಂಟ್‍ಗೆ ಈ ಹಿಂದಿನ ಕಮೀಷನರ್ ಬಂಗಲೆಯಲ್ಲಿ (ಈಗಿನ ರಾಜಭವನದಲ್ಲಿ) ವಸತಿಯನ್ನು ಕಲ್ಪಿಸಲಾಯಿತು. ನಂತರ ಸ್ವಾತಂತ್ರ್ಯ ಪಡೆಯುವವರೆಗೆ, ರೆಸಿಡೆನ್ಸಿ ಎಂದು ಕರೆಯಲಾಗುತ್ತಿತ್ತು. 66 ವರ್ಷಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ರೆಸಿಡೆಂಟ್‍ರುಗಳು ಈ ಕಟ್ಟಡದಲ್ಲಿ ವಾಸವಾಗಿದ್ದರು ಹಾಗೂ ಇದು ಕಾಲಕಾಲಕ್ಕೆ ಹಲವಾರು ಬದಲಾವಣೆಗಳನ್ನು ಹಾಗೂ ಸೇರ್ಪಡೆಗಳನ್ನು ಕಂಡಿದೆ.
'ರೆಸಿಡೆನ್ಸಿ’ ಯಿಂದ ‘ರಾಜಭವನ’ ಆದದ್ದು ಹೀಗೆ:
ಮೈಸೂರು ರಾಜ್ಯದ ‘ರೆಸಿಡೆನ್ಸಿ’ಯನ್ನು ಮೊದಲು 1799ರಲ್ಲಿ ಮೈಸೂರಿನಲ್ಲಿ ಸ್ಥಾಪಿಸಲಾಯಿತು. ನಂತರ ಇದನ್ನು ಕ್ರಿ.ಶ 1804ರಲ್ಲಿ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಇದು 1843ರಲ್ಲಿರದ್ದಾಗಿ ನಂತರ 1881ರಲ್ಲಿ ಬೆಂಗಳೂರಿನಲ್ಲಿ ಇದು ಪುನರ್ ಸೃಷ್ಟಿಸಲಾಯಿತು. ಅಂತಿಮವಾಗಿ 1947ರಲ್ಲಿ ಸಂಪೂರ್ಣವಾಗಿ ಬ್ರಿಟಿಷರು ಭಾರತವನ್ನು ಬಿಟ್ಟು ಹೊರಡುವುದರೊಂದಿಗೆ ಈ ಹುದ್ದೆ ಇಲ್ಲವಾಯಿತು.
ಬ್ರಿಟಿಷ್ ಪ್ರಧಾನಿಯಾದ ಸರ್ ವಿನ್‍ಸ್ಟನ್ ಚರ್ಚಿಲ್ 1897 ರಿಂದ 1900ರ ವರೆಗೆ ಬೆಂಗಳೂರಿನಲ್ಲಿ ನೆಲೆಸಿದ್ದು, ಅವರಿಗೆ ನಾಗರಿಕ ಮತ್ತು ಮಿಲಿಟರಿ ನೆಲೆಯು ಆತಿಥ್ಯ ವಹಿಸಿತ್ತು. 1947ರಲ್ಲಿ ರೆಸಿಡೆನ್ಸಿಯ ಅಸ್ತಿತ್ವವು ಕೊನೆಗೊಂಡಿತು. ಗಣರಾಜ್ಯದ ಸಂವಿಧಾನವು ರಾಜಪ್ರಮುಖ ಹುದ್ದೆಯನ್ನು ಸೃಷ್ಟಿಸಲಾಯಿತು. ಅದು ಮುಂದೆ ರಾಜ್ಯಪಾಲ ಹುದ್ದೆಯಾಯಿತು. ಹೀಗಾಗಿ ಬೆಂಗಳೂರಿನಲ್ಲಿನ ರೆಸಿಡೆನ್ಸಿ ಆವರಣವನ್ನು ಅಲ್ಲಿಂದ ಮುಂದೆ ‘ರಾಜಭವನ’ ಎಂದು ಕರೆಯಲಾಯಿತು. ರೆಸಿಡೆನ್ಸಿಯಿಂದ ರಾಜಭವನಕ್ಕೆ ಹೋಗುವ ಮಾರ್ಗವು ಸಾಕಷ್ಟು ದೀರ್ಘವಾಗಿದೆ. 110 ವರ್ಷಗಳ ಕಾಲಾವಧಿಯಲ್ಲಿ ಅನೇಕ ದಿಗ್ಗಜರು, ಸೇನಾ ನಾಯಕರು ಹಾಗೂ ಆಡಳಿತಗಾರರು ಈ ಮಾರ್ಗದಲ್ಲಿ ಹಾದು ಹೋಗಿದ್ದಾರೆ. ಶ್ರೀರಂಗಪಟ್ಟಣದ ಲಾಲ್‍ಬಾಗ್, ಇಲ್ವಾಲಾ ರೆಸಿಡೆನ್ಸಿ ಕಟ್ಟಡ, ಮೈಸೂರಿನ ಸರ್ಕಾರಿ ಭವನ ಹಾಗೂ ಪ್ರಸ್ತುತ ಬೆಂಗಳೂರಿನ ರಾಜಭವನ ಈ ಭವ್ಯ ಚರಿತ್ರೆಗೆ ಪ್ರಮುಖ ಸಾಕ್ಷಿಯಾಗಿ ನಿಂತಿವೆ.
ರಾಜಭವನದಲ್ಲಿನ ಉದ್ಯಾನವನದ ನೋಟ:
ಕಬ್ಬನ್ ಅವರಿಗೆ ಉದ್ಯಾನವನ ಸೌಂದರ್ಯದ ಬಗ್ಗೆ ಇದ್ದ ಹೆಚ್ಚಿನ ಆಸಕ್ತಿ ಮತ್ತು ಒಲವಿನ ಕಾರಣದಿಂದ ಬೆಂಗಳೂರಿನ ಲಾಲ್ ಬಾಗ್ ಸಸ್ಯೋದ್ಯಾನಕ್ಕೆ 1856 ರಲ್ಲಿ ರಾಜ್ಯ ಬಟಾನಿಕಲ್ ಗಾರ್ಡನ್ ಎನ್ನುವ ಮಾನ್ಯತೆ ಬಂದಿತು. ದೇಶದ ವಿವಿಧ ಭಾಗಗಳಿಂದ ಗಿಡ - ಮರಗಳನ್ನು ತಂದು ಬೆಂಗಳೂರಿನ ಲಾಲ್ ಬಾಗ್ ಸಸ್ಯೋದ್ಯಾನಕ್ಕೆ ಪರಿಚಯಿಸಲಾಗಿದೆ. ಲಾಲ್ ಬಾಗ್ ಸಸ್ಯೋದ್ಯಾನಕ್ಕೆ ಗಿಡ-ಮರಗಳನ್ನು ಪರಿಚಯಿಸುವ ಸಂದರ್ಭದಲ್ಲಿ ರಾಜಭವನ ಉದ್ಯಾನವನಕ್ಕೆ ನೀಲಗಿರಿ, ಅರಕೇರಿಯ, ಸಿಸಾಲ್ ಪಿನಿಯ ಕೋರಿಯಾರ, ಗಿಡಗಳನ್ನು 1860 - 70 ರ ಸುಮಾರಿನಲ್ಲಿ ಪರಿಚಯಿಸಲಾಗಿದೆ. ಇದಾದ ನಂತರದಲ್ಲಿ ಹಲವು ಬಗೆಯ ಗಿಡ – ಮರಗಳು ಮತ್ತು ಅಲಂಕಾರಿಕ ಗಿಡಗಳು, ಹೂವಿನ ಗಿಡಗಳನ್ನು ಈ ಉದ್ಯಾನವನಕ್ಕೆ ಪರಿಚಯಿಸಲಾಯಿತು.
ಆ ಸಮಯದಲ್ಲಿ ಸುಮಾರು 3400 ಗಿಡಗಳನ್ನು ಕುಂಡಗಳಲ್ಲಿ ಬೆಳಸಲಾಗುತ್ತಿತ್ತು ಎಂದು ಹೇಳಲಾಗಿದೆ. ಅದರಲ್ಲಿ ಹೆಚ್ಚಿನ ಪಾಲು ಕ್ರೋಟಾನ್, ಫರ್ನ್ ಮತ್ತು ಗುಲಾಬಿ ಗಿಡಗಳು ಎಂದು ತಿಳಿದುಬಂದಿದೆ. ಅಂದಿನ ಕಾಲದಲ್ಲಿಯೂ ಕುಂಡಗಳಲ್ಲಿ ಗಿಡಗಳನ್ನು ಬೆಳೆಸುವ ಪದ್ದತಿ ಇದ್ದು, ಈಗಲೂ ಸಹ ಕುಂಡಗಳಲ್ಲಿ ಗಿಡಗಳನ್ನು ಬೆಳಸುವ ಪದ್ದತಿ ಮುಂದುವರೆದುಕೊಂಡು ಬರಲಾಗಿದೆ. ರಾಜಭವನ ಉದ್ಯಾನವನವನ್ನು ಫಾರ್ಮಲ್ ಮತ್ತು ಇನ್-ಫಾರ್ಮಲ್ ಉದ್ಯಾನವನವನ್ನಾಗಿ ನಿರ್ಮಿಸಲಾಗಿದೆ. ಫಾರ್ಮಲ್ ಉದ್ಯಾನವನ ರಾಜಭವನದ ಮುಖ್ಯ ಪೋರ್ಟಿಕೋ ಎದುರು, ಮಧ್ಯ ಭಾಗದ ವಾಕಿಂಗ್ ಪಾತ್, ರಾಯಲ್ ಪಾಮ್ಸ್ ಮತ್ತು ಅದರ ಸುತ್ತಲಿನ ಹುಲ್ಲುಹಾಸು, ಆರ್ಚ್‌ಗಳ ಮೇಲೆ ಹಬ್ಬಿಸಿರುವ ಬಳ್ಳಿಜಾತಿ ಹೂವಿನ ಗಿಡಗಳನ್ನು ಹೊಂದಿರುವ ಉದ್ಯಾನವನವಾಗಿದೆ. ಅಂತೆಯೇ ಇನ್-ಫಾರ್ಮಲ್ ಉದ್ಯಾನವನದಲ್ಲಿ ಉದ್ಯಾನವನದ ಪರಿಧಿಯಲ್ಲಿ ಮಾವು, ಸಫೋಟ, ತೆಂಗಿನ ಮರಗಳು ಮತ್ತು ಕೈತೋಟದ ಗಿಡಗಳು ಇರುತ್ತವೆ. ಈ ಫಾರ್ಮಲ್ ಮತ್ತು ಇನ್-ಫಾರ್ಮಲ್ ಉದ್ಯಾನವನದಿಂದ ವಸಾಹತುಶಾಹಿ ಮತ್ತು ಶಾಸ್ತ್ರೀಯ ವಾಸ್ತು ಶಿಲ್ಪವಿರುವ ರಾಜಭವನ ಕಟ್ಟಡಕ್ಕೆ ಒಂದು ಸಾಮರಸ್ಯದ ಮೆರಗನ್ನು ಕೊಟ್ಟಿದೆ.
2000 ನೇ ಸಾಲಿನಲ್ಲಿಗಾಜಿನ ಮನೆ ನಿರ್ಮಾಣ:
ಗಾಜಿನಮನೆಯನ್ನು 2000 ನೇ ಸಾಲಿನಲ್ಲಿ ನಿರ್ಮಿಸಿದ್ದು, ರಾಜಭವನದಲ್ಲಿ ಏರ್ಪಡಿಸುವ ಕಾರ್ಯಕ್ರಮಗಳು ಇಲ್ಲಿ ಜರುಗುತ್ತಿವೆ. ರಾಜಭವನ ಮುಂಭಾಗದ ಹುಲ್ಲುಹಾಸಿನ ಎಡಭಾಗದಲ್ಲಿ ನಿರ್ಮಿಸಿರುವ ಕಣ್ಮನ ಸೆಳೆಯುವ ಆಕರ್ಷಣೀಯ ಜಲಪಾತ ಉದ್ಯಾನವನ ಏಕತಾನತೆಯನ್ನು ಹೋಗಲಾಡಿಸಿ ಹೊಸ ರೂಪವನ್ನು ಒದಗಿಸಿದೆ. ಇದರ ಬಲಭಾಗದಲ್ಲಿರುವ ಗಾಂಧೀಜಿಯವರ ಪುತ್ಥಳಿಯು ಇಲ್ಲಿನ ಘನತೆಯನ್ನು ಹೆಚ್ಚಿಸಿ ಪ್ರಶಾಂತತೆಯ ಸ್ಪರ್ಶವನ್ನು ತಂದುಕೊಟ್ಟಿದೆ. ಈ ಉದ್ಯಾನವನವನದಲ್ಲಿರುವ ಹದ್ದುಗಳು, ಕಾಗೆ, ಮರಕುಟಿಕ, ಪಾರಿವಾಳ, ಮೈನಾ ಹಕ್ಕಿ, ಅಳಿಲು, ಚಿಟ್ಟೆ, ಇತ್ಯಾದಿಗಳು ಈ ಉದ್ಯಾನವನಕ್ಕೆ ವೈವಿಧ್ಯತೆಯನ್ನು ನೀಡಿವೆ.
ಕಳೆದ ಸುಮಾರು ಎಂಟು ವರ್ಷಗಳಿಂದ ರಾಜಭವನ ಉದ್ಯಾನವನಕ್ಕೆ ಹಲವು ಬಗೆಯ ಗಿಡಗಳನ್ನು ಪರಿಚಯಿಸಿದೆ. ಲೆಜಸ್ಟ್ರೋಮಿಯ ಇಂಡಿಕ, ಹೂವಿನ ಜಾತಿಯ ರುದ್ರಾಕ್ಷಿ, ಆಂಥೂರಿಯಂ, ಸ್ಪ್ಯಾಥಿಪೈಲಮ್, ಆಕ್ಯಾಲಿಫ, ದುರಂತ ಗೋಲ್ಡಿಯಾನ, ಪ್ಲೂಮೇರಿಯ, ದಾಸವಾಳ, ಪೆಟ್ರಿಯ (ಬಿಳಿಹೂ), ಜಟ್ರೋಪ, ಏರಿಥ್ರಿನ ಕ್ರಿಸ್ಟಗಲ್ಲಿ (ಕೋರಲ್ ಪ್ಲಾಂಟ್ಸ್), ಶ್ರೀಗಂಧ, ಮಲ್ಲಿಗೆ ಜಾತಿ, ಕಣಗೆಲೆ, ಡ್ರಸೀನ ತಳಿಗಳು, ಸ್ಪೆಡರ್ ಲಿಲ್ಲಿ, ರಾತ್ರಿರಾಣಿ, ಪಾರಿಜಾತ ಹೀಗೆ ಹಲವು ಬಗೆಯ ಹೂವಿನ ಗಿಡಗಳು ಮತ್ತು ಅಲಂಕಾರಿಕ ಗಿಡಗಳನ್ನು ಪರಿಚಯಿಸಿ ಉದ್ಯಾನವನದ ಸಸ್ಯಸಂಪತ್ತನ್ನು ಹೆಚ್ಚಿಸಿದೆ.