ಎತ್ತಿನಹೊಳೆ ನೀರು ಅಲ್ಲಲ್ಲಿ ಕಳವು: ಡಿಸಿಎಂ ಡಿಕೆ ಶಿವಕುಮಾರ್ ಆತಂಕ

Update: 2024-07-16 13:34 GMT

ಎತ್ತಿನಹೊಳೆ ನೀರನ್ನು ಕಾಲುವೆಗಳಿಂದ  ಪಂಪ್ ಸೆಟ್ ಮೂಲಕ  ಕಳಳವು ಮಾಡುವ ಮೂಲಕ ತುಮಕೂರು ಭಾಗಕ್ಕೂ ನೀರು ತಲುಪುತ್ತದೆಯೇ ಎನ್ನುವ ಅನುಮಾನ ಬಂದಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ವಿಧಾನ ಮಂಡಲ ಅಧಿವೇಶನದ ಎರಡನೇ ದಿನವಾದ ಇಂದು ಶಾಸಕ ಜಗದೀಶ್ ಶಿವ ಗುಡಗಂಟಿ ಅವರು ತುಂಗಳ- ಸಾವಳಗಿ ಏತ ನೀರಾವರಿ ಯೋಜನೆಯ ಕೊನೆಯ ಭಾಗಗಳ ರೈತರಿಗೆ ನೀರು ತಲುಪುತ್ತಿಲ್ಲ ಎನ್ನುವ ವಿಚಾರವಾಗಿ ಗಮನ ಸೆಳೆದರು. ಅ

ಇದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್‌ ಅವರು,“ಎತ್ತಿನಹೊಳೆ ಯೋಜನೆಯ ಕಾಲುವೆಗಳಿಗೆ ನೀರು ಹರಿಸಿದರೆ ನೀರನ್ನು ಪಂಪ್, ಕಳವು ಮಾಡುತ್ತಾರೆ. ಅದೇ ರೀತಿ ಉತ್ತರ ಕರ್ನಾಟಕದ ಅನೇಕ ಕಡೆ ಶೇ. 90 ರಷ್ಟು ನೀರನ್ನು ಪಂಪ್ ಮಾಡಲಾಗುತ್ತಿದೆ. ಇದನ್ನು ತಡೆಯುವ ಕೆಲಸ ಅಧಿಕಾರಿಗಳಿಂದ ಆಗುವುದಿಲ್ಲ. ಜನಪ್ರತಿನಿಧಿಗಳಾದ ನಾವು  ನಮ್ಮ ರೈತರಿಗೆ ಮನವರಿಕೆ ಮಾಡಿಕೊಡಬೇಕು” ಎಂದರು.

ಎತ್ತಿನಹೊಳೆ ಯೋಜನೆಗೆ 25 ಸಾವಿರ ಕೋಟಿ ಹಣ ಖರ್ಚಾಗಿದೆ. ಕಾಲುವೆಗಳಿಂದ ನೀರನ್ನು ಮದ್ಯೆ, ಮದ್ಯೆ ಪಂಪ್ ಸೆಟ್ ಮೂಲಕ ಎತ್ತುವ ಕಾರಣಕ್ಕೆ ನನಗೆ ಹಾಗೂ ನಮ್ಮ ಶಾಸಕರಿಗೆ ಭಯವಾಗುತ್ತಿದ್ದು, ತುಮಕೂರು ಭಾಗಕ್ಕೂ ನೀರು ತಲುಪುತ್ತದೆಯೇ ಎನ್ನುವ ಅನುಮಾನ ಬಂದಿದೆʼʼ ಎಂದು ಆತಂಕ ವ್ಯಕ್ತಪಡಿಸಿದರು.

ʻʻಮಂಡ್ಯ, ಹಾಸನ, ಬಾಗಲಕೋಟೆ ಸೇರಿದಂತೆ ರಾಜ್ಯದ ನೀರಾವರಿ ಪ್ರದೇಶಗಳ ಕೊನೆ ಪ್ರದೇಶಗಳಿಗೆ  ನೀರು ತಲುಪುತ್ತಿಲ್ಲ. ಏತ ನೀರಾವರಿ ಮಾಡಿದರೂ ಸಹ ಶೇ 50 ರಷ್ಟು ನೀರು ಸಹ ಹೋಗುತ್ತಿಲ್ಲ. ಸದನ ಒಪ್ಪುವುದಾದರೆ ಇದನ್ನು ತಡೆಯಲು ವಾರದೊಳಗೆ ಬಿಲ್ ತಯಾರು ಮಾಡಲಾಗುವುದುʼʼ ಎಂದರು.

ʻʻಇದನ್ನು ಯಾವ ರೀತಿ ನಿಯಂತ್ರಣ ಮಾಡಬೇಕು ಎಂದು ಪರಿಶೀಲನೆ ನಡೆಸಲಾಗಿದೆ. ನಾವು ನೀರನ್ನು ಏತ ನೀರಾವರಿ ಮೂಲಕ ಹರಿಸುತ್ತೇವೆ. ಆ ನೀರನ್ನೇ ಪಂಪ್ ಮೂಲಕ 10 ಕಿಮೀಗಟ್ಟಲೇ ಪಂಪ್ ಮಾಡುತ್ತಾರೆ. ಯೋಜನೆ ಮಾಡಿ ಏನು ಲಾಭ?ʼʼ ಎಂದು ಹೇಳಿದರು.

ʻʻಕೆಆರ್ ಎಸ್ ನೀರು ಮಳವಳ್ಳಿಗೆ ಹೋಗುವುದೇ ಇಲ್ಲ. ಕಾಲುವೆ ಮಾಡಿ 20 ವರ್ಷಗಳಾದರೂ ಗದಗ ಜಿಲ್ಲೆ ನೀರನ್ನೇ ನೋಡಿಲ್ಲ. ಎಲ್ಲರೂ ಸಹಕಾರ ಕೊಟ್ಟರೇ ನಾವು ನೀರಿನ ರಕ್ಷಣೆ ಮಾಡಿ ಕೊನೆಯ ಭಾಗದ ರೈತರಿಗೂ ನೀರು ತಲುಪುವಂತೆ ಮಾಡುವ ಕಾನೂನು ತರಲಾಗುವುದುʼʼ ಎಂದು ತಿಳಿಸಿದರು. ದಯವಿಟ್ಟು ಆದಷ್ಟು ಬೇಗ ವಿಧೇಯಕ ಸಿದ್ದಪಡಿಸಿ, ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಬಿಜೆಪಿ ಶಾಸಕ ಸಿ.ಸಿ.ಪಾಟೀಲ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದರು.

ಇದೇ ವೇಳೆ ಕಾವೇರಿ ಜಲಾನಯನ ಪ್ರದೇಶಗಳ ನದಿ ನೀರು ಹರಿವಿನ ಪ್ರಮಾಣ ಕುರಿತು ಡಿಕೆ ಶಿವಕುಮಾರ್‌ ಅವರು ಮಾಹಿತಿ ನೀಡಿದ್ದು, ಹಾರಂಗಿ ಜಲಾಶಯಕ್ಕೆ 12,827 ಕ್ಯೂಸೆಕ್ಸ್, ಹೇಮಾವತಿ 14,027, ಕೆ.ಆರ್ ಎಸ್ 25,933, ಕಬಿನಿಗೆ 28,840 ಒಟ್ಟು 56, 626 ಕ್ಯೂಸೆಕ್ಸ್ ನೀರಿನ ಒಳಹರಿವಿದೆ. ಕಾನೂನಿನ ಪ್ರಕಾರ 40 ಟಿಎಂಸಿ ನೀರು ಹೋಗಬೇಕಾಗಿತ್ತು. ಬಿಳಿಗುಂಡ್ಲುವಿನಲ್ಲಿ ದಾಖಲೆ ಪ್ರಕಾರ 6 ಟಿಎಂಸಿ ನೀರು ಹೋಗಿದೆ. ಅಂದರೆ ಪ್ರತಿ ದಿನ ನೀರಿನ ಹರಿವಿನ ಪ್ರಮಾಣ 1.5 ಟಿಎಂಸಿ ಮುಟ್ಟಿದೆ. ಏಕೆಂದರೆ 250 ಕಿ.ಮೀ ನಷ್ಟು ನೀರು ಹರಿಯಬೇಕಿದೆ. ಇದೇ ರೀತಿ ಮಳೆ ಬಂದು ನೀರು ಹರಿದರೆ ತೊಂದರೆಯಾಗುವುದಿಲ್ಲ ಎಂಬುದು ನನ್ನ ಭಾವನೆʼʼ ಎಂದರು.

Tags:    

Similar News