ಬಳ್ಳಾರಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ʼಪಟ್ಟʼಕ್ಕೆ ಒಪ್ಪಿಗೆ; ʻಇದೆʼ -ʻಇಲ್ಲʼ ಸಂದಿಗ್ಧದಲ್ಲಿ ಬಾನು ಮುಷ್ತಾಕ್
ಮಹೇಶ್ ಜೋಶಿ ಅವರ ಉದ್ಧಟತನವೆಂಥಹುದು ಎಂದರೆ; ಈ ಎಲ್ಲವನ್ನು ಕುರಿತಾದ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡದೆ, ಜೋಶಿ ಅವರು ಪತ್ರಿಕಾಗೋಷ್ಠಿಯಿಂದ ಹೊರನಡೆದದ್ದು, ಮತ್ತಷ್ಟು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.;
ಕಳೆದ ಫೆಬ್ರುವರಿ ತಿಂಗಳವರೆಗೆ ಕನ್ನಡದ ಹಲವು ಲೇಖಕಿಯರ ಪೈಕಿ ಒಬ್ಬರಾಗಿದ್ದ ಖ್ಯಾತ ಕಥೆ-ಕಾದಂಬರಿಗಾರ್ತಿ ಹಾಗೂ ಲೇಖಕಿ ಹಾಸನದ ನೆಲೆಯ ಬಾನು ಮುಷ್ತಾಕ್, ಜುಲೈ ವೇಳೆಗೆ ಕನ್ನಡ ಸಾಂಸ್ಕೃತಿಕ ಲೋಕದ ಅಪೂರ್ವ ತಾರೆಯಾಗಿ ಮಿನುಗುತ್ತಿರುವುದು, ನಾಡಿನ ಭುವನದ ಭಾಗ್ಯ. ಬಾನು ಮುಷ್ತಾಕ್ ಅವರ ಸಣ್ಣಕತೆಗಳ ಅನುವಾದಿತ ಸಂಕಲನ Heart Lamp ಕೃತಿ, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಪರಿಗಣಿಸಲು ಫೆಬ್ರುವರಿಯಲ್ಲಿ ಸಿದ್ಧವಾದ ದೀರ್ಘ ಪಟ್ಟಿಯಲ್ಲಿ ಸ್ಥಾನ ಪಡೆಯಿತು.
ಅನುವಾದಕಿ ದೀಪಾ ಭಾಸ್ತಿ ಅವರು ಬಾನು ಮುಷ್ತಾಕ್ ಅವರ ಕನ್ನಡದ ಕತೆಗಳನ್ನು English ಗೆ ಅನುವಾದಿಸಿ, ಅದನ್ನು ಸಾಗರದಾಚೆಗೆ ಕೊಂಡೊಯ್ದರೆಂದರೆ ತಪ್ಪೇನೂ ಅಲ್ಲ. ಕಳೆದ ನಾಲ್ಕು ತಿಂಗಳಲ್ಲಿ ಹದಿಮೂರರಲ್ಲಿ ಒಂದಾಗಿದ್ದ Heart Lamp ಕೃತಿ, ನಂತರ ಕಿರುಪಟ್ಟಿಯ ಆರು ಕೃತಿಗಳ ಪೈಕಿ ಒಂದಾಗಿ, ಕೊನೆಗೆ ಆ ಆರು ಕೃತಿಗಳ ಪೈಕಿ ʼಒಂದೇ ಒಂದಾಗಿ ʼ ಬೂಕರ್ ಪ್ರಶಸ್ತಿಗೆ ಪಾತ್ರವಾಗಿದ್ದು, ಈಗ ಇತಿಹಾಸ. ಇದುವರೆಗೆ ಕನ್ನಡ ನಾಡಿಗಷ್ಟೇ ಸೀಮಿತವಾಗಿದ್ದ ಬಾನು ಮುಷ್ತಾಕ್, ಈಗ ವಿಶ್ವದಾದ್ಯಂತ ಪರಿಚಿತರು. ಕಾರಣ; ಅವರು ಕನ್ನಡ ನಾಡಿನ ಪ್ರಪ್ರಥಮ ಬೂಕರ್ ಪ್ರಶಸ್ತಿ ಪಡೆದ ಲೇಖಕರಾಗಿದ್ದಾರೆ. ಇದುವರೆಗೆ ಕನ್ನಡಿಗರನ್ನು ವಂಚಿಸಿಕೊಂಡೇ ಬಂದಿದ್ದ ಈ ವಿಶ್ವ ಅತಿಮುಖ್ಯ ಸಾಹಿತ್ಯಿಕ ಪ್ರಶಸ್ತಿಗಳಲ್ಲೊಂದಾದ ಬೂಕರ್ ಪ್ರಶಸ್ತಿಯನ್ನು ಬಾನು ಮುಷ್ತಾಕ್ ಕನ್ನಡಕ್ಕೆ ತಂದುಕೊಟ್ಟಿದ್ದಾರೆ.
ಸರ್ವಾಧ್ಯಕ್ಷತೆಗೆ ಐದನೇ ಮಹಿಳಾ ಸಾಹಿತಿ ಬಾನು ಮುಷ್ತಾಕ್
ಈಗ ಕನ್ನಡ ಸಾಂಸ್ಕೃತಿಕ, ಸಾಹಿತ್ಯಿಕ ಲೋಕದ ದೃಷ್ಟಿ ಬಾನು ಮುಷ್ತಾಕ್‌ರತ್ತ ನೆಟ್ಟಿದೆ. ಅವರಿಗಿರಲಿ ಇದುವರೆಗೆ , ಸ್ತ್ರೀಸಾಹಿತಿಗಳನ್ನು ವಂಚಿಸುತ್ತಿದ್ದ ಸ್ಥಾನಮಾನಗಳೆಲ್ಲ ಬಾನು ಮುಷ್ತಾಕ್ ಅವರನ್ನು ಹುಡುಕಿಕೊಂಡು ಬರುತ್ತಲಿವೆ. ಬಳ್ಳಾರಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಬಾನು ಮುಷ್ತಾಕ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಸರ್ವಾನುಮತದಿಂದ ಆಯ್ಕೆಮಾಡಿ, ಈ ಬಗ್ಗೆ ಪ್ರಕಟಣೆಯನ್ನೂ ಮಾಡಿಬಿಟ್ಟಿದೆ. ಬಾನು ಮುಷ್ತಾಕ್ ಕನ್ನಡ ಸಾಹಿತ್ಯ ಪರಿಷತ್ತಿನ ಆಯ್ಕೆಯನ್ನು ಒಪ್ಪಿಕೊಂಡರೆ, ಈ ಗೌರವಕ್ಕೆ ಪಾತ್ರವಾದ ಕನ್ನಡದ ಐದನೇ ಮಹಿಳಾ ಲೇಖಕಿಯಾಗಲಿದ್ದಾರೆ.
ಈ ಮುನ್ನ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಮಹಿಳಾ ಲೇಖಕಿಯರೆಂದರೆ;, 1974ರಲ್ಲಿ ಮಂಡ್ಯದಲ್ಲಿ ನಡೆದ ಸಮ್ಮೇಳನಕ್ಕೆ ಖ್ಯಾತ ಲೇಖಕಿ ಜಯದೇವಿತಾಯಿ ಲಿಗಾಡೆ ಸರ್ವಾಧ್ಯಕ್ಷರಾಗಿದ್ದರು. ನಂತರ 2000ನೇ ಇಸುವಿಯಲ್ಲಿ ಬಾಗಲಕೋಟೆಯಲ್ಲಿ ನಡೆದ ಸಮ್ಮೇಳನಕ್ಕೆ ಶಾಂತಾದೇವಿ ಮಾಳವಾಡ ಸರ್ವಾಧ್ಯಕ್ಷರಾಗಿದ್ದರು, ಮೂಡುಬಿದರಿಯಲ್ಲಿ 2003ರಲ್ಲಿ ನಡೆದ ಸಮ್ಮೇಳನಕ್ಕೆ ಲೇಖಕಿ ಕಮಲಾ ಹಂಪನಾ ಅವರು ಸರ್ವಾಧ್ಯಕ್ಷರಾದರೆ, ಗದಗದಲ್ಲಿ 2010ರಲ್ಲಿ ಗೀತಾ ನಾಗಭೂಷಣ ಅವರು ಆ ಪ್ರತಿಷ್ಠಿತ ಸ್ಥಾನವನ್ನು ಅಲಂಕರಿಸಿದ್ದರು. ಈಗ ಬಾನು ಮುಷ್ತಾಕ್ ಅವರ ಸರದಿ ಬಂದಿದೆ. ಈ ಸಮ್ಮೇಳನದಲ್ಲಿ ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಬರಲು, ಅವರ ಕಥೆಗಳನ್ನು ಅನುವಾದಿಸಿದ ದೀಪಾ ಭಾಸ್ತಿ ಅವರನ್ನೂ ಸಮ್ಮೇಳನದಲ್ಲಿ ವಿಶೇಷವಾಗಿ ಸನ್ಮಾನಿಸಲು ಕಾರ್ಯಕಾರಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅಧಿಕೃತ ಮೂಲಗಳು, ʻದ ಫೆಡರಲ್-ಕರ್ನಾಟಕʼಕ್ಕೆ ತಿಳಿಸಿವೆ. ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸುವ ಮೊದಲು, ಈ ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಹಿಳಾ ಸಾಹಿತಿ ಸರ್ವಾಧ್ಯಕ್ಷರಾಗಬೇಕೆಂಬ ಕೂಗು ಎದ್ದಿತ್ತು. ಆಗ ಖ್ಯಾತ ಲೇಖಕಿಯರಾದ ಮಾಲತಿ ಪಟ್ಟಣಶೆಟ್ಟಿ ಹಾಗೂ ಜನಮನಗೆದ್ದ ಮಹಿಳಾ ಸಾಹಿತಿ, ವೀಣಾ ಶಾಂತೇಶ್ವರ ಅವರ ಹೆಸರು ಮುನ್ನೆಲೆಗೆ ಬಂದಿತ್ತು. ಈಗ ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಬಂದಿರುವ ಕಾರಣಕ್ಕೆ, ಅವರಿಗೆ ಈ ಸರ್ವಾಧ್ಯಕ್ಷ ಸ್ಥಾನಮಾನ ದಕ್ಕಿದೆ ಎಂಬ ಮಾತು ವಿದ್ವತ್ ವಲಯದಲ್ಲಿ ಕೇಳುಬರುತ್ತಿದೆ.
ನಾನಿನ್ನೂ ತೀರ್ಮಾನಿಸಿಲ್ಲ
“ಬಾನು ಮುಷ್ತಾಕ್ ಒಪ್ಪಿಕೊಂಡರೆ?” ಎಂದು ಈ ಸಂದರ್ಭದಲ್ಲಿ ಹೇಳುತ್ತಿರುವುದಕ್ಕೆ ಸಕಾರಣವೂ ಇದೆ. ಕನ್ನಡ ಸಾಹಿತ್ಯ ಪರಿಷತ್ ತನ್ನ ಆಯ್ಕೆಯನ್ನು ಪ್ರಕಟಿಸಿದರೂ, ತೀರಾ ಸೂಕ್ಷ್ಮ ಮನಸ್ಸಿನ ಸಾಹಿತಿಯಾದ ಬಾನು ಮುಷ್ತಾಕ್, ಈ ಆಯ್ಕೆಗೆ ಇನ್ನೂ ತಮ್ಮ ಒಪ್ಪಿಗೆ ಸೂಚಿಸಿಲ್ಲ. ಈ ಕುರಿತು ಅವರೇ ಹೇಳಿರುವ ಮಾತುಗಳಿವು. “ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಕನ್ನಡ ಸಾಹಿತ್ಯ ಪರಿಷತ್ ನನ್ನನ್ನು ಆಯ್ಕೆ ಮಾಡಿರುವುದನ್ನು ಒಪ್ಪಿಕೊಳ್ಳಬೇಕೋ, ನಿರಾಕರಿಸಬೇಕೋ ಎಂದು ನಿರ್ಧರಿಸಲು ನನಗೆ ಸ್ವಲ್ಪ ಸಮಯ ಬೇಕು” ಎಂದು ಅವರು ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದಾರೆ. “ಕನ್ನಡಿಗರ, ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಒಮ್ಮತದಿಂದ ನನ್ನನ್ನು ಈ ಪ್ರತಿಷ್ಠಿತ ಸ್ಥಾನಕ್ಕೆ ಆಯ್ಕೆ ಮಾಡಿರುವುದಕ್ಕೆ ನಾನು ಎಲ್ಲರಿಗೂ ವಂದನೆಗಳನ್ನು ಸಲ್ಲಿಸುತ್ತೇನೆ. ಅವರ ನಿರ್ಧಾರವನ್ನು ಗೌರವಿಸುತ್ತೇನೆ. ಮನ್ನಣೆಯನ್ನೂ ಕೊಡುತ್ತೇನೆ. ಆದರೆ ಪರಿಷತ್ತಿನ ಕೆಲವು ಕ್ರಮಗಳ ಬಗ್ಗೆ ಹಾಗೂ ಕಾರ್ಯವೈಖರಿ ಬಗ್ಗೆ ಸಾಂಸ್ಕೃತಿಕ ಲೋಕದಲ್ಲಿ ಬಹಳಷ್ಟು ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ನಾನು ತೀರ್ಮಾನವನ್ನು ತೆಗೆದುಕೊಳ್ಳುವುದು ಕಷ್ಟವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ನನಗೆ ಕೆಲವು ಸ್ಪಷ್ಟನೆಗಳು ಬೇಕಿವೆ. ಅನಂತರ ನನ್ನ ವೈಯಕ್ತಿಕ ನಿಲುವುಗಳನ್ನು ಆಧರಿಸಿ ನಾನು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ. ಪರಿಷತ್ತಿನ ಕಾರ್ಯವೈಖರಿ ಬಗ್ಗೆ ಕೆಲವು ಭಿನ್ನ ಧ್ವನಿಗಳಿದ್ದು, ಅವನ್ನೂ ನಾನು ಕೇಳಿಸಿಕೊಳ್ಳಬೇಕಿದೆ. ಅದಕ್ಕಾಗಿ ನಾನು ಸಮಯ ತೆಗೆದುಕೊಂಡಿದ್ದೇನೆ. ಅಂತಿಮ ತೀರ್ಮಾನ ನಂತರ ತೆಗೆದುಕೊಳ್ಳುತ್ತೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಜೋಶಿ ಪ್ರಕಟಣೆ; ಬಾನು ನಿರಾಕರಣೆ
ಕನ್ನಡದ ಸಾಂಸ್ಕೃತಿಕ ಲೋಕ ಅಂದುಕೊಂಡಂತೆಯೇ, ಬಾನು ಮುಷ್ತಾಕ್ ಅವರ ಆಯ್ಕೆಯಾಗಿದೆ. ಆದರೆ ಈ ಆಯ್ಕೆ ಪ್ರಕ್ರಿಯೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ವಿವಾದಗಳಲ್ಲಿ ಸಿಲುಕಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ “ಆಯ್ಕೆ ಪ್ರಕ್ರಿಯೆಯಲ್ಲಿ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದೆ” ಎಂಬ ಅರೋಪವೊಂದು ಕನ್ನಡದ ಪ್ರಾತಿನಿಧಿಕ ಸಂಸ್ಥೆಯ ಬಗ್ಗೆ ಕೇಳಿ ಬರುತ್ತಿದೆ. ಆದರೆ, ಬಾನು ಮುಷ್ತಾಕ್ ಆಗಲೇ, ಕನ್ನಡ ಸಾಹಿತ್ಯ ಪರಿಷತ್ತಿನ ತೀರ್ಮಾನವನ್ನು ಒಪ್ಪಿಕೊಂಡಿದ್ದಾರೆ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಸ್ಪಷ್ಟಪಡಿಸಿರುವುದು ಗೊಂದಲಕ್ಕೆ ಕಾರಣವಾಗಿದೆ. “ ಬಾನು ಮುಷ್ತಾಕ್ ನಮ್ಮ ತೀರ್ಮಾನವನ್ನು ಒಪ್ಪಿಕೊಂಡಿದ್ದಾರೆ. ʼಕನ್ನಡದ ಕೆಲಸ ನನ್ನ ಮೊದಲ ಕರ್ತವ್ಯ ಎಂದು ನನಗೆ ಸಂದೇಶ ಕಳುಹಿಸಿದ್ದಾರೆ” ಎಂದು ಜೋಶಿ ಹೇಳಿರುವುದು, ʼನನ್ನ ತೀರ್ಮಾನ ತಿಳಿಸಲು ನಾನು ಕಾಲಾವಕಾಶ ಕೇಳಿದ್ದೇನೆʼ ಎಂದು ಬಾನು ಮುಷ್ತಾಕ್, ಹೇಳಿರುವುದು ಎಲ್ಲರಲ್ಲೂ ಒಂದು ರೀತಿಯ ಗೊಂದಲ ಉಂಟಾಗಿದೆ.
ಐದು ತಿಂಗಳ ಮುನ್ನ ಸರ್ವಾಧ್ಯಕ್ಷರ ಆಯ್ಕೆ? ಏಕೆ?
ಇದುವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡುತ್ತಿದ್ದುದು ಸಮ್ಮೇಳನಕ್ಕೆ ಒಂದೆರಡು ತಿಂಗಳಿದೆ ಎನ್ನುವ ಹೊತ್ತಿದೆ. ಆ ವೇಳೆಗೆ ಅರ್ಹರ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅವರೆಲ್ಲರ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಎಲ್ಲರ ಅನುಮೋದನೆಯನ್ನು ಅನುಸರಿಸಿ ತೀರ್ಮಾನ ತೆಗೆದುಕೊಂಡು ಪ್ರಕಟಿಸುವುದು ಇದುವರೆಗೆ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ, ಸಮ್ಮೇಳನಕ್ಕೆ ಇನ್ನೂ ಐದು ತಿಂಗಳಿರುವಾಗಲೇ ಸರ್ವಾಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿರುವುದು, ಆಶ್ಚರ್ಯ ಮತ್ತು ವಿವಾದ ಎರಡನ್ನೂ ಹುಟ್ಟಿಹಾಕಿದೆ.
ಗೌರವ ಕಾರ್ಯದರ್ಶಿ ರಾಜೀನಾಮೆ
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಧ್ವನಿ ಎತ್ತಿರುವವರ ವಿರುದ್ಧ ಜೋಷಿ ಬಳಸಿರುವ ʻಬೂಕರ್ ಬ್ರಹ್ಮಾಸ್ತ್ರವಿದುʼ ಎಂದು ಹೇಳಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕುರಿತು ಇರುವ ಸರ್ವ ಆಕ್ಷೇಪಗಳನ್ನು ಮುಚ್ಚಿಹಾಕುವ ಯತ್ನಕ್ಕೆ ಬಾನು ಅವರನ್ನು ಬಲಿಪಶು ಮಾಡಲಾಗುತ್ತಿದೆ ಎಂಬ ಮಾತೂ ಕೇಳಿ ಬರುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷರಾದ ಮಹೇಶ್ ಜೋಶಿ ಅವರ ಆಡಳಿತ ವೈಖರಿಯನ್ನು ವಿರೋಧಿಸಿ, ಪದ್ಮಿನಿ ನಾಗರಾಜು ಅವರು ಪರಿಷತ್ತಿನ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಜೂನ್ 20ರಂದು ರಾಜಿನಾಮೆ ನೀಡಿದ್ದರು. ಜೋಶಿ ಅವರ ಕಾರ್ಯವೈಖರಿ ವಿರೋಧಿಸಿ, ವ್ಯಾಪಕವಾದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸಾಹಿತ್ಯ ಪರಷತ್ತಿನ ಪ್ರಮುಖ ಪದಾಧಿಕಾರಿಯೊಬ್ಬರು ನೀಡಿರುವ ಮೊದಲ ರಾಜೀನಾಮೆ ಇದು. ಸಾಹಿತ್ಯದ ಆಳವಾದ ತಿಳುವಳಿಕೆಯ ಪದ್ಮಿನಿ ನಾಗರಾಜು ಅವರು ಜಯನಗರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇಂದ್ರ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸ್ಥಾನವನ್ನು ಒಪ್ಪಿಕೊಂಡು ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಕೇಂದ್ರ ಸಾಹಿತ್ಯ ಆಕಾದೆಮಿಯ ಸದಸ್ಯರೂ ಕೂಡ. ಈ ರೀತಿ ಜೋಶಿ ಅವರ ಕಾರ್ಯವೈಖರಿಯನ್ನು ವಿರೋಧಿಸುವ ಹಲವಾರು ಸಾಹಿತ್ಯಿಕ ಕನ್ನಡದ ಮನಸ್ಸುಗಳು ಹಲವು ಇವೆ ಎಂಬುದು ಎಲ್ಲರಿಗೂ ಮನವರಿಕೆಯಾಗಿದ್ದ ಸಂದರ್ಭ ಇದು.
ಸಂಡೂರಿನ ಸಭೆ ರದ್ದಾಗಿದ್ದು
ಈ ಎಲ್ಲ ಬೆಳವಣಿಗೆಗಳ ನಡುವೆ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಕಾರ್ಯಕಾರಿ ಮಂಡಳಿ ಸಭೆಯನ್ನು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಈ ಸಭೆಯನ್ನು ಸಹಕಾರ ಇಲಾಖೆ ರದ್ದು ಪಡಿಸಿತ್ತು. ಹಾಗಾಗಿ ಬಳ್ಳಾರಿಯಲ್ಲಿಯೇ ಈ ಸಭೆಯನ್ನು ನಡೆಸಲಾಯಿತು ಎಂದು ಪರಿಷತ್ತಿನ ಅಧಿಕೃತ ಮೂಲಗಳು ದ ಫೆಡರಲ್ ಕರ್ನಾಟಕಕ್ಕೆ ಸ್ಪಷ್ಟಪಡಿಸಿವೆ. ಅಧಿಕೃತ ಮೂಲಗಳ ಪ್ರಕಾರ, ಈ ಸಭೆಯಲ್ಲಿ ಬಳ್ಳಾರಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ರೂಪುರೇಖೆಗಳೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಈ ಸಭೆಯಲ್ಲಿ ರಾಜ್ಯದ 27 ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳ ಅಧ್ಯಕ್ಷರು, ರಾಜ್ಯ ಸಮಿತಿ ಸದಸ್ಯರು ಹಾಗೂ ನಾಮ ನಿರ್ದೇಶಿತ ಸದಸ್ಯರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಸಂಡೂರಿನಲ್ಲಿ ನಡೆಯಬೇಕಿದ್ದ ಸಭೆಯನ್ನು ಸಹಕಾರಿ ಇಲಾಖೆ ರದ್ದು ಪಡಿಸಿದ್ದರ ಬಗ್ಗೆ ಆಕ್ಷೇಪಗಳು ವ್ಯಕ್ತವಾದವು. ಅಷ್ಟೇ ಅಲ್ಲ ಈ ಸಂದರ್ಭದಲ್ಲಿ ಜೋಶಿ ಅವರ ಕಾರ್ಯವೈಖರಿ ಕುರಿತು ವಿರೋಧ ವ್ಯಕ್ತಪಡಿಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುವ ಸಂಬಂಧ ಕೂಡ ಚರ್ಚಿಸಲಾಯಿತು. ಈ ಸಭೆಯಲ್ಲಿಯೇ, ಬಳ್ಳಾರಿ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದಿಂದ 40 ಕೋಟಿ ರೂಪಾಯಿ ಅನುದಾನ ಕೇಳಲು ನಿರ್ಧರಿಸಲಾಯಿತು. ಬಳ್ಳಾರಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಸಮ್ಮೇಳನದ ಸ್ವಾಗತ ಸಮಿತಿ ರಚನೆ, ಸ್ಥಳದ ನಿಗದಿ, ಮುಂತಾದ ಸಂಗತಿಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲು ನಿರ್ಧರಿಸಲಾಯಿತು” ಎಂದು ಅಧಿಕೃತ ಮೂಲಗಳು ಹೇಳಿವೆ.
ಬಾನು ಸರ್ವಾಧ್ಯಕ್ಷೆ-ವಾರದ ಮೊದಲೇ ಬಹಿರಂಗ
ಈ ಸಭೆಯಲ್ಲಿ ಹಾಜರಿದ್ದ 56 ಬಲದ ಸಮಿತಿಯಲ್ಲಿ 44 ಮಂದಿ ಬಾನು ಮುಷ್ತಾಕ್ ಅವರ ಹೆಸರನ್ನು ಸರ್ವಾನುಮತದಿಂದ ಅನುಮೋದಿಸಿದರು ಎಂದು ಕೇಂದ್ರ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಹೆಸರು ಬಹಿರಂಗ ಪಡಿಸಲು ಬಯಸದ ಸಾಹಿತಿ ಮತ್ತು ಲೇಖಕರೊಬ್ಬರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು. ಆದರೆ ಇದುವರೆಗೆ ಸರ್ವಾಧ್ಯಕ್ಷರ ಆಯ್ಕೆಗೂ ಮೊದಲು ಸಮ್ಮೇಳನದ ಸ್ವಾಗತ ಸಮಿತಿ, ಉಪ-ಸಮಿತಿಗಳು ರಚನೆಯಾಗಿರುತ್ತಿದ್ದವು. ಇದರ ಜೊತೆಯಲ್ಲಿ ಸ್ಥಳ, ದಿನಾಂಕವೂ ನಿಗದಿಯಾಗುತ್ತಿತ್ತು. ಆದರೆ, ಅವ್ಯಾವವೂ ಆಗದೆ, ಸರ್ವಾಧ್ಯಕ್ಷರ ಆಯ್ಕೆ ನಡೆದಿರುವುದು ಸಾಹಿತ್ಯಿಕ ವಲಯದಲ್ಲಿ ಹಾಗೂ ಕೇಂದ್ರ ಕಾರ್ಯಕಾರಿ ಮಂಡಳಿಯಲ್ಲಿಯೇ ಅಸಮಾಧಾನ ವ್ಯಕ್ತವಾಗಿದ್ದು ಹೌದೆಂದು ಅವರು ಹೇಳುತ್ತಾರೆ. “ಈ ಬಾರಿಯ ಆಶ್ಚರ್ಯದ ಸಂಗತಿಯೆಂದರೆ, ಇದುವರೆಗೆ, ಸರ್ವಾಧ್ಯಕ್ಷರ ಪಟ್ಟಕ್ಕಾಗಿ ಸೂಚಿಸಲಾದ ಹೆಸರುಗಳು ಬಹಿರಂಗವಾಗುತ್ತಿತ್ತು. ಆದರೆ ಸರ್ವಾಧ್ಯಕ್ಷರ ಹೆಸರು ಅಂತಿಮಗೊಂಡಿರುವುದು ಇದೇ ಮೊದಲ ಬಾರಿ. ಬಾನು ಮುಷ್ತಾಕ್ ಅವರು ಆಯ್ಕೆಯಾಗುವ ಒಂದು ವಾರದ ಮೊದಲೇ ಅವರೇ ಬಳ್ಳಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೆಂದು ಒಂದು ವಾರದ ಮುಂಚೆಯೇ ಬಹಿರಂಗವಾಗಿತ್ತು” ಎಂದು ಅವರು ಒಪ್ಪಿಕೊಂಡರು.
ದಸರಾ ಉದ್ಘಾಟನೆಗೂ ಬಾನು ಮುಷ್ತಾಕ್?
ಆದರೆ, ಮಹೇಶ್ ಜೋಶಿ ಅವರ ಉದ್ಧಟತನವೆಂಥಹುದು ಎಂದರೆ; ಈ ಎಲ್ಲವನ್ನು ಕುರಿತಾದ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡದೆ, ಜೋಶಿ ಅವರು ಪತ್ರಿಕಾಗೋಷ್ಠಿಯಿಂದ ಹೊರನಡೆದದ್ದು, ಮತ್ತಷ್ಟು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಷ್ಟೆಲ್ಲ ವಿವಾದಗಳು ಕನ್ನಡ ಸಾಹಿತ್ಯ ಪರಿಷತ್ತಿಗೆ, ಸಮ್ಮೇಳನದ ಸರ್ವಾಧ್ಯಕ್ಷರ ಸ್ಥಾನವನ್ನು ಸುತ್ತಿಕೊಂಡಿರುವಾಗ ಈ ವರ್ಷ ಮೈಸೂರಿನಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ಹನ್ನೊಂದು ದಿನಗಳ ಕಾಲ ನಡೆಯಲಿರುವ ದಸರಾ ಆಚರಣೆಯನ್ನು ಬಾನು ಮುಷ್ತಾಕ್ ಅವರನ್ನು ಉದ್ಘಾಟಕರಾಗಿ ಪರಿಗಣಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಒತ್ತಡ ಹೆಚ್ಚುತ್ತಿದೆ ಎನ್ನಲಾಗಿದೆ. ಬಾನು ಮುಷ್ತಾಕ್ ಅವರ ಜೊತೆಯಲ್ಲಿ ದೀಪಾ ಭಾಸ್ತಿ ಅವರನ್ನು ಕರೆಯುವ ಪ್ರಯತ್ನ ನಡೆಯಲಾಗುತ್ತಿದೆ ಎನ್ನಲಾಗುತ್ತಿದೆ. ಈ ಎಲ್ಲವನ್ನು ಬಾನು ಮತ್ತು ದೀಪ ಒಪ್ಪಿಕೊಳ್ಳುತ್ತಾರೆಯೇ, ಅಥವ ತಿರಸ್ಕರಿಸುತ್ತಾರೆಯೇ? ಎಂಬ ಪ್ರಶ್ನೆಗೆ ಕಾಲವೊಂದೇ ಉತ್ತರಿಸಲು ಸಾಧ್ಯ.