ನಟ ಪ್ರಕಾಶ್ ರಾಜ್ ಬಿಜೆಪಿ ಸೇರ್ತಾರಾ: ಪ್ರಕಾಶ್ ರಾಜ್ ಹೇಳಿದ್ದೇನು ?
ಪ್ರಕಾಶ್ ರಾಜ್ ಅವರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೆಂಡಕಾರಿದ್ದೇ ಹೆಚ್ಚು. ಬಿಜೆಪಿಗೂ ನನಗೂ ಸೈದ್ಧಾಂತಿಕ ವಿರೋಧವಿದೆ ಎಂದು ಅವರು ಪ್ರತಿಪಾದಿಸಿದ್ದರು.;
ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿಯೊಂದು ಈಚೆಗೆ ಭಾರೀ ಚರ್ಚೆಗೆ ಕಾರಣವಾಗಿದೆ.
ಪ್ರಕಾಶ್ ರಾಜ್ ಅವರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೆಂಡಕಾರಿದ್ದೇ ಹೆಚ್ಚು. ಬಿಜೆಪಿಗೂ ನನಗೂ ಸೈದ್ಧಾಂತಿಕ ವಿರೋಧವಿದೆ ಎಂದು ಪ್ರಕಾಶ್ ರಾಜ್ ಅವರು ಪ್ರತಿಪಾದಿಸಿದ್ದೇ ಹೆಚ್ಚು. ಅವರ ಭಾಷಣ, ಟ್ವೀಟ್ ಮೂಲಕ ಬಿಜೆಪಿ ನೀತಿ ನಿರೂಪಣೆಗಳನ್ನು ಸದಾ ಟೀಕಿಸುತ್ತಾರೆ. ಅಷ್ಟೇ ಅಲ್ಲ; ಜಸ್ಟ್ ಆಸ್ಕಿಂಗ್ (Just Asking) ಎನ್ನುವ ಅಭಿಯಾನವನ್ನೇ ಅವರು ನಡೆಸಿದ್ದರು. ಆದರೆ, ಅಂತಹ ಪ್ರಕಾಶ್ ರಾಜ್ ಬಿಜೆಪಿ ಸೇರುತ್ತಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಈಗ ಬಿರುಸಾಗಿದೆ.
ಇದಕ್ಕೆ ಕಾರಣವಾಗಿದ್ದು "ನಟ ಪ್ರಕಾಶ್ ರಾಜ್ ಅವರು ಇಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ" ಎಂದು ದಿ ಸ್ಕಿನ್ ಡಾಕ್ಟರ್ ಎನ್ನುವ ಟ್ವಿಟ್ಟರ್ ಖಾತೆಯಿಂದ ಆಗಿದ್ದ ಒಂದು ಟ್ವೀಟ್. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಖಾತೆಯಿಂದ "ಪ್ರಕಾಶ್ ರಾಜ್ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಸೇರಲಿದ್ದಾರೆ" ಎಂದು ಪೋಸ್ಟ್ ಆಗುತ್ತಿದ್ದಂತೆಯೇ ಪರ – ವಿರೋಧದ ಚರ್ಚೆ ಪ್ರಾರಂಭವಾಗಿತ್ತು.
ಈ ಟ್ವೀಟ್‌ಗೆ ನಟ ಪ್ರಕಾಶ್ ರಾಜ್ ಅವರೇ ಪ್ರತಿಕ್ರಿಯೆ ನೀಡಿದ ಮೇಲೆ ಚರ್ಚೆ ಜೋರಾಗಿದೆ. ಪ್ರಕಾಶ್ ರಾಜ್ ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ನಟ ಪ್ರಕಾಶ್ ರಾಜ್ ಅವರು, “ಅವರು (ಬಿಜೆಪಿ) ನನ್ನನ್ನು ಖರೀದಿಸಲು ಪ್ರಯತ್ನಿಸಿದರು ಎಂದು ಭಾವಿಸುತ್ತೇನೆ. ಆದರೆ, ಸೈದ್ದಾಂತಿಕವಾಗಿ ನನ್ನನ್ನು ಖರೀದಿಸುವಷ್ಟು ಶ್ರೀಮಂತರಲ್ಲ ಎನ್ನುವುದು ಅವರಿಗೆ ಮನವರಿಕೆಯಾಗರಬೇಕು. ಏನು ಹೇಳುತ್ತೀರಾ ಫ್ರೆಂಡ್ಸ್ " ಎಂದು ರಿಪ್ಲೈ ಮಾಡಿದ್ದು #justasking ಹ್ಯಾಷ್ ಟ್ಯಾಗ್ ಬಳಸಿದ್ದಾರೆ.
ಲೋಕಸಭೆ ಚುನಾವಣೆಯ ಸಮಯದಲ್ಲಿ ಯಾವ ಬದಲಾವಣೆಯಾದರೂ ಆಗಬಹುದು. ಈಗಾಗಲೇ ಘಟಾನುಘಟಿ ಕಾಂಗ್ರೆಸ್ ನಾಯಕರು, ಮಾಜಿ ಮುಖ್ಯಮಂತ್ರಿಗಳೇ ಬಿಜೆಪಿ ಸೇರುತ್ತಿದ್ದಾರೆ. ಪ್ರಕಾಶ್ ರಾಜ್ ಅವರು ಬಿಜೆಪಿ ಸೇರಿದರೂ ಅಚ್ಚರಿಯಿಲ್ಲ ಎಂದು ಕೆಲವರು ಟ್ವೀಟ್ ಮಾಡಿದ್ದರು. ಮತ್ತೆ ಕೆಲವರು ಇದು ಸಾಧ್ಯವೇ ಇಲ್ಲ; ಪ್ರಕಾಶ್ ರಾಜ್ ಬಿಜೆಪಿ ಸೇರುವುದಿಲ್ಲ ಎಂದು ಹೇಳಿದ್ದರು. ಈ ಎಲ್ಲ ಚರ್ಚೆಗಳಿಗೆ ನಟ ಪ್ರಕಾಶ್ ರಾಜ್ ಅವರು ವ್ಯಂಗ್ಯವಾಗಿಯೇ ಉತ್ತರಿಸಿದ್ದಾರೆ.
ಇನ್ನು ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಟ ಪ್ರಕಾಶ್ ರಾಜ್ ಅವರು ಸ್ಪರ್ಧಿಸಿದ್ದರು. ಕಾಂಗ್ರೆಸ್‌ನಿಂದ ಟಿಕೆಟ್ ನಿರೀಕ್ಷಿಸಿದ್ದರಾದರೂ, ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ.
ಇನ್ನು ಈಚೆಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದರು. ಈ ವಿಷಯವನ್ನು ನಟ ಪ್ರಕಾಶ್ ರಾಜ್ ರಿಟ್ವೀಟ್ ಮಾಡಿದ್ದಾರೆ.