Man vs Wild | ಚಂಪಾಷಷ್ಠಿಗೆ ಮುನ್ನ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಬಳಿ ಕಾಡಾನೆ ಪ್ರತ್ಯಕ್ಷ; ಭಕ್ತರ ಆತಂಕ

ದೇವಸ್ಥಾನದ ಸಮೀಪದ ಮಠದ ಪರಿಸರದಲ್ಲಿ ಕಾಡಾನೆ ಸಂಚರಿಸುತ್ತಿದೆ. ಜಾತ್ರೆಯ ಸಮಯವಾಗಿರುವುದರಿಂದ ಭಕ್ತರು, ವಾದ್ಯಗಳ ಶಬ್ದಕ್ಕೆ ಕಾಡಾನೆ ಎಲ್ಲೆಂದರಲ್ಲಿ ಸುತ್ತುತ್ತಿದೆ.;

Update: 2024-12-02 11:58 GMT

ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಷಷ್ಠಿ ಉತ್ಸವಕ್ಕೆ ಭರದ ಸಿದ್ಧತೆಗಳು ನಡೆದಿರುವಾಗಲೇ ಕಾಡಾನೆಯೊಂದು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದೆ.

ದೇವಸ್ಥಾನದ ಸಮೀಪದ ಮಠದ ಪರಿಸರದಲ್ಲಿ ಆನೆ ಸಂಚರಿಸುತ್ತಿದೆ. ಜಾತ್ರೆಯ ಸಮಯವಾಗಿರುವುದರಿಂದ ಭಕ್ತರು, ವಾದ್ಯಗಳ ಶಬ್ದಕ್ಕೆ ಕಾಡಾನೆ ಎಲ್ಲೆಂದರಲ್ಲಿ ಸುತ್ತುತ್ತಿದೆ.

ಭಾನುವಾರ ಕೆಲ ಭಕ್ತರು ದೇವಸ್ಥಾನದ ಸಾಕಾನೆ ಎಂದು ತಿಳಿದು ಸೆಲ್ಫಿ ತೆಗೆದುಕೊಳ್ಳಲು, ನಮಸ್ಕಾರ ಮಾಡಲು ಮುಂದಾಗಿದ್ದರು. ಆದರೆ, ಅದು ಕಾಡಾನೆ ಎಂದು ತಿಳಿದ ಬಳಿಕ ಭಕ್ತರು ಆತಂಕದಿಂದ ದಿಕ್ಕಾಪಾಲಾಗಿ ಓಡಿದರು. ಬಣ್ಣ ಬಣ್ಣದ ಬೆಳಕು, ಬ್ಯಾಂಡ್ ಸದ್ದಿಗೆ ಆನೆ ಕೂಡ ಗಾಬರಿಯಾಗಿ ಓಡಿತು.

Full View

ಕೂಡಲೇ ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು, ಪೊಲೀಸರು ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ಯಶಸ್ವಿಯಾಗಿ ಕಾಡಿನತ್ತ ಅಟ್ಟಿದ್ದಾರೆ.

ಆದರೆ, ಕಾಡಾನೆ ಯಾರಿಗೂ ತೊಂದರೆ ನೀಡಿಲ್ಲ. ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ದೇವಾಲಯದ ಸಮೀಪ ಕಾಡಾನೆ ಚಲನವಲನ ಇರುವುದರಿಂದ ಎಚ್ಚರ ವಹಿಸುವಂತೆ ಪುತ್ತೂರು ಸಹಾಯಕ ಆಯುಕ್ತರು ಭಕ್ತರಲ್ಲಿ ಮನವಿ ಮಾಡಿದ್ದಾರೆ. ರಾತ್ರಿ ವೇಳೆ ದೇಗುಲಕ್ಕೆ ಬರುವ ಭಕ್ತರು ಎಚ್ಚರದಿಂದ ಇರುವಂತೆ ಸಲಹೆ ನೀಡಿದ್ದಾರೆ.

ಡಿ.7 ರಂದು ಚಂಪಾಷಷ್ಠಿ ಪ್ರಯುಕ್ತ ಮಹಾ ರಥೋತ್ಸವ ನಡೆಯಲಿದೆ. ಪ್ರಸ್ತುತ ಜಾತ್ರಾ ಮಹೋತ್ಸವ ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಬರುತ್ತಿದ್ದಾರೆ.

Tags:    

Similar News