Threat to Forest | ಅರಣ್ಯದಲ್ಲಿ ಗಣಿಗಾರಿಕೆಗೆ ಅವಕಾಶ: ಸಿಎಂ ಸೂಚನೆಗೆ ವ್ಯಾಪಕ ಆಕ್ರೋಶ

ಆನೆ ಹಾಗೂ ಹುಲಿಗಳ ಸಂತತಿಯಲ್ಲಿ ಕರ್ನಾಟಕ ರಾಜ್ಯ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನದಲ್ಲಿದೆ. ಇಷ್ಟು ದೊಡ್ಡ ಸಂಖ್ಯೆಯ ವನ್ಯಜೀವಿಗಳನ್ನು ಇಟ್ಟುಕೊಂಡು ಅರಣ್ಯ ವ್ಯಾಪ್ತಿ ಕಡಿತ ಮಾಡಿದರೆ ಮಾನವ ಹಾಗೂ ಪ್ರಾಣಿ ಸಂಘರ್ಷಕ್ಕೆ ಆಸ್ಪದ ನೀಡಿದಂತಾಗುತ್ತದೆ ಎಂಬುದು ಪರಿಸರ ತಜ್ಞರ ಆತಂಕ;

Update: 2024-11-10 13:38 GMT

ವಯನಾಡು ದುರಂತ ಇನ್ನೂ ಜನಮಾನಸದಿಂದ ದೂರವಾಗಿಲ್ಲ. ಅರಣ್ಯ ನಾಶ, ಯೋಜಿತವಲ್ಲದ ನಿರ್ಮಾಣ ಚಟುವಟಿಕೆ ಮತ್ತು ಗಣಿಗಾರಿಕೆಯೇ ವಿನಾಶಕಾರಿ ಭೂ ಕುಸಿತಕ್ಕೆ ಕಾರಣ ಎಂಬ ಸತ್ಯವನ್ನು ವಿಜ್ಞಾನಿಗಳು ಬಿಚ್ಚಿಟ್ಟರೂ ಕರ್ನಾಟಕ ಸರ್ಕಾರ ಮಾತ್ರ ಅರಣ್ಯ ನಾಶಕ್ಕೆ ಮತ್ತಷ್ಟು ಮುನ್ನುಡಿ ಬರೆಯಲು ಹೊರಟಿದೆ.

ಬರೀ ಬಾಯಿ ಮಾತಿನ ಅರಣ್ಯ ಸಂರಕ್ಷಣೆಯ ಹೇಳಿಕೆಗಳನ್ನು ನೀಡುವ ಆಡಳಿತರೂಢರು, ಕೃತಿಯಲ್ಲಿ ಮಾತ್ರ ಅರಣ್ಯನಾಶಕ್ಕೆ ತೆರೆಮರೆಯಲ್ಲಿ ಕುಮ್ಮಕ್ಕು ನೀಡುವುದಕ್ಕೆ ತಾಜಾ ನಿದರ್ಶನ, ಮುಖ್ಯಮಂತ್ರಿಗಳ ಇತ್ತೀಚಿನ ಒಂದು ಸೂಚನೆ. ವನ್ಯಧಾಮ, ರಕ್ಷಿತಾರಣ್ಯ ಹಾಗೂ ಜೀವವೈವಿಧ್ಯ ತಾಣ ಹೊರತುಪಡಿಸಿ ಉಳಿದ ಅರಣ್ಯ ಪ್ರದೇಶದಲ್ಲಿ ದಿನದ 24 ಗಂಟೆಗಳ ಗಣಿಗಾರಿಕೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಕಳೆದ ಅ.30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಗಣಿ ಮತ್ತು ಭೂವಿಜ್ಞಾನ, ಅರಣ್ಯ ಇಲಾಖೆ ಸಭೆಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವ ಸಂಬಂಧ ಕ್ರಮ ಕೈಗೊಳ್ಳುವಂತೆ ಸಿಎಂ ಅವರು, ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅರಣ್ಯ ಸಚಿವರಿಗೆ ಆಹ್ವಾನ ನೀಡದೇ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಂಡಿರುವುದು ಅನುಮಾನ ಮೂಡಿಸಿದೆ.

ಪ್ರಮುಖವಾಗಿ, ಅರಣ್ಯದಲ್ಲಿ ಸಿಗುವ ಕಬ್ಬಿಣದ ಅದಿರನ್ನು ಅರಣ್ಯ ಉತ್ಪನ್ನವೆಂದು ಪರಿಗಣಿಸದಂತೆ ಅರಣ್ಯ ಕಾಯ್ದೆಗೆ ತಿದ್ದುಪಡಿ ತರುವ ಕುರಿತಾಗಿಯೂ ಪ್ರಸ್ತಾವನೆ ಸಲ್ಲಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಸೂಚಿಸಿದ್ದಾರೆ. ಈ ಸಂಬಂಧ ಟಿಪ್ಪಣಿ ಸಿದ್ಧಪಡಿಸಿರುವ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ನ. 14 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಎರಡೂ ಪ್ರಸ್ತಾವನೆಗಳನ್ನು ಚರ್ಚೆಗೆ ಇಟ್ಟಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಪರಿಸರವಾದಿಗಳು, ಸಂರಕ್ಷಣಾ ತಜ್ಞರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.

ರಾಜ್ಯ ಸರ್ಕಾರದ ದ್ವಂದ್ವ ನೀತಿ

ಅರಣ್ಯದಲ್ಲಿ ಗಣಿಗಾರಿಕೆ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಹೇಳುತ್ತಾರೆ. ಅದೇ ದಿಕ್ಕಿನಲ್ಲಿ ಮಲೆನಾಡು ಭಾಗದಲ್ಲಿ ಆಂದೋಲನ ರೀತಿಯಲ್ಲಿ ಪ್ರತಿನಿತ್ಯ ಅರಣ್ಯ ಒತ್ತುವರಿ ತೆರವು ಮಾಡಲಾಗುತ್ತಿದೆ. ಶರಾವತಿ ಸೇರಿದಂತೆ ವಿವಿಧ ಯೋಜನಾ ಸಂತ್ರಸ್ತರನ್ನು ಕೂಡ ಬೀದಿಪಾಲು ಮಾಡಲಾಗುತ್ತಿದೆ.

ಬೆಂಗಳೂರಿನ ಜಾಲಹಳ್ಳಿ-ಪೀಣ್ಯ ಪ್ಲಾಂಟೇಷನ್ನಲ್ಲಿ ಒಂದಿಂಚು ಅರಣ್ಯ ಭೂಮಿ ಬಿಡುವುದಿಲ್ಲ ಎಂದು ಕೇಂದ್ರ ಸಚಿವರ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ನೇರ ಸಂಘರ್ಷಕ್ಕೆ ಇಳಿದಿದ್ದಾರೆ. ಹೀಗಿರುವಾಗ ತಮ್ಮದೇ ಸರ್ಕಾರದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅರಣ್ಯದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವ ಕುರಿತು ತೀರ್ಮಾನ ಕೈಗೊಂಡಿರುವುದು ಸರ್ಕಾರದ ದ್ವಂದ್ವ ನೀತಿಗೆ ಹಿಡಿದ ಕನ್ನಡಿಯಂತಿದೆ.

ಅರಣ್ಯದಲ್ಲಿ ಗಣಿಗಾರಿಕೆಯಿಂದ ಜೀವವೈವಿಧ್ಯಕ್ಕೆ ಅಪಾರ ಹಾನಿಯಾಗಲಿದೆ ಎಂದು 2019 ರಲ್ಲಿ ಅರಣ್ಯ ಪಡೆಯ ಮುಖ್ಯಸ್ಥರು ಮತ್ತು ಬಳ್ಳಾರಿ ವಲಯದ ಡಿಸಿಎಫ್ ನೀಡಿದ್ದ ವರದಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಎನ್ಎಂಡಿಸಿಗೆ ಗಣಿ ಗುತ್ತಿಗೆಗೆ ಸಚಿವರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಅಲ್ಲದೇ ಈ ವಿಚಾರ ರಾಜ್ಯ-ಕೇಂದ್ರ ಸರ್ಕಾರದ ಮಧ್ಯೆ ಸಂಘರ್ಷಕ್ಕೂ ಕಾರಣವಾಗಿತ್ತು.


ಹೆಚ್ಚಲಿದೆ ಮಾನವ-ಪ್ರಾಣಿ ಸಂಘರ್ಷ

ರಾಜ್ಯದಲ್ಲಿ ಅರಣ್ಯ ಪ್ರದೇಶದ ವಿಸ್ತೀರ್ಣ ತುಂಬಾ ಕಡಿಮೆಯಿದೆ. ಗಣಿಗಾರಿಕೆ ಆರಂಭಿಸಿದರೆ ಅರಣ್ಯ ವ್ಯಾಪ್ತಿ ಮತ್ತಷ್ಟು ಕ್ಷೀಣಿಸಿ ಭೀಕರ ಪರಿಸ್ಥಿತಿ ಎದುರಾಗಲಿದೆ. ಆನೆ, ಹುಲಿ ಹಾಗೂ ಇತರೆ ವನ್ಯಜೀವಿಗಳ ಸಂಚಾರವನ್ನು ವನ್ಯಧಾಮಕ್ಕಷ್ಟೇ ಸೀಮಿತ ಮಾಡಲು ಆಗುವುದಿಲ್ಲ. ಅವು ಮುಕ್ತವಾಗಿ ಸಂಚರಿಸುತ್ತವೆ. ಗಣಿಗಾರಿಕೆ ಆರಂಭಿಸುವುದರಿಂದ ಪ್ರಾಣಿಗಳು ಕಾಡಿನಿಂದ ಆಚೆ ಬಂದು ಮಾನವ ಹಾಗೂ ಪ್ರಾಣಿ ಸಂಘರ್ಷ ಹೆಚ್ಚಾಗಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಆನೆ ಹಾಗೂ ಹುಲಿಗಳ ಸಂತತಿಯಲ್ಲಿ ಕರ್ನಾಟಕ ರಾಜ್ಯ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನದಲ್ಲಿದೆ. ಇಷ್ಟು ದೊಡ್ಡ ಸಂಖ್ಯೆಯ ವನ್ಯಜೀವಿಗಳನ್ನು ಇಟ್ಟುಕೊಂಡು ಅರಣ್ಯ ವ್ಯಾಪ್ತಿ ಕಡಿಮೆ ಮಾಡಿದರೆ ಮಾನವ ಹಾಗೂ ಪ್ರಾಣಿ ಸಂಘರ್ಷಕ್ಕೆ ಆಸ್ಪದ ನೀಡಿದಂತಾಗುತ್ತದೆ.

ನೈಸರ್ಗಿಕ ಸಂಪನ್ಮೂಲಗಳು ನಮಗೆ ಅರಿವಿಲ್ಲದಂತೆ ಸೇವೆ ಒದಗಿಸುತ್ತಿವೆ. ಜಾಗತಿಕ ತಾಪಮಾನ, ಹವಮಾನ ಬದಲಾವಣೆಯಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಡು ಕಡಿಮೆಯಾದರೆ ಅಪಾಯಕ್ಕೆ ಆಹ್ವಾನ ಕೊಟ್ಟಂತಾಗುತ್ತದೆ. ಕಾಡು, ಬೆಟ್ಟಗಳೇ ಕೆರೆ ಹಾಗೂ ಬಯಲು ಪ್ರದೇಶದ ಜಲಾನಯನಕ್ಕೆ ಆಧಾರವಾಗಿವೆ. ಹಾಗಾಗಿ ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳಲು ಅರಣ್ಯ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಬೇಕೆ ವಿನಃ ಅರಣ್ಯ ನಾಶವೇ ನಮ್ಮ ಕೆಲಸವಾಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಅರಣ್ಯ ನಾಶ, ವನ್ಯಜೀವಿಗಳ ಸಂರಕ್ಷಣೆ, ಸರ್ಕಾರ ನಿಯಮಗಳ ಸಡಿಲಿಕೆ ಕುರಿತು ನೇಚರ್ ಕನ್ಸರ್ವೇಟಿವ್ ಇಂಡೆಕ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ 180 ರಾಷ್ಟ್ರಗಳ ಪೈಕಿ ಭಾರತ 176 ನೇ ಸ್ಥಾನದಲ್ಲಿದೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಯಿಂದ ಶೇ 75 ರಷ್ಟು ಸಣ್ಣ ಸಣ್ಣ ಜೀವಿಗಳು ಅನವತಿ ಹೊಂದಲಿವೆ. ಇದರಿಂದ ಪರಾಗಸ್ಪರ್ಶ ಕ್ರಿಯೆ ನಿಂತುಹೋಗಲಿದೆ. ಕೃಷಿಗೆ ಪೂರಕವಾಗಿ ಜೀವಿಗಳ ಅನವತಿಯಿಂದ ಜೀವರಾಶಿಗಳ ಜೀವನಚಕ್ರವೇ ಬದಲಾಗಿ ದುಸ್ತಿತಿ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಗಣಿಗಾರಿಕೆ ಲಾಬಿಗೆ ಮಣೆ

ಹಿರಿಯ ಪತ್ರಕರ್ತ ಹಾಗೂ ಪರಿಸರವಾದಿ ಜೋಸೆಫ್ ಹೂವರ್ ಈ ಬಗ್ಗೆ ʼದ ಫೆಡರಲ್‌ ಕರ್ನಾಟಕʼಕ್ಕೆ ಪ್ರತಿಕ್ರಿಯಿಸಿ, ಅದಿರು, ಬಾಕ್ಸೈಟ್‌, ಮ್ಯಾಂಗನೀಸ್ ಇನ್ನಿತರೆ ಖನಿಜಗಳಿಗಾಗಿ ಗಣಿಗಾರಿಕೆ ನಡೆಸಿದರೆ ಜೀವನಚಕ್ರವೇ ಬದಲಾಗಲಿದೆ. ಈಗಾಗಲೇ ಹವಾಮಾನ ವೈಫರೀತ್ಯ, ತಾಪಮಾನ ಏರಿಕೆಯ ಸಂದಿಗ್ಧತೆಯಲ್ಲಿ ಸಿಲುಕಿ ಮಳೆ ಮತ್ತು ಬಿಸಿಲು ಸೇರಿದಂತೆ ಹವಾಮಾನ ವೈಪರೀತ್ಯಗಳಿಂದ ನಾಡಿನ ಜನ ಒದ್ದಾಡುತ್ತಿರುವಾಗ ಸರ್ಕಾರದ ಇಂತಹ ನಿರ್ಧಾರ ಸರಿಯಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

"ಆದಾಯ ಇಲ್ಲ ಎಂಬ ಕಾರಣಕ್ಕೆ ಸರ್ಕಾರ ಗಣಿಗಾರಿಕೆಯ ಲಾಬಿಗೆ ಒಳಗಾಗಿದೆ. ಅರಣ್ಯ ವಿಸ್ತೀರ್ಣವನ್ನು ಶೇ. 22ರಿಂದ 33 ಕ್ಕೆ ಕೊಂಡೊಯ್ಯುವ ಬಗ್ಗೆ ಭರವಸೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರೇ ಈಗ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲು ಹೊರಟಿರುವುದು ದುರಂತ. ಅರಣ್ಯ ಸಚಿವರಿಲ್ಲದೇ ಬರೀ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರೊಂದಿಗೆ ಸಭೆ ಮಾಡಿ, ಇಂತಹ ನಿರ್ಧಾರ ಕೈಗೊಂಡಿರುವುದು ಸರ್ವಾಧಿಕಾರಿ ಧೋರಣೆಯಂತಿದೆ. ಅರಣ್ಯ ನಾಶ ಮಾಡುವ ಯೋಜನೆ ಕೈಬಿಡಬೇಕು. ಈಗಾಗಲೇ ರಾಜ್ಯದಲ್ಲಿ ಪ್ರಾಣಿ ಹಾಗೂ ಮಾನವ ಸಂಘರ್ಷ ಹೆಚ್ಚಾಗಿದೆ. ಸರ್ಕಾರ ಗಣಿಗಾರಿಕೆಗೆ ಅವಕಾಶ ನೀಡಿದರೆ ಪರಿಸ್ಥಿತಿ ಬಿಗಡಾಯಿಸಲಿದೆ" ಎಂದು ಅವರು ಆಗ್ರಹಿಸಿದರು.

ಪರಿಸರದ ಮೇಲಿನ ದೌರ್ಜನ್ಯ ನಿಲ್ಲಲಿ

ಪರಿಸರವಾದಿ ದೊಡ್ಡಬಳ್ಳಾಪುರದ ಚಿದಾನಂದ್ ಅವರು 'ದ ಫೆಡರಲ್ ಕರ್ನಾಟಕ' ದೊಂದಿಗೆ ಮಾತನಾಡಿ, ಅರಣ್ಯ ನಾಶದಿಂದ ಮಳೆ ಮಾರುತಗಳಲ್ಲಿ ವ್ಯತ್ಯಾಸವಾಗಿ ಜೀವರಾಶಿಗಳು ನಿರ್ನಾಮವಾಗಲಿವೆ. ವನ್ಯಜೀವಿಗಳಿಗೆ ಇಂತಿಷ್ಟೇ ಪ್ರದೇಶದಲ್ಲಿ ಸಂಚರಿಸಬೇಕು ಎಂದು ಮಿತಿ ಹೇರುವುದು ಸರಿಯಲ್ಲ. ಅರಣ್ಯದಲ್ಲಿ ಕಲ್ಲು ಗಣಿಗಾರಿಕೆಯಿಂದ ಈಗಾಗಲೇ ಚಿರತೆ, ಆನೆಗಳು ನಾಡಿಗೆ ಲಗ್ಗೆ ಇಡುತ್ತಿವೆ. ಇದು ಜನರ ಅರಿವಿಗೆ ಬಂದಿದೆ. ಆದರೆ, ಸರ್ಕಾರದ ಅರಿವಿಗೆ ಬಾರದಿರುವುದು ದುರ್ದೈವ ಎಂದು ಟೀಕಿಸಿದರು.

ಜೀವರಾಶಿಗಳು ಅಳಿವಿನಂಚಿಗೆ ತಲುಪಿವೆ. ಈ ಕೂಡಲೇ ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯದೇ ಹೋದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ. ಸರ್ಕಾರದಲ್ಲಿರುವವರೇ ತಮಗೆ ಬೇಕಾದ ರೀತಿಯಲ್ಲಿ ಅನುಕೂಲ ಪಡೆಯಲು ಈ ಸರ್ಕಸ್ ಮಾಡಲಾಗುತ್ತಿದೆ. ಪರಿಸರದ ಮೇಲಿನ ದೌರ್ಜನ್ಯವನ್ನು ಎಲ್ಲರೂ ಖಂಡಿಸಬೇಕು ಎಂದು ಹೇಳಿದರು.

ಹವಾಮಾನ ವೈಪರಿತ್ಯದಿಂದ ನಿತ್ಯ ಹರಿದ್ವರ್ಣ ಕಾಡುಗಳಿರುವ ಪಶ್ಚಿಮಘಟ್ಟಗಳು ಒಣಗುತ್ತಿವೆ. ಅರಣ್ಯಗಳಿಗೆ ಬೆಂಕಿ ಬೀಳುವ ಪರಿಸ್ಥಿತಿ ಬಂದಿದೆ. ಹೀಗಿರುವಾಗ ಇಂತಹ ನಿಲುವುಗಳು ಸರಿಯಲ್ಲ. ವನ್ಯಜೀವಿಗಳಿಗೆ ಮಾರಕವಾಗುತ್ತಿದೆ ಎಂಬ ಕಾರಣಕ್ಕೆ ಕುದುರೆಮುಖ ಗಣಿಗಾರಿಕೆ ನಿಲ್ಲಿಸಿರುವುದು ಸರ್ಕಾರಕ್ಕೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಇನ್ನು ಗಣಿಗಾರಿಕೆಯನ್ನು ಸಾಮಾಜಿಕ ದೃಷ್ಟಿಯಿಂದಲೂ ನೋಡಬೇಕಿದೆ. ಗಣಿಗಳಲ್ಲಿ ಕೆಲಸ ಮಾಡುವವರ ವಯೋಮಿತಿ ಗಣನೀಯವಾಗಿ ಕುಸಿದಿದೆ. ಹಾಗಾಗಿ ಇಂತಹ ಯೋಜನೆಗಳಿಗೆ ಸರ್ಕಾರ ಕೈ ಹಾಕಬಾರದು ಎಂದು ಆಗ್ರಹಿಸಿದರು.

ಪಾದಯಾತ್ರೆ ನಡೆಸಿದ್ದು ಕಾಟಾಚಾರಕ್ಕಾ?

ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಅರಣ್ಯ ನಾಶದ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯನವರೇ ಈಗ ಅರಣ್ಯದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುತ್ತಿರುವ ಕ್ರಮ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಖಾತರಿ ಯೋಜನೆಗಳಿಗೆ ಹಣ ಹೊಂದಿಸಲು ಗಣಿಗಾರಿಕೆ ಲಾಬಿಗೆ ಮಣಿದಿದೆ ಎಂಬ ಆರೋಪವೂ ಕೇಳಿಬಂದಿದೆ.

ಅರಣ್ಯನಾಶದ ಪರಿಣಾಮಗಳೇನು?

ಅರಣ್ಯ ನಾಶದಿಂದ ಪರಿಸರದಲ್ಲಿ ಅಸಮತೋಲನ ಸೃಷ್ಟಿಯಾಗಲಿದೆ. ಹವಾಮಾನ ಬದಲಾವಣೆಯಿಂದ ನಾನಾ ಸಂಕಷ್ಟ ಎದುರಾಗಲಿದೆ. ಹಸಿರುಮನೆ ಅನಿಲ ಹೊರಸೂಸುವಿಕೆ ಹೆಚ್ಚಳ, ಮಣ್ಣಿನ ಸವಕಳಿ, ಪ್ರವಾಹ, ವನ್ಯಜೀವಿಗಳ ಅಳಿವು ಸೇರಿದಂತೆ ವಿವಿಧ ಪರಿಣಾಮಗಳು ಎದುರಾಗಲಿವೆ.

ಮಾನವನ ವಿಕಸನದ ಮೊದಲು ಇದ್ದ ಅರಣ್ಯ ಪ್ರದೇಶದ ವಿಸ್ತೀರ್ಣ ಈಗ ಅರ್ಧದಷ್ಟು ಮಾತ್ರ ಉಳಿದಿದೆ. ಕಳೆದ ಶತಮಾನದಿಂದ ಈಚೆಗೆ ಅರಣ್ಯ ನಾಶದ ವೇಗ ಹೆಚ್ಚಾಗಿದೆ. ವಿಶ್ವದಾದ್ಯಂತ ಪ್ರತಿ ವರ್ಷ 15 ಶತಕೋಟಿ ಮರಗಳನ್ನು ಕಡಿಯಲಾಗುತ್ತಿದೆ. ಇದರಿಂದ ಮಳೆಯ ಮಾದರಿಗಳಲ್ಲಿ ಏರುಪೇರಾಗುತ್ತಿದೆ. ಸುಮಾರು ಶೇ 10 ರಷ್ಟು ಜಾಗತಿಕ ತಾಪಮಾನ ಏರಿಕೆಗೆ ಅರಣ್ಯ ನಾಶವೇ ಮೂಲ ಕಾರಣವಾಗಿದೆ.

ಕರ್ನಾಟಕದಲ್ಲಿ ಒಟ್ಟು 43,356 ಚದರ ಕಿ. ಮೀ ವಿಸ್ತೀರ್ಣದಲ್ಲಿ ಅರಣ್ಯ ಪ್ರದೇಶವಿದೆ. ಇದು ಒಟ್ಟು ಭೌಗೋಳಿಕ ಪ್ರದೇಶದ ಶೇ 22ರಷ್ಟಿದೆ. ಆದರೆ, 2015ರಲ್ಲಿ ನಡೆದ ಭಾರತ ಅರಣ್ಯ ಸಮೀಕ್ಷೆ ಪ್ರಕಾರ ಈ ಪ್ರಮಾಣ ಶೇ 19.96ಕ್ಕೆ ಕುಸಿದಿದೆ ಎಂದು ಅರಣ್ಯ ಇಲಾಖೆ ಅಂಕಿ ಅಂಶಗಳೇ ತಿಳಿಸುತ್ತಿವೆ. ಹೀಗಿರುವಾಗ ಅರಣ್ಯದಲ್ಲಿ ಗಣಿಗಾರಿಕೆ ನಡೆಸಲು ಹೊರಟಿರುವ ಸರ್ಕಾರ ನಡೆ ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Tags:    

Similar News