ಗೌರವ ಇಲ್ಲದ ಕಡೆ ನಾವು ಏಕೆ ಇರಬೇಕು?: ಭೈರತಿ ಸುರೇಶ್​ ವಿರುದ್ಧ ವಿನಯ್‌ ಕುಲಕರ್ಣಿ ಆಕ್ರೋಶ

Update: 2024-07-01 14:45 GMT

ʻʻಗೌರವ ಇಲ್ಲದ ಕಡೆ ನಾವು ಏಕೆ ಇರಬೇಕು? ಸಚಿವರಾದ ಬಳಿಕ ಎಲ್ಲದರಲ್ಲಿಯೂ ಹಸ್ತಕ್ಷೇಪ ಮಾಡುತ್ತಿದ್ದಾರೆʼʼ ಎಂದು ಸಚಿವ ಭೈರತಿ ಸುರೇಶ್​ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ ಕಿಡಿಕಾರಿದ್ದಾರೆ.

ಈ ಹಿಂದೆಯೂ ಕೂಡ ವಿನಯ್‌ ಕುಲಕರ್ಣಿ ಅವರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಭೇಟಿ ಮಾಡಿ ಭೈರತಿ ಸುರೇಶ್ ವಿರುದ್ದ ದೂರು ಸಲ್ಲಿಸಿದ್ದರು. ಇದೀಗ ಮತ್ತೊಮ್ಮೆ ಅವರ ವಿರುದ್ಧ ಬಹಿರಂಗವಾಗಿ ವಿನಯ್ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‌

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻನಾವೆಲ್ಲರೂ ಸೇರಿದರೆ ಅವರು ಸಚಿವರು‌. ಅವರೇನು ಮೇಲಿಂದ ಬಂದಿಲ್ಲ. ಸಚಿವರು ಮೊದಲು ಶಾಸಕರೇ ಅಲ್ವಾ? ಅದನ್ನು ಅರ್ಥ ಮಾಡಿಕೊಳ್ಳಿ, ಅವರಿಗೂ ನೋಟಿಸ್​ ಕೊಡಲೇಬೇಕಾಗುತ್ತದೆ. ಪ್ರಸಂಗ ಬಂದರೆ ದಾಖಲೆ ಕೊಡುತ್ತೇನೆ. ನಾನು ಭಯಪಡುವುದಿಲ್ಲ, ಬಹಿರಂಗವಾಗಿಯೇ ಹೇಳುತ್ತೇನೆ. ಗೌರವ ಇಲ್ಲದ ಕಡೆ ನಾವು ಯಾಕೆ ಇರಬೇಕುʼʼ ಎಂದು ಭೈರತಿ ಸುರೇಶ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ʻʻನಾನು ದೆಹಲಿಗೆ ಹೋಗಿದ್ದು ನಿಜ. ಪಕ್ಷದ ಮುಖಂಡರಿಗೆ ಏನು ಹೇಳಬೇಕು, ಅದನ್ನು ಹೇಳಿದ್ದೇನೆ. ಎಲ್ಲಾ ಕಂಪನಿಗಳ ಬಗ್ಗೆ ತನಿಖೆ ಆಗಬೇಕು. ಯಾವ ಕಂಪನಿಗಳು ಗೋಲ್ ಮಾಲ್ ಮಾಡಿವೆಯೋ ಅಂತಹ ಕಂಪನಿಗಳನ್ನು ಬ್ಲಾಕ್ ಲಿಸ್ಟ್‌ಗೆ ಹಾಕಲಿ. ತನಿಖೆ ಮಾಡಿಸಿ ಎಂದು ನಾನು ಪತ್ರ ಕೊಟ್ಟು ಎರಡೂವರೆ ತಿಂಗಳು ಆಗಿದೆ. ಆ ರೀತಿಯಲ್ಲಿ ಕಂಪನಿಗಳು 10-15 ಇವೆʼʼ ಎಂದಿದ್ದಾರೆ.

ʻʻಮಂತ್ರಿಗಳಿಗೆ ಬೇಡವಾದ ಕಂಪನಿಗಳನ್ನು ಬ್ಲಾಕ್ ಲಿಸ್ಟ್ ಹಾಕುವುದು, ಮಂತ್ರಿಗಳ ಆಪ್ತರ ಕಂಪನಿಗಳು ಹೋಗುವುದು (ಟೆಂಡರ್ ಆಗುವುದು ಬೇಡ) ಅದು ಸೂಕ್ತವಲ್ಲ, ಸಮಯ ಬಂದಾಗ ಮಾತಾಡುತ್ತೇನೆ. ಸಿಎಂ ಅವರ ಗಮನಕ್ಕೆ ಹಲವಾರು ಭಾರಿ ತಂದಿದ್ದೇನೆ. ಇಂತಹದನ್ನು ನಾವು ಸಹಿಕೊಳ್ಳುವುದಿಲ್ಲʼʼ ಎಂದು ಕಿಡಿಕಾರಿದರು.

Tags:    

Similar News