Shreya Ghoshal | ಶ್ರೇಯಾ ಘೋಶಾಲ್‍ ಯಾಕೆ ಕನ್ನಡ ಚಿತ್ರಗಳ ಹಾಡು ಹಾಡುತ್ತಿಲ್ಲ?

ಶ್ರೇಯಾ ಘೋಶಾಲ್‌ (Shreya Ghoshal ) ಅವರಿಂದ ಕನ್ನಡ ಹಾಡುಗಳನ್ನು ಹಾಡಿಸಬೇಕು ಎಂದು ಕಾದಿರುವವರ ದೊಡ್ಡ ಸಂಖ್ಯೆಯೇ ಇದೆ. ಅವರಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬುದು ನಿರ್ದೇಶಕ ನಾಗಶೇಖರ್‌ ಮಾತು.;

Update: 2025-01-17 07:15 GMT
ಶ್ರೇಯಾ ಘೋಶಾಲ್‌

ಶ್ರೇಯಾ ಘೋಶಾಲ್‍ ಮೂಲತಃ ಬಂಗಾಳದವರಾದರೂ ಕನ್ನಡದಲ್ಲಿ ಸಾಕಷ್ಟು ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ. 2003ರಲ್ಲಿ ಬಿಡುಗಡೆಯಾದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಪ್ಯಾರಿಸ್‍ ಪ್ರಣಯ’ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಅವರು, ಕನ್ನಡದಲ್ಲಿ ನೂರಾರು ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅವರು ಕನ್ನಡದಿಂದ ದೂರಾಗುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ಅದಕ್ಕೆ ಸರಿಯಾಗಿ, ‘ಸಂಜು ಮತ್ತು ಗೀತಾ 2’ ಚಿತ್ರದ ಹಾಡೊಂದನ್ನು ಅವರಿಂದ ಹಾಡಿಸಬೇಕೆಂದು ಕಾದ ಚಿತ್ರತಂಡ, ಕೊನೆಗೆ ಅದು ಸಾಧ್ಯವಾಗದೆ ಬೇರೆಯವರಿಂದ ಹಾಡಿಸಲಾಗಿದೆ.

ಈ ಕುರಿತು ಮಾತನಾಡುವ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ನಿರ್ದೇಶಕ ನಾಗಶೇಖರ್, ‘ಶ್ರೇಯಾ ಘೋಶಾಲ್‍ ಅವರು ಕನ್ನಡ ಹಾಡುಗಳನ್ನು ಹಾಡುವುದಿಲ್ಲ ಎಂದು ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಅವರು ಹಾಡುತ್ತಿಲ್ಲ. ಅವರಿಂದ ಕನ್ನಡ ಹಾಡುಗಳನ್ನು ಹಾಡಿಸಬೇಕು ಎಂದು ಕಾದಿರುವವರ ದೊಡ್ಡ ಸಂಖ್ಯೆ ಇದೆ. ಅವರಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ನಮ್ಮ ಚಿತ್ರದ ಒಂದು ಹಾಡಿಗೆ ಅವರ ಧ್ವನಿ ಸೂಕ್ತವಾಗಿತ್ತು. ಅವರಿಂದಲೇ ಹಾಡಿಸುತ್ತೇವೆ ಎಂದು ಆನಂದ್‍ ಆಡಿಯೋದವರ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೆವು. ಆದರೆ, ಅದು ಸಾಧ್ಯವಾಗದೆ ಸಂಗೀತಾ ರವೀಂದ್ರನಾಥ್‍ ಅವರಿಂದ ಹಾಡಿಸಿದೆವು’ ಎನ್ನುತ್ತಾರೆ.


‘ಮಳೆಯಂತೆ ಬಾ …’ ಎಂದು ಶುರುವಾಗುವ ಈ ಗೀತೆಯನ್ನು ಸಂಗೀತಾ ರವೀಂದ್ರನಾಥ್‍ ಅವರಿಂದಲೇ ಹಾಡಿಸಬೇಕು ಎಂದು ಚಿತ್ರತಂಡದ ಒತ್ತಾಯವಿತ್ತಂತೆ. ‘ಎಲ್ಲರೂ ಅವರಿಂದ ಹಾಡಿಸೋಣ ಎಂದು ಹೇಳಿದ್ದರು. ನಾನು ಮಾತ್ರ ಶ್ರೇಯಾ ಘೋಶಾಲ್‍ ಹಾಡಬೇಕು ಎಂದು ಪಟ್ಟುಹಿಡಿದಿದ್ದೆ. ಏಕೆಂದರೆ, ನನ್ನ ಹಿಂದಿನ ಚಿತ್ರಗಳಲ್ಲಿ ಎರಡು ಸೂಪರ್‌ ಹಿಟ್‍ ಗೀತೆಗಳನ್ನು ಕೊಟ್ಟವರು ಅವರು. ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್‍, ಶ್ರೇಯಾ ಘೋಶಾಲ್‍ ಅವರನ್ನು ಸಂಪರ್ಕಿಸುವುದಕ್ಕೆ, ಅವರಿಂದ ಹಾಡಿಸುವುದಕ್ಕೆ ಸಾಕಷ್ಟು ಪ್ರಯತ್ನ ಮಾಡಿದರು. ಅದು ಸಾಧ್ಯವಾಗಲಿಲ್ಲ. ಕೊನೆಗೆ ನಾನೇ ಮಾತನಾಡುತ್ತೇನೆ ಎಂದೆ. ನನ್ನ ‘ಸಂಜು ವೆಡ್ಸ್ ಗೀತಾ’ ಚಿತ್ರದ ‘ಗಗನವೇ ಬಾಗಿ …’ ಮತ್ತು ‘ಮೈನಾ’ ಚಿತ್ರದ ‘ಮೊದಲ ಮಳೆಯಂತೆ …’ ಹಾಡುಗಳನ್ನು ಅವರಿಗೆ ಕಳಿಸಿದೆ. ‘ಗಗನವೇ ಬಾಗಿ …’ ಹಾಡಿಗೆ ಅವರಿಗೆ ಫಿಲಂಫೇರ್ ಪ್ರಶಸ್ತಿ ಸಹ ಸಿಕ್ಕಿತ್ತು. ನನ್ನ ತೆಲುಗು ಚಿತ್ರಕ್ಕೂ ಅವರು ಹಾಡಿದ್ದರು. ಅದನ್ನೆಲ್ಲಾ ಅವರಿಗೆ ನೆನಪಿಸುವುದಕ್ಕೆ ಪ್ರಯತ್ನಿಸಿದೆ. ಆದರೆ, ಅಂತಿಮವಾಗಿ ಅವರು ಯಾಕೋ ಆಸಕ್ತಿ ತೋರಿಸುತ್ತಿಲ್ಲ ಎಂದು ಅವರ ಮ್ಯಾನೇಜರ್‌ ಹೇಳಿದರು. ಕೊನೆಗೆ ಪ್ರಯತ್ನ ಬಿಟ್ಟು, ಮೊದಲು ಟ್ರಾಕ್‍ ಹಾಡಿದ್ದ ಸಂಗೀತಾ ರವೀಂದ್ರನಾಥ್‍ ಅವರಿಂದಲೇ ಹಾಡನ್ನೂ ಹಾಡಿಸಿದೆವು. ಅವರ ಧ್ವನಿಯನ್ನು ಕೇಳಿ ನಿರ್ಮಾಪಕರು ಚೆನ್ನಾಗಿದೆ, ಅವರಿಂದಲೇ ಆಡಿಸಿ ಎಂದು ಹೇಳಿದರು. ನಾನು ಒಪ್ಪಿರಲಿಲ್ಲ. ಈ ಚಿತ್ರದಿಂದ ಕನ್ನಡದಕ್ಕೆ ಮತ್ತೊಬ್ಬ ಗಾಯಕಿ ಸಿಕ್ಕಂತಾಗುತ್ತದೆ’ ಎನ್ನುತ್ತಾರೆ.


‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆ ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಶ್ರೀನಗರ ಕಿಟ್ಟಿ, ರಚಿತಾ ರಾಮ್‍, ರಂಗಾಯಣ ರಘು, ಸಾಧು ಕೋಕಿಲ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

Full View


Tags:    

Similar News