HeartAttackInYouth|ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಜೀವನಶೈಲಿ, ಒತ್ತಡ ಕಾರಣವೇ? ತಜ್ಞ ವೈದ್ಯರ ಶ್ಲೇಷಣೆಯೇನು?
ಮೇಲ್ನೋಟಕ್ಕೆ ಫಿಟ್ ಆಗಿರುವ ಭಾರತೀಯರು ಹೆಚ್ಚು ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಏಕೆ? ಈ ಬಗ್ಗೆ ʻದ ಫೆಡರಲ್ ಕರ್ನಾಟಕʼ ನಡೆಸಿದ ಸಂದರ್ಶನದಲ್ಲಿ ಹೃದ್ರೋಗ ತಜ್ಞ ಡಾ. ಮಹಾಂತೇಶ್ ಚರಂತಿಮಠ್ ಮಾತನಾಡಿದ್ದಾರೆ.;
ʻದ ಫೆಡರಲ್ ಕರ್ನಾಟಕʼ ದ ವಿಶೇಷ ಸಂದರ್ಶನ
ಒಂದು ಕಾಲದಲ್ಲಿ ವಯಸ್ಸಾದವರ ಕಾಯಿಲೆ ಎಂದು ಗುರುತಿಸಲಾಗಿದ್ದ ಹೃದಯಾಘಾತವು ಈಗ ಯುವಜನರನ್ನೂ ಹೆಚ್ಚಾಗಿ ಬಾಧಿಸುತ್ತಿರುವುದು ಆಘಾತಕಾರಿ ಎನಿಸಿದೆ. ಎರಡು ದಿನಗಳ ಹಿಂದೆ ಕನ್ನಡದ ರಿಯಾಲಿಟಿ ಶೋ ವಿನ್ನರ್ ರಾಕೇಶ್ ಪೂಜಾರಿ ಅವರ ಹೃದಯಾಘಾತದಿಂದಾದ ಮೃತಪಟ್ಟ ಬಳಿಕ ಈ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಈ ಹಿಂದೆ ನಟ ಡಾ. ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದ ಹೊಂದಿದಾಗ ಇದೇ ವಿಚಾರದ ಬಗ್ಗೆ ಜೋರು ವಿಮರ್ಶೆಗಳು ನಡೆದವು. ನಂತರದಲ್ಲಿ ನಟ ಚಿರಂಜೀವಿ ಸರ್ಜಾ, ಹಿಂದಿ ಬಿಗ್ಬಾಸ್ ಸ್ಪರ್ಧಿ ಸಿದ್ಧಾರ್ಥ್ ಶುಕ್ಲಾ, ಹಾಸ್ಯನಟ ರಾಜು ಶ್ರೀವಾಸ್ತವ, ಗಾಯಕ ಕೆಕೆ ಅವರ ನಿರ್ಗಮನ ಯುವಜನರಲ್ಲಿ ಈ ಕಾಯಿಲೆಯ ಹೆಚ್ಚಳದ ಆತಂಕ ಮೂಡಿಸಿದೆ. .
ಅಧ್ಯಯನಗಳ ಪ್ರಕಾರ, 40ರಿಂದ 69 ವರ್ಷ ವಯಸ್ಸಿನವರಲ್ಲಿ ಸುಮಾರು 45% ರಷ್ಟು ಸಾವುಗಳು ಹೃದಯಾಘಾತದಿಂದ ಸಂಭವಿಸುತ್ತವೆ ಎಂದು ತಿಳಿದುಬಂದಿದೆ. ಹೀಗಾಗಿ ಮೇಲ್ನೋಟಕ್ಕೆ ಆರೋಗ್ಯವಂತರಂತೆ ಕಾಣಿಸಿಕೊಳ್ಳುವ ಭಾರತೀಯ ಯುವಕರು ಹೃದಯಾಘಾತಕ್ಕೆ ತುತ್ತಾಗುತ್ತಿರುವುದೇಕೆ ಎಂಬ ಪ್ರಶ್ನೆ ಮೂಡಿದೆ. ಈ ಕುರಿತು 'ದ ಫೆಡರಲ್ ಕರ್ನಾಟಕ' ನಡೆಸಿದ ವಿಡಿಯೊ ಸಂದರ್ಶನದಲ್ಲಿ ಹೃದ್ರೋಗ ತಜ್ಞ ಡಾ. ಮಹಾಂತೇಶ್ ಚರಂತಿಮಠ್ ಅವರು ಹಲವಾರು ವಿಚಾರಗಳನ್ನು ತಿಳಿಸಿದ್ದು, ಉತ್ತಮ ಆರೋಗ್ಯಕ್ಕೆ ಹಲವು ಸಲಹೆಗಳನ್ನು ನೀಡಿದ್ದಾರೆ.
ಡಾ. ಮಹಾಂತೇಶ್ ಚರಂತಿಮಠ್ ಅವರ ಪ್ರಕಾರ, ಕೋವಿಡ್ ನಂತರ ಭಾರತದಲ್ಲಿ ಹೃದಯಾಘಾತಗಳ ಸಂಖ್ಯೆ ಹೆಚ್ಚಾಗಿದೆ. ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಕಳಪೆ ಜೀವನಶೈಲಿ, ನಿದ್ರೆಯ ಕೊರತೆ , ಒತ್ತಡ , ನಿಷ್ಕ್ರಿಯತೆ , ಅತಿಯಾದ ವ್ಯಾಯಾಮ, ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಸಮಸ್ಯೆ ಬಾಧಿಸುತ್ತಿದೆ. ಜತೆಗೆ ಧೂಮಪಾನ ಮತ್ತು ಮದ್ಯಪಾನದಂತಹ ಚಟಗಳು ಹಾಗೂ ವಾಯುಮಾಲಿನ್ಯ ಮತ್ತು ಕೆಲಸದ ಒತ್ತಡವು ಸಹ ಹೃದಯ ಸಂಬಂಧಿ ಸಮಸ್ಯೆಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವೃತ್ತಿ ಜೀವನ, ಆರೋಗ್ಯ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಕಷ್ಟಕರವಾಗಿದೆ. ಇಂತಹ ಉದ್ವೇಗದ ಜೀವನವು ನಮ್ಮ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡುತ್ತದೆ. ಇದು ಯುವಕರಲ್ಲಿ ಹೃದಯಾಘಾತ ಹೆಚ್ಚಾಗಲು ಒಂದು ಮುಖ್ಯ ಕಾರಣ ಎಂದು ಡಾ. ಚರಂತಿಮಠ್ ವಿವರಿಸಿದ್ದಾರೆ.
ಸಾಮಾನ್ಯವಾಗಿ ಪುರುಷರಲ್ಲಿ ಮಹಿಳೆಯರಿಗಿಂತ ಹೃದಯಾಘಾತದ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. ಕೆಲವೊಮ್ಮೆ ಇದು ಆನುವಂಶಿಕ ಕಾರಣಗಳಿಂದಲೂ ಸಂಭವಿಸಬಹುದು. ಕುಟುಂಬದಲ್ಲಿ ಯಾರಿಗಾದರೂ ಹೃದಯ ಸಮಸ್ಯೆಗಳಿದ್ದರೆ, ಅಂತಹ ವ್ಯಕ್ತಿಗಳಲ್ಲಿ ಹೃದಯಾಘಾತದ ಅಪಾಯವು ಹೆಚ್ಚಿರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಚರಂತಿಮಠ್ ಅವರು ಉತ್ತರಿಸಿದ್ದಾರೆ.
ಆದರೆ ಇತ್ತೀಚಿನ ಹೃದಯಾಘಾತಗಳಿಗೆ ಮುಖ್ಯ ಕಾರಣವೆಂದರೆ ನಮ್ಮ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿ. ಫಾಸ್ಟ್ ಫುಡ್, ಕರಿದ ಪದಾರ್ಥಗಳು, ಸಂಸ್ಕರಿಸಿದ ಆಹಾರಗಳು ಮತ್ತು ತಂಪು ಪಾನೀಯಗಳು ನಮ್ಮ ದೇಹ ಮತ್ತು ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತವೆ. ಇಂತಹ ಆಹಾರಗಳಲ್ಲಿ ಅತಿಯಾದ ಕೊಬ್ಬಿನಂಶವಿರುವುದರಿಂದ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗಿ ಅವು ಬ್ಲಾಕ್ ಆಗಿ ಹೃದಯಾಘಾತ ಸಂಭವಿಸುತ್ತದೆ.
ದುರಭ್ಯಾಸಗಳಿಂದಲೇ ಅನಾಹುತ
ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಹೃದಯಾಘಾತಕ್ಕೆ ಮೂರು ಪ್ರಮುಖ ಕಾರಣಗಳಾಗಿವೆ. ಇದಕ್ಕೆ ದುರಭ್ಯಾಸಗಳೂ ಸೇರಿಕೊಂಡರೆ ಸಮಸ್ಯೆ ಹೆಚ್ಚುತ್ತದೆ. ತಂಬಾಕು ಸೇವನೆಯು ಹೃದಯಕ್ಕೆ ಆಮ್ಲಜನಕದ ಪೂರೈಕೆ ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅತಿಯಾದ ಮದ್ಯಪಾನವು ಅಧಿಕ ರಕ್ತದೊತ್ತಡ, ಅನಿಯಮಿತ ಹೃದಯ ಬಡಿತ ಮತ್ತು ಹೃದಯ ಸ್ನಾಯುವಿನ ದುರ್ಬಲತೆಗೆ ಕಾರಣವಾಗಬಹುದು ಎಂದು ಡಾ. ಚರಂತಿಮಠ್ ವಿವರಿಸಿದ್ದಾರೆ.
ಹೃದಯಾಘಾತದ ಮುನ್ಸೂಚನೆಗಳ ಬಗ್ಗೆ ಮಾತನಾಡಿದ ಡಾ. ಚರಂತಿಮಠ್ ಅವರು, ಸಾಮಾನ್ಯವಾಗಿ 5ರಿಂದ 10% ಜನರಿಗೆ ಯಾವುದೇ ಮುನ್ಸೂಚನೆ ಇರುವುದಿಲ್ಲ. ಆದರೆ ಕೆಲವರಿಗೆ ಎದೆನೋವು, ಎದೆಭಾರ, ಉಸಿರಾಟದ ತೊಂದರೆ, ಎದೆ ಹಿಂಡಿದಂತಾಗುವುದು ಅಥವಾ ಕೈ ಅಥವಾ ಬೆರಳುಗಳಲ್ಲಿ ಮುಳ್ಳು ಚುಚ್ಚಿದಂತಹ ಅನುಭವ ಉಂಟಾಗಬಹುದು. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಎದೆನೋವು ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷಿಸದೆ ವೈದ್ಯರನ್ನು ಭೇಟಿ ಮಾಡುವುದು ಮುಖ್ಯ ಎಂದು ಅವರು ಸಲಹೆ ನೀಡಿದ್ದಾರೆ.
ವ್ಯಾಯಾಮ ಅತ್ಯಗತ್ಯ
ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತ ನಡಿಗೆ, ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ ಬಹಳ ಮುಖ್ಯ. ಇದು ಮಧುಮೇಹ, ರಕ್ತದೊತ್ತಡ ಮತ್ತು ಬೊಜ್ಜುತನ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಒತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ನಮ್ಮ ಆಹಾರದಲ್ಲಿ ಹೆಚ್ಚಿನ ನಾರಿನಂಶ ಅಂಶವಿರಬೇಕು. ಬೇಳೆಕಾಳುಗಳು ಮತ್ತು ಹಣ್ಣುಗಳನ್ನು ಸೇವಿಸಬೇಕು. ಆದಷ್ಟು ಕೆಂಪು ಮಾಂಸದ ಸೇವನೆಯನ್ನು ಕಡಿಮೆ ಮಾಡಬೇಕು. ಧೂಮಪಾನ ಮತ್ತು ಅತಿಯಾದ ಮದ್ಯಪಾನದಂತಹ ಅನಾರೋಗ್ಯಕರ ಅಭ್ಯಾಸಗಳನ್ನು ತ್ಯಜಿಸುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಡಾ. ಮಹಾಂತೇಶ್ ಚರಂತಿಮಠ್ ತಿಳಿಸಿದ್ದಾರೆ.