ಗದ್ದುಗೆ ಗುದ್ದಾಟ| ಸೋನಿಯಾ ರಂಗ ಪ್ರವೇಶ, ಸಿಎಂ-ಡಿಸಿಎಂ ಮಧ್ಯೆ ಸಂಧಾನಕ್ಕೆ ಮುಂದಾದ ಹೈಕಮಾಂಡ್‌

ಅನಾರೋಗ್ಯದ ನಿಮಿತ್ತ ದೆಹಲಿಯಿಂದ ಹೊರಗಿರುವ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರಿಗೂ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಡಿ.ಕೆ.ಶಿವಕುಮಾರ್‌ ಅವರು ತನ್ನ ಆಪ್ತರ ಮೂಲಕ ಮಾಹಿತಿ ತಲುಪಿಸಿದ್ದಾರೆ ಎಂದು ತಿಳಿದು ಬಂದಿದೆ.

Update: 2025-11-26 06:47 GMT

ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌(ಎಐ ಆಧಾರಿತ ಚಿತ್ರ)

Click the Play button to listen to article

ರಾಜ್ಯ ರಾಜಕೀಯದಲ್ಲಿ ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ʼಗದ್ದುಗೆ ಗುದ್ದಾಟʼ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಗೊಂದಲಗಳಿಗೆ ಆಸ್ಪದ ಮಾಡಿಕೊಟ್ಟಿರುವ ನಾಯಕತ್ವ ಬದಲಾವಣೆ ಬಿಕ್ಕಟ್ಟಿಗೆ ಅಂತ್ಯವಾಡಲು ಹೈಕಮಾಂಡ್‌ ನಿರ್ಧರಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ರಾಜ್ಯ ಕಾಂಗ್ರೆಸ್‌ ಗೊಂದಲಗಳ ವರದಿ ಪಡೆದಿದ್ದು, ನ.28 ಹಾಗೂ 29ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ದೆಹಲಿಗೆ ಕರೆಸಿ ಸಂಧಾನದ ಮೂಲಕ ಬಿಕ್ಕಟ್ಟು ಬಗೆಹರಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಚಿವರು ಹಾಗೂ ಶಾಸಕರು ನಿತ್ಯ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಹಾಗೂ ಡಿಸಿಎಂ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರು ಪ್ರತ್ಯೇಕ ಸಭೆ ಹಾಗೂ ದೆಹಲಿ ಯಾತ್ರೆ ಕೂಡ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟಾಗಲಿದೆ ಎಂಬ ವರದಿಯಿಂದ ಎಚ್ಚೆತ್ತುಕೊಂಡಿದ್ದು, ಈ ಎಲ್ಲಾ ರಾಜಕೀಯ ಬೆಳವಣಿಗೆಗಳಿಗೆ ಹೈಕಮಾಂಡ್‌ ಪೂರ್ಣವಿರಾಮ ಹಾಕುವ ಸಾಧ್ಯತೆ ಇದೆ.

ಅನಾರೋಗ್ಯದ ನಿಮಿತ್ತ ರಾಷ್ಟ್ರ ರಾಜಧಾನಿ ದೆಹಲಿಯಿಂದ ಹೊರಗುಳಿದಿರುವ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರಿಗೂ ರಾಜ್ಯ ರಾಜಕೀಯ ಬೆಳವಣಿಗೆ ಮಾಹಿತಿ ತಲುಪಿಸಲಾಗಿದೆ. ಸಿಎಂ ಹುದ್ದೆ ಆಕಾಂಕ್ಷಿಯಾಗಿರುವ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಆಪ್ತರ ಮೂಲಕ ಸೋನಿಯಾ ಗಾಂಧಿ ಅವರಿಗೆ ಮಾಹಿತಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ನ.28 ರಂದು ದೆಹಲಿಗೆ ವಾಪಸಾಗಲಿದ್ದು, ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ನೇರವಾಗಿ ಮಾತುಕತೆ ನಡೆಸಿ, ಗೊಂದಲ ಪರಿಹರಿಸಲಿದ್ದಾರೆ ಎಂದು ಹೇಳಲಾಗಿದೆ. 

ರಾಜ್ಯ ರಾಜಕೀಯ ಬೆಳವಣಿಗೆಗಳು, ಆಂತರಿಕ ಕಚ್ಚಾಟ ಜೋರಾದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ, ನಾಯಕರ ಅಭಿಪ್ರಾಯಗಳನ್ನು ಆಲಿಸಿ ರಾಹುಲ್‌ ಗಾಂಧಿ ಅವರಿಗೆ ವರದಿ ಸಲ್ಲಿಸಿದ್ದಾರೆ.  ಮಂಗಳವಾರ (ನ.25) ದೆಹಲಿಗೆ ಹೊರಟಿದ್ದ ಖರ್ಗೆ ಅವರೊಂದಿಗೆ ಕಾರಿನಲ್ಲೇ ವಿಮಾನ ನಿಲ್ದಾಣದವರೆಗೆ ತೆರಳಿದ್ದ ಡಿ.ಕೆ.ಶಿವಕುಮಾರ್‌ ಅವರು ಮಹತ್ವದ ಮಾತುಕತೆ ನಡೆಸಿದ್ದರು. ಆ ನಂತರ ಲವಲವಿಕೆಯಿಂದಲೇ ಮಾಧ್ಯಮಗಳ ಜೊತೆ ಮಾತನಾಡಿದ್ದರು.

ಅಧಿಕಾರ ಹಂಚಿಕೆ ಒಪ್ಪಂದ ನಿಜ

ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ಅಧಿಕಾರ ಹಂಚಿಕೆ ಒಪ್ಪಂದವು ಐದಾರು ಜನರ ನಡುವೆ ನಡೆದ ಗುಟ್ಟಿನ ವಿಚಾರ. ಬಹಿರಂಗವಾಗಿ ಹೇಳಲು ಆಗವುದಿಲ್ಲ ಎಂದು ಹೇಳುವ ಮೂಲಕ ಅಧಿಕಾರ ಹಂಚಿಕೆ ಒಪ್ಪಂದ ನಡೆದಿರುವುದನ್ನು ಕೊನೆಗೂಈ ಬಹಿರಂಗಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಹೇಳಿಕೆ ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ತರ ತಿರುವು ಪಡೆದುಕೊಂಡಿದೆ. ಕಳೆದ 2.5ವರ್ಷದಿಂದ ಇದ್ದ ಅಧಿಕಾರ ಹಸ್ತಾಂತರದ ಗುಟ್ಟು ಈ ಮೂಲಕ ರಟ್ಟಾಗಿದೆ. ಸರ್ಕಾರ ರಚಿಸುವ ಸಂದರ್ಭದಲ್ಲಿ ಸಿಎಂ, ಡಿಸಿಎಂ ಜೊತೆ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಮಾತುಕತೆ ನಡೆಸಿದವರು ಯಾರು ಎಂಬ ಕುತೂಹಲ ಈಗ ಎಲ್ಲರನ್ನೂ ಕಾಡುತ್ತಿದೆ.

ಮಾತುಕತೆ ವೇಳೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ‌.ಸಿ. ವೇಣುಗೋಪಾಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದೆಯೇ ಅಧಿಕಾರ ಹಂಚಿಕೆ ಮಾತಾಗಿತ್ತಾ, ಈ ವೇಳೆ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಡಿ.ಕೆ. ಸುರೇಶ್‌ ಹಾಜರಿದ್ದರೆ ಎಂಬ ಕುತೂಹಲವೂ ಕಾಡುತ್ತಿದೆ. ಏಕೆಂದರೆ ಇತ್ತೀಚೆಗಷ್ಟೇ ಡಿ.ಕೆ. ಶಿವಕುಮಾರ್‌ ಸಹೋದರ ಡಿ.ಕೆ. ಸುರೇಶ್‌ ಅವರು ಬಹಿಂಗವಾಗಿಯೇ ಅಧಿಕಾರ ಹಂಚಿಕೆ ಒಪ್ಪಂದ ನಡೆದಿದೆ ಎಂದು ಹೇಳಿಕೆ ನೀಡಿದ್ದರು.

ಅಂದು ನಡೆದ ಒಪ್ಪಂದದ ಪ್ರಕಾರ ನಡೆದುಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಮಾತು ತಪ್ಪುವುದಿಲ್ಲ. ಸರ್ಕಾರ ರಚನೆ ವೇಳೆ ನಡೆದಿದ್ದ ಅಧಿಕಾರ ಹಂಚಿಕೆ ಒಪ್ಪಂದದ ವೇಳೆ ನಾನೇ ಖುದ್ದು ಹಾಜರಿದ್ದೆ ಎಂದು ಹೇಳಿದ್ದರು. ಈಗ ಡಿ.ಕೆ. ಶಿವಕುಮಾರ್‌ ಕೂಡ ಅಧಿಕಾರ ಹಂಚಿಕೆ ಒಪ್ಪಂದವನ್ನು ಬಹಿರಂಗಪಡಿಸಿರುವುದು ಮತ್ತಷ್ಟು ರಾಜಕೀಯ ಕೋಲಾಹಲ ಸೃಷ್ಟಿಸಿದೆ. 

Tags:    

Similar News