ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ | ವಿದೇಶಕ್ಕೆ ಕಳಿಸಿದ್ದು ದೇವೇಗೌಡರೇ ಎಂದ ಸಿದ್ದರಾಮಯ್ಯ
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಹಗರಣ ಗೊತ್ತಿದ್ದೂ ಬಿಜೆಪಿ ಪಕ್ಷ ಆತನಿಗೆ ಟಿಕೆಟ್ ಯಾಕೆ ಕೊಡಬೇಕಿತ್ತು? ಜೆಡಿಎಸ್ ಜೊತೆ ಯಾಕೆ ಮೈತ್ರಿ ಮಾಡಿಕೊಂಡಿದ್ದು? ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧವೂ ಹರಿಹಾಯ್ದಿದ್ದಾರೆ
ಯಾದಗಿರಿ: ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣನನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರೇ ಪ್ಲಾನ್ ಮಾಡಿ ವಿದೇಶಕ್ಕೆ ಕಳುಹಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಹಗರಣ ಗೊತ್ತಿದ್ದೂ ಕೂಡ ಬಿಜೆಪಿ ಪಕ್ಷ ಪ್ರಜ್ವಲ್‌ಗೆ ಟಿಕೆಟ್ ಯಾಕೆ ಕೊಡಬೇಕಿತ್ತು? ಮೈತ್ರಿ ಯಾಕೆ ಮಾಡಬೇಕಿತ್ತು ಎಂದು ಸಿಎಂ ಪ್ರಶ್ನಿಸಿದ್ದಾರೆ.
ಇನ್ನು ವಿದೇಶಕ್ಕೆ ಹೋಗುವವರಿಗೆ ಪಾಸ್ ಪೋರ್ಟ್, ವೀಸಾ ಕೊಡುವುದು ಯಾರು? ಕೇಂದ್ರದ ಬಿಜೆಪಿಯವರೇ ತಾನೇ? ಆದರೆ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಹಗರಣ ಗೊತ್ತಿದ್ದೂ ಕೂಡ ಬಿಜೆಪಿ ಪಕ್ಷ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು ಮೊದಲ ತಪ್ಪು, ಅವರಿಗೆ ಮೈತ್ರಿ ಅಭ್ಯರ್ಥಿಯಾಗಿ ಟಿಕೇಟ್ ನೀಡಿದ್ದು ಎರಡನೇ ತಪ್ಪು, ಹಗರಣ ಬೆಳಕಿಗೆ ಬಂದ ಮೇಲೆ ಅವರನ್ನು ವಿದೇಶಕ್ಕೆ ಓಡಿ ಹೋಗಲು ಬಿಟ್ಟಿದ್ದು ಇನ್ನೊಂದು ತಪ್ಪು ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಎಲ್ಲ ವಿಚಾರ ಗೊತ್ತಿದ್ದರೂ ಯಾಕೆ ಪ್ರಜ್ವಲ್‌ಗೆ ಟಿಕೆಟ್ ಕೊಟ್ಟರು? ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಲಾಗಿದೆ. ಎಸ್ಐಟಿ ಅಧಿಕಾರಿಗಳು ಪಾರದರ್ಶಕವಾಗಿ ತನಿಖೆ ಮಾಡುತ್ತಾರೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ, ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.