Namma Metro Fare Hike | ಪ್ರಯಾಣ ದರ ಏರಿಕೆಗೆ ಕಾರಣ ಯಾರು?; ರಹಸ್ಯ ಕಾಯ್ದುಕೊಂಡ ಬಿಎಂಆರ್‌ಸಿಎಲ್
ಪ್ರಯಾಣ ದರ ಏರಿಕೆಗೆ ಸ್ಪಷ್ಟನೆ ನೀಡಬೇಕಾದ ಸರ್ಕಾರಗಳು ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳು ರಹಸ್ಯ ಕಾಪಾಡಿಕೊಳ್ಳುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.;
ಬೆಂಗಳೂರಿನ ವಾಹನ ದಟ್ಟಣೆಗೆ ಪರಿಹಾರೋಪಾಯವಾಗಿ ಜಾರಿಗೆ ಬಂದ ನಮ್ಮ ಮೆಟ್ರೋ ಸೇವೆ ಇದೀಗ ಜನಸಾಮಾನ್ಯರ ಸುಲಿಗೆಯಲ್ಲಿ ತೊಡಗಿದೆ. ದಿಢೀರ್ ಮೆಟ್ರೋ ಪ್ರಯಾಣ ದರ ಏರಿಸುವ ಮೂಲಕ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಒಮ್ಮೆಲೆ ಪ್ರಯಾಣ ದರವನ್ನು ಶೇ 50ರಿಂದ 120ರಷ್ಟು ಏರಿಸಿರುವುದು ಆತಂಕ ಮೂಡಿಸಿದೆ. ಪ್ರಯಾಣ ದರ ಏರಿಕೆಗೆ ಸ್ಪಷ್ಟನೆ ನೀಡಬೇಕಾದ ಸರ್ಕಾರಗಳು ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳು ರಹಸ್ಯ ಕಾಪಾಡಿಕೊಳ್ಳುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಯಾಣ ದರ ಏರಿಕೆ ಕುರಿತಂತೆ ಬಿಎಂಆರ್‌ಸಿಎಲ್ ಅತಾರ್ಕಿಕವಾದ ಸಮರ್ಥನೆ ನೀಡುತ್ತಿದ್ದು, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಮಧ್ಯೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷ ಬಿಜೆಪಿಯ ನಾಯಕರು ಪರಸ್ಪರ ರಾಜಕೀಯ ಆರೋಪಗಳಲ್ಲಿ ನಿರತರಾಗಿದ್ದಾರೆ.
ದರ ಏರಿಕೆಗೆ ಕಾರಣ ಯಾರು?
ಮೆಟ್ರೋ ಪ್ರಯಾಣ ದರ ಏರಿಕೆ ನಿಜವಾದ ಕಾರಣಕರ್ತರು ಯಾರೆಂಬುದು ಇನ್ನೂ ನಿಗೂಢವಾಗಿದೆ. ʼನಮ್ಮ ಮೆಟ್ರೋʼ ಸೇವೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆ. 2002ರ ಮೆಟ್ರೋ ರೈಲು ಕಾಯ್ದೆಯ ಸೆಕ್ಷನ್ 37ರಡಿ ದರ ಪರಿಷ್ಕರಣೆಗೆ ಕೇಂದ್ರ ಸರ್ಕಾರ 'ದರ ನಿಗದಿ ಸಮಿತಿ' ನೇಮಕ ಮಾಡಿದೆ. ಅದು ಮೆಟ್ರೋ ಕಾರ್ಯಾಚರಣೆಯ ವೆಚ್ಚ, ಯೋಜನೆ ವಿಸ್ತರಣೆ, ಸೌಲಭ್ಯ ಇತ್ಯಾದಿ ಅಂಶಗಳನ್ನು ಅವಲೋಕಿಸಿ ದರ ಪರಿಷ್ಕರಣೆ ಮಾಡುತ್ತದೆ. ಅದೇ ರೀತಿ 2024 ಸೆಪ್ಟೆಂಬರ್ ತಿಂಗಳಲ್ಲಿ ರಚನೆಯಾದ 'ದರ ನಿಗದಿ ಸಮಿತಿ' ದರ ಪರಿಷ್ಕರಣೆ ಮಾಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಕೇಂದ್ರದ ಅನುಮೋದನೆ ಬಳಿಕ ಪ್ರಸ್ತಾವನೆಗೆ ಅನುಮೋದನೆ ದೊರೆತು ಹೊಸ ದರ ಜಾರಿಯಾಗಿದೆ.
ಆದರೆ, ಇದನ್ನು ಒಪ್ಪದ ಬಿಜೆಪಿ ನಾಯಕರು ಪ್ರಯಾಣ ದರ ಏರಿಸುವಂತೆ ರಾಜ್ಯ ಸರ್ಕಾರವೇ ಪ್ರಸ್ತಾವ ಸಲ್ಲಿಸಿತ್ತು. ಸಮಿತಿ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದರೂ ಒತ್ತಡ ಹೇರಿ ಅನುಮೋದನೆ ಪಡೆದಿದೆ ಎಂದು ಆರೋಪಿಸಿದ್ದಾರೆ. ಹೀಗಿರುವಾಗ ಪ್ರಯಾಣ ದರ ಏರಿಕೆಗೆ ನಿಜವಾಗಿಯೂ ಯಾರು ಕಾರಣ? ಅದರ ಹೊಣೆ ರಾಜ್ಯ ಸರ್ಕಾರದ್ದೇ? ಅಥವಾ ಕೇಂದ್ರ ಸರ್ಕಾರದ್ದೇ? ಅಥವಾ ಕೇವಲ ಬಿಎಂಆರ್‌ಸಿಎಲ್ ಸಂಸ್ಥೆಯೇ ದರ ಏರಿಕೆಗೆ ಹೊಣೆಯೇ? ಎಂಬ ಬಗ್ಗೆ ಪ್ರಯಾಣಿಕರಲ್ಲಿ ಗೊಂದಲವಿದೆ.
ರಾತ್ರೋರಾತ್ರಿ ದರ ಹೆಚ್ಚಿಸಿದ್ದು ಏಕೆ?
ಹೊಸ ವರ್ಷಾರಂಭದಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆಗೆ ಮುಂದಾದಾಗ ವಿರೋಧ ವ್ಯಕ್ತವಾಗಿತ್ತು. ದರ ನಿಗದಿ ಸಮಿತಿ ಸಲ್ಲಿಸಿದ್ದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದಾಗಿ ಸಂಸದ ಪಿ.ಸಿ. ಮೋಹನ್ ಟ್ವೀಟ್ ಮಾಡಿದ್ದರು. ಬಸ್ ಪ್ರಯಾಣ ದರದಿಂದ ಕಂಗೆಟ್ಟಿದ್ದ ಜನಸಾಮಾನ್ಯರು ನಿಟ್ಟುಸಿರು ಬಿಡುವಷ್ಟರಲ್ಲಿ ಈಗ ಮತ್ತೆ ಏಕಾಏಕಿ ಮೆಟ್ರೋ ಪ್ರಯಾಣ ದರ ಹೆಚ್ಚಿಸಿ ಪ್ರಯಾಣಿಕರು ಏದುಸಿರು ಬಿಡುವಂತೆ ಮಾಡಿದೆ. ಫೆ.8 ರಂದು ರಾತ್ರೋರಾತ್ರಿ ದಿಢೀರ್ ಪ್ರಯಾಣ ದರ ಏರಿಕೆ ಮಾಡಿ, ರಜಾ ದಿನವಾದ ಭಾನುವಾರದಿಂದಲೇ ಜಾರಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ರಹಸ್ಯ ಕಾಯ್ದುಕೊಂಡ ಬಿಎಂಆರ್‌ಸಿಎಲ್?
ಮೆಟ್ರೋ ಪ್ರಯಾಣ ದರ ಏರಿಕೆ ಕುರಿತಂತೆ ಕಾರಣ ಬಹಿರಂಗಪಡಿಸಬೇಕಾದ ಬಿಎಂಆರ್‌ಸಿಎಲ್ ಅಧಿಕಾರಿಗಳು ಈ ವಿಚಾರದಲ್ಲಿ ನಿಗೂಢ ಕಾಯ್ದುಕೊಳ್ಳುತ್ತಿರುವುದು ಟೀಕೆಗೆ ಗುರಿಯಾಗಿದೆ. ಬಿಎಂಆರ್‌ಸಿಎಲ್ ನಿರ್ದೇಶಕರ ಮಂಡಳಿಯಲ್ಲಿ ಕೇಂದ್ರ ಸರ್ಕಾರದ ಐವರು ಐಎಎಸ್ ಅಧಿಕಾರಿಗಳು ಇದ್ದಾರೆ. ರಾಜ್ಯ ಸರ್ಕಾರದ ಅಧಿಕಾರಿಗಳು ಕೂಡ ಇದ್ದಾರೆ. ಆದರೆ, ನೀತಿ ನಿರೂಪಣೆ ಅಧಿಕಾರ ಕೇಂದ್ರ ಸರ್ಕಾರ ಅಧೀನದ ಅಧಿಕಾರಿಗಳಲ್ಲೇ ಇರುತ್ತದೆ. ಹೀಗಿರುವಾಗ ಯಾವುದೇ ವೈಜ್ಞಾನಿಕ ಸ್ಪಷ್ಟನೆ ನೀಡದೇ ಆಟೊ, ಕ್ಯಾಬ್ ಹಾಗೂ ಎಸಿ ಬಸ್ ಪ್ರಯಾಣ ದರಕ್ಕಿಂತಲೂ ಕಡಿಮೆ ಎಂದು ದರ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಎಂಆರ್‌ಸಿಎಲ್ ವರಸೆ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ʼದ ಫೆಡರಲ್ ಕರ್ನಾಟಕʼ ಬಿಎಂಆರ್ಸಿಎಲ್ ಅಧಿಕಾರಿಗಳನ್ನು ಸಂಪರ್ಕಿಸಿತಾದರೂ ಯಾವ ಅಧಿಕಾರಿಯಿಂದಲೂ ಸಮರ್ಪಕ ಉತ್ತರ ನೀಡಿಲ್ಲ. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾದಿಯಾಗಿ ಕಚೇರಿಯ ಅಧಿಕಾರಿಗಳನ್ನು ಈ ಕುರಿತು ಪ್ರಶ್ನಿಸಿದರೆ ಪ್ರಯಾಣ ದರ ಏರಿಕೆ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡದಂತೆ ಸೂಚಿಸಲಾಗಿದೆ. ವ್ಯವಸ್ಥಾಪಕ ನಿರ್ದೇಶಕ(ಎಂಡಿ)ರೊಬ್ಬರು ಮಾತ್ರ ಆ ಬಗ್ಗೆ ಪ್ರತಿಕ್ರಿಯೆ ನೀಡುವುದಾಗಿ ಹೇಳಲಾಗಿದೆ ಎಂದರು. ಆದರೆ, ವ್ಯವಸ್ಥಾಪಕ ನಿರ್ದೇಶಕರು ದಿನವಿಡೀ ಮಾಧ್ಯಮಗಳಿಗೆ ಪ್ರತಿಕ್ರಿಯಿಸುವುದರಿಂದ ನುಣುಚಿಕೊಂಡರು.
ಲಾಭದಲ್ಲಿದ್ದರೂ ದರ ಏರಿಕೆ
ದೇಶದ ಎಲ್ಲ ಮೆಟ್ರೋ ಸೇವೆಗಳ ಪೈಕಿ ʼನಮ್ಮ ಮೆಟ್ರೋʼ ಸತತ ಎರಡು ವರ್ಷಗಳಿಂದ ಲಾಭ ಕಾಯ್ದುಕೊಂಡಿದೆ. 2023-24 ನೇ ಸಾಲಿನಲ್ಲಿ 129 ಕೋಟಿ ರೂ. ಲಾಭ ತೋರಿಸಿದೆ. ಹೀಗಿದ್ದರೂ ಪ್ರಯಾಣ ದರ ಏರಿಕೆ ಮಾಡಿರುವುದು ಏಕೆ ಎಂಬ ಪ್ರಶ್ನೆ ಉದ್ಬವವಾಗಿದೆ. ಅದರಲ್ಲೂ ಏಕಾಏಕಿ ಶೇ.100ಕ್ಕೂ ಅಧಿಕ ದರ ಏರಿಕೆಯ ಮೂಲಕ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಸೇವೆ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಮೆಟ್ರೋ ಸಿಬ್ಬಂದಿಯಿಂದಲೇ ಅಪಸ್ವರ
ಈ ಹಿಂದೆ ಮೆಟ್ರೋ ಪ್ರಯಾಣ ದರ ಏರಿಕೆ ಪ್ರಸ್ತಾವ ಬಂದಾಗ ಮೆಟ್ರೋ ಸಿಬ್ಬಂದಿಯೇ ದರ ಏರಿಕೆಯನ್ನು ವಿರೋಧಿಸಿದ್ದರು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಆಗ ಯಾವುದೇ ದರ ಏರಿಕೆ ಅಗತ್ಯವಿರುವುದಿಲ್ಲ ಎಂದು ಮೆಟ್ರೋ ನೌಕರರ ಸಂಘ ಹೇಳಿತ್ತು.
ಹೊರಗುತ್ತಿಗೆ ಆಧಾರದ ಮೇಲೆ ಅಧಿಕ ಸಿಬ್ಬಂದಿ ನೇಮಕದಿಂದಲೂ ವೆಚ್ಚ ಹೆಚ್ಚುತ್ತಿದೆ. ಇರುವ ಸಿಬ್ಬಂದಿಯನ್ನೇ ಗುತ್ತಿಗೆ ಆಧಾರದಲ್ಲಿ ಪರಿಗಣಿಸಿ ಎಂದು ಮನವಿ ಮಾಡಿತ್ತು.