ʼಬಿಲ್ಲವ ಮತ ಬಿಲ್ಲವರಿಗೇʼ ಅಭಿಯಾನ | ಜಾತಿ ಸಂಘಟನೆಗಳ ಬೆಂಬಲ
ಮಂಗಳೂರಿನ ಪದ್ಮರಾಜ್, ಉಡುಪಿಯ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಶಿವಮೊಗ್ಗದ ಗೀತಾ ಶಿವರಾಜ್‌ಕುಮಾರ್ ಅವರಿಗೆ ಆಯಾ ಜಿಲ್ಲೆಗಳಲ್ಲಿ ದೊಡ್ಡ ಮತದಾರ ಸಮೂಹವಾಗಿರುವ ಬಿಲ್ಲವರು ಈ ಬಾರಿ ʼಪಕ್ಷ ಯಾವುದೇ ಇರಲಿ, ಮತ ಬಿಲ್ಲವ ಅಭ್ಯರ್ಥಿಗಿರಲಿʼ ಎಂಬ ಅಂಶಕ್ಕೆ ಒತ್ತು ನೀಡಿ ಗೆಲ್ಲಿಸಬೇಕೆಂದು ಬಿಲ್ಲವ ಸಂಘಟನೆಗಳು ಮುಂದಾಗುತ್ತಿವೆ.;
ರಾಜ್ಯದಲ್ಲಿ ಬಿಜೆಪಿ ಹಿರಿಯ ನಾಯಕರ ಕಿತ್ತಾಟ ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಬಗ್ಗೆ ಚರ್ಚೆಗಳು ಒಂದೆಡೆ ನಡೆಯುತ್ತಿದ್ದರೆ, ಹಿಂದುತ್ವದ ಭದ್ರಕೋಟೆಯಾದ ಕರಾವಳಿಯಲ್ಲಿ ʼಬಿಲ್ಲವ ಅಭ್ಯರ್ಥಿಗೇ ಬಿಲ್ಲವ ಮತʼ ಹೆಸರಿನಲ್ಲಿ ಬಿಲ್ಲವ ಮತ ಬ್ಯಾಂಕ್ ಕ್ರೋಡೀಕರಣವಾಗುತ್ತಿರುವುದು ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಕಣವನ್ನು ರಂಗೇರಿಸಿದೆ.
ಆದರೆ ಕರಾವಳಿಯ ಬಿಜೆಪಿ ನಾಯಕರು ಈ ಪ್ರದೇಶದಲ್ಲಿ ಜಾತಿವಾದಕ್ಕಿಂತ ಹಿಂದುತ್ವ ಮತ್ತು ರಾಷ್ಟ್ರವಾದವೇ ಪ್ರಭಾವಶಾಲಿ ಎಂಬ ಭರವಸೆಯಲ್ಲಿದ್ದಾರೆ. ಜತೆಗೆ ಬಂಟ ಸಮುದಾಯ ಸೇರಿದಂತೆ ಜಿಲ್ಲೆಯ ಬಿಜೆಪಿ ನಾಯಕರು ಮಾತ್ರ ನರೇಂದ್ರ ಮೋದಿ ಅವರ ಅಲೆ ಮತ್ತು ಹಿಂದುತ್ವದ ನೆರಳಿನಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲುವಿನ ದಡ ತಲುಪಿಸುವ ಹುಮ್ಮಸ್ಸಿನಲ್ಲಿದ್ದಾರೆ.
ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ ಮತ್ತು ಮಲೆನಾಡಿನ ಶಿವಮೊಗ್ಗ ಜಿಲ್ಲೆಗಳಲ್ಲಿ ನಿರ್ಣಾಯಕ ಮತದಾರ ಸಮೂಹವಾಗಿರುವ ಬಿಲ್ಲವರು ಈ ಬಾರಿ ʼಪಕ್ಷ ಯಾವುದೇ ಇರಲಿ, ಮತ ಬಿಲ್ಲವ ಅಭ್ಯರ್ಥಿಗಿರಲಿʼ ಎಂಬ ಅಂಶಕ್ಕೆ ಒತ್ತು ನೀಡಲು ಮುಂದಾಗಿದ್ದಾರೆ. ಪಕ್ಷ ಮೀರಿ ಬಿಲ್ಲವ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ಇತ್ತೀಚೆಗೆ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಕರೆ ನೀಡಿದ್ದರು. ಬಿಲ್ಲವ ಸಂಘ ಸಂಸ್ಥೆಗಳು ಸದ್ದಿಲ್ಲದೆ ಬಿಲ್ಲವ ಅಭ್ಯರ್ಥಿಗೆ ಮತ ಹಾಕಲು ಸಮುದಾಯವನ್ನು ಜಾಗೃತಗೊಳಿಸುತ್ತಿವೆ. ಕೋಮುಗಲಭೆ ಮತ್ತಿತರ ಪ್ರಕರಣಗಳಲ್ಲಿ ಬಿಲ್ಲವ ಸೇರಿದಂತೆ ಹಿಂದುಳಿದ ವರ್ಗಗಳ ಯುವಕರು ಬಲಿಯಾಗುತ್ತಿರುವುದು ಮತ್ತು ಜೈಲು ಸೇರುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, ಬಿಲ್ಲವರಲ್ಲಿ ʼರಾಜಕೀಯ ಪ್ರಜ್ಞೆʼ ಜಾಗೃತವಾಗುತ್ತಿರುವ ಲಕ್ಷಣಗಳು ಕಂಡುಬರುತ್ತಿವೆ.
ಈಗ ದಕ್ಷಿಣಕನ್ನಡ ಜಿಲ್ಲೆಯ ಬಿಲ್ಲವ ಮುಖಂಡ ಹಾಗೂ ʼಹಿಂದೂ ಫೈರ್ ಬ್ರಾಂಡ್ʼ ಆಗಿ ಗುರುತಿಸಿಕೊಂಡಿದ್ದ ಸತ್ಯಜಿತ್ ಸುರತ್ಕಲ್ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಘೋಷಣೆ ಮಾಡಿದ್ದಾರೆ. ಅವರು, ಬಿಲ್ಲವ ಸಮುದಾಯದ ನಡುವೆ ಸಾಕಷ್ಟು ಪ್ರಭಾವ ಹೊಂದಿರುವ ʼನಾರಾಯಣಗುರು ವಿಚಾರ ವೇದಿಕೆʼ ರಾಜ್ಯಾಧ್ಯಕ್ಷರೂ ಹೌದು.
ಪಕ್ಷಬೇಧವಿಲ್ಲ
ಈ ಬಾರಿ ನಾವು ಪಕ್ಷ ಬೇಧ ಮೀರಿ ಬಿಲ್ಲವ ಸಮುದಾಯದ ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತೇವೆ ಎಂದು ಹಿಂದೂಪರ ಸಂಘಟನೆಯ ಮುಖಂಡ ಸತ್ಯಜಿತ್ ಸುರತ್ಕಲ್ ಘೋಷಣೆ ಮಾಡಿದ್ದಾರೆ.
ದಕ್ಷಿಣಕನ್ನಡದಲ್ಲಿ ಕಾಂಗ್ರೆಸ್ ಬಿಲ್ಲವ ನಾಯಕ ಹಾಗೂ ಬಿಲ್ಲವರ ಆಡಳಿತದಲ್ಲಿರುವ ಮಂಗಳೂರು ದಸರಾ ಖ್ಯಾತಿಯ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಕೋಶಾಧಿಕಾರಿ ಪದ್ಮರಾಜ್ ರಾಮಯ್ಯ ಅವರನ್ನು ಕಣಕ್ಕಿಳಿಸಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಲ್ಲವರಾದ ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಇದೇ ಸಮುದಾಯದವರಾದ ಗೀತಾ ಶಿವರಾಜ್ ಕುಮಾರ್ ಅವರನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ. ನಾರಾಯಣಗುರು ವಿಚಾರ ವೇದಿಕೆ ಅಡಿಯಲ್ಲಿ ಈ ಮೂವರು ಅಭ್ಯರ್ಥಿಗಳಿಗೆ ಪಕ್ಷ ಬೇಧ ಮರೆತು ನಾವು ಬೆಂಬಲ ನೀಡುತ್ತೇವೆ ಎಂದು ವೇದಿಕೆಯ ರಾಜ್ಯಾಧ್ಯಕ್ಷರೂ ಆಗಿರುವ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.
ಎರಡುವರೆ ದಶಕಗಳಿಂದ ಕರಾವಳಿ ಭಾಗದಲ್ಲಿ ಹಿಂದುತ್ವದ ಪರ ಕೆಲಸ ಮಾಡಿರುವ ಸತ್ಯಜಿತ್ ಸುರತ್ಕಲ್ ಅವರು ಕಳೆದ ಹಲವು ವರ್ಷಗಳಿಂದ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಪಟ್ಟಿದ್ದರಾದರೂ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೇಸತ್ತ ಅವರು, ಬಿಜೆಪಿ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರ ಹಾಕಲು ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಕರಾವಳಿಯಲ್ಲಿ ʼಬಿಲ್ಲವ ಪ್ರಜ್ಞೆʼ ಎಚ್ಚರ | ಈ ಬಾರಿ ʼಕೈʼ ಹಿಡಿಯುವುದೇ ಕರಾವಳಿ ಕ್ಷೇತ್ರ?
ಹಿಂದುತ್ವ ಸುಳ್ಳು ಎಂದು ಗೊತ್ತಾಗಿದೆ
ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ನಾರಾಯಣಗುರು ವಿಚಾರ ವೇದಿಕೆ ಯಾವುದೇ ಪಕ್ಷಕ್ಕೆ ಬೆಂಬಲಿಸುತ್ತಿಲ್ಲ, ಬಿಲ್ಲವರಿಗೆ ಬೆಂಬಲಿಸಿದೆ. ಆ ಮೂಲಕ ಹಿಂದುಳಿದ ಸಮಾಜವನ್ನು ಬಲಪಡಿಸಲಿದೆ. ಹಿಂದೂ ನಾವೆಲ್ಲಾ ಒಂದು ಎಂಬುದನ್ನು ನಾವು ನಂಬಿ ಹಿಂದುತ್ವಕ್ಕಾಗಿ ಕೆಲಸ ಮಾಡಿದ್ದೆವು. ಆದರೆ, ಈಗ ಅದು ಸುಳ್ಳು ಎಂದು ಗೊತ್ತಾಗಿದೆ. ಟಿಕೆಟ್ ಗಾಗಿ ನಾನು ಸಾಕಷ್ಟು ಪ್ರಯತ್ನ ಪಟ್ಟಿದ್ದೆ. ಆದರೆ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ನೀಡಲಾಗಿದೆ. ನಾನು ಬ್ರಾಹ್ಮಣನೋ, ಬಂಟನೋ ಇಲ್ಲವೇ ಒಕ್ಕಲಿಗನೋ ಆಗಿದ್ದಿದ್ದರೆ ನಿಸ್ಸಂದೇಹವಾಗಿ ಟಿಕೆಟ್ ಸಿಗುತ್ತಿತ್ತು. ಆದರೆ ನಾನು ಶೂದ್ರನಾಗಿ ಹುಟ್ಟಿದ್ದೇನೆ. ಅದಕ್ಕೇ ಟಿಕೆಟ್ ನೀಡಿಲ್ಲ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.
ನಾನು ಹುಟ್ಟಿದ್ದು ಬಿಲ್ಲವ ಸಮಾಜದಲ್ಲಿ, ನನ್ನ ಸಮುದಾಯದ ಕೋಟಿ -ಚೆನ್ನಯ್ಯರು ಸ್ವಾಭಿಮಾನವನ್ನು ಕಲಿಸಿದ್ದಾರೆ. ಉಡುಪಿ ಬಿಜೆಪಿ ಟಿಕೆಟ್ ಹಂಚಿಕೆಯಿಂದ ಬಿಲ್ಲವ ಸಮಾಜಕ್ಕೆ ಅನ್ಯಾಯವಾಗಿದೆ. ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ವಿಪಕ್ಷ ಸ್ಥಾನದ ಹುದ್ದೆಯಲ್ಲಿದ್ದರು. ಇನ್ನು ಈ ಸಮಾಜಕ್ಕೆ ಮತ್ತೆ ಆ ಸ್ಥಾನ ಸಿಗಲು ಸಾಧ್ಯ ಇದೆಯಾ? ಒಂದು ಎಂಪಿ ಸೀಟಿಗಾಗಿ ಕೋಟಾ ಅವರು ಎರಡು ಹುದ್ದೆ ಕಳೆದುಕೊಂಡಿದ್ದಾರೆ. ಅವತ್ತು ಜನಾರ್ದನ್ ಪೂಜಾರಿ ಸೋಲಲು ನಾನು ಕಾರಣನಾಗಿದ್ದೆ. ನಮ್ಮನ್ನು ಬಳಸಿ ಜನಾರ್ಧನ ಪೂಜಾರಿ ಅವರ ಅವಸಾನ ಮಾಡಿದ್ರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಾತಿ ಅಸಮಾನತೆಯತ್ತ ಬೊಟ್ಟು ಮಾಡಿದ ಅವರು, “ಬ್ರಹ್ಮಕಲಶದಲ್ಲಿ ನಾಲ್ಕು ರೀತಿ ಅಡುಗೆ, ನಾಲ್ಕು ರೀತಿ ಊಟದ ವ್ಯವಸ್ಥೆ ಇದೆ. ಸಂಘಪರಿವಾರದ ನೇತೃತ್ವದ ದೇವಸ್ಥಾನದಲ್ಲೂ ಅದೇ ನಡೆಯುತ್ತಿದೆ. ದೇವಸ್ಥಾನದಲ್ಲಿ ಪಂಕ್ತಿ ಬೇಧ ಇರುವವರೆಗೂ ಹಿಂದುತ್ವದಡಿಯಲ್ಲಿ ಎಲ್ಲರೂ ಒಂದಾಗಲು ಸಾಧ್ಯವಿಲ್ಲ. ಸಾಮಾಜಿಕ ಅಸಮಾನತೆಯಿಂದಾಗಿಯೇ ಮತಾಂತರ, ಲವ್ ಜಿಹಾದ್ ಗಳು ನಡೆಯುತ್ತಿವೆ” ಎಂದು ಅವರು ಹೇಳಿದರು.
ಜಾತಿ ಪ್ರಜ್ಞೆಗಿಂತ ಹಿಂದುತ್ವ ಮೇಲು: ಶಾಸಕ ರಾಜೇಶ್ ನಾಯ್ಕ್
ಸತ್ಯಜಿತ್ ಸುರತ್ಕಲ್ ಅವರು ಪಕ್ಷಬೇಧ ಮರೆತು ಬಿಲ್ಲವ ಅಭ್ಯರ್ಥಿಗಳನ್ನು ಬೆಂಬಲಿಸುವ ಬಗ್ಗೆ ʼದಿ ಫೆಡರಲ್ ಕರ್ನಾಟಕʼ ಜೊತೆ ಪ್ರತಿಕ್ರಿಯಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು, ಜಿಲ್ಲೆಯಲ್ಲಿ ಇನ್ನೂ ಬಿಜೆಪಿ ಭದ್ರವಾಗಿದೆ. ನರೇಂದ್ರ ಮೋದಿ ಅವರ ಉತ್ತಮ ಆಡಳಿತದಿಂದಾಗಿ ಬಿಜೆಪಿ ಮತ್ತೆ ಗೆಲ್ಲುತ್ತದೆ. ಜಾತಿ ಪ್ರೇಮಿಗಳು ಎಲ್ಲಾ ಜಾತಿಯಲ್ಲೂ ಇರುತ್ತಾರೆ. ಆದರೆ, ಚುನಾವಣೆಯಲ್ಲಿ ಅದು ಪರಿಣಾಮ ಬೀರುವುದಿಲ್ಲ. ಬಿಜೆಪಿ ಕಾರ್ಯಕರ್ತರಿಗೆ ಜಾತಿ ಪ್ರೀತಿಗಿಂತ ಹಿಂದುತ್ವ, ರಾಷ್ಟ್ರೀಯವಾದದ ಮೇಲೆ ನಿಷ್ಠೆ ಇದೆ ಎಂದು ಹೇಳಿದ್ದಾರೆ.