ಲೋಕಾಯುಕ್ತ ಸಂಸ್ಥೆಗೆ ಆಸ್ತಿ ವಿವರ ಸಲ್ಲಿಸದ ಐದು ಸಚಿವರು, 67 ಶಾಸಕರು, 28 ಪರಿಷತ್ ಸದಸ್ಯರು
ಸಚಿವರಾದ ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್, ರಹೀಂಖಾನ್ ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ. ಹೆಚ್ಚುವರಿ ಕಾಲಾವಕಾಶದಲ್ಲಿಯೂ ಆಸ್ತಿ ವಿವರ ಸಲ್ಲಿಸಿಲ್ಲ.
ರಾಜ್ಯದ ಐದು ಸಚಿವರು, 67 ವಿಧಾನಸಭಾ ಸದಸ್ಯರು ಮತ್ತು 28 ವಿಧಾನ ಪರಿಷತ್ ಸದಸ್ಯರು 2024-25ನೇ ಸಾಲಿನ ತಮ್ಮ ಆಸ್ತಿ ವಿವರಗಳನ್ನುಸಲ್ಲಿಕೆ ಮಾಡಿಲ್ಲ ಎಂದು ಲೋಕಾಯುಕ್ತ ಸಂಸ್ಥೆಯು ತಿಳಿಸಿದೆ.
ಈ ಸಂಬಂಧ ಸಚಿವರ, ಶಾಸಕರ ಪಟ್ಟಿಯನ್ನು ಲೋಕಾಯುಕ್ತ ಸಂಸ್ಥೆ ಬಿಡುಗಡೆ ಮಾಡಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್ ಅವರು ಆಸ್ತಿ ವಿವರ ಸಲ್ಲಿಕೆ ಮಾಡದ ಸಚಿವರಾಗಿದ್ದಾರೆ. ಮಾಜಿ ಸಚಿವ ಎನ್.ರಾಜಣ್ಣ ಸಹ ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ. ರಾಜಕೀಯ ಬೆಳವಣಿಗೆಯಿಂದಾಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆಸ್ತಿ ವಿವರ ಸಲ್ಲಿಸದ 67 ವಿಧಾನಸಭಾ ಸದಸ್ಯರ ಪಟ್ಟಿಯಲ್ಲಿ ಲಕ್ಷ್ಮಣ ಸಂಗಪ್ಪ ಸವದಿ, ಅಶೋಕ ಪಟ್ಟಣ್ , ವಿನಯ ಕುಲಕರ್ಣಿ, ಜಿ. ಜನಾರ್ದನ ರೆಡ್ಡಿ, ಎನ್.ಎ. ಹ್ಯಾರಿಸ್ , ಲತಾ ಮಲ್ಲಿಕಾರ್ಜುನ , ಡಾ. ಭರತ್ ಶೆಟ್ಟಿ ಮತ್ತು ಪುಟ್ಟರಂಗಶೆಟ್ಟಿ ಸೇರಿದಂತೆ ಇತರರು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಕೆ ಮಾಡಿಲ್ಲ. 28 ವಿಧಾನ ಪರಿಷತ್ ಸದಸ್ಯರ ಪಟ್ಟಿಯಲ್ಲಿ ಸಲೀಂ ಅಹಮದ್, ಎ.ಹೆಚ್. ವಿಶ್ವನಾಥ್, ಐವನ್ ಡಿಸೋಜಾ, ನಸೀರ್ ಅಹ್ಮದ್, ಮತ್ತು ಹೆಚ್.ಪಿ. ಸುಧಾಮ್ ದಾಸ್ ಸೇರಿದಂತೆ ಇತರರ ಹೆಸರು ಇದೆ.
ನಿಗದಿತ ಗಡುವು ಮುಗಿದ ನಂತರ ಸಚಿವ ಡಿ. ಸುಧಾಕರ್, ಶಾಸಕರಾದ ಬಿ.ಎಂ. ನಾಗರಾಜು, ಎಂ.ಟಿ. ಕೃಷ್ಣಪ್ಪ, ಪಠಾಣ್ ಯಾಸೀರ್ ಅಹ್ಮದ್ ಖಾನ್ ಮತ್ತು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಅವರು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ ಎಂದು ಲೋಕಾಯುಕ್ತ ಸಂಸ್ಥೆಯು ತಿಳಿಸಿದೆ.
ಪ್ರತಿ ವರ್ಷ ಜೂನ್ ತಿಂಗಳ ಅಂತ್ಯದ ವೇಳೆಗೆ ಲೋಕಾಯುಕ್ತ ಸಂಸ್ಥೆಗೆ ಆಸ್ತಿ ವಿವರ ಸಲ್ಲಿಕೆ ಮಾಡಬೇಕು. ಒಂದು ವೇಳೆ ಜೂನ್ ತಿಂಗಳಲ್ಲಿ ಸಲ್ಲಿಕೆ ಮಾಡದಿದ್ದರೆ ಹೆಚ್ಚುವರಿಯಾಗಿ ಎರಡು ತಿಂಗಳ ಕಾಲ ಅವಕಾಶ ನೀಡಲಾಗುತ್ತದೆ. ಆಗಸ್ಟ್ ತಿಂಗಳವರೆಗೆ ನಾಮಪತ್ರ ಸಲ್ಲಿಕೆ ಮಾಡಬೇಕು. ಹೆಚ್ಚುವರಿ ಕಾಲಾವಕಾಶದಲ್ಲಿಯೂ ಆಸ್ತಿವಿವರ ಸಲ್ಲಿಕೆ ಮಾಡದಿದ್ದರೆ ಪತ್ರಿಕೆಯಲ್ಲಿ ಪ್ರಕಟಿಸಿ, ರಾಜ್ಯಪಾಲರಿಗೆ ವರದಿ ನೀಡಲಾಗುತ್ತದೆ.