ಜಾಗತಿಕ ನಾವೀನ್ಯತೆ ಕೇಂದ್ರವಾಗಿಸಲು ನವೋದ್ಯಮ ನೀತಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ

'ಅನ್ನಭಾಗ್ಯ' ಯೋಜನೆಯಡಿ ನೀಡುವ 'ಇಂದಿರಾ ಆಹಾರ ಕಿಟ್'ನಲ್ಲಿ ಬದಲಾವಣೆ ಮಾಡಲು ಸಚಿವ ಸಂಪುಟ ನಿರ್ಣಯ. 1ಕೆ.ಜಿ. ಹೆಸರುಕಾಳು ಬದಲಿಗೆ ತೊಗರಿಬೇಳೆಯನ್ನು ಹೆಚ್ಚುವರಿಯಾಗಿ ವಿತರಿಸಲು ನಿರ್ಧಾರ.

Update: 2025-11-06 14:38 GMT

ರಾಜ್ಯವನ್ನು ಜಾಗತಿಕ ನಾವೀನ್ಯತಾ ಕೇಂದ್ರವಾಗಿ ಮತ್ತಷ್ಟು ಬಲಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ, ರಾಜ್ಯ ಸಚಿವ ಸಂಪುಟವು 'ಕರ್ನಾಟಕ ನವೋದ್ಯಮ ನೀತಿ 2025-2030'ಕ್ಕೆ ಅನುಮೋದನೆ ನೀಡಿ ಮಹತ್ವದ ತೀರ್ಮಾನ ಕೈಗೊಂಡಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಹೊಸ ನೀತಿಯು ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ 25 ಸಾವಿರ ಹೊಸ ಸ್ಟಾರ್ಟ್‌ಅಪ್‌ಗಳನ್ನು ಹುಟ್ಟು ಹಾಕುವ ಗುರಿ ಹೊಂದಿದ್ದು, ಇದಕ್ಕಾಗಿ 518.27 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈ ನೀತಿಯ ಪ್ರಮುಖ ಉದ್ದೇಶವು ರಾಜ್ಯವನ್ನು ನವೋದ್ಯಮ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ. ಬೆಂಗಳೂರಿನ ಹೊರಗೂ ನಾವೀನ್ಯತೆಯನ್ನು ವಿಸ್ತರಿಸಲು ವಿಶೇಷ ಒತ್ತು ನೀಡಲಾಗುತ್ತದೆ. ಸ್ಥಾಪನೆಯಾಗಲಿರುವ 25 ಸಾವಿರ ಸ್ಟಾರ್ಟ್‌ಅಪ್‌ಗಳ ಪೈಕಿ ಕನಿಷ್ಠ 10ಸಾವಿರ ಸ್ಟಾರ್ಟ್‌ಅಪ್‌ಗಳನ್ನು ಬೆಂಗಳೂರಿನ ಹೊರಗಿನ ಕ್ಲಸ್ಟರ್‌ಗಳಿಂದ ಉತ್ತೇಜಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದು ರಾಜ್ಯದಲ್ಲಿ ಸಮಾನ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ. 

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ್‌, 'ಕರ್ನಾಟಕ ನವೋದ್ಯಮ ನೀತಿಯು ಭವಿಷ್ಯದ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಬ್ಲಾಕ್‌ಚೈನ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸಲು ಗಮನಹರಿಸಲಿದೆ. ರಾಜ್ಯದ ಯಶಸ್ವಿ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಈ ನೀತಿಯನ್ನು ರೂಪಿಸಲಾಗಿದೆ ಎಂದರು. 

ನೀತಿಯ ಪ್ರಮುಖ ಉದ್ದೇಶಗಳು, ಆರಂಭಿಕ ಹಂತದ ಸ್ಟಾರ್ಟ್‌ಅಪ್‌ಗಳಿಗೆ ಆರ್ಥಿಕ ಬೆಂಬಲ ನೀಡಲಾಗುತ್ತದೆ. ಅತ್ಯಾಧುನಿಕ ಇನ್‌ಕ್ಯುಬೇಷನ್ ಕೇಂದ್ರಗಳು ಮತ್ತು ಸಹ-ಕೆಲಸದ ಸ್ಥಳಗಳ ವಿಸ್ತರಣೆ ಮಾಡಲಾಗುವುದು.  ಉದ್ಯಮಿಗಳಿಗೆ ತಜ್ಞರಿಂದ ಮಾರ್ಗದರ್ಶನ ಮತ್ತು ತರಬೇತಿ ನೀಡಲಾಗುವುದು. ಜಾಗತಿಕ ಮಾರುಕಟ್ಟೆಗಳನ್ನು ಪ್ರವೇಶಿಸಲು ಸ್ಟಾರ್ಟ್‌ಅಪ್‌ಗಳಿಗೆ ನೆರವು ನೀಡುವ ಉದ್ದೇಶ ಹೊಂದಲಾಗಿದೆ. ವಿದೇಶಿ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಲಾಗುವುದು. ಮಹಿಳಾ ಮತ್ತು ಗ್ರಾಮೀಣ ಉದ್ಯಮಿಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುವುದು. ಸರಳೀಕೃತ ಅನುಸರಣೆ ಮತ್ತು ಏಕ-ಗವಾಕ್ಷಿ ವ್ಯವಸ್ಥೆಗೆ ಉತ್ತೇಜ ನೀಡಲಾಗುವುದು ಎಂದು ಹೇಳಿದರು. 

ಈ ನೀತಿಯ ಅಡಿಯಲ್ಲಿ, ಸ್ಟಾರ್ಟ್‌ಅಪ್‌ಗಳಿಗೆ 'ಎಲಿವೇಟ್ ಗ್ರಾಂಟ್-ಇನ್-ಏಡ್', 'ಸೀಡ್ ಫಂಡ್', 'ಫಂಡ್ ಆಫ್ ಫಂಡ್ಸ್', ಜಿಎಸ್‌ಟಿ ಮರುಪಾವತಿ, ಪೇಟೆಂಟ್ ಫೈಲಿಂಗ್ ವೆಚ್ಚ, ಗುಣಮಟ್ಟ ಪ್ರಮಾಣೀಕರಣ ವೆಚ್ಚ, ಮತ್ತು ಪಿಎಫ್ ಮರುಪಾವತಿಯಂತಹ ಹಲವಾರು ಆರ್ಥಿಕ ಪ್ರೋತ್ಸಾಹಗಳನ್ನು ನೀಡಲಾಗುತ್ತದೆ. ಅಲ್ಲದೇ,  ದೇಶದ ಸ್ಟಾರ್ಟ್‌ಆಪ್ ರಾಜಧಾನಿಯಾಗಿರುವ ಬೆಂಗಳೂರು, ಜಾಗತಿಕ ಮಟ್ಟದಲ್ಲಿ 10ನೇ ಸ್ಥಾನದಲ್ಲಿದ್ದು, ಈ ನೀತಿಯು ಕರ್ನಾಟಕದ ನಾಯಕತ್ವವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಾವೀನ್ಯತೆಯಲ್ಲಿ ರಾಜ್ಯದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಈ ನೀತಿಯು ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಮಾಹಿತಿ ನೀಡಿದರು. 

ಇಂದಿರಾ ಆಹಾರ ಕಿಟ್‌ನಲ್ಲಿ ಬದಲಾವಣೆಗೆ ತೀರ್ಮಾನ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಅನ್ನಭಾಗ್ಯ' ಯೋಜನೆಯಡಿ ನೀಡಲಾಗುವ 'ಇಂದಿರಾ ಆಹಾರ ಕಿಟ್'ನಲ್ಲಿ (ಪೌಷ್ಟಿಕ ಆಹಾರ ಕಿಟ್) ಬದಲಾವಣೆ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಪಡಿತರ ಚೀಟಿದಾರರಿಗೆ ವಿತರಿಸಲಾಗುವ ಕಿಟ್‌ನಲ್ಲಿದ್ದ 1 ಕೆ.ಜಿ. ಹೆಸರುಕಾಳನ್ನು ಕೈಬಿಟ್ಟು, ಅದರ ಬದಲಿಗೆ ತೊಗರಿಬೇಳೆಯನ್ನು ಹೆಚ್ಚುವರಿಯಾಗಿ ವಿತರಿಸಲು ತೀರ್ಮಾನಿಸಲಾಗಿದೆ. ರಾಜ್ಯದ ತೊಗರಿಬೇಳೆ ಬೆಳೆಗಾರರ ಹಿತಾಸಕ್ತಿ ಕಾಪಾಡುವ ಮತ್ತು ಪಡಿತರದಾರರಿಗೆ ಮತ್ತಷ್ಟು ಪ್ರೋಟೀನ್‌ಯುಕ್ತ ಪೌಷ್ಟಿಕಾಂಶ ಒದಗಿಸುವ ಗುರಿ ಹೊಂದಿದೆ. ಈ ಹಿಂದೆ ನಡೆದ ಸಂಪುಟ ಸಭೆಯಲ್ಲಿ 'ಇಂದಿರಾ ಆಹಾರ ಕಿಟ್' ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಕಿಟ್‌ನಲ್ಲಿ ತಲಾ 1 ಕೆ.ಜಿ. ತೊಗರಿಬೇಳೆ, ಹೆಸರುಕಾಳು, ಸಕ್ಕರೆ, ಉಪ್ಪು ಹಾಗೂ 1 ಲೀಟರ್ ಅಡುಗೆ ಎಣ್ಣೆಯನ್ನು ಸೇರಿಸಲಾಗಿತ್ತು.

ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ.ಪಾಟೀಲ್‌, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್‌ ಪಾಟೀಲ್, ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಇತರೆ ಸಚಿವರು ಉತ್ತರ ಕರ್ನಾಟಕ ಭಾಗದಲ್ಲಿ ತೊಗರಿ ಪ್ರಮುಖ ಬೆಳೆಯಾಗಿರುವುದರಿಂದ ರೈತರ ಹಿತ ಕಾಪಾಡಲು ಹೆಸರುಕಾಳಿನ ಬದಲಿಗೆ ತೊಗರಿಬೇಳೆ ನೀಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಈ ಕ್ರಮ ಕೈಗೊಳ್ಳಲಾಗಿದೆ. 

ಹೆಸರುಕಾಳಿಗಾಗಿ ನಿಗದಿಪಡಿಸಿದ್ದ ವೆಚ್ಚದಲ್ಲೇ ತೊಗರಿಬೇಳೆಯನ್ನು ಖರೀದಿಸಿ ವಿತರಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ಹೆಚ್ಚುವರಿ ಹೊರೆ ಬೀಳುವುದಿಲ್ಲ. ಈ ಹಿಂದೆ ಯೋಜನೆಗೆ ಅನುಮೋದಿಸಲಾದ 6119.52 ಕೋಟಿ ರೂ. ವೆಚ್ಚದಲ್ಲಿ ಯಾವುದೇ ಬದಲಾವಣೆ ಇಲ್ಲ. ಕಿಟ್‌ನಲ್ಲಿ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಪದಾರ್ಥಗಳನ್ನು ಒಳಗೊಂಡಿರುತ್ತದೆ. ಆಹಾರ ಪದಾರ್ಥಗಳ ಖರೀದಿ ಪ್ರಕ್ರಿಯೆಯನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಬದಲು, ಇನ್ನು ಮುಂದೆ ಆಹಾರ ಇಲಾಖೆಯ ಆಯುಕ್ತರ ಮೂಲಕವೇ ಟೆಂಡರ್ ಕರೆದು ನಡೆಸಲು ಕೂಡ ಸಂಪುಟ ಅನುಮೋದನೆ ನೀಡಿದೆ. 

ಪರಿಷ್ಕೃತ ಯೋಜನೆಯ ಪ್ರಕಾರ, ಆಹಾರ ಕಿಟ್‌ನಲ್ಲಿರುವ ಇತರ ವಸ್ತುಗಳ ಜೊತೆಗೆ, ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ತೊಗರಿಬೇಳೆಯನ್ನು ವಿತರಿಸಲಾಗುತ್ತದೆ. 1 ಮತ್ತು 2 ಸದಸ್ಯರಿರುವ ಕುಟುಂಬಕ್ಕೆ ¼ ಕೆ.ಜಿ., 3 ಮತ್ತು 4 ಸದಸ್ಯರಿರುವ ಕುಟುಂಬಕ್ಕೆ ½ ಕೆ.ಜಿ., 5 ಮತ್ತು ಅದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ: ¾ ಕೆ.ಜಿ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ. 

ಅಧಿವೇಶನ ದಿನಾಂಕ ನಿಗದಿಗೆ ಸಿಎಂ ಅಧಿಕಾರ: 

ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದ ದಿನಾಂಕವನ್ನು ನಿಗದಿಗೊಳಿಸಲು ಸಚಿವ ಸಂಪುಟ ಸಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ನೀಡಲಾಗಿದೆ. ಡಿಸೆಂಬರ್‌ ತಿಂಗಳಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸರ್ಕಾರ ಸಿದ್ಧತೆ ಕೈಗೊಂಡಿದೆ. ಡಿ.8ರಿಂದ 19ರವರೆಗೆ ನಡೆಸುವ ಸಾಧ್ಯತೆ ಇದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ. 


Tags:    

Similar News