ಕರಾವಳಿಯಲ್ಲಿ ʼಬಿಲ್ಲವ ಪ್ರಜ್ಞೆʼ ಎಚ್ಚರ | ಈ ಬಾರಿ ʼಕೈʼ ಹಿಡಿಯುವುದೇ ಕರಾವಳಿ ಕ್ಷೇತ್ರ?
ಸಂಘ ಪರಿವಾರದ ಭದ್ರಕೋಟೆ ದ.ಕದಲ್ಲಿ ಈ ಬಾರಿಯ ಕೈ ಅಭ್ಯರ್ಥಿ ಹೊಸ ನಿರೀಕ್ಷೆಯನ್ನು ಹುಟ್ಟಿಸಿದ್ದಾರೆ. ಕರಾವಳಿಯ ಬಹುಸಂಖ್ಯಾತ ಮತದಾರ ಸಮುದಾಯವಾಗಿರುವ ಬಿಲ್ಲವರಲ್ಲಿ ಮೂಡುತ್ತಿರುವ ರಾಜಕೀಯ ಜಾಗೃತಿ ಕ್ಷೇತ್ರದ ಫಲಿತಾಂಶವನ್ನು ಕುತೂಹಲಕಾರಿಯಾಗಿಸಿದೆ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರ ರಾಜಕೀಯ ಆಸಕ್ತರ ಗಮನ ಸೆಳೆದಿದೆ. ಕ್ಷೇತ್ರದ ನಿರ್ಣಾಯಕ ಸಮುದಾಯವಾದ ಬಿಲ್ಲವರು ಈ ಬಾರಿ ಮತಪೆಟ್ಟಿಗೆಯ ಗುಂಡಿ ಒತ್ತುವ ಹೊತ್ತಿಗೆ ಅವರ ನಿರ್ಧಾರ ಏನಾಗುತ್ತದೆ ಎಂಬುದರ ಮೇಲೆ ಚುನಾವಣೆಯ ಭವಿಷ್ಯ ನಿಂತಿದೆ. ಆ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಕ್ಷೇತ್ರದ ಬೆಳವಣಿಗೆಯ ಮೇಲೆ ಎಲ್ಲರ ಕಣ್ಣು ನೆಟ್ಟಿವೆ.
ಬಿಜೆಪಿಯ ಭದ್ರ ಕೋಟೆಯಾಗಿರುವ ಕರಾವಳಿ ಜಿಲ್ಲೆಯಲ್ಲಿ ಉಳ್ಳಾಲ ಕ್ಷೇತ್ರದಿಂದ ಯುಟಿ ಖಾದರ್ ಅವರನ್ನು ಬಿಟ್ಟರೆ ಬೇರೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದು ಅಸಾಧ್ಯ ಎಂಬ ಸ್ಥಿತಿ ಇರುವಾಗ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಗೆದ್ದಿದ್ದರು. ಪುತ್ತೂರಿನಲ್ಲಿ ಬಿಜೆಪಿಯ ಸೋಲಿಗೆ ಪಕ್ಷದ ಆಂತರಿಕ ಕಚ್ಚಾಟ ಮತ್ತು ಬಂಡಾಯ ಸ್ಪರ್ಧೆ ನೇರ ಕಾರಣವಾದರೂ, ಅಶೋಕ್ ರೈ ಗೆಲುವು ಕಾಂಗ್ರೆಸ್ ಗೆ ಕರಾವಳಿಯಲ್ಲಿ ತನ್ನ ರಾಜಕೀಯ ತಂತ್ರಗಾರಿಕೆಯನ್ನು ಬದಲಿಸುವ ಹುಮ್ಮಸ್ಸು ನೀಡಿದೆ. 2024ರ ಲೋಕಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆಯಲ್ಲಿಯೇ ಕಾಂಗ್ರೆಸ್ಸಿನ ಆ ಹುಮ್ಮಸ್ಸು ಎದ್ದು ಕಾಣುತ್ತಿದೆ.
ʼಕೈʼ ಹಿಡಿಯದ ಸಾಫ್ಟ್ ಹಿಂದುತ್ವ
ಹಿಂದುತ್ವದ ಬೇರು ಆಳವಾಗಿ ಬೇರೂರಿರುವ ಕರಾವಳಿಯಲ್ಲಿ ಕಾಂಗ್ರೆಸ್ ತನ್ನನ್ನು ಸೆಕ್ಯುಲರ್ ಪಕ್ಷ ಎಂದು ಗುರುತಿಸಿಕೊಳ್ಳಲು ಹಿಂಜರಿಯುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಂಟ ಸಮುದಾಯದ ಯುವ ನಾಯಕ ಮಿಥುನ್ ರೈ ಅವರನ್ನು ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಕಣಕ್ಕಿಳಿಸಿತ್ತು. ಮಿಥುನ್ ರೈ ಕೇಸರಿ ಶಾಲು ಹಾಕಿಕೊಂಡು ಬಿಜೆಪಿ ವಿರುದ್ಧ ಮೃದು ಹಿಂದುತ್ವ ಪಾಲಿಸಿದರಾದರೂ 2 ಲಕ್ಷಕ್ಕೂ ಅಧಿಕ ಮತಗಳಿಂದ ಹೀನಾಯ ಸೋಲು ಕಂಡರು.
ಕಾಂಗ್ರೆಸ್ ಮೃದು ಹಿಂದುತ್ವದ ಧೋರಣೆಯಿಂದಾಗಿ ಕಾಂಗ್ರೆಸ್ ನ ಸಾಂಪ್ರಾದಯಿಕ ಮತಗಳಲ್ಲಿ ಸುಮಾರು 50 ಸಾವಿರ ಮತಗಳು ಎಸ್ ಡಿಪಿಐ ಪಾಲಾಗಿದ್ದವು. ಅಲ್ಲಿಗೆ, ಕಾಂಗ್ರೆಸ್ ಗೆ ಕೇವಲ ಮೃದು ಹಿಂದುತ್ವ ಮಾತ್ರ ತಮ್ಮ ಕೈ ಹಿಡಿಯುವುದಿಲ್ಲ ಎಂದು ಅರಿವಾಗುತ್ತಿದ್ದಂತೆ, ಈಗ ಜಾತಿ ದಾಳ ಉರುಳಿಸಿದೆ. ಕಾಂಗ್ರೆಸ್‌ನ ಈ ತಂತ್ರವೇ ಈ ಬಾರಿಯ ಚುನಾವಣೆಯನ್ನು ರೋಚಕವಾಗಿಸಿದೆ.
ಬಿಲ್ಲವ ಮತಗಳಿಗೆ ಗಾಳ
ಜಾತಿವಾರು ಮತಗಳನ್ನು ಗಮನಿಸುವುದಾದರೆ ದಕ್ಷಿಣಕನ್ನಡದಲ್ಲಿ ಬಿಲ್ಲವ ಮತ್ತು ಮುಸ್ಲಿಂ ಮತಗಳು ಅತ್ಯಂತ ನಿರ್ಣಾಯಕವಾಗಿವೆ. ಅಂದಾಜು 4 ಲಕ್ಷದಷ್ಟು ಮುಸ್ಲಿಂ ಮತದಾರರಿದ್ದರೆ, ಸರಿಸುಮಾರು ಅಷ್ಟೇ ಪ್ರಮಾಣದಲ್ಲಿ (3.8 ಲಕ್ಷ) ಬಿಲ್ಲವ ಸಮುದಾಯದ ಮತಗಳೂ ಇವೆ. ಸುಮಾರು ಒಂದೂ ಕಾಲು ಲಕ್ಷದಷ್ಟು ಬಂಟ ಸಮುದಾಯದವರಿದ್ದಾರೆ. ಒಂದೂವರೆ ಲಕ್ಷದಷ್ಟು ಕ್ರೈಸ್ತ ಮತದಾರರು, 75 ಸಾವಿರ ಬ್ರಾಹ್ಮಣ, 75 ಸಾವಿರ ಕೊಂಕಣಿ (ಜಿಎಸ್ ಬಿ), ಸುಮಾರು 2 ಲಕ್ಷದಷ್ಟು ಎಸ್ಸಿ ಎಸ್ಟಿ, ಒಂದೂವರೆ ಲಕ್ಷದಷ್ಟು ಗೌಡ (ಒಕ್ಕಲಿಗ) ಹಾಗೂ ಇತರ ಹಿಂದುಳಿದ ವರ್ಗದ 2.5 ಲಕ್ಷಕ್ಕೂ ಅಧಿಕ ಮತದಾರರು ಇದ್ದಾರೆ.
ಅಲ್ಪಸಂಖ್ಯಾತ ಮತಗಳು ಅನಾಯಾಸವಾಗಿ ತನ್ನ ಬುಟ್ಟಿ ಸೇರುವ ಬಗ್ಗೆ, ಎಂದಿನಂತೆ ಈ ಬಾರಿಯೂ ಕಾಂಗ್ರೆಸ್ ಆತ್ಮವಿಶ್ವಾಸದಲ್ಲಿದೆ. ಬಿಲ್ಲವ ಮತದಾರರಲ್ಲಿ ಅರ್ಧದಷ್ಟು ಮತಗಳು ಕಾಂಗ್ರೆಸ್ ಅಭ್ಯರ್ಥಿ ಪರ ಬಿದ್ದರೂ, ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ವೋಟುಗಳೊಂದಿಗೆ ಸುಲಭ ಗೆಲುವು ಪಡೆಯಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಹಾಗಾಗಿಯೇ, ಬಿಲ್ಲವ ಸಮುದಾಯದಲ್ಲಿ ಜನಪ್ರಿಯರಾಗಿರುವ ಪದ್ಮರಾಜ್ ರಾಮಯ್ಯ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.
ಜಾತಿ ಸಮೀಕರಣದೊಂದಿಗೆ ಹಿಂದುತ್ವ ಸಖ್ಯ
ದಕ್ಷಿಣ ಕನ್ನಡದ ಕಾಂಗ್ರೆಸ್ ಟಿಕೆಟ್‌ಗೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪ್ರಬಲ ಆಕಾಂಕ್ಷಿಯಾಗಿದ್ದರೂ, ರಾಜಕೀಯವಾಗಿ ಅಷ್ಟೇನೂ ಗುರುತಿಸಿಕೊಳ್ಳದಿದ್ದ ಪದ್ಮರಾಜ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಬಿಲ್ಲವರ ಪ್ರಮುಖ ಆರಾಧನಾ ಕೇಂದ್ರವಾಗಿರುವ, ನಾರಾಯಣ ಗುರುಗಳಿಂದ ಪ್ರತಿಷ್ಠಾಪನೆಯಾದ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಆಡಳಿತ ಸಮಿತಿಯಲ್ಲಿ ಗುರುತರ ಕೆಲಸ ಮಾಡಿ ಬಿಲ್ಲವ ಸಮುದಾಯದಲ್ಲಿ ಜನಪ್ರಿಯರಾಗಿರುವ ಪದ್ಮರಾಜ್ ರಾಮಯ್ಯ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ತಂತ್ರಗಾರಿಕೆಯಲ್ಲಿ ಗೆದ್ದಿದೆ.
ದಕ್ಷಿಣಕನ್ನಡದಲ್ಲಿ ಹಿಂದುತ್ವದ ವಿರುದ್ಧ ಕಠಿಣವಾಗಿ ಮಾತನಾಡುವ ಯಾವುದೇ ಪಕ್ಷದ ನಾಯಕರೂ ರಾಜಕೀಯವಾಗಿ ಮೇಲೇಳುವುದಿಲ್ಲ. ಅದರ ಅರಿವಿದ್ದೇ ಯು ಟಿ ಖಾದರ್ ಕೂಡಾ ಸಾರ್ವಜನಿಕವಾಗಿ ಪ್ರಭಾಕರ್ ಭಟ್ ರಂತಹ ಆರ್ ಎಸ್ ಎಸ್ ಪ್ರಮುಖರೊಂದಿಗೆ ವೇದಿಕೆ ಹಂಚಿಕೊಳ್ಳಲು ಯಾವುದೇ ಹಿಂಜರಿಕೆ ತೋರುತ್ತಿಲ್ಲ. ಕರಾವಳಿಯ ಶಾಂತಿ ಸುವ್ಯವಸ್ಥೆಗೆ ಸಂಘ ಪರಿವಾರ ಮತ್ತು ಹಿಂದುತ್ವ ಬಹುದೊಡ್ಡ ಸವಾಲಾದರೂ, ಪದ್ಮರಾಜ್ ರಂತಹ ನಾಯಕರು ಅದರ ವಿರುದ್ಧ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಮಾತ್ರವಲ್ಲ, ತಾವೊಬ್ಬ ಸನಾತನ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅವರು, ಈಗ ಚುನಾವಣಾ ಕಣದಲ್ಲಿ ಕೂಡ "ನನ್ನ ಹೋರಾಟ ಮೋದಿ ವಿರುದ್ಧವಲ್ಲ, ಬೃಜೇಶ್ ಚೌಟ ವಿರುದ್ಧ" ಎಂದು ಹೇಳುತ್ತಿದ್ದಾರೆ. ಸಾಧ್ಯವಾದ ಕಡೆಯೆಲ್ಲಾ ಹಿಂದುತ್ವವಾದಿ ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟವನ್ನು ಇಟ್ಟುಕೊಂಡಿರುವ ಪದ್ಮರಾಜ್ ರಿಗೂ ಹಿಂದುತ್ವ ಮತ್ತು ಮೋದಿಯನ್ನು ನೇರವಾಗಿ ಎದುರಿಸಿ ಗೆಲ್ಲುವುದು ಸಾಧ್ಯವಿಲ್ಲ ಎಂಬ ಅರಿವಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವವಾದಿ ನಾಯಕ ಅರುಣ್ ಕುಮಾರ್ ಪುತ್ತಿಲ ಪುತ್ತೂರಿನಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂದರ್ಭವನ್ನು ಕಾಂಗ್ರೆಸ್ ಯಶಸ್ವಿಯಾಗಿ ಬಳಸಿಕೊಂಡಿತ್ತು. ಆರ್ ಎಸ್ಎಸ್ ಜೊತೆಗೆ ಸಖ್ಯ ಹೊಂದಿದ್ದ ಅಶೋಕ್ ರೈ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಬಿಜೆಪಿಯ ಒಳಜಗಳ, ಬಂಟ ಸಮುದಾಯದ ಒಂದಿಷ್ಟು ಮತಗಳು ಮತ್ತು ತನ್ನ ಸಾಂಪ್ರದಾಯಿಕ ಮತಗಳಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿತ್ತು. ಹಿಂದುತ್ವ ವಿರೋಧಿಯಾಗಿ ಗುರುತಿಸಿಕೊಳ್ಳದ ಅಶೋಕ್ ರೈ ಗೆ ಪಕ್ಷವನ್ನು ಮೀರಿ ಬಂಟ ಸಮುದಾಯದ ಗಣನೀಯ ಪ್ರಮಾಣದ ಮತಗಳು ಬಿದ್ದಿರುವುದು ಅವರ ಗೆಲುವಿನ ದಾರಿ ಸುಗಮಗೊಳಿಸಿತ್ತು. ಈಗ ಅದೇ ತಂತ್ರಗಾರಿಕೆಯನ್ನು ಲೋಕಸಭಾ ಕ್ಷೇತ್ರಕ್ಕೆ ವಿಸ್ತರಿಸಿ, ಹಿಂದುತ್ವವಾದಿ ಬಿಲ್ಲವ ಯುವಕರ ಮತಗಳನ್ನೂ ಸೆಳೆಯಬಲ್ಲಂತಹ ಪದ್ಮರಾಜ್ ಅವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಚಾಣಾಕ್ಷ ಹೆಜ್ಜೆ ಇಟ್ಟಿದೆ.
ಪದ್ಮರಾಜ್ ವೈಯಕ್ತಿಕ ವರ್ಚಸ್ಸು
ವೃತ್ತಿಯಿಂದ ವಕೀಲರೂ ಆಗಿರುವ ಪದ್ಮರಾಜ್, ಕುದ್ರೋಳಿ ದೇವಾಲಯದಲ್ಲಿ ಮಾತ್ರವಲ್ಲದೆ, ಬಿಲ್ಲವ ಸಂಘ ಸಂಸ್ಥೆಗಳಲ್ಲಿಯೂ, ಇತರೆ ಸಾಮಾಜಿಕ ಚಟುವಟಿಕೆಯಲ್ಲಿಯೂ ತೊಡಗಿಸಿಕೊಂಡಿದ್ದು, ಬಿಲ್ಲವೇತರ ಸಮುದಾಯಗಳೊಡನೆಯೂ ಉತ್ತಮ ಒಡನಾಟ ಹೊಂದಿರುವವರು. ಸೈದ್ಧಾಂತಿಕ ಭಿನ್ನತೆ ಮೀರಿಯೂ ಪದ್ಮರಾಜ್ ಅವರೊಂದಿಗೆ ಇತರ ಸಮುದಾಯಗಳ ಯುವಕರೂ ಗುರುತಿಸಿಕೊಳ್ಳುತ್ತಿದ್ದಾರೆ. ಈ ಸಕರಾತ್ಮಕ ಅಂಶ ಕೂಡಾ ಚುನಾವಣೆಯಲ್ಲಿ ಕಾಂಗ್ರೆಸ್ ಅನುಕೂಲಕರವಾಗಿ ಒದಗಿಬರುವ ಸಾಧ್ಯತೆ ಇದೆ.
2024ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವರ್ಷದ ಹಿಂದೆ ಪದ್ಮರಾಜ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಜನಾರ್ದನ ಪೂಜಾರಿಯವ ಶಿಷ್ಯ ಅನ್ನುವುದೂ ಪದ್ಮರಾಜ್ ಪ್ಲಸ್ ಪಾಯಿಂಟ್. ಬಿಲ್ಲವ ಮತ ಕ್ರೋಡೀಕರಣದಲ್ಲೂ ತೊಡಗಿಸಿಕೊಂಡಿರುವ ಪದ್ಮರಾಜ್, ಸ್ಥಳೀಯ ಕಾಂಗ್ರೆಸ್ ನಾಯಕರ ವಿಶ್ವಾಸವನ್ನೂ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಲ್ಲವ ಮತಬ್ಯಾಂಕ್ ಕ್ರೋಡೀಕರಣ
"ಕರಾವಳಿ ಕೋಮುಗಲಭೆಯಲ್ಲಿ ಹಿಂದೂಗಳ ಕಡೆಯಿಂದ ಕೊಲೆಗೀಡಾವರು ಮತ್ತು ಕೊಲೆಯಂತಹ ಗಂಭೀರ ಅಪರಾಧ ಕೃತ್ಯಗಳಲ್ಲಿ ಸಿಲುಕಿ ಜೈಲು ಪಾಲಾದವರಲ್ಲಿ 80% ಕ್ಕಿಂತ ಹೆಚ್ಚು ಬಿಲ್ಲವ ಯುವಕರೇ ಇದ್ದರೂ, ಅಂತಹದ್ದರಿಂದಾಗಿ ಅಧಿಕಾರ ಪಡೆದ ಬಿಲ್ಲವ ನಾಯಕರು ಯಾರೂ ಇಲ್ಲ. ಬಿಜೆಪಿಗೆ ಸಾಯಲು, ಕೊಲ್ಲಲು ಮತ್ತು ಕಾಲಾಳುಗಳಾಗಲು ಬಿಲ್ಲವರು ಬೇಕು, ಅಧಿಕಾರಕ್ಕೆ ಏರಲು ಬಂಟ, ಬ್ರಾಹ್ಮಣರು ಬೇಕು" ಎಂಬ ಆಕ್ರೋಶ ಬಿಲ್ಲವ ಸಮುದಾಯದ ನಡುವೆ ಇತ್ತೀಚೆಗೆ ಮಡುಗಟ್ಟಿದೆ.
ನಾರಾಯಣ ಗುರುಗಳ ಆದರ್ಶವನ್ನಿಟ್ಟುಕೊಂಡು ಕಾರ್ಯಾಚರಿಸುತ್ತಿರುವ ಹಲವಾರು ಬಿಲ್ಲವ ಸಂಘಟನೆಗಳೂ ಕೋಮು ವೈಷಮ್ಯದ ಜಾಲದಲ್ಲಿ ಸಿಲುಕಿ ಬದುಕು ಕಳೆದುಕೊಳ್ಳುತ್ತಿರುವ ಸಮುದಾಯದ ಯುವಕರನ್ನು ಜಾಗೃತಿಗೊಳಿಸುತ್ತಿರುವ ಪರಿಣಾಮ ಬಿಲ್ಲವರಲ್ಲಿ ಇತ್ತೀಚೆಗೆ ರಾಜಕೀಯ ಪ್ರಜ್ಞೆಯೂ ಜಾಗೃತವಾಗತೊಡಗಿದೆ.
ಇದನ್ನೂ ಓದಿ: ಪಕ್ಷ ನೋಡಬೇಡಿ, ಬಿಲ್ಲವ ಅಭ್ಯರ್ಥಿಗೆ ಬೆಂಬಲಿಸಿ: ಬಿಜೆಪಿ ಶಾಸಕ ಕೋಟ್ಯಾನ್ ಬಹಿರಂಗ ಕರೆ
ಕರಾವಳಿಯಲ್ಲಿ ನಡೆದ ಪ್ರತಿ ಕೋಮು ಹಿಂಸಾಚಾರ ಪ್ರಕರಣದಲ್ಲಿ ಬಿಲ್ಲವರೇ ಅಧಿಕ ಸಂಖ್ಯೆಯಲ್ಲಿ ಆರೋಪಿಗಳಾಗುತ್ತಿರುವುದನ್ನು ಗಮನಿಸಿ ಹಲವು ಬಿಲ್ಲವ ನಾಯಕರು ಸಂಘಪರಿವಾರದಿಂದ ವಿಮುಖರಾಗುತ್ತಿದ್ದಾರೆ. ಸುನಿಲ್ ಬಜಿಲಕೇರಿಯಂತಹ ಮಾಜಿ ಸಂಘಪರಿವಾರ ಮುಖಂಡರು ಬಹಿರಂಗವಾಗಿ ಬಿಲ್ಲವ ಯುವಕರನ್ನು ಸಂಘಪರಿವಾರದಿಂದ ಹೊರ ತರಲು ಕಾರ್ಯೋನ್ಮುಖವಾಗಿದ್ದರೆ, ಇನ್ನೂ ಕೆಲವು ಬಿಲ್ಲವ ಮುಖಂಡರು ಸಂಘ ಪರಿವಾರದ ನಂಟನ್ನು ಕಳಚಿ ತೆರೆಮರೆಗೆ ಸರಿಯುತ್ತಿದ್ದಾರೆ. ಈ ಎಲ್ಲಾ ಬದಲಾವಣೆಗಳಿಂದಾಗಿ, ಪಕ್ಷ ಮೀರಿ ಬಿಲ್ಲವ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಬೇಕೆಂಬ ಕೂಗು ಬಿಲ್ಲವರೊಳಗೆ ತಣ್ಣಗೆ ಕೇಳಿ ಬರತೊಡಗಿವೆ. ಈ ಬದಲಾವಣೆಯ ಅಲೆಯು ಪದ್ಮರಾಜ್ ಮೂಲಕ ಕಾಂಗ್ರೆಸ್ ಗೆ ವರದಾನ ಆಗುವ ಸಾಧ್ಯತೆ ದಟ್ಟವಾಗಿದೆ.
ಅಲ್ಲದೆ, ಲೊಕಸಭಾ ಚುನಾವಣಾ ಹೊಸ್ತಿಲಲ್ಲಿಯೇ ಬಿಜೆಪಿಯ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಪಕ್ಷ, ಸಂಘಟನೆ ಬಿಟ್ಟು ಬಿಲ್ಲವ ಸಮುದಾಯದ ವ್ಯಕ್ತಿಗಳನ್ನು ಗೆಲ್ಲಿಸಬೇಕೆಂದು ಕರೆ ನೀಡಿದ್ದರು. ಪಕ್ಷ, ಸಂಘಟನೆ ಯಾವುದೇ ಇರಲಿ, ನಾವು ನಮ್ಮ ಸಮುದಾಯದ ನಾಯಕರನ್ನು ನೋಡಿಯೇ ಮತ ಹಾಕಬೇಕು ಎಂಬ ಅವರ ಮಾತು, ಬಿಲ್ಲವ ಸಮುದಾಯದೊಳಗೆ ರಾಜಕೀಯ ಜಾಗೃತಿ ಮೂಡುತ್ತಿರುವ ಪ್ರಕ್ರಿಯೆ ಭಾಗವೇ ಎಂಬುದನ್ನು ತಳ್ಳಿಹಾಕುವಂತಿಲ್ಲ. ಬಿಜೆಪಿಯಂತಹ ಕೇಡರ್ ಬೇಸ್ಡ್ ಪಕ್ಷದ ಜನಪ್ರತಿನಿಧಿಯೊಬ್ಬರು ಪಕ್ಷ, ಸಿದ್ಧಾಂತ ಮೀರಿ ಜಾತಿ ನಾಯಕರ ಕೈ ಹಿಡಿಯಬೇಕೆಂದು ಕರೆ ನೀಡಿರುವುದು ಕರಾವಳಿ ರಾಜಕಾರಣದಲ್ಲಿ ಮಹತ್ವದ ಸಂಗತಿ.
ಪೂಜಾರಿ ಸೋಲಿಗೆ ಐತಿಹಾಸಿಕ ʼಪಶ್ಚಾತ್ತಾಪʼ
ಬಿಲ್ಲವ ಸಮುದಾಯದ ಆರ್ಥಿಕ, ರಾಜಕೀಯ, ಸಾಮಾಜಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿರುವ ಮಾಜಿ ಕೇಂದ್ರ ಸಚಿವ, ಪ್ರಭಾವಿ ರಾಜಕಾರಣಿ ಬಿ ಜನಾರ್ದನ ಪೂಜಾರಿಯವರನ್ನು ಸತತವಾಗಿ ಸೋಲಿಸಿರುವ ಪಶ್ಚತ್ತಾಪ ಹೊಸ ತಲೆಮಾರಿನ ಬಿಲ್ಲವರಲ್ಲಿ ಮೂಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಮುದಾಯದ ಪೇಜ್ ಗಳೂ ಒಂದಲ್ಲ ಒಂದು ರೀತಿಯಲ್ಲಿ ಇದನ್ನೇ ಹೇಳಿಕೊಂಡು ಬರುತ್ತಿದೆ. ಬಿಲ್ಲವ ನಾಯಕರ ಗೆಲುವಿಗೆ ಬಿಲ್ಲವರೇ ಶ್ರಮಿಸಲಿಲ್ಲ. ಆದರೆ, ಉಳಿದ ಜಾತಿಯ ರಾಜಕಾರಣಿಗಳು ತಮ್ಮ ಜಾತಿಯ ಕಾರಣಕ್ಕಾಗಿ ಸುಲಭವಾಗಿ ಗೆಲ್ಲುತ್ತಾ ಬಂದಿದ್ದಾರೆ ಎಂಬ ಮಾತುಗಳು ಬಿಲ್ಲವರೊಳಗೆ ಕೇಳಿ ಬರುತ್ತಿವೆ.
ದಕ್ಷಿಣ ಕನ್ನಡದ ಎಂಟು ಕ್ಷೇತ್ರದಲ್ಲಿ ಸಮುದಾಯದ ಮತಗಳು ನಿರ್ಣಾಯಕವಾಗಿದ್ದರೂ, ಕೇವಲ ಒಬ್ಬ ಬಿಲ್ಲವ ಶಾಸಕರಿರುವುದರ ಬಗ್ಗೆಯೂ ಬಿಲ್ಲವರಲ್ಲಿ ಚರ್ಚೆ ನಡೆಯುತ್ತಿದೆ. ಹಾಗಾಗಿಯೇ, ಬಿಲ್ಲವ ನಾಯಕರನ್ನು ಪಕ್ಷ ಮೀರಿ ಬೆಂಬಲಿಸೋಣ ಎಂಬ ನರೇಟಿವ್ ಬಿಲ್ಲವರೊಳಗೆ ಸಾಮಾನ್ಯವಾಗುತ್ತಿದೆ. ಇದೀಗ, ಪಕ್ಷದೊಂದಿಗಿನ ಬಹಿರಂಗ ಮುನಿಸು ತೊರೆದು ಜನಾರ್ದನ ಪೂಜಾರಿ ಅವರೂ ಪಕ್ಷದ ಅಭ್ಯರ್ಥಿಗೆ ಬೆಂಬಲಿಸಿದ್ದಾರೆ. ಪದ್ಮರಾಜ್ ಗೆ ಲಭಿಸುತ್ತಿರುವ ಬಿಲ್ಲವ ಸಮುದಾಯದ ಬೆಂಬಲಕ್ಕೆ ಬಿಲ್ಲವರ ಈ ʼಐತಿಹಾಸಿಕ ಪಶ್ಚಾತ್ತಾಪʼವೂ ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ ಮುಂದಿನ ಸವಾಲು ಏನು?
ಇದುವರೆಗಿನ ರಾಜಕೀಯ ಲೆಕ್ಕಾಚಾರದ ಆಧಾರದಲ್ಲಿ ನೋಡುವುದಾದರೆ, ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಫೈಟ್ ನಡೆಯಲಿದೆ. ಗೆಲುವಿನ ಅಂತರವೂ ಕಳೆದ ಬಾರಿಯಂತೆ ಲಕ್ಷಗಳಲ್ಲಿ ಇರದೆ, ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇದೆ. 2019 ರ ಚುನಾವಣೆಯಲ್ಲಿ 49 ಸಾವಿರ ಚಿಲ್ಲರೆ ಮತಗಳನ್ನು ಗಳಿಸಲು ಯಶಸ್ವಿಯಾಗಿರುವ ಎಸ್ ಡಿಪಿಐ ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಗಣನೀಯ ಪ್ರಭಾವ ಬೀರುವ ಸಾಧ್ಯತೆಯ ಆತಂಕವೂ ಕೈ ಪಕ್ಷಕ್ಕೆ ಇದೆ.
ಪಿಎಫ್ಐ ಸಂಘಟನೆ ನಿಷೇಧವಾದಾಗ ಮುಸ್ಲಿಂ ಸಮುದಾಯದ ಸಂಘಟನೆಗಳು ವಹಿಸಿದ ಮೌನವು ಪಕ್ಷಕ್ಕೆ ಸಮುದಾಯದಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರಲು ಇನ್ನೂ ಸಾಧ್ಯವಾಗಿಲ್ಲ ಎನ್ನುವುದನ್ನೇ ಸೂಚಿಸುತ್ತಿದೆ. ಆದರೆ, ನಂತರದ ದಿನಗಳಲ್ಲಿ ವಿವಿಧ ಕಾರಣಗಳಿಗೆ ಎಸ್ ಡಿಪಿಐ ಜೊತೆಗೆ ಗುರುತಿಸಿಕೊಂಡಿದ್ದ ಹಲವಾರು ನಾಯಕರನ್ನು ಮತ್ತು ಸಮುದಾಯದ ಕೆಲವು ಅಮಾಯಕ ಯುವಕರನ್ನು ಜೈಲಿಗೆ ಹಾಕಲಾಗಿದೆ ಎಂಬ ಭಾವನೆ ಮುಸ್ಲಿಮರಲ್ಲಿ ಮೂಡುತ್ತಿದೆ. ಇದು ಪಕ್ಷಕ್ಕೆ ಅನುಕಂಪದ ರೀತಿಯಲ್ಲಿ ಲಾಭ ತರುವುದೇ? ಎನ್ನುವುದನ್ನು ಕಾದು ನೋಡಬೇಕಿದೆ. ಒಂದು ವೇಳೆ, ಎಸ್ ಡಿಪಿಐ ಸ್ಪರ್ಧಿಸಿ ಕೆಲವೇ ಮತಗಳನ್ನು ಸೆಳೆಯಲು ಸಾಧ್ಯವಾದರೂ ಕಾಂಗ್ರೆಸ್‌ಗೆ ಅದು ದುಬಾರಿಯಾಗಲಿದೆ.
ಬಿಜೆಪಿಯ ಬಲ ಏನು?
ಎಂದಿನಂತೆ ಬಿಜೆಪಿ ಈ ಬಾರಿಯೂ ಬಂಟ ಸಮುದಾಯಕ್ಕೆ ಆದ್ಯತೆ ನೀಡಿದೆ. ನಳಿನ್ ಕುಮಾರ್ ಕಟೀಲ್ ವಿರುದ್ಧ ಇದ್ದ ಪ್ರಬಲ ಆಡಳಿತ ವಿರೋಧಿ ಅಲೆಗೆ ಬೆದರಿದ ಬಿಜೆಪಿ, ಅವರ ಬದಲಾಗಿ ಮತ್ತೋರ್ವ ಬಂಟ ನಾಯಕ ಕ್ಯಾ. ಬೃಜೇಶ್ ಚೌಟ ಅವರಿಗೆ ಟಿಕೆಟ್ ಘೋಷಿಸಿದೆ. ಬೃಜೇಶ್ ಚೌಟ ಅವರಿಗೂ ಹಿಂದುತ್ವ ಕಾರ್ಯಕರ್ತರ ನಡುವೆ ವಿಶೇಷ ಪ್ರಭಾವವಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂಬುದು ರಾಷ್ಟ್ರವಾದ ಪ್ರಜ್ಞೆಯನ್ನು ಬಿತ್ತಲು ಬಿಜೆಪಿಗೆ ಸಹಕಾರಿಯಾಗಲಿದೆ. ಬಿಲ್ಲವ ಜಾಗೃತಿ ಪ್ರಜ್ಞೆಯ ಹೊರತಾಗಿಯೂ ಹಿಂದುತ್ವದ ಹಲವಾರು ಬಿಲ್ಲವರು ಜಾತಿಗಿಂತಲೂ ಪಕ್ಷ ದೊಡ್ಡದು ಎಂಬ ಮನೋಭಾವದಿಂದ ಈಗಲೂ ಸಂಘಪರಿವಾರದೊಂದಿಗಿದ್ದಾರೆ.
ಅಲ್ಲದೆ, ಇದುವರೆಗೂ ನಡೆಸಿಕೊಂಡು ಬಂದಿರುವ ಕೋಮು ಧ್ರುವೀಕರಣದ ಪರಿಣಾಮವನ್ನೂ ಬಿಜೆಪಿ ಲಾಭಕರವಾಗಿ ಬಳಸಿಕೊಳ್ಳಲಿದೆ. ಈಗಾಗಲೇ, ಬಂಡಾಯ ಅಭ್ಯರ್ಥಿಯಾಗುವ ಸಾಧ್ಯತೆ ಇದ್ದ ಅರುಣ್ ಕುಮಾರ್ ಪುತ್ತಿಲರನ್ನು ತನ್ನೊಳಗೆ ಸೆಳೆದುಕೊಂಡಿರುವುದರಿಂದ ಹಾಗೂ ನಳಿನ್ ರನ್ನು ಮೂಲೆಗುಂಪು ಮಾಡಿದ್ದರಿಂದ ಬಿಜೆಪಿಗೆ ದೊಡ್ಡ ಮಟ್ಟದ ಆಡಳಿತ ವಿರೋಧಿ ಅಲೆ ಎದುರಿಸಬೇಕಾಗಿಲ್ಲ. ಕಳೆದ ಹದಿನೈದು ವರ್ಷಗಳಿಂದ ಹೇಳಿಕೊಳ್ಳುವಂತಹ ಅಭಿವೃದ್ಧಿ ದಕ್ಷಿಣ ಕನ್ನಡದಲ್ಲಿ ನಡೆಯದಿದ್ದರೂ ನರೇಂದ್ರ ಮೋದಿ ಅಲೆಯ ಪ್ರಭಾವವೇನೂ ಕಡಿಮೆಯಾಗಿಲ್ಲ. ರಾಮಮಂದಿರದ ನಿರ್ಮಾಣವೂ ಹಿಂದುತ್ವದ ಪ್ರಜ್ಞೆಗೆ ತೃಪ್ತಿದಾಯಕವಾಗಿರುವುದರಿಂದ ಈ ಅಂಶವೂ ಬಿಜೆಪಿಯ ಬಲವಾಗುವ ನಿರೀಕ್ಷೆಯಿದೆ.