ನವೆಂಬರ್ ಕ್ರಾಂತಿ ಇಲ್ಲ, 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ನಿಜವಾದ ಕ್ರಾಂತಿ: ಡಿಕೆಶಿ ಸ್ಪಷ್ಟನೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ನಾನು ಯಾರನ್ನೂ ಭೇಟಿ ಮಾಡುವುದಿಲ್ಲ. ನನ್ನ ಬಳಿ ಯಾರೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿಲ್ಲ. ನನಗೆ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮ ಇಲ್ಲ. ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಮಾಡಲಾಗುವುದು.

Update: 2025-11-06 13:00 GMT

ಡಿ.ಕೆ ಶಿವಕುಮಾರ್‌

Click the Play button to listen to article

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಕುರಿತು ನಡೆಯುತ್ತಿರುವ ಊಹಾಪೋಹಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ತೆರೆ ಎಳೆದಿದ್ದಾರೆ. "ಯಾವುದೇ ನವೆಂಬರ್, ಡಿಸೆಂಬರ್ ಕ್ರಾಂತಿ ಇಲ್ಲ. ನಿಜವಾದ ಕ್ರಾಂತಿ ಆಗುವುದೇನಿದ್ದರೂ 2028ರಲ್ಲಿ, ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಮೂಲಕ" ಎಂದು ಅವರು ದೃಢವಾಗಿ ಹೇಳಿದ್ದಾರೆ.

ಮಾಧ್ಯಮಗಳಲ್ಲಿ 'ನವೆಂಬರ್ ಕ್ರಾಂತಿ' ಹಾಗೂ ನವೆಂಬರ್ 22 ಮತ್ತು 26ರ ದಿನಾಂಕಗಳ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಕುರಿತು ದೆಹಲಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, "ಇದೆಲ್ಲಾ ಯಾರೋ ಸುಮ್ಮನೆ ಸೃಷ್ಟಿಸಿರುವ ಸುದ್ದಿ. ಪಕ್ಷವು ನಮಗೆ ಬಿಹಾರ ಚುನಾವಣೆ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನೀಡಿದೆ, ನಾವು ಆ ಕೆಲಸಗಳಲ್ಲಿ ನಿರತರಾಗಿದ್ದೇವೆ. ಇದರ ಹೊರತಾಗಿ ಬೇರೆ ಯಾವುದೇ ಕ್ರಾಂತಿ ನಡೆಯುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ನಾಯಕತ್ವ ಬದಲಾವಣೆ ಚರ್ಚೆ ಮಾಧ್ಯಮಗಳ ಸೃಷ್ಟಿ

ಸಚಿವ ಸಂಪುಟ ವಿಸ್ತರಣೆ ಅಥವಾ ನಾಯಕತ್ವ ಬದಲಾವಣೆ ಕುರಿತು ತಮ್ಮೊಂದಿಗೆ ಯಾರೂ ಚರ್ಚಿಸಿಲ್ಲ ಎಂದು ತಿಳಿಸಿದ ಡಿ.ಕೆ. ಶಿವಕುಮಾರ್, ಈ ಎಲ್ಲಾ ಚರ್ಚೆಗಳು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದರು. "ನಾಯಕತ್ವ ಬದಲಾವಣೆ ಬಗ್ಗೆ ನಾನಾಗಲಿ, ಮುಖ್ಯಮಂತ್ರಿಗಳಾಗಲಿ ಏನಾದರೂ ಹೇಳಿದ್ದೇವೆಯೇ? ಪಕ್ಷದ ತೀರ್ಮಾನಕ್ಕೆ ನಾವು ಬದ್ಧ. ಮುಖ್ಯಮಂತ್ರಿಗಳು ಐದು ವರ್ಷ ಇರಬೇಕೆಂದರೆ ಇರುತ್ತಾರೆ, ಹತ್ತು ವರ್ಷ ಅಥವಾ ಹದಿನೈದು ವರ್ಷ ಇರಬೇಕೆಂದರೂ ಇರುತ್ತಾರೆ. ನಮಗೆ ವಹಿಸಿದ ಕೆಲಸವನ್ನು ನಾವು ಮಾಡುತ್ತೇವೆ" ಎಂದು ಅವರು ಹೇಳಿದರು.

ನಾನು ಪಕ್ಷದ ಶಿಸ್ತಿನ ಸಿಪಾಯಿ

ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಅವರು, "ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಲಕ್ಷ್ಮಣ ರೇಖೆಯನ್ನು ನಾನು ಎಂದಿಗೂ ದಾಟುವುದಿಲ್ಲ," ಎಂದು ಪುನರುಚ್ಚರಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಯ ಬಗ್ಗೆ ಕೇಳಿದಾಗ, "ನಾನು ಯಾರನ್ನೂ ಭೇಟಿಯಾಗುತ್ತಿಲ್ಲ. ಪಕ್ಷ ಸಂಘಟನೆಯ ವಿಚಾರವಾಗಿ ಮಾತ್ರ ಚರ್ಚೆ ನಡೆಸುತ್ತಿದ್ದೇವೆ. ಮತಗಳ್ಳತನ ತಡೆಯುವ ಬಗ್ಗೆ ನಿನ್ನೆ ಮತ್ತು ಇಂದು ಸಭೆ ನಡೆಸಿದ್ದೇವೆ" ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಆಕಾಂಕ್ಷಿಗಳಿಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ, "ಅದೆಲ್ಲವನ್ನೂ ದೆಹಲಿಯ ವರಿಷ್ಠರು ಸೂಕ್ತ ಸಮಯದಲ್ಲಿ ನಿರ್ಧರಿಸುತ್ತಾರೆ," ಎಂದು ಸಂಕ್ಷಿಪ್ತವಾಗಿ ಉತ್ತರಿಸಿದರು. ಈ ಮೂಲಕ ರಾಜ್ಯ ರಾಜಕೀಯದಲ್ಲಿನ ಎಲ್ಲಾ ಬಗೆಯ ಊಹಾಪೋಹಗಳಿಗೆ ಸದ್ಯಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

Tags:    

Similar News