ಕುಮಾರಸ್ವಾಮಿ ವಿರುದ್ಧ ಪ್ರಕರಣ | ಸಂದರ್ಭ ಬಂದರೆ ಮುಲಾಜಿಲ್ಲದೆ ಬಂಧಿಸುತ್ತೇವೆ: ಸಿಎಂ ಸಿದ್ದರಾಮಯ್ಯ

Update: 2024-08-21 09:56 GMT

ʻʻಸಚಿವ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಬಂಧಿಸಿ ಎಂದು ನಾನು ಎಲ್ಲೂ ಹೇಳಿಲ್ಲ. ಆದರೆ ಅಂತಹ ಸನ್ನಿವೇಶ ಬಂದರೆ ಮುಲಾಜಿಲ್ಲದೆ ಬಂಧಿಸುತ್ತೇವೆ ʼʼ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ ಅನುಮತಿ ಕೋರಿ ರಾಜ್ಯಪಾಲರಿಗೆ ಎಸ್‌ಐಟಿ ಮನವಿ ಮಾಡಿದ್ದು, ಇದೀಗ ಅವರಿಗೆ ಸಂಕಷ್ಟ ಎದುರಾಗಿದೆ. ಈ ಸಂಬಂಧ ಬುಧವಾರ ಸುದ್ದಿಗೋಷ್ಠಿ ನಡೆಸಿದ ಎಚ್.ಡಿ ಕುಮಾರಸ್ವಾಮಿ, ಲೋಕಾಯುಕ್ತದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ 60 ಕೇಸ್ ಇದೆ ಎಂದಿದ್ದರು. ಸದ್ಯ ಇದೀಗ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕೊಪ್ಪಳ ತಾಲೂಕಿನ ಗಿಣಗೇರಾ ಏರ್​ಸ್ಟ್ರಿಪ್‌ನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದು, ʻʻಕುಮಾರಸ್ವಾಮಿ ಭಯ ಪಟ್ಟುಕೊಂಡಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.

ʻʻಕುಮಾರಸ್ವಾಮಿ ಅವರನ್ನು ಬಂಧಿಸಿ ಎಂದು ನಾನು ಎಲ್ಲೂ ಹೇಳಿಲ್ಲ, ಅಂತಹ ಸನ್ನಿವೇಶ ಬಂದರೆ ಯಾವುದೇ ಮುಲಾಜಿಲ್ಲದೇ ಬಂಧಿಸುತ್ತೇವೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುತ್ತಾರೆ ಎಂದು ಕುಮಾರಸ್ವಾಮಿ ಭಯ ಪಟ್ಟಿದ್ದಾರೆʼʼ ಎಂದರು.

ʻʻಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ನಾವು ಕೇಳಿಲ್ಲ, ಖಾಸಗಿಯವರು ಸಹ ಕೇಳಿಲ್ಲ. ಎಸ್​​ಐಟಿ ಹಾಗೂ ಲೋಕಾಯುಕ್ತ ತನಿಖೆ ಮಾಡಿ ಸಾಕ್ಷ್ಯ ಸಂಗ್ರಹ ಮಾಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದಾರೆ. ಅದರ ಅರ್ಥ ಕುಮಾರಸ್ವಾಮಿ ವಿರುದ್ಧ ಸಾಕ್ಷಿಗಳು ಇವೆ ಎಂದು ಅರ್ಥ... ತನಿಖೆ ಮಾಡಿ, ಸಾಕ್ಷಿ ಇದ್ದರೂ ಸಹ ಬಿಟ್ಟುಬಿಡಬೇಕಾ? ಟಿ.ಜೆ.ಅಬ್ರಹಾಂ ಕೊಟ್ಟ ಪತ್ರದ ಮೇಲೆ ನನಗೆ ಅವತ್ತೇ ನೋಟಿಸ್ ನೀಡಿದ್ದಾರೆ.  ಆದರೆ ಕೇಂದ್ರ ಸಚಿವ ಕುಮಾರಸ್ವಾಮಿಗೆ ಮಾತ್ರ ಯಾಕೆ ನೋಟಿಸ್​ ಕೊಡಲಿಲ್ಲ? ರಾಜ್ಯಪಾಲರು ತಾರತಮ್ಯ ಮಾಡಿದ್ದಾರೆ. ಲೋಕಾಯುಕ್ತ ತನಿಖೆ ಮಾಡಿ ಪ್ರಾಶಿಕ್ಯೂಷನ್‌ಗೆ ಕೇಳಿದರೂ ಕೊಟ್ಟಿಲ್ಲ. ಕುಮಾರಸ್ವಾಮಿ ಸುಳ್ಳು ಹೇಳಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಅವರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿಯನ್ನು ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಚಾರದ ಬಗ್ಗೆ ನನಗೆ ಮಾಹಿತಿಯಿಲ್ಲ, ಕುಮಾರಸ್ವಾಮಿಯವರದು ಎಂದಿಗೂ ಹಿಟ್ ಎಂಡ್ ರನ್ ಕೇಸ್ ಎಂದರು.

Tags:    

Similar News