ಬೆಂಗಳೂರಿನಲ್ಲಿ ನೀರಿನ ದರ ಏರಿಕೆ, ಎಷ್ಟು ಹೆಚ್ಚಳ? ಸರಕಾರದ ಸುಳಿವು

ಖಾಸಗಿ ಟ್ಯಾಂಕರ್‌ಗಳು ದಂಧೆ ಮಾಡುತ್ತಿವೆ. ಹೀಗಾಗಿ ನಾವು ಕನಿಷ್ಠ ದರ ನಿಗದಿ ಮಾಡಿದ್ದೇವೆ. ಬತ್ತಿದ ಕೆರೆಗಳಿಗೆ ನೀರು ತುಂಬಿಸುವ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಡಿಸಿಎಂ ಹೇಳಿದರು.;

Update: 2025-03-14 14:26 GMT

ಡಿಸಿಎಂ ಡಿಕೆ ಶಿವಕುಮಾರ್ ವಿಧಾನ ಪರಿಷತ್​ನಲ್ಲಿ ಮಾತನಾಡಿದರು.

ಬೆಲೆ ಏರಿಕೆಯ ನಡುವೆ ಬದುಕು ಸಾಗಿಸುತ್ತಿರುವ ಬೆಂಗಳೂರಿನ ಜನರಿಗೆ ನೀರಿನ ದರ ಪರಿಷ್ಕರಣೆಯ ಪ್ರಭಾವವೂ ತಟ್ಟುವ ಸಾಧ್ಯತೆಗಳು ಹೆಚ್ಚಾಗಿವೆ. ಡಿಸಿಎಂ ಡಿಕೆ ಶಿವಕುಮಾರ್ ಅವರೇ ಈ ಸುಳಿವು ನೀಡಿದ್ದು, ಎಷ್ಟು ಏರಿಕೆಯಾಗಬಹುದು ಎಂಬ ಮಾಹಿತಿಯನ್ನು ವಿಧಾನ ಪರಿಷತ್​​ ಕಲಾಪದ ವೇಳೆ ನೀಡಿದ್ದಾರೆ.


2014ರ ಬಳಿಕ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಣೆ ಮಾಡಿಲ್ಲ. ಹೀಗಾಗಿ ಬೆಂಗಳೂರು ಜಲ ಮಂಡಳಿ (BWSSB) ಲೀಟರ್‌ಗೆ 7-8 ಪೈಸೆ ದರ ಏರಿಕೆ ಮಾಡುವಂತೆ ಪ್ರಸ್ತಾಪ ನೀಡಿದೆ. ಆದರೆ, ಪ್ರಸ್ತುತ ನಾವು ಕೇವಲ 1 ಪೈಸೆಯಷ್ಟು ಏರಿಕೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಈ ಕುರಿತು ಸದ್ಯದಲ್ಲೇ ನಗರ ಶಾಸಕರೊಂದಿಗೆ ಚರ್ಚಿಸಲಾಗುವುದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿ ಗೌಡ ಕುಡಿಯುವ ನೀರಿನ ಕೊರತೆ ಮತ್ತು ಖಾಸಗಿ ಟ್ಯಾಂಕರ್‌ಗಳ ಹೆಚ್ಚಿದ ದರದ ಬಗ್ಗೆ ಪ್ರಶ್ನೆ ಮುಂದಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, 10 ವರ್ಷದಿಂದ ದರ ಏರಿಕೆ ಮಾಡದ ಕಾರಣ ಮಂಡಳಿಗೆ ವರ್ಷಕ್ಕೆ ₹1,000 ಕೋಟಿ ನಷ್ಟವಾಗಿದೆ. ಮಂಡಳಿಯ ವಿದ್ಯುತ್ ಬಿಲ್ ಹೆಚ್ಚಿದ ಹಿನ್ನೆಲೆಯಲ್ಲಿ, ನಾವು ಕನಿಷ್ಠ 1 ಪೈಸೆಯಷ್ಟು ನೀರಿನ ದರ ಹೆಚ್ಚಿಸಲು ತೀರ್ಮಾನಿಸಿದ್ದೇವೆ. ಜಲಮಂಡಳಿ 7-8 ಪೈಸೆ ಹೆಚ್ಚಿಸಲು ಮುಂದಾಗಿದ್ದರೂ, ನಾನು ಪ್ರಸ್ತುತ 1 ಪೈಸೆ ಸಾಕು ಎಂದು ತಿಳಿಸಿದ್ದೇನೆ" ಎಂದು ಅವರು ವಿವರಿಸಿದರು.

ಖಾಸಗಿ ಟ್ಯಾಂಕರ್‌ಗಳ ನಿಯಂತ್ರಣ

ಖಾಸಗಿ ಟ್ಯಾಂಕರ್‌ಗಳು ದಂಧೆ ಮಾಡುತ್ತಿವೆ. ಹೀಗಾಗಿ ನಾವು ಕನಿಷ್ಠ ದರ ನಿಗದಿ ಮಾಡಿದ್ದೇವೆ. ಬತ್ತಿದ ಕೆರೆಗಳಿಗೆ ನೀರು ತುಂಬಿಸುವ ಕ್ರಮ ಕೈಗೊಳ್ಳುತ್ತಿದ್ದೇವೆ. ಭವಿಷ್ಯದ ಉದ್ದೇಶದಿಂದ ಕಾವೇರಿ 6ನೇ ಹಂತದ ಯೋಜನೆಗೆ ಯೋಜನೆ ಸಿದ್ಧವಾಗಿದ್ದು, ಅದನ್ನು ಸಚಿವ ಸಂಪುಟದ ಮುಂದೆ ಪ್ರಸ್ತಾಪಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಹೇಳಿದರು.

ಅಕ್ರಮ ನೀರಿನ ಸಂಪರ್ಕಗಳು

ನಗರದಲ್ಲಿ ಅನೇಕ ಅಪಾರ್ಟ್‌ಮೆಂಟ್‌ಗಳು ಜಲಮಂಡಳಿಯಿಂದ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದಿವೆ. ಅವರನ್ನು ಗುರುತಿಸಿ ನೋಟಿಸ್ ನೀಡಲಾಗಿದೆ. ಕಾನೂನಾತ್ಮಕವಾಗಿ ಅನುಮತಿ ಪಡೆದು ಸಂಪರ್ಕ ಪಡೆಯಬೇಕು ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ

ಬಿಜೆಪಿ ಸದಸ್ಯ ನಾಗರಾಜ್ ಯಾದವ್ ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆ ಕುರಿತು ಪ್ರಸ್ತಾಪಿಸಿದಾಗ, ಶಿವಕುಮಾರ್ ಪ್ರತಿಕ್ರಿಯಿಸಿ, "ಇದು ದೊಡ್ಡ ಮಾಫಿಯಾಗಿದ್ದು, ನ್ಯಾಯಾಲಯದ ಮೆಟ್ಟಿಲು ಹತ್ತುವ ಮೂಲಕ ನಮಗೆ ತೀರ್ಮಾನ ಕೈಗೊಳ್ಳುವುದಕ್ಕೆ ಬಿಡುತ್ತಿಲ್ಲ. ಆದಾಗ್ಯೂ ನಾವು ಬೆಂಗಳೂರಿನ ಹೊರವಲಯದಲ್ಲಿ 100 ಎಕರೆ ಜಾಗದಲ್ಲಿ ಕಸ ವಿಲೇವಾರಿ ಮಾಡಲು ಮುಂದಾಗಿದ್ದೇವೆ" ಎಂದು ತಿಳಿಸಿದರು.

ಆಲಮಟ್ಟಿ ಸಮಸ್ಯೆ ಪರಿಹಾರಕ್ಕೆ ನಿಯೋಗ

ಬಿಜೆಪಿ ಸದಸ್ಯ ಕೇಶವ ಪ್ರಸಾದ್ ಅವರು ಆಲಮಟ್ಟಿ ಸಮಸ್ಯೆ ಮತ್ತು ಮಹಾರಾಷ್ಟ್ರದ ತಗಾದೆ ಕುರಿತು ಪ್ರಶ್ನೆ ಮುಂದಿಟ್ಟಾಗ, "ನಾವು ಎಲ್ಲಾ ಪಕ್ಷಗಳೊಂದಿಗೆ ದೆಹಲಿಗೆ ಭೇಟಿ ನೀಡಿ ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಬೇಕಾಗಿದೆ" ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

Tags:    

Similar News