ವಿಜಯನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ; ಬಸ್ ಜೆಸಿಬಿಗೆ ಡಿಕ್ಕಿ, 8 ಮಂದಿಗೆ ಗಂಭೀರ ಗಾಯ
ಬೆಂಗಳೂರಿನಿಂದ ಯಾದಗಿರಿಗೆ ಹೊರಟಿದ್ದ ವಿಆರ್‌ಎಲ್ ಬಸ್‌ನಲ್ಲಿ 32 ಜನರು ಪ್ರಯಾಣಿಸುತ್ತಿದ್ದು, ಗಂಗಾವತಿ ಕಡೆ ಹೊರಟಿದ್ದ ಜೆಸಿಬಿ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿಹೊಡೆದ ಪರಿಣಾಮ ಎರಡೂ ವಾಹನಗಳು ಹೆದ್ದಾರಿ ಪಕ್ಕದ 10ಅಡಿ ಆಳದ ಕಂದಕ್ಕೆ ಉರುಳಿಬಿದ್ದಿವೆ.;
By : The Federal
Update: 2025-05-15 07:56 GMT
ಸಾಂದರ್ಭಿಕ ಚಿತ್ರ
ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಯಾದಗಿರಿಗೆ ಹೊರಟಿದ್ದ ವಿಆರ್‌ಎಲ್ ಖಾಸಗಿ ಬಸ್, ಗಂಗಾವತಿ ಕಡೆಗೆ ಹೋಗುತ್ತಿದ್ದ ಜೆಸಿಬಿ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಈ ದುರ್ಘಟನೆಯಲ್ಲಿ ಬಸ್ ಚಾಲಕ ಮಲ್ಲಿಕಾರ್ಜುನ, ಜೆಸಿಬಿ ಚಾಲಕ ಶರಣಪ್ಪ ಸೇರಿದಂತೆ ಆರು ಜನ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ತಕ್ಷಣವೇ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನಲ್ಲಿ 32 ಪ್ರಯಾಣಿಕರಿದ್ದರು.
ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ನಿಯಂತ್ರಣ ತಪ್ಪಿ ಹೆದ್ದಾರಿಯ ಪಕ್ಕದಲ್ಲಿದ್ದ ಸುಮಾರು 10 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿವೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.