ಮತಕಳವು ಆರೋಪ | ಕಾಂಗ್ರೆಸ್ಸಿನಲ್ಲಿ ಕ್ಷಿಪ್ರ ಬೆಳವಣಿಗೆ; ಸಚಿವ ಸ್ಥಾನಕ್ಕೆ ಕೆ.ಎನ್‌. ರಾಜಣ್ಣ ರಾಜೀನಾಮೆ

ವಿಧಾನಸೌಧದಲ್ಲಿ ಕಲಾಪದ ಬಳಿಕ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಮತಗಳವು ವಿಚಾರದಲ್ಲಿ ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಹೈಕಮಾಂಡ್‌ ಸೂಚನೆ ಮೇರೆಗೆ ರಾಜಣ್ಣ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.;

Update: 2025-08-11 09:30 GMT

ಸಹಕಾರ ಸಚಿವ ಕೆ.ಎನ್‌. ರಾಜಣ್ಣ

ರಾಜ್ಯ ಕಾಂಗ್ರೆಸ್ಸಿನಲ್ಲಿ ನಡೆದ ಮಹತ್ವದ ಬೆಳವಣಿಗೆಯಲ್ಲಿ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರು ಹೈಕಮಾಂಡ್‌ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಮಹದೇವಪುರದಲ್ಲಿ ಮತಗಳವು ಆರೋಪಕ್ಕೆ ಸಂಬಂಧಿಸಿ ಪಕ್ಷದ ವಿರುದ್ಧವೇ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ರಾಜೀನಾಮೆ ಪಡೆಯುವಂತೆ ಹೈಕಮಾಂಡ್‌ ಸೂಚನೆ ನೀಡಿತ್ತು ಎನ್ನಲಾಗಿದೆ. 

ಈ ಹಿಂದಿನಿಂದಲೂ ಕಾಂಗ್ರೆಸ್‌ ಸರ್ಕಾರದಲ್ಲಿ ʼಸೆಪ್ಟೆಂಬರ್‌ ಕ್ರಾಂತಿʼ ಕುರಿತ ಹೇಳಿಕೆ ನೀಡುವ ಮೂಲಕ ಮುಜುಗರ ಸೃಷ್ಟಿಸಿದ್ದರು. ಮಹದೇವಪುರದಲ್ಲಿ ರಾಹುಲ್‌ ಗಾಂಧಿ ಮಾಡಿದ ಮತಗಳ್ಳತನ ಆರೋಪದ ನಂತರ ಕೆ.ಎನ್‌. ರಾಜಣ್ಣ ಅವರು "ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಆಗ ಎಲ್ಲರೂ ಕಣ್ಣುಮುಚ್ಚಿ ಕುಳಿತಿದ್ದರೆ ಎಂದು ಸ್ವಪಕ್ಷಿಯರ ವಿರುದ್ಧ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದರು. 

ಕೆ.ಎನ್‌.ರಾಜಣ್ಣ ಅವರ ಹೇಳಿಕೆಯನ್ನು ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿತ್ತು. ಬಿಜೆಪಿ ಹಾಗೂ ಚುನಾವಣಾ ಆಯೋಗದ ಅಕ್ರಮದ ವಿರುದ್ಧ ಕಾಂಗ್ರೆಸ್‌ ದನಿಯೆತ್ತಿರುವಾಗ ಸ್ವಪಕ್ಷಿಯ ಸಚಿವ ರಾಜಣ್ಣ ಪಕ್ಷದ ವಿರುದ್ಧವೇ ಮಾತನಾಡಿರುವುದು ಹೈಕಮಾಂಡ್‌ ಆಕ್ರೋಶಕ್ಕೆ ಕಾರಣವಾಗಿತ್ತು. ಕೂಡಲೇ ರಾಜಣ್ಣ ಅವರಿಂದ ರಾಜೀನಾಮೆ ಪಡೆಯುವಂತೆ ವರಿಷ್ಠರು ಸೂಚಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗಿದೆ. 

ರಾಹುಲ್‌ ಗಾಂಧಿ ಅವರ ಮತಗಳವು ಆರೋಪದ ಬೆನ್ನಲ್ಲೇ ರಾಜಣ್ಣ ನೀಡಿದ ಹೇಳಿಕೆಯನ್ನೇ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಅಸ್ತ್ರವನ್ನಾಗಿ ಮಾಡಿಕೊಂಡಿದ್ದವು. ರಾಜಣ್ಣ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.    

Tags:    

Similar News