ಮತಕಳವು ಆರೋಪ |ರಾಹುಲ್‌ ಪ್ರತಿಭಟನಾ ಸಮಾವೇಶಕ್ಕೆ ವಿಪಕ್ಷಗಳ ಕಿಡಿ

ಕಳೆದ 3 ವರ್ಷದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ 3 ಲಕ್ಷ ಕೋಟಿ ಸಾಲ ಮಾಡಿದೆ. ರಾಜ್ಯದ GSDPಯಲ್ಲಿ ಸಾಲದ ಪ್ರಮಾಣ ಶೇ 24.91 ಆಗಿದೆ ಎಂದು ನಿಖಿಲ್‌ ಕುಮಾರಸ್ವಾಮಿ ಆರೋಪಿಸಿದ್ದಾರೆ.;

Update: 2025-08-08 04:54 GMT

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮದ ಆರೋಪ ಮಾಡಿ ದಾಖಲೆ ಬಿಡುಗಡೆ ಮಾಡಿರುವ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಿರುದ್ಧ ಪ್ರತಿಪಕ್ಷ ನಾಯಕರು ಹರಿಹಾಯ್ದಿದ್ದಾರೆ. 

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ʼಎಕ್ಸ್‌ʼ ಖಾತೆಯಲ್ಲಿ ರಾಹುಲ್‌ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 

ಚುನಾವಣೆ ಆಯೋಗದ ಮೇಲೆ ಸುಳ್ಳಿನ ಸುರಿಮಳೆ, ಜನತಂತ್ರಕ್ಕೆ ನೇಣು ಬಿಗಿಯುವ ದೂರ್ತ ಹುನ್ನಾರ. ಅಮೃತಕಾಲದ ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ್ಯ. ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅಸತ್ಯದ ಆರೋಪದ ಮೂಲಕ ಅನುಮಾನದ ಪ್ರಯೋಜನ (Benefit of the doubt) ಪಡೆಯುವ ಕಿಡಿಗೇಡಿ ಪಿತೂರಿ, ಚುನಾವಣೆಯಲ್ಲಿ ಎಸಗಿದ ಪಾಪವನ್ನು ಸುಳ್ಳಿನಿಂದ ಮುಚ್ಚಿಕೊಳ್ಳುವ ಗೂಬೆಲ್ ರಾಜಕಾರಣ ಎಂದು ಟೀಕಿಸಿದ್ದಾರೆ.

ಮತಗಳ್ಳತನಕ್ಕೆ ಒಂದೇ ಮದ್ದು. ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು. ಅಷ್ಟು ಮಾಡಿದರೆ ಮತಗಳ್ಳರ ಆಟಕ್ಕೆ ಅಂಕೆ ಬೀಳುವುದು ಗ್ಯಾರಂಟಿ. ಕೇಂದ್ರ ಚುನಾವಣೆ ಆಯೋಗಕ್ಕೆ ನನ್ನ ಮನವಿ ಅಥವಾ ಒತ್ತಾಯ ಇಷ್ಟೇ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಿರಿ ಎಂದು ಸಲಹೆ ನೀಡಿದ್ದಾರೆ. 

ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ರಾಹುಲ್‌ ಗಾಂಧಿ ಅವರಿಗೆ ವಿಡಂಬನೆಯ ಸ್ವಾಗತ ಕೋರಿದ್ದಾರೆ. ರಾಹುಲ್‌ ಗಾಂಧಿ ಅವರಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು, ಕಳೆದ 3 ವರ್ಷದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ 3 ಲಕ್ಷ ಕೋಟಿ ಸಾಲ ಮಾಡಿದೆ. ರಾಜ್ಯದ GSDPಯಲ್ಲಿ ಸಾಲದ ಪ್ರಮಾಣ ಶೇ 24.91 ಆಗಿದೆ. ನಿಮ್ಮ ಗ್ಯಾರಂಟಿ ಯೋಜನೆಗೆ ಪ್ರತಿ ವರ್ಷ ಬೇಕಾಗಿರುವುದು 55 ಸಾವಿರ ಕೋಟಿ, ಕಳೆದ 3 ವರ್ಷದಿಂದ ನಿಮ್ಮ ಸರ್ಕಾರ ಮಾಡುತ್ತಿರುವ ಸಾಲ ವರ್ಷಕ್ಕೆ 1 ಲಕ್ಷ ಕೋಟಿ ಎಂದು ಆರೋಪಿಸಿದ್ದಾರೆ.

⁠ನಿಮ್ಮ ಶಾಸಕರೇ ಅಭಿವೃದ್ಧಿಗೆ ಹಣವಿಲ್ಲ ಎಂದು ಹೇಳುತ್ತಿದ್ದಾರೆ. ತಾಯಿ ಮಹಾಲಕ್ಷ್ಮಿಯು ಹಣಕಾಸು ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಕ್ಕೆ ಸರ್ವ ಐಶ್ವರ್ಯ ಪ್ರಾಪ್ತಿಸಲಿ ಎಂದು ಪ್ರಾರ್ಥನೆ ಮಾಡೋಣ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.

ಇನ್ನು ಬಿಜೆಪಿ ಕೂಡ ರಾಹುಲ್‌ ಗಾಂಧಿ ಪ್ರತಿಭಟನಾ ಸಮಾವೇಶಕ್ಕೆ ತನ್ನದೇ ಶೈಲಿಯಲ್ಲಿ ಕಿರಿಕಾರಿದೆ. ನೀವು ಚುನಾವಣಾ ಆಯೋಗದ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಆಗಮಿಸುತ್ತಿದ್ದೀರಿ, ಯಾವುದೇ ವಿಷಯದ ಕುರಿತು ಪ್ರತಿಭಟಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಹೀಗಾಗಿ ನೀವು ಪ್ರತಿಭಟಿಸಲು ಸರ್ವ ಸ್ವತಂತ್ರರು. ಆದರೆ, ಈ ಕೆಳಗಿನ ಪ್ರಶ್ನೆಗಳಿಗೆ ಮಾತ್ರ ನಿಮ್ಮಿಂದ ನೇರವಾದ ಹಾಗೂ ಸಮಂಜಸವಾದ ಉತ್ತರ ಬಯಸುತ್ತೇವೆ. ಏಕೆಂದರೆ ಈ ಪ್ರಶ್ನೆಗಳು ಕರ್ನಾಟಕದ ಜನತೆಯದ್ದಾಗಿವೆ. ಬಹಳಷ್ಟು ದಿನಗಳಿಂದ ಕನ್ನಡಿಗರು ಈ ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರವನ್ನು ಬಯಸುತ್ತಿದ್ದು, ನೀವು ಈ ಪ್ರಶ್ನೆಗಳಿಗೆ ಉತ್ತರಿಸುತ್ತಿರಾ ಎಂದು ನಾವು ನಂಬಿದ್ದೇವೆ ಎಂದು ಹೇಳಿದೆ. 

ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಕಾಂಗ್ರೆಸ್‌ ನ ಚುನಾವಣೆಯ ಖರ್ಚಿಗಾಗಿ, ಕರ್ನಾಟಕದ ಮಹರ್ಷಿ ವಾಲ್ಮೀಕಿ ನಿಗಮದ ₹187 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾಯಿಸಿ ದುರ್ಬಳಕೆ ಮಾಡಿಕೊಂಡ ಹಗರಣವನ್ನು ಇಡಿ ಬಯಲು ಮಾಡಿದೆ.  ಈ ಕಾಂಗ್ರೆಸ್‌ ತನ್ನ ಪಾರ್ಟಿ ಫಂಡ್‌ ಗೆ ಬಳಸಿದಕ್ಕಾಗಿ ನೀವು ಅವರ ಕ್ಷಮೆಯಾಚಿಸುವುದಿಲ್ಲವೇ ಎಂದು ಪ್ರಶ್ನಿಸಿದೆ. 

ಮುಡಾ ಹಗರಣ, ಕಾರ್ಮಿಕ ಕಿಟ್ ಹಗರಣ, ವಸತಿ ಹಗರಣ, ಅಬಕಾರಿ ಲೈಸೆನ್ಸ್‌ ನವೀಕರಣ ಹಗರಣ, ವೈನ್ ವ್ಯಾಪಾರಿಗಳಿಂದ ₹200 ಕೋಟಿ ಲಂಚಕ್ಕೆ ಬೇಡಿಕೆ ಸೇರಿದಂತೆ, ನಿಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಇದೇನಾ ನೀವು ದ್ವೇಷದ ಅಂಗಡಿಯಲ್ಲಿ ತೆರೆದ “ಭ್ರಷ್ಟಾಚಾರದ ಮಾರುಕಟ್ಟೆಯೇ ಎಂದು ಸರಣಿ ಪ್ರಶ್ನೆಗಳನ್ನು ರಾಹುಲ್‌ ಗಾಂಧಿ ಮುಂದಿಟ್ಟಿದೆ.

Tags:    

Similar News