ಜನಪ್ರತಿನಿಧಿಗಳಿಂದಲೇ ಗೌಪ್ಯ ಮತದಾನ ನಿಯಮ ಉಲ್ಲಂಘನೆ!

Update: 2024-05-08 08:32 GMT

ಮತದಾನ ವೇಳೆ ಮತದಾರನ ಪಕ್ಕದಲ್ಲಿ ಮತ್ತೊಬ್ಬ ವ್ಯಕ್ತಿ ನಿಲ್ಲುವುದಾಗಲಿ,  ಪ್ರಚೋದನೆ ನೀಡುವುದಾಗಲಿ ಅಥವಾ ವಿಡಿಯೋ ಚಿತ್ರೀಕರಣ ಮಾಡುವುದು ಗೌಪ್ಯ ಮತದಾನ ನಿಯಮದ ಉಲ್ಲಂಘನೆಯಾಗುತ್ತದೆ, ಇದು ಅಪರಾಧ ಎಂದು ಚುನಾವಣೆ ಆಯೋಗ ಹೇಳುತ್ತದೆ. ಆದರೆ ನಿಯಮಾವಳಿಗಳಿಗೆ ವಿರುದ್ಧವಾಗಿ ಜನಪ್ರತಿನಿಧಿಗಳಿಂದಲೇ ನಿಯಮ ಉಲ್ಲಂಘನೆಯಾಗಿರುವ ಘಟನೆಗಳು ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ ಅಲ್ಲಿಲ್ಲಿ ನಡೆದಿವೆ.

ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಜಿಎಂ ಸಿದ್ದೇಶ್ವರ ಅವರು  ಗೌಪ್ಯ ಮತದಾನ ನಿಯಮ ಉಲ್ಲಂಘನೆ ಮಾಡಿದ ತೋಟಗಾರಿಕೆ ಸಹಾಯಕ ನಿರ್ದೇಶಕ ಹಾಗೂ ಸ್ಥಳೀಯ ಚುನಾವಣಾಧಿಕಾರಿ ರಾಜೇಶ್ ಕುಮಾರ್ ದೂರು ನೀಡಿದ ಹಿನ್ನೆಲೆ ಸಿದ್ದೇಶ್ವರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆ ಮತ್ತು ಅಲ್ಲಲ್ಲಿ ನಡೆದ ಅಂತಹುದೇ ಘಟನೆಗಳು ಗೌಪ್ಯಮತದಾನದ ಪ್ರಕಿಯೆ ಬಗ್ಗೆ  ಸಾರ್ವಜನಿಕವಾಗಿ ಚರ್ಚೆ ನಡೆಯುವಂತಾಗಿದೆ.


ದಾವಣಗೆರೆ ಲೋಕಸಭಾ ಕ್ಷೇತ್ರದ 106ನೇ ವೃತ್ತದ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಪಿಎಸ್- 236 ಮಾಗನೂರು ಬಸಪ್ಪ ಪಬ್ಲಿಕ್ ಶಾಲೆಯ ಕೊಠಡಿ ಸಂಖ್ಯೆ- 1ರಲ್ಲಿ ಬೆಳಗ್ಗೆ ಸುಮಾರು 9.30ರ ಸುಮಾರಿಗೆ ಜಿಎಂ ಸಿದ್ದೇಶ್ವರ್ ಅವರು ಮತ ಚಲಾಯಿಸಿದರು. ಈ ವೇಳೆ ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರೊಂದಿಗೆ ಹಾಲಿ ಬಿಜೆಪಿ ಸಂಸದರು ಮತದಾನ ಮಾಡಿದ್ದರು. ಮೊದಲು ಮತದಾನ ಮಾಡಿದ ಸಿದ್ದೇಶ್ವರ ಅವರು, ಗಾಯತ್ರಿಯವರ ಮತದಾನ ಆಗುವವರೆಗೆ ಅಲ್ಲೇ (ಮತಯಂತ್ರದ ಪಕ್ಕದಲ್ಲೇ) ಉಳಿದಿದ್ದರು. ಅಲ್ಲದೆ, ಗಾಯಿತ್ರಿ ಸಿದ್ದೇಶ್ವರ್ ರವರು ಮತದಾನ ಮಾಡುತ್ತಿರುವುದನ್ನು ಸಿದ್ದೇಶ್ವರ್ ಜಿ.ಎಂ ರವರು ಪಕ್ಕದಲ್ಲೇ ನಿಂತು ನೋಡಿದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಕೆಲಸಮಯದ ಬಳಿಕ ಈ ವಿಡಿಯೋ ತುಣುಕು ಜಿಲ್ಲೆಯ ಸಹಾಯಕ ಚುನಾವಣಾಧಿಕಾರಿಗಳಿಗೂ ತಲುಪಿದ್ದು, ಆ ಹಿನ್ನೆಲೆಯಲ್ಲಿ ಅವರು ದೂರು ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಸಹಾಯಕ ಚುನಾವಣಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದು, ʻʻಸಿದ್ದೇಶ್ವರ ಅವರ ವೀಡಿಯೋವನ್ನು ಬೆಳಗ್ಗೆ 10.48 ಗಂಟೆ ಸುಮಾರಿಗೆ ನನ್ನ ಮೊಬೈಲ್‌ಗೆ ವೀಡಿಯೋ ಬಂದಿದ್ದು, ನಾನು ಅದನ್ನು ನೋಡಿರುತ್ತೇನೆ. ದಾವಣಗೆರೆಯ ಸಂಸದರಾದ ಜಿ.ಎಂ ಸಿದ್ದೇಶ್ವರ್ ತಮ್ಮ ಹೆಂಡತಿಯ ಮತದಾನ ಮಾಡುವ ಪ್ರಕ್ರಿಯೆಯನ್ನು ನೋಡಿರುವ ಕಾರಣ ಮತದಾನ ಗೌಪ್ಯತೆಯ ನಿಯಮವನ್ನು ಉಲ್ಲಂಘಿಸಿದ್ದಾರೆ. ಗೌಪ್ಯತೆಯ ಬಗ್ಗೆ ಈಗಾಗಾಲೇ ಚುನಾವಣಾ ಆಯೋಗ ಕೆಲವಾರು ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿದ್ದರೂ, ಸಿದ್ದೇಶ್ವರ ಅವರು ಆದೇಶಗಳನ್ನು ಉಲ್ಲಂಘನೆ ಮಾಡಿರುವ ಕಾರಣ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡುತ್ತಿದ್ದೇನೆʼʼ ಎಂದು ಅವರು ತಿಳಿಸಿದ್ದಾರೆ.

ಬಳ್ಳಾರಿ ಕಾರ್ಪೋರೇಟರ್‌ರಿಂದ ಗೌಪ್ಯತೆ ನಿಯಮ ಉಲ್ಲಂಘನೆ

ಬಳ್ಳಾರಿ ಮಹಾನಗರ ಪಾಲಿಕೆ 10ನೇ ವಾರ್ಡ್‌ನ ಬಿಜೆಪಿ ಸದಸ್ಯ ಕೋನಂಕಿ ತಿಲಕ್ ಅವರು ಮತದಾನದ ಗೌಪ್ಯತೆ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಅವರ ವಿರುದ್ಧ ನಗರದ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ (FIR) ದಾಖಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ, ಮತದಾರರ ಮೇಲೆ ಪ್ರಭಾವ ಬೀರುವ ಕೆಲಸ ಮಾಡಿದ್ದಾರೆ ಎಂದು ಚುನಾವಣೆ ಫ್ಲೈಯಿಂಗ್ ಸ್ಕ್ವಾಡ್​ರಿಂದ ದೂರು ಹಿನ್ನೆಲೆ ಎಫ್​ಐಆರ್​ ದಾಖಲಿಸಲಾಗಿದೆ.

ಕೋನಂಕಿ ತಿಲಕ್​ ಮತ ಚಲಾಯಿಸುವಾಗ ಇವಿಎಂ ಮಿಷಿನ್ ಮೇಲೆ ಕಮಲದ ಚಿನ್ನೆ ಮೇಲೆ ಬೆರಳಿಟ್ಟು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಆ ಫೋಟೋವನ್ನು ವಾಟ್ಸಾಪ್ ಸ್ಟೇಟಸ್‌ಗೆ ಹಾಕಿ ಎಡವಟ್ಟು ಮಾಡಿಕೊಂಡಿದ್ದಾರೆ. ಜೊತೆಗೆ ಬಿಜೆಪಿಯ ರಾಮುಲುಗೆ ಮತ ಹಾಕಿರುವೆ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಜನಪ್ರತಿನಿಧಿಯಿಂದಲೇ ನಿಯಮ ಉಲ್ಲಂಘನೆ ಮಾಡಲಾಗಿದೆ.

ಅದೇ ರೀತಿ ರಾಜ್ಯ ವಿವಿಧ ಭಾಗಗಳಲ್ಲಿ ಮತದಾನದ ವಿಡಿಯೋಗಳು ವೈರಲ್ ಆಗಿವೆ. ವಿಜಯಪುರ ನಗರದಲ್ಲಿ ಮತದಾನ ಮಾಡಿದ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ ಆ ವಿಡಿಯೋಗಳು ವೈರಲ್​ ಆಗಿವೆ. ಮತದಾನ ಮಾಡುವಲ್ಲಿ ಮೊಬೈಲ್ ಒಯ್ಯದಂತೆ ಕ್ರಮ ತೆಗೆದುಕೊಂಡಿದ್ದರೂ ಘಟನೆಗಳು ನಡೆದಿವೆ.

ಗೌಪ್ಯ ಮತದಾನವನ್ನು ರಾಜಕೀಯ ಮುಖಂಡರ ಬೆಂಬಲಿಗರು ಬಹಿರಂಗ ಪಡಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ವೇಳೆ ಕೆಲ ಮತದಾರರು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಮತದಾನ ಮಾಡಿದ ವಿಡಿಯೋವನ್ನು ವಾಟ್ಸಾಪ್ ಸ್ಟೇಟಸ್‌ಗೆ ಬೆಂಬಲಿಗರು ಹಾಕಿಕೊಂಡಿದ್ದಾರೆ. ಬಿಜೆಪಿಯ ಜಿಗಜಿಣಗಿಗೆ ಮತಹಾಕಿ ಕಾಂಗ್ರೆಸ್ ಅಭ್ಯರ್ಥಿ ಭಾವಚಿತ್ರಕ್ಕೆ ಅಶ್ಲೀಲವಾಗಿ ಸನ್ನೆ ಮಾಡಿದ ವಿಡಿಯೋ ಸಹ ವೈರಲ್ ಆಗಿದೆ.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಹಾಲಸಮುದ್ರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತಾನು ಮತ ಹಾಕುವುದನ್ನು ಓರ್ವ ವ್ಯಕ್ತಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ ತಾನು ಓಟ್ ಹಾಕಿದ್ದನ್ನು ಸ್ಟೇಟಸ್‌ಗೆ ಕೂಡ ಹಾಕಿಕೊಂಡಿರುವಂತಹ ಘಟನೆ ನಡೆದಿದೆ. ಮತಗಟ್ಟೆಯೊಳಗೆ ಮೊಬೈಲ್​ ನಿಷೇಧವಿದ್ದರೂ ಕೂಡ ಇಂತಹ ಘಟನೆಗಳು ನಡೆದಿವೆ. 

ಗೌಪ್ಯ ಮತದಾನ: 

ಮತದಾರ ಯಾರಿಗೆ ಮತ ನೀಡಿದನೆಂಬುದು ಬೇರಾರಿಗೂ ಗೊತ್ತಾಗದಂತೆ ಮತದಾನ ಮಾಡುವ ಪದ್ಧತಿ, ವ್ಯವಸ್ಥೆ (ಸೀಕ್ರೆಟ್ ಬ್ಯಾಲಟ್) ನಮ್ಮ ದೇಶದಲ್ಲಿದೆ. ಹೊರಗಿನವರ ಪ್ರಭಾವಗಳಿಂದ ಮತದಾರನನ್ನು ಮುಕ್ತನನ್ನಾಗಿ ಮಾಡಲು ಬಹುತೇಕ ಎಲ್ಲ ಪ್ರಜಾಸತ್ತಾತ್ಮಕ ದೇಶಗಳ ಸಂಘಸಂಸ್ಥೆ ಸಭೆಗಳ ಚುನಾವಣೆಗಳಲ್ಲೂ ಈ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. 

ಮತದಾರನಿಗೆ ಗೊತ್ತುಮಾಡಿದ ಮತಗಟ್ಟೆಗೆ ಮತ ನೀಡಲು ಹೋದಾಗ ಚುನಾವಣಾಧಿಕಾರಿ ಅವನ ಹೆಸರು, ವಯಸ್ಸು, ವಿಳಾಸ ಇತ್ಯಾದಿಗಳನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿ ಅವನನ್ನು  ಮತನೀಡಿಕೆಯ ರಹಸ್ಯ ಸ್ಥಳಕ್ಕೆ ಕಳುಹಿಸುತ್ತಾರೆ. ಅಲ್ಲಿ ಇವಿಎಂ ಯಂತ್ರ ಇಡಲಾಗಿರುತ್ತದೆ, ಅಲ್ಲಿ ಆತ ಮತ ನೀಡಬೇಕು. ಆ ಪ್ರಕ್ರಿಯೆ ಯಾರಿಗೂ ಕಾಣದಂತೆ ವ್ಯವಸ್ಥೆ ಮಾಡಲಾಗಿರುತ್ತದೆ. ಈ ಮತದಾನ ಗೌಪ್ಯತೆ ನಿಯಮ ಭಾರತದಲ್ಲಿ ಜಾರಿಯಲ್ಲಿದ್ದರೂ ಕೆಲವರು ಈ ನಿಯಮ ಉಲ್ಲಂಘನೆ ಮಾಡುತ್ತಾರೆ. ಇದೀಗ ಜನಪ್ರತಿನಿಧಿಗಳೇ ನಿಯಮ ಉಲ್ಲಂಘನೆ ಮಾಡುತ್ತಿರುವುದು ವಿಪರ್ಯಾಸವೇ ಸರಿ..

Tags:    

Similar News