Actor Darshan Case | ಜೈಲಿನಲ್ಲಿ ಅಪ್ಪನ ಸ್ಥಿತಿ ಕಂಡು ದರ್ಶನ್ ಮಗ ವಿನೀಶ್ ಕಣ್ಣೀರು
ದರ್ಶನ್ ಭೇಟಿಯಾಗಿ ವಿಜಯಲಕ್ಷ್ಮಿ ಧೈರ್ಯ ತುಂಬಿ ಬಂದಿದ್ದರು. ಈ ವೇಳೆ ಜೈಲಿನಲ್ಲಿ ಅಪ್ಪನ ಸ್ಥಿತಿ ಕಂಡು ಮಗ ವಿನೀಶ್ ಕಣ್ಣೀರು ಹಾಕಿದ್ದಾನೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಜೈಲಿನಲ್ಲಿರುವ ದರ್ಶನ್ ಅವರನ್ನು ಈವರೆಗೆ ಮೂರು ಬಾರಿ ಕುಟುಂಬ ಭೇಟಿ ಮಾಡಿದೆ. ಬುಧವಾರ ದರ್ಶನ್ ಪತ್ನಿ, ಮಗ ಸೇರಿದಂತೆ ಕುಟುಂಬಸ್ಥರು ಮತ್ತೊಮ್ಮೆ ಭೇಟಿ ಮಾಡಿದ್ದರು. ದರ್ಶನ್ ಭೇಟಿಯಾಗಿ ವಿಜಯಲಕ್ಷ್ಮಿ ಧೈರ್ಯ ತುಂಬಿ ಬಂದಿದ್ದರು. ಈ ವೇಳೆ ಜೈಲಿನಲ್ಲಿ ಅಪ್ಪನ ಸ್ಥಿತಿ ಕಂಡು ಮಗ ವಿನೀಶ್ ಕಣ್ಣೀರು ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಮಗನನ್ನು ಅಪ್ಪಿಕೊಂಡು ದರ್ಶನ್ ಕೂಡ ಕಣ್ಣೀರು ಹಾಕಿ ಭಾವುಕರಾಗಿದ್ದಾರೆ. ಪತ್ನಿಯ ಬಳಿ ಜೈಲೂಟ ಮಾಡಲು ಆಗುತ್ತಿಲ್ಲ ಎಂದು ದರ್ಶನ್ ಹೇಳಿದ್ದಾರೆ. ವಕೀಲರ ಮೂಲಕ ಕೋರ್ಟ್ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದು ದರ್ಶನ್ಗೆ ವಿಜಯಲಕ್ಷ್ಮಿ ಮಾಹಿತಿ ನೀಡಿದ್ದಾರೆ. ಸದ್ಯ ಮನೆ ಊಟ ಕೊಡುವ ಬಗ್ಗೆ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ಜುಲೈ 18ರಂದು ಈ ಬಗ್ಗೆ ನಿರ್ಧಾರ ಆಗಲಿದೆ.
ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಕೆಲಹೊತ್ತು ದರ್ಶನ್ ಮಾತನಾಡಿಸಿದ್ದಾರೆ. ಮಗನನ್ನು ಕಂಡು ಕೊಂಚ ನಿರಾಳವಾಗಿದ್ದಾರೆ. ಮತ್ತೆ ರಾತ್ರಿಯಾಗುತ್ತಿದ್ದಂತೆ ಮೌನಕ್ಕೆ ಶರಣಾಗಿದ್ದಾರೆ.
ಪ್ರಕರಣದ ಹಿನ್ನಲೆ
ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಆರೋಪಿಗಳಲ್ಲಿ ಒಬ್ಬನಾದ ರಾಘವೇಂದ್ರ ಎಂಬಾತ ರೇಣುಕಾಸ್ವಾಮಿಯನ್ನು ದರ್ಶನ್ ಭೇಟಿ ನೆಪದಲ್ಲಿ ಬೆಂಗಳೂರಿನ ಆರ್ ಆರ್ ನಗರದ ಶೆಡ್‌ಗೆ ಕರೆತಂದಿದ್ದ. ಇದೇ ಶೆಡ್‌ನಲ್ಲಿಯೇ ಜೂನ್ 8 ರಂದು ಆತನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು.
ನಂತರ ದರ್ಶನ್ ಸೂಚನೆ ಮೇರೆಗೆ ರೇಣುಕಾ ಸ್ವಾಮಿಯ ಶವವನ್ನು ಮೋರಿಗೆ ಎಸೆದು ಹೋಗಿದ್ದರು. ಮೋರಿಯಲ್ಲಿ ತೇಲುತ್ತಿದ್ದ ಶವವನ್ನು ಬೀದಿನಾಯಿಗಳು ಕಚ್ಚಿ ಎಳೆದು ತಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿರುವಾಗ ಈ ಕೊಲೆಯ ಹಿಂದಿನ ರೂವಾರಿ ದರ್ಶನ್ ಎಂದು ತಿಳಿದುಬಂದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 11 ರಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣ ಸಂಬಂಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಈಗಾಗಲೇ ಸಾಕಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಅನೇಕ ಸ್ಥಳಗಳಿಗೆ ತೆರಳಿ ಮಹಜರು ನಡೆಸಲಾಗಿದೆ. ಸದ್ಯ ಈ ಪ್ರಕರಣದಲ್ಲಿ ಭಾಗಿಯಾಗಿರುವ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮನೆ ಊಟಕ್ಕೆ ಹೈಕೋರ್ಟ್‌ಗೆ ಅರ್ಜಿ
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಜೈಲೂಟದಿಂದಾಗಿ ಫುಡ್ ಪಾಯಿಸನಿಂಗ್ ಹಾಗೂ ಅತಿಸಾರ ಆಗುತ್ತಿದೆ. ಮನೆಯೂಟ ತರಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ರಿಟ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜುಲೈ 18ಕ್ಕೆ ಮುಂದೂಡಿದೆ.