ಬ್ಲ್ಯಾಕ್ ಮೇಲ್ ಆರೋಪ | ಸುದ್ದಿವಾಹಿನಿ ಮುಖ್ಯಸ್ಥ, ಮಹಿಳೆ ವಿರುದ್ಧ ವಿನಯ್ ಕುಲಕರ್ಣಿ ದೂರು
ಎರಡು ಕೋಟಿ ಹಣ ನೀಡುವಂತೆ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ ಹಾಗೂ ರೈತ ಹೋರಾಟಗಾರ್ತಿ ಮಂಜುಳಾ ಪೂಜಾರ್ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ವಿಜಯ್ ಕುಲಕರ್ಣಿ ಬೆಂಗಳೂರಿನ ಸಂಜಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.;
ತಮ್ಮ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಧಾರವಾಡ ನಗರ ಶಾಸಕ ವಿನಯ್ ಕುಲಕರ್ಣಿ ಅವರು, ಹಣಕ್ಕಾಗಿ ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ಖಾಸಗಿ ಸುದ್ದಿವಾಹಿನಿಯ ಮುಖ್ಯಸ್ಥರೊಬ್ಬರು ಮತ್ತು ರೈತ ಹೋರಾಟಗಾರ್ತಿ ಎಂದು ಪರಿಚಯಿಸಿಕೊಂಡಿದ್ದ ಮಂಜುಳಾ ಪೂಜಾರ್ ಹಾಗೂ ಇತರರ ವಿರುದ್ಧ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2022 ರಲ್ಲಿ ಹಾವೇರಿಯ ಮಂಜುಳಾ ಪೂಜಾರ್ ಎಂಬುವರು ತಾನು ರೈತ ಪರ ಹೋರಾಟಗಾರ್ತಿ ಎಂದು ಹೇಳಿಕೊಂಡು ಕರೆ ಮಾಡಿದ್ದರು. ಇದಾದ ಕೆಲ ದಿನಗಳಲ್ಲಿ ಮಂಜುಳಾ ಪೂಜಾರ್ ವಿರುದ್ಧ ಸುದ್ದಿವಾಹಿನಿಯೊಂದರಲ್ಲಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಕುಟುಕು ಕಾರ್ಯಾಚರಣೆಯ ವರದಿ ಪ್ರಸಾರವಾಗಿತ್ತು. ಆ ನಂತರದಲ್ಲಿ ಮಂಜುಳಾ ಪೂಜಾರ್ ಕರೆ ಮಾಡಿದರೂ ನಾನು ಸ್ವೀಕರಿಸುತ್ತಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಮಂಜುಳಾ ಪೂಜಾರ್ ನನ್ನ ಸಂಪರ್ಕದಲ್ಲಿರಲಿಲ್ಲ. ಹೀಗಿರುವಾಗ ಖಾಸಗಿ ಟಿವಿ ಮುಖ್ಯಸ್ಥ ಹಾಗೂ ಮಂಜುಳಾ ಪೂಜಾರ್ ಒಳಸಂಚು ರೂಪಿಸಿ ನನ್ನ ತೇಜೋವಧೆಗೆ ಯತ್ನಿಸಿದ್ದಾರೆ. ಸೆ.29 ರಂದು ಖಾಸಗಿ ಟಿವಿ ಮುಖ್ಯಸ್ಥ ನನ್ನ ಮೊಬೈಲ್‌ಗೆ ಫೇಸ್ ಟೈಂ ಮೂಲಕ ಕರೆ ಮಾಡಿ, ಮಹಿಳೆಯೊಂದಿಗೆ ವಿಡಿಯೋ ಕರೆ ಮಾಡಿ ಮಾತನಾಡಿರುವ ಸುದ್ದಿ ಪ್ರಸಾರ ಮಾಡುವುದಾಗಿ ಹೇಳಿದರು. ಜೊತೆಗೆ ಫೇಸ್ ಬುಕ್ ಹಾಗೂ ಯೂಟ್ಯೂಬ್ ನಲ್ಲಿ ‘ಕೈ ಶಾಸಕನ ರೇಪ್ ಪ್ರಕರಣ’ ಎಂದು ಪ್ರೋಮೋ ಸಹ ಪ್ರಸಾರ ಮಾಡಿದ್ದರು. ಬಳಿಕ ಎರಡು ಕೋಟಿ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಖಾಸಗಿ ಟಿವಿ ಮುಖ್ಯಸ್ಥನಿಗೆ ಹಣ ನೀಡಲು ಒಪ್ಪದೇ ನಾನು, ವಿಡಿಯೋ ಪ್ರಸಾರಕ್ಕೆ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ತಂದಿದ್ದೆ. ಆದರೂ, ಸುಮ್ಮನಾಗದ ಆತ, ಹಣ ನೀಡದಿದ್ದರೆ ಸುದ್ದಿ ಪ್ರಸಾರ ಮಾಡಿಯೇ ತೀರುತ್ತೇನೆ ಎಂದು ಬೆದರಿಕೆ ಹಾಕಿದ್ದ. ಅದರಂತೆ ಅ.7 ರಂದು ನನ್ನ ಭಾವಚಿತ್ರ ಬಳಸಿ, ಸೃಷ್ಟಿತ ವಿಡಿಯೋ ಹಾಗೂ ದೂರವಾಣಿ ಸಂಭಾಷಣೆ ಪ್ರಸಾರ ಮಾಡಿದ್ದಾರೆ. ಮಂಜುಳಾ ಪೂಜಾರ್ ಅವರನ್ನು ಲೈವ್ನಲ್ಲಿ ಕೂರಿಸಿಕೊಂಡು ನನ್ನ ಮಾನಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ವಿನಯ್ ಕುಲಕರ್ಣಿ ತಿಳಿಸಿದ್ದಾರೆ.
ಈ ಸಂಬಂಧ ಸಂಜಯ ನಗರ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.