ವೇತನ ಕೇಳಿದಕ್ಕೆ 56 ವಾರ್ಡ್ ಅಟೆಂಡರ್‌ ವಜಾಗೊಳಿಸಿದ ವಿಕ್ಟೋರಿಯಾ ಆಸ್ಪತ್ರೆ

ಎರಡು ತಿಂಗಳಿನಿಂದ ಕಾರ್ಮಿಕರಿಗೆ ವೇತನವನ್ನು ಕೊಟ್ಟಿಲ್ಲ. ಆ ಹಿನ್ನೆಲೆಯಲ್ಲಿ ವೇತನ ಕೇಳಿದ್ದಕ್ಕೆ 56 ಮಂದಿಯನ್ನು ಆಡಳಿತ ಮಂಡಳಿ ದಿಢೀರನೆ ಕೆಲಸದಿಂದ ವಜಾ ಮಾಡಿದೆ

Update: 2024-05-11 13:10 GMT
ದಿಢೀರನೆ ಸೇವೆಯಿಂದ ವಜಾಗೊಳಿಸಿರುವ ಕಾರ್ಮಿಕರು ಪ್ರತಿಭಟನೆ ನಡೆಸಿದರು.
Click the Play button to listen to article

ಬೆಂಗಳೂರು: ನಗರದ ಸರಕಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಮಾರು 20-25 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ತಮಗೆ ಎರಡು ತಿಂಗಳಿಂದ ವೇತನ ನೀಡದೇ ಇರುವುದನ್ನು ಪ್ರಶ್ನಿಸಿದ 56 ಮಂದಿ ವಾರ್ಡ್ ಅಟೆಂಡರ್‌ಗಳನ್ನು ದಿಢೀರನೆ ಸೇವೆಯಿಂದ ವಜಾಗೊಳಿಸಲಾಗಿದೆ.

"ಎರಡು ತಿಂಗಳಿನಿಂದ ಕಾರ್ಮಿಕರಿಗೆ ವೇತನವನ್ನು ಕೊಟ್ಟಿಲ್ಲ. ಈ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿಯಲ್ಲಿ ವೇತನ ಕೇಳಿದ್ದಕ್ಕೆ 56 ಮಂದಿಯನ್ನು ದಿಢೀರನೆ ತೆಗೆದು ಹಾಕಲಾಗಿದೆ" ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಇನ್ನು ಈ ಘಟನೆ ಮೇ 8 ರಂದು ನಡೆದಿದ್ದು, ಮಾರ್ಚ್ ಮತ್ತು ಏಪ್ರಿಲ್‌ನ ವೇತನವನ್ನು ಕೊಡದೆ ಅಮಾನುಷವಾಗಿ ಕಾರ್ಮಿಕರನ್ನು ವಜಾಗೊಳಿಸಲಾಗಿದೆ. ವಜಾಗೊಂಡವರಲ್ಲಿ ಹೆಚ್ಚಿನ ಕಾರ್ಮಿಕರು ಮಹಿಳೆಯರಾಗಿದ್ದಾರೆ ಎನ್ನಲಾಗಿದೆ.

ಗುತ್ತಿಗೆ ಕಾರ್ಮಿಕರಾಗಿರುವ ಈ ವಾರ್ಡ್ ಅಟೆಂಡರ್‌ಗಳಲ್ಲಿ ಹಲವರು 25 ವರ್ಷ, 20 ವರ್ಷ, 10 ವರ್ಷ, 7 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ಸುಮಾರು 30 ವರ್ಷಗಳವರೆಗೆ ಸೇವೆ ಸಲ್ಲಿಸಿದ್ದಾರೆ. ಕೊರೋನ ಸಂದರ್ಭದಲ್ಲಿ ಇವರು ಆಸ್ಪತ್ರೆಯ ಸೇವೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು, ಇದೀಗ ಆಸ್ಪತ್ರೆಯ ಈ ದಿಢೀರ್ ನಿರ್ಧಾರ ಕಾರ್ಮಿಕ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ʼʼಕಾರ್ಮಿಕರನ್ನು ವಜಾಗೊಳಿಸುವಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಕ್ರಮಗಳ ಅಕ್ರಮವನ್ನು ಗಮನಿಸಿದ ಉಪ ಕಾರ್ಮಿಕ ಆಯುಕ್ತರು ಮೇ 10 ರಂದು ಕಾರ್ಮಿಕರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಆದರೆ, ಮೇ 10 ರಂದು ಕಾರ್ಮಿಕರು ಕೆಲಸಕ್ಕೆ ಹೋದಾಗ ಕಾರ್ಮಿಕರಿಗೆ ಕೆಲಸ ಮಾಡಲು ಆಡಳಿತ ಮಂಡಳಿ ಅನುಮತಿ ನೀಡಲಿಲ್ಲ. ಕೆಲಸ ಕೇಳಲು ಕಾರ್ಮಿಕರು ಒಂದೆಡೆ ಸೇರಿದಾಗ, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಉಡಾಫೆಯಿಂದ ವರ್ತಿಸಿದ್ದಾರೆ. ಆದರೆ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವವರೆಗೆ ಹೋರಾಟ ಮಾಡಲಾಗುವುದುʼʼ ಎಂದು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್‌ನ ಮೈತ್ರೇಯಿ ದ ಫಡರಲ್‌ ಕರ್ನಾಟಕ್ಕೆ ತಿಳಿಸಿದ್ದಾರೆ.

ಹೋರಾಟಗಾರ ಕಾರ್ಮಿಕರು ಪೊಲೀಸರ ವಶಕ್ಕೆ

ಕಾರಣವೇ ಇಲ್ಲದೇ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿರುವುದನ್ನು ಪ್ರಶ್ನಿಸಿ ನ್ಯಾಯಕ್ಕಾಗಿ ಕರ್ನಾಟಕ ಲೇಬರ್ ಯೂನಿಯನ್ ವಿಕ್ಟೋರಿಯಾ ಘಟಕದ ಆಶ್ರಯದಲ್ಲಿ ಆಸ್ಪತ್ರೆಯ ಬಳಿ ಮೇ 8ರಿಂದ ಪ್ರತಿಭಟನೆ ಕೈಗೊಂಡಿದೆ. 56 ಗುತ್ತಿಗೆ ನೌಕರರನ್ನು ಮರು ಸೇರ್ಪಡೆಗೊಳಿಸುವಂತೆ ಮತ್ತು ಬಾಕಿ ಇರುವ ವೇತನವನ್ನು ತಕ್ಷಣ ನೀಡುವಂತೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ಪೊಲೀಸರು ಶುಕ್ರವಾರ (ಮೇ 10) ಆಸ್ಪತ್ರೆಯ ಆವರಣದಲ್ಲಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಒಂದು ದಶಕದಿಂದ ಆಸ್ಪತ್ರೆಯಲ್ಲಿ ಅಟೆಂಡರ್‌ಗಳು ಮತ್ತು ಸಹಾಯಕರಾಗಿ ಕೆಲಸ ಮಾಡುತ್ತಿದ್ದ ನೌಕರರು ಹೊರಗುತ್ತಿಗೆ ನೌಕರರಾಗಿದ್ದು, ಒಂದು ಏಜೆನ್ಸಿಯ ಟೆಂಡರ್ ಅವಧಿ ಮುಗಿದಿದ್ದು ಹೊಸ ಏಜೆನ್ಸಿಯವರು 56 ಕಾರ್ಮಿಕರನ್ನು ತೆಗೆದು ಹೊಸಬರನ್ನು ಸೇರಿಸಿಕೊಂಡಿದ್ದಾರೆ. ಮೇ 13ರ ಸೋಮವಾರ ಏಜೆನ್ಸಿ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ ಎಂದು ಮೈತ್ರೇಯಿ ತಿಳಿಸಿದ್ದಾರೆ.

Tags:    

Similar News