V.C.Canal | ಹಸಿರು ಚೆಲ್ಲಿದ ಮಂಡ್ಯದ ವಿ.ಸಿ.ನಾಲೆಯ ಇಕ್ಕೆಲಗಳಲ್ಲಿ ಪದೇ ಪದೆ ಸಾವಿನ ಸೂತಕ....

1,523 ಕಿ.ಮೀ. ಉದ್ದದ ವಿತರಣಾ ಜಾಲ ಹೊಂದಿರುವುದು ವಿ.ಸಿ. ನಾಲೆ ವ್ಯಾಪ್ತಿಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ವಿ.ಸಿ ನಾಲೆಯಲ್ಲೇ ಇಷ್ಟೊಂದು ಅವಘಡ ನಡೆಯಲು ಕಾರಣವೇನು ಎಂಬ ವಿಸ್ತೃತ ವರದಿ ಇಲ್ಲಿದೆ.;

Update: 2025-05-09 01:30 GMT

ಮೈಸೂರು, ಮಂಡ್ಯ ಜಿಲ್ಲೆಗಳ 2,01,250 ಎಕರೆ ಭೂಮಿಗೆ ನೀರಾವರಿ ಒದಗಿಸುವ 45.90 ಕಿ.ಮೀ ಉದ್ದದ ವಿಶ್ವೇಶ್ವರಯ್ಯ ನಾಲೆ ಈಗ ಸಾವು-ನೋವುಗಳಿಗೆ ಕಾರಣವಾಗುತ್ತಿದೆ. ಕೆಆರ್‌ಎಸ್‌ ಅಣೆಕಟ್ಟೆಯ ಎಡದಂಡೆಯಿಂದ ಪ್ರಾರಂಭವಾಗಿ ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ, ಮದ್ದೂರು, ಮಳವಳ್ಳಿ ತಾಲ್ಲೂಕುಗಳ ಜನತೆಗೆ ಜೀವಧಾತುವಾದ ನಾಲೆ, ಕಳೆದ ಏಳೆಂಟು ವರ್ಷಗಳಲ್ಲಿ 208 ಕ್ಕೂ ಹೆಚ್ಚು ಜೀವಗಳ ಜಲ ಸಮಾಧಿಗೂ ಕಾರಣವಾಗಿದೆ.

1931 ರಲ್ಲಿ ಕೆಆರ್‌ಎಸ್ ಅಣೆಕಟ್ಟೆ ಪೂರ್ಣಗೊಂಡ ಬಳಿಕ ವಿ.ಸಿ ನಾಲೆ ಕಾಲ ಕಾಲಕ್ಕೆ ಆಧುನೀಕರಣ, ವಿಸ್ತರಣೆಗೊಳ್ಳುತ್ತಾ ಬಂದಿದೆ. 378 ವಿತರಣಾ ನಾಲೆ, ಶಾಖಾ ನಾಲೆ, ಕಿರುಗಾಲುವೆ, ಉಪನಾಲೆ ಹೀಗೆ 1,523 ಕಿ.ಮೀ. ಉದ್ದದ ವಿತರಣಾ ಜಾಲ ಹೊಂದಿರುವುದು ಇದರ ವಿಶೇಷ. ಹೀಗಿರುವ ನಾಲಾ ವ್ಯಾಪ್ತಿಯು ಯಮ ಸ್ವರೂಪಿಯಾಗಿರುವುದಾದರೂ ಯಾಕೆ..? ಪದೇ ಪದೇ ದುರಂತಗಳು ಸಂಭವಿಸುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಯಾಕೆ..? ವಿ.ಸಿ ನಾಲೆಯಲ್ಲಿಯೇ ಇಷ್ಟೊಂದು ಅವಘಡಗಳು ಸಂಭವಿಸುತ್ತಿರುವುದರ ಹಿನ್ನೆಲೆ ಏನು..? ಎನ್ನುವ ಕುರಿತು ಸಾಕಷ್ಟು ಪ್ರಶ್ನೆಗಳು ಎದುರಾಗುತ್ತಲೇ ಇವೆ.


ಮೂರು ವರ್ಷಗಳಲ್ಲಿ ದ್ವಿಶತಕ ದಾಟಿದ ಸಾವಿನ ಸಂಖ್ಯೆ

3,060 ಕ್ಯೂಸೆಕ್ ನೀರು ಹರಿಯುವ ವಿ.ಸಿ ನಾಲೆಯಲ್ಲಿ ನಡೆದಿರುವ ದುರಂತಕ್ಕೆ ದೊಡ್ಡ ಇತಿಹಾಸವೇ ಇದೆ. 1976 ರಲ್ಲಿಯೇ ನಾಲೆಗೆ ಬಸ್ ಉರುಳಿ ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. 2018ರ ನವೆಂಬರ್ ನಲ್ಲಿ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಬಳಿ ಖಾಸಗಿ ಬಸ್ ನಾಲೆಯೊಳಗೆ ಬಿದ್ದು ಬರೋಬ್ಬರಿ 31 ಮಂದಿ ಅಸು ನೀಗಿದ್ದರು. ಈ ವೇಳೆ ದುರಂತದ ಬಗ್ಗೆ ಸಾಕಷ್ಟು ಚರ್ಚೆ ನಡೆದು ಸುರಕ್ಷತಾ ಕ್ರಮ ಕೈಗೊಳ್ಳುವ ಭರವಸೆ ಸಿಕ್ಕರೂ ಅದು ಈವರೆಗೂ ಕಾರ್ಯರೂಪಕ್ಕೆ ಬರಲೇ ಇಲ್ಲ. ಇದೇ ಕಾರಣದಿಂದ ದುರಂತಗಳ ಸರಪಳಿ ಮತ್ತಷ್ಟು ಬಲಿಗಳನ್ನು ಪಡೆಯುತ್ತಿದೆ. 

2023 ರ ಜುಲೈನಲ್ಲಿ ಮಂಡ್ಯದ ತಿಬ್ಬನಹಳ್ಳಿಯಲ್ಲಿ ನಾಲೆಗೆ ಕಾರು ಬಿದ್ದು ಒಬ್ಬರು ಸಾವನ್ನಪ್ಪಿದ್ದರೆ, ಅದೇ ತಿಂಗಳು ಶ್ರೀರಂಗಪಟ್ಟಣದ ಗಾಮನಹಳ್ಳಿಯಲ್ಲಿ ಕಾರು ನಾಲೆಗೆ ಬಿದ್ದು ನಾಲ್ವರು ಪ್ರಾಣಬಿಟ್ಟಿದ್ದರು. 2023 ರ ನವೆಂಬರ್ ನಲ್ಲಿ ಬನಘಟ್ಟ ಬಳಿ ಐವರು ಸಾವು, 2024 ರಲ್ಲಿ ಅವ್ವೇರಹಳ್ಳಿ ಬಳಿ ಟ್ರ್ಯಾಕ್ಟರ್ ಉರುಳಿ ಒಬ್ಬನ ಸಾವು ಸಂಭವಿಸಿತ್ತು. ಹೀಗೆ ನೋಡುತ್ತಾ ಹೋದರೆ ದುರಂತಗಳ ಸರಮಾಲೆ ನಾಲೆ ರೀತಿಯೇ ಸಾಗುತ್ತದೆ.

ಪಿಡಬ್ಲೂಡಿ, ನೀರಾವರಿ ಇಲಾಖೆಗಳು ಕೈ ಜೋಡಿಸಬೇಕು

ವಿ.ಸಿ ನಾಲೆ ದಡದಲ್ಲಿ ಇರುವ ರಸ್ತೆಗಳು ಸಾರ್ವಜನಿಕ ಬಳಕೆಯ ಉದ್ದೇಶದಿಂದ ನಿರ್ಮಾಣ ಮಾಡಿದವಲ್ಲ. ನಾಲೆ ದುರಸ್ತಿ, ವಿತರಣಾ ವ್ಯವಸ್ಥೆಯ ನಿರ್ವಹಣೆ, ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ಓಡಾಟಕ್ಕೆ ಮಾಡಿಕೊಂಡ ರಸ್ತೆಗಳು. ಆದರೆ ನಾಗರಿಕತೆ ಬೆಳೆದಂತೆ, ವಾಹನಗಳ ಸಂಖ್ಯೆ ಹೆಚ್ಚಿದಂತೆ, ಸಂಪರ್ಕ ವ್ಯವಸ್ಥೆ ಬಲಗೊಂಡಂತೆ ನಾಲೆ ದಡದ ರಸ್ತೆಗಳನ್ನು ಸಾರ್ವಜನಿಕರೂ ಬಳಸಲು ಶುರು ಮಾಡಿದರು. ಆದರೆ, ಈ ರಸ್ತೆಗಳಲ್ಲಿ ಸುರಕ್ಷತಾ ಕ್ರಮ, ತಡೆಗೋಡೆ ನಿರ್ಮಾಣ, ನಿರ್ವಹಣೆ ವಿಚಾರದಲ್ಲಿ ಪಿಡಬ್ಲೂಡಿ ಇಲಾಖೆ ಮತ್ತು ನೀರಾವರಿ ಇಲಾಖೆಗಳ ನಡುವೆ ಗೊಂದಲ ಮೊದಲಿನಿಂದಲೂ ಮುಂದುವರಿದಿದೆ. ಈ ಕಾರಣದಿಂದ ದುರಂತಗಳು ಪದೇ ಪದೇ ಸಂಭವಿಸುತ್ತಿವೆ.

ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಮಂಡ್ಯದ ಹಿರಿಯ ಚಿಂತಕ ಕೃಷ್ಣೇಗೌಡ ಟಿ.ಲಿಂಗಯ್ಯ ಅವರು 'ವಿಸಿ ನಾಲೆ ಬದುವಿನಲ್ಲಿ ಇರುವ ರಸ್ತೆಗಳು ಸಾಕಷ್ಟು ತಿರುವುಗಳಿಂದ ಕೂಡಿದ್ದು, ಕಿರಿದಾಗಿಯೂ ಇವೆ. ಪ್ರಾರಂಭದಲ್ಲಿ ಇವುಗಳನ್ನು ನೀರಾವರಿ ಇಲಾಖೆಯ ಬಳಕೆಯ ಉದ್ದೇಶದಿಂದ ನಿರ್ಮಾಣ ಮಾಡಲಾಗಿತ್ತು. ಈಗ ಜನ ಬಳಕೆ ಹೆಚ್ಚಾದ ಬಳಿಕ ಅದಕ್ಕೆ ತಕ್ಕಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಚುನಾವಣೆ ಬಂದಾಗ, ದುರಂತಗಳು ನಡೆದಾಗ ಇದು ಚರ್ಚೆಯಾಗುತ್ತದೆ. ಆದರೆ ಅಧಿಕಾರಿಗಳು, ರಾಜಕಾರಣಿಗಳು ಇಚ್ಛಾಶಕ್ತಿ ಪ್ರದರ್ಶನ ಮಾಡಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು' ಎನ್ನುತ್ತಾರೆ.


ವಿಸಿ ನಾಲೆಯಿಂದ ಮಂಡ್ಯ ಹಸಿರಾಗಿದೆ, ಅದು ಕೆಂಪಾಗುವುದು ಬೇಡ

ನಾಲೆ ನಿರ್ಮಾಣ ಮಾಡಿದಾಗ ಅದರ ಮೇಲೆ ಏರಿ ಬಂತು. ಏರಿಯಲ್ಲಿ ಹೊಲ, ಗದ್ದೆಗಳಿಗೆ ಹೋಗುವ ಜನ ನಡೆದುಕೊಂಡೋ, ಎತ್ತಿನಗಾಡಿಯಲ್ಲೋ, ಸೈಕಲ್ ಮೇಲೋ ಹೋಗುತ್ತಿದ್ದರು. ಆದರೆ ಈಗ ಅದೆಲ್ಲಾ ಬದಲಾಗಿದೆ. ಒಂದು ಊರಿನಿಂದ ಮತ್ತೊಂದು ಊರಿಗೆ ಸಂಪರ್ಕಿಸಲು ಮುಖ್ಯ ದಾರಿಗಳು ಇದ್ದರೂ ಈ ನಾಲೆಯ ಮೇಲಿನ ಅಡ್ಡ ದಾರಿಯೇ ಇಂದು ಹೆಚ್ಚಾಗಿ ಬಳಕೆಯಲ್ಲಿದೆ. ಇದೂ ಒಂದು ನಿಟ್ಟಿನಲ್ಲಿ ದುರಂತಗಳಿಗೆ ಕಾರಣ ಎನ್ನುತ್ತಾರೆ ನಟಿ ಅಕ್ಷತಾ ಪಾಂಡವಪುರ.

ವಿ.ಸಿ ನಾಲೆ ದುರಂತ, ಕಾರಣ, ಪರಿಹಾರಗಳ ಬಗ್ಗೆ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, ನನಗೆ ಈಗಲೂ ಕ್ಯಾತನಹಳ್ಳಿ-ಅರಳೆಕುಪ್ಪೆ ನಡುವಿನ ವಿ.ಸಿ ನಾಲೆಯ ಏರಿ ಮೇಲೆ ಓಡಾಡಲು ಭಯವಾಗುತ್ತದೆ. ಸೂಕ್ತ ಸೂಚನಾಫಲಕ ಇಲ್ಲವೇ ಇಲ್ಲ. ತಿರುವು ಬಂದರೆ ತಕ್ಷಣ ಬ್ರೇಕ್ ಹಾಕಬೇಕು. ಹೊಸಬರು ಇಲ್ಲಿ ಸಂಚರಿಸುವುದೇ ಕಷ್ಟ. ಹೀಗಾಗಿ ಸೂಚನಾಫಲಕ ಹಾಕಿದರೆ ಅನಾಹುತ ತಪ್ಪಿಸಬಹುದು. ನಾಲೆ ದುರಸ್ತಿ ಮಾಡುವಾಗ ಏರಿಯನ್ನು ಭದ್ರ ಮಾಡುವ ಕಡೆಗೂ ಗಮನ ಕೊಡಬೇಕು. ಇಡೀ ಮಂಡ್ಯವನ್ನು ಹಸಿರಾಗಿಸಿರುವ ವಿ.ಸಿ ನಾಲೆ ದುರಂತಗಳ ಹಣೆಪಟ್ಟಿ ಹೊತ್ತು ಕೆಂಪಾಗುವುದು ಬೇಡ. ದುರಸ್ತಿ ಗುತ್ತಿಗೆ ಪಡೆದವರು ಮಣ್ಣು ಮಾರಿಕೊಳ್ಳುವ ಕೆಲಸವನ್ನೂ ಮಾಡುತ್ತಿದ್ದಾರೆ. ಇದೆಲ್ಲವನ್ನೂ ಸ್ಥಳೀಯರು ಒಟ್ಟಾಗಿ ಪ್ರಶ್ನೆ ಮಾಡಿದರೆ ಪರಿಹಾರ ಸಾಧ್ಯವಿದೆ ಎನ್ನುತ್ತಾರೆ.


ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ

ಮೊನ್ನೆ ವಿ.ಸಿ ನಾಲೆಗೆ ಬಿದ್ದು ಮೂವರು ಸಾವನ್ನಪ್ಪಿದ್ದು, ಅಪಘಾತದಿಂದಾಗಿ ಅಲ್ಲ. ಬದಲಾಗಿ ಅದು ಆತ್ಮಹತ್ಯೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಜಿಲ್ಲಾಡಳಿತ ಈಗಾಗಲೇ ವಿ.ಸಿ ನಾಲೆಯ ತಿರುವುಗಳಲ್ಲಿ ಅಪಘಾತ ನಡೆದ ಸ್ಥಳಗಳಲ್ಲಿ, ಸಂಭವನೀಯ ಅಪಘಾತ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಆರಂಭಿಸಿದೆ. ರಸ್ತೆಗಳಲ್ಲಿ ಸೂಚನಾಫಲಕವನ್ನೂ ಅಳವಡಿಸುತ್ತಿದ್ದೇವೆ. ವಾಹನ ಸವಾರರು ನಿಧಾನವಾಗಿ ಚಲಿಸಬೇಕು. ಮುಂದಿನ ದಿನಗಳಲ್ಲಿ ಅಪಘಾತಗಳು ಸಂಭವಿಸದ ರೀತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂಬುದಾಗಿ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.


ಶೇ 30 ರಷ್ಟು ಕೆಲಸ ಆಗಿದೆ, ಉಳಿಕೆ ಶೀಘ್ರವಾಗಿ ಆಗಲಿದೆ

ವಿ.ಸಿ ನಾಲೆಯ ದಂಡೆಯ ರಸ್ತೆಯನ್ನು ಈಗಾಗಲೇ ಸರ್ವೆ ಮಾಡಿಸಿ ʼಬ್ಲಾಕ್ ಸ್ಪಾಟ್‌ʼಗಳ ಗುರುತು ಮಾಡಲಾಗಿದೆ. ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಈಗ ಶೇ 30ರಷ್ಟು ಕೆಲಸ ಪೂರ್ಣಗೊಂಡಿದ್ದು, ಕೂಡಲೇ ಉಳಿಕೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಮೀಸಲು ಇಟ್ಟಿರುವ ಅನುದಾನ ಬಳಕೆ ಮಾಡಿಕೊಂಡು ಕೆಲಸ ಮಾಡಿಸುತ್ತೇವೆ ಎನ್ನುವ ಮಾಹಿತಿಯನ್ನು ಮಾಧ್ಯಮಗಳಿಗೆ ಪಾಂಡವಪುರ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದ್ದಾರೆ.

ಅಲ್ಲಲ್ಲಿ ತಡೆಗೋಡೆ ನಿರ್ಮಾಣ

ಪಾಂಡವಪುರ ತಾಲ್ಲೂಕಿನ ಮಾಚಳ್ಳಿ ಗ್ರಾಮದಲ್ಲಿ ವಿ.ಸಿ ನಾಲೆ ದಡದಲ್ಲಿ ಎರಡೂವರೆ ಕಿ.ಮೀ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಇದೇ ರೀತಿ ದುದ್ದ, ತಿಬ್ಬನಹಳ್ಳಿ, ಬನಘಟ್ಟ, ಗಾಮನಹಳ್ಳಿ, ಕನಗನಮರಡಿ, ಮಣಿಗೆರೆ, ಅವ್ವೇರಹಳ್ಳಿ ಸೇರಿ ಹಲವು ಅಪಾಯಕಾರಿ ಜಾಗಗಳಲ್ಲಿ ಅವಶ್ಯಕವಾಗಿ ತಡೆಗೋಡೆ ನಿರ್ಮಾಣ ಮಾಡಬೇಕು ಎನ್ನುವ ಆಗ್ರಹ ಗ್ರಾಮಸ್ಥರಿಂದ ಕೇಳಿ ಬರುತ್ತಲೇ ಇದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ್ ಅವರೊಂದಿಗೆ ಒಂದು ಸುತ್ತಿನ ಸಭೆ ಮಾಡಿದ್ದು, ಅಗತ್ಯ ಇರುವ ಕಡೆ ತುರ್ತಾಗಿ ತಡೆಗೋಡೆ ನಿರ್ಮಿಸಿ, ಸೂಚನಾಫಲಕ ಅಳವಡಿಸಿ ಎಂದು ಸೂಚನೆ ನೀಡಿದ್ದಾರೆ.‌ ಇದು ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ ಎನ್ನುವ ಆಶಯ ಸ್ಥಳೀಯರದ್ದು.

ಒಟ್ಟಾರೆ ಬಹುತೇಕ ಬರಡಾಗಿದ್ದ ಮಂಡ್ಯದ ಹೆಚ್ಚಿನ ಭಾಗಕ್ಕೆ ನೀರುಣಿಸಿ ಹಸಿರಾಗಿಸಿದ ವಿ.ಸಿ ನಾಲೆ ಈಗ ದುರಂತಗಳಿಂದ ಹೆಸರಾಗುತ್ತಿರುವುದು ವಿಷಾದನೀಯ. ಕಳೆದ ವರ್ಷ ನಾಲೆ ನವೀಕರಣಕ್ಕೆ 330 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆಯಾಗಿದೆ. ಹಂತ ಹಂತವಾಗಿ ನಾಲೆಯ ಉನ್ನತೀಕರಣ, ದುರಸ್ತಿಯೂ ಆಗುತ್ತಿದೆ. ಇದರೊಂದಿಗೆ ಪಿಡಬ್ಲೂಡಿ ಹಾಗೂ ನೀರಾವರಿ ಇಲಾಖೆ ಒಟ್ಟಾಗಿ ತಡೆಗೋಡೆ ನಿರ್ಮಾಣ, ಸೂಚನಾಫಲಕ ಅಳವಡಿಕೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.



Tags:    

Similar News