ವಾಲ್ಮೀಕಿ ನಿಗಮ ಹಗರಣ: ಮತ್ತೋರ್ವ ಆರೋಪಿಯ ಬಂಧನ
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.;
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಸಾಯಿತೇಜ ಎಂಬುವರ ಹೆಸರು ಚಂದ್ರಶೇಖರ್ ಡೆತ್ನೋಟ್ನಲ್ಲಿ ಇತ್ತು. ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ಸಾಯಿತೇಜನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
ಇವರ ಬಳಿ ಹಣಕಾಸು ವರ್ಗಾವಣೆ ಸಂಬಂಧದ ಕೆಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂಬುವುದು ತಿಳಿಬಂದಿದೆ. ಆತ್ಮಹತ್ಯೆಗೆ ಶರಣಾದ ನಿಗಮದ ಅಧಿಕಾರಿ ಚಂದ್ರಶೇಖರನ್ ಬರೆದಿದ್ದ ಮರಣಪತ್ರದಲ್ಲಿ ಸಾಯಿತೇಜ ಹೆಸರು ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಸಾಯಿತೇಜ ಅವರನ್ನು ವಶಕ್ಕೆ ಪಡೆದಿದ್ದಾರೆ.
ಸಾಯಿತೇಜ್ನನ್ನು ಎಸ್ಐಟಿ ಅಧಿಕಾರಿಗಳು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ಸಾಯಿತೇಜ ಈ ಹಿಂದೆ ಬಂಧಿಸಲ್ಪಟ್ಟ ಸತ್ಯನಾರಾಯಣ ವರ್ಮಾ ಸಹಚರನಾಗಿದ್ದು, ಹೈದ್ರಾಬಾದ್ನ ಕೋ-ಆಪರೇಟಿವ್ ಬ್ಯಾಂಕ್ ವೊಂದರಲ್ಲಿ ನಕಲಿ ಖಾತೆ ತೆರೆಯುವಲ್ಲಿ ಈ ಇಬ್ಬರದ್ದು ಪ್ರಮುಖ ಪಾತ್ರವಿದೆ ಎಂಬ ಆರೋಪ ಕೇಳಿಬಂದಿದೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.