ವಾಲ್ಮೀಕಿ ನಿಗಮ ಹಗರಣ | ಚಾರ್ಜ್‌ಶೀಟ್ ಸಲ್ಲಿಕೆ, ನಾಗೇಂದ್ರ, ದದ್ದಲ್ ಹೆಸರು ಉಲ್ಲೇಖವಿಲ್ಲ!

Update: 2024-08-05 13:20 GMT

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಸೋಮವಾರ (ಆ.5) ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಕೆ ಮಾಡಿದೆ. ಆದರೆ, ಇಲಾಖೆಯ ಮಾಜಿ ಸಚಿವ ನಾಗೇಂದ್ರ ಹೆಸರಾಗಲೀ, ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್​ ಅವರ ಹೆಸರಾಗಲೀ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿಲ್ಲ ಎನ್ನಲಾಗಿದೆ.

ಒಟ್ಟು 12 ಆರೋಪಿಗಳ ವಿರುದ್ಧ ಸುಮಾರು 3 ಸಾವಿರ ಪುಟಗಳ ಚಾರ್ಜ್‌ಶೀಟ್‌ನ್ನು ಎಸ್‌ಐಟಿ, ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಪ್ರಕರಣದಲ್ಲಿ ಮೊದಲು ಬಂಧನವಾಗಿರುವ ಆರೋಪಿಗಳ ವಿರುದ್ಧ ಮಾತ್ರ ಚಾರ್ಜ್‌ಶೀಟ್‌​​ ಸಲ್ಲಿಸಲಾಗಿದೆ.

ಚಾರ್ಜ್‌ಶೀಟ್‌ನಲ್ಲಿ ಏನಿದೆ?

ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಅಧಿಕಾರಿಗಳು ಪ್ರಥಮ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಒಟ್ಟು ಮೂರು ಸಾವಿರದ ಪುಟಗಳ ಚಾರ್ಜ್‌ಶೀಟ್‌ನಲ್ಲಿ ಹಣ, ಚಿನ್ನ, ಕಾರು ಸೇರಿ 50 ಕೋಟಿ ರೂಪಾಯಿ ಜಪ್ತಿ ಮಾಡಿರುವುದಾಗಿ ಎಸ್​ಐಟಿ ಉಲ್ಲೇಖಿಸಿದೆ. ನಗದು- 16.83 ಕೋಟಿ ರೂಪಾಯಿ, 11 ಕೋಟಿ 70 ಲಕ್ಷ ಮೌಲ್ಯದ 16.252 ಕೆ.ಜಿ ಚಿನ್ನ, 4.51 ಕೋಟಿ ಮೌಲ್ಯದ ಲ್ಯಾಂಬರ್ಗಿನಿ ಹಾಗೈ, ಮರ್ಸಿಡೀಸ್ ಬೆಂಜ್ ಕಾರು, ಬ್ಯಾಂಕ್ ಖಾತೆಯಿಂದ 3.19 ಕೋಟಿ ರೂ., 13.72 ಕೋಟಿ ರೂ. ನಗದು ಫ್ರೀಜ್ ಸೇರಿದಂತೆ ಒಟ್ಟು 49.96 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಸತ್ಯನಾರಾಯಣ ವರ್ಮಾ( ಹೈದರಾಬಾದ್), ಪದ್ಮನಾಭ (ವ್ಯವಸ್ಥಾಪಕ), ಪರುಶುರಾಮ್ (ಲೆಕ್ಕಾಧಿಕಾರಿ), ನೆಕ್ಕುಂಟಿ ನಾಗರಾಜ್ (ನಾಗೇಂದ್ರ ಆಪ್ತ), ನಾಗೇಶ್ವರ್ ರಾವ್(ನೆಕ್ಕುಂಟಿ ನಾಗರಾಜ್ ಸಂಬಂಧಿ), ಸತ್ಯನಾರಾಯಣ ಇಟ್ಕಾರಿ ತೇಜಾ (ಫಸ್ಟ್ ಫೈನಾನ್ಸ್ ಅಧ್ಯಕ್ಷ), ಜಗದೀಶ್ (ಉಡುಪಿ), ತೇಜಾ ತಮ್ಮಯ್ಯ(ಬೆಂಗಳೂರು), ಪಿಟ್ಟಲ ಶ್ರೀನಿವಾಸ್ ಗಚ್ಚಿಬೌಲಿ(ಆಂಧ್ರ ಪ್ರದೇಶ), ಸಾಯಿತೇಜ(ಹೈದರಾಬಾದ್) ಸೇರಿ ಒಟ್ಟು 12 ಆರೋಪಿಗಳ ಹೆಸರು ಉಲ್ಲೇಖವಾಗಿದೆ. ಆದರೆ, ಈ ದೋಷಾರೋಪಪಟ್ಟಿಯಲ್ಲಿ ಇಲಾಖೆಯ ಸಚಿವರಾಗಿದ್ದ ಮಾಜಿ ಸಚಿವ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷರಾಗಿದ್ದ ಶಾಸಕ ಬಸನಗೌಡ ದದ್ದಲ್ ಅವರ ಹೆಸರಿಲ್ಲ ಎನ್ನಲಾಗಿದೆ.

Tags:    

Similar News