ವಾಲ್ಮೀಕಿ ನಿಗಮ ಹಗರಣ | ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ: ಸಿದ್ದು ಸರ್ಕಾರದ ಮೊದಲ ವಿಕೆಟ್ ಪತನ
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಗುರುವಾರ ಸಂಜೆ ವಿಧಾನಸೌಧದ ತಮ್ಮ ಅಧಿಕೃತ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ನಾಗೇಂದ್ರ, ತಮ್ಮ ರಾಜೀನಾಮೆಯ ವಿಷಯವನ್ನು ಘೋಷಿಸಿದರು. ಸಂಜೆ 7.30 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಸಮಯ ಕೋರಿದ್ದು, ಆ ವೇಳೆ ರಾಜೀನಾಮೆ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
"ಹಗರಣದಲ್ಲಿ ತಮ್ಮ ಪಾತ್ರವೇನೂ ಇಲ್ಲ. ಅಧಿಕಾರಿಗಳ ಮಟ್ಟದಲ್ಲಿ ಏನು ನಡೆದಿದೆ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ. ಆದರೆ, ಪ್ರತಿಪಕ್ಷಗಳು ಪ್ರಕರಣದಲ್ಲಿ ನನ್ನ ಹೆಸರು ಎಳೆದು ತಂದಿವೆ. ಮುಖ್ಯಮಂತ್ರಿಗಳು ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಜನರ ಹಿತಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿ ಜನರ ಬದುಕು ಸುಧಾರಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಈ ಪ್ರಕರಣದಿಂದಾಗಿ ಮುಖ್ಯಮಂತ್ರಿಗಳಿಗೆ, ಎಐಸಿಸಿ ಅಧ್ಯಕ್ಷರಾದ ಖರ್ಗೇ ಸಾಹೇಬರಿಗೆ ಯಾವುದೇ ಮುಜಗರವಾಗಬಾರದು. ನಮ್ಮ ಸರ್ಕಾರ ಮತ್ತು ಪಕ್ಷಕ್ಕೆ ತೊಂದರೆಯಾಗಬಾರದು ಎಂಬ ಹಿನ್ನೆಲೆಯಲ್ಲಿ ನಾನು ಸ್ವಯಂ ಪ್ರೇರಿತನಾಗಿ ರಾಜೀನಾಮೆ ನೀಡುತ್ತಿದ್ದೇನೆ" ಎಂದು ಸಚಿವ ನಾಗೇಂದ್ರ ಹೇಳಿದರು.
"ನಾನು ಯಾರ ಒತ್ತಡದಿಂದಾಗಿ ರಾಜೀನಾಮೆ ನೀಡುತ್ತಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿ ಎಂಬ ಕಾರಣಕ್ಕೆ ನಾನೇ ಸ್ವಯಂಪ್ರೇರಿತನಾಗಿ ರಾಜೀನಾಮೆ ನೀಡುತ್ತಿದ್ದೇನೆ. ಪ್ರಕರಣದ ತನಿಖೆಗೆ ಸಹಕರಿಸುತ್ತೇನೆ. ತನಿಖೆಯಲ್ಲಿ ನಿರ್ದೋಷಿಯಾಗಿ ನಾನು ಬರುತ್ತೇನೆ, ಮತ್ತೆ ಸಚಿವ ಸಂಪುಟಕ್ಕೆ ಸೇರುತ್ತೇನೆ. ನನ್ನ ಅಭಿಮಾನಿಗಳು, ಕ್ಷೇತ್ರದ ಮತದಾರರು ರಾಜೀನಾಮೆ ನೀಡಬಾರದು ಎಂದು ಒತ್ತಾಯಿಸಿದರೂ ನಾನು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ. ವಾಲ್ಮೀಕಿ ನಿಗಮದ ಅವ್ಯವಹಾರದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಅದರಲ್ಲಿ ನನ್ನ ಪಾತ್ರವೇನೂ ಇಲ್ಲ. ತನಿಖೆಗೆ ಅಡ್ಡಿಯಾಗಬಾರದು ಎಂಬ ಕಾರಣಕ್ಕಷ್ಟೇ ನೈತಿಕತೆಯಿಂದ ರಾಜೀನಾಮೆ ನೀಡುತ್ತಿದ್ದೇನೆ" ಎಂದು ನಾಗೇಂದ್ರ ಸ್ಪಷ್ಟಪಡಿಸಿದರು.
ಏನಿದು ಬಹುಕೋಟಿ ಹಗರಣ?
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಬಳಿಕ ಬಹುಕೋಟಿ ಹಗರಣ ಬೆಳಕಿಗೆ ಬಂದಿತ್ತು. ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ನಿಗಮದ 90 ಕೋಟಿ ಖಾಸಗಿ ಕಂಪನಿಗಳು ಮತ್ತು ವ್ಯಕ್ತಿಗಳ ಖಾತೆಗಳಿಗೆ ಅಕ್ರಮ ವರ್ಗಾವಣೆ ಆಗಿದೆ. ಆ ಅಕ್ರಮದಲ್ಲಿ ತಮ್ಮ ಪಾತ್ರವಿಲ್ಲ. ಎಲ್ಲವೂ ನಿಗಮದ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳ ಸೂಚನೆಯಂತೆ ಆಗಿದೆ ಎಂದು ಬರೆಯಲಾಗಿತ್ತು. ಅಲ್ಲದೆ ತಮ್ಮ ಆತ್ಮಹತ್ಯೆಗೆ ಪ್ರಕರಣವೇ ಕಾರಣವೆಂದು, ನಿಗಮದ ಎಂಡಿ ಸೇರಿದಂತೆ ಐದು ಮಂದಿಯನ್ನು ಹೆಸರಿಸಿ, ಅವರೇ ಸಾವಿಗೆ ನೇರ ಹೊಣೆ ಎಂದು ಹೇಳಿದ್ದರು.
ವಾಲ್ಮೀಕಿ ನಿಗಮದಿಂದ 90 ಕೋಟಿ ಮೊತ್ತವನ್ನು ಯೂನಿಯನ್ ಬ್ಯಾಂಕ್ ವಸಂತ ನಗರ ಶಾಖೆಗೆ ವರ್ಗಾಯಿಸಲಾಗಿತ್ತು. ಬಳಿಕ ಅಲ್ಲಿಂದ ಹೈದರಬಾದ್ ನ ಫಸ್ಟ್ ಫೈನಾನ್ಸ್ ಕೋ ಅಪರೇಟಿವ್ ಸೊಸೈಟಿಗೆ ಸೇರಿದ 18 ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು ಎಂಬ ಆರೋಪ ಇದೆ.
ಪ್ರಕರಣದ ತನಿಖೆಗೆ ಈ ಮುನ್ನ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು. ಆದರೆ, ಅಕ್ರಮದ ಮೊತ್ತ ಮೂರು ಕೋಟಿಗೂ ಅಧಿಕ ಇರುವುದರಿಂದಾಗಿ ಇದೀಗ ಬುಧವಾರದಿಂದ ಸಿಬಿಐ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ಸಿಬಿಐ ತನಿಖೆ ಆರಂಭವಾಗುತ್ತಿದ್ಧಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು, ಬೀಸುವ ದೊಣ್ಣೆಯಿಂದ ಪಾರಾಗುವ ಯತ್ನವಾಗಿ ಮತ್ತು ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳ ವಾಗ್ದಾಳಿಯನ್ನು ಎದುರಿಸುವ ಯತ್ನವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಸಚಿವ ಬಿ ನಾಗೇಂದ್ರ ರಾಜೀನಾಮೆಗೆ ಸೂಚಿಸಿದ್ದರು. ಹೈಕಮಾಂಡ್ ಸೂಚನೆ ಮೇರೆಗೆ ಬಿ ನಾಗೇಂದ್ರ ರಾಜೀನಾಮೆಗೆ ಮುಂದಾಗಿದ್ದಾರೆ ಎಂದೂ ಹೇಳಲಾಗಿತ್ತು.