ವಾಲ್ಮೀಕಿ ನಿಗಮ ಹಗರಣ | ಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ
ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ವಶಕ್ಕೆ ಪಡೆದರು.;
ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ವಶಕ್ಕೆ ಪಡೆದುಕೊಂಡರು.
40 ಗಂಟೆ ತಪಾಸಣೆ ಬಳಿಕ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಇಡಿ ವಶಕ್ಕೆ ಪಡೆದಿದೆ. ಹೆಚ್ಚಿನ ವಿಚಾರಣೆಗಾಗಿ ಇಡಿ ಅಧಿಕಾರಿಗಳು ನಾಗೇಂದ್ರ ಅವರನ್ನು ವಶಕ್ಕೆ ಪಡೆದಿದೆ. ರೇಡ್ ವೇಳೆ ಸರಿಯಾದ ಉತ್ತರ ನೀಡದ ಹಿನ್ನಲೆಯಲ್ಲಿ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ವಿಚಾರಣೆಗೆ ಬಳಿಕ ನಾಗೇಂದ್ರ ಅವರನ್ನು ಬಂಧಿಸುವ ಸಾಧ್ಯತೆ ಇದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಕೇಸ್ನಲ್ಲಿ ಈಗಾಗಲೇ ಸಿಬಿಐ ಸಹ ತನಿಖೆ ನಡೆಸಿದೆ. ಇದರ ಬೆನ್ನಲ್ಲೇ ಏಕಾಏಕಿ ಇಡಿ ಅಧಿಕಾರಿಗಳು ಬುಧವಾರ ಕಾಂಗ್ರೆಸ್ ಶಾಸಕರಾದ ನಾಗೇಂದ್ರ ಮತ್ತು ಬಸನಗೌಡ ದದ್ದಲ್ ನಿವಾಸಗಳ ಮೇಲೆ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು.
ಶಾಸಕ ನಾಗೇಂದ್ರ ವಿರುದ್ಧ ಸಚಿವರ ಪರವಾಗಿ ಒತ್ತಡ ಹಾಕಿ ಹಣದ ವಹಿವಾಟು ನಡೆಸಿದ ಆರೋಪ ಕೇಳಿ ಬಂದಿದೆ. ಹೈದರಾಬಾದ್‌ನ ಸತ್ಯನಾರಾಯಣ ವರ್ಮಾನಿಂದ ಬಂದಿದ್ದ ಹಣ ನಾಗೇಂದ್ರ ಪಿಎ ಹರೀಶ್‌ಗೆ ತಲುಪಿತ್ತು ಎನ್ನಲಾಗಿದೆ. ಅಲ್ಲದೆ ಏಪ್ರಿಲ್ ತಿಂಗಳಿನ ಎರಡನೇ ವಾರ ಪದ್ಮನಾಭನಿಂದ ಹರೀಶ್ 25 ಲಕ್ಷ ಹಣ ಪಡೆದಿದ್ದನು. ಈ ಬಗ್ಗೆ ಪಿಎ ಹರೀಶ್‌ಗೆ ಹಣ ನೀಡಿದ್ದಾಗಿ ಖುದ್ದು ಪದ್ಮನಾಭ್ ಹೇಳಿಕೆ ನೀಡಿದ್ದರು.
ನಾಗೇಂದ್ರ ಪರ ಹವಾಲಾ ಹಣ ಮತ್ತು ಚಿನ್ನದ ಬಿಸ್ಕೆಟ್ ಪಡೆದ ಆರೋಪ ಇದ್ದು, ಮಾಜಿ ಸಚಿವ ನಾಗೇಂದ್ರ ಪರ 50ರಿಂದ 60 ಕೋಟಿ ವ್ಯವಹಾರ ನಡೆದಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆ ನಡೆಸಲು ಹರೀಶ್‌ನನ್ನು ಇಡಿ ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಇಡಿ ಅಧಿಕಾರಿಗಳು ನಾಗೇಂದ್ರ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.