ವಾಲ್ಮೀಕಿ ನಿಗಮ ಹಗರಣ | ಜು.18ರವರೆಗೆ ಮಾಜಿ ಸಚಿವ ನಾಗೇಂದ್ರ ED ಕಸ್ಟಡಿಗೆ

Update: 2024-07-13 06:50 GMT

ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡ ಇಲಾಖೆ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಶುಕ್ರವಾರ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಶನಿವಾರ(ಜು.13) ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಾಗಿದ್ದು, ಜುಲೈ 18ರವರೆಗೆ ಆರು ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ನ್ಯಾ.ಸಂತೋಷ್​ ಗಜಾನನ ಭಟ್​ ಆದೇಶ ಹೊರಡಿಸಿದ್ದಾರೆ.

ಬುಧವಾರ ಬೆಳಿಗ್ಗೆಯೇ ನಾಗೇಂದ್ರ, ಬಸನಗೌಡ ದದ್ದಲ್ ಸೇರಿ ಹಲವರ ನಿವಾಸಗಳು ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬುಧುವಾರ ಬೆಳಿಗ್ಗೆಯಿಂದ ಗುರುವಾರ ರಾತ್ರಿವರೆಗೂ ನಿರಂತರ 48 ಗಂಟೆಗಳ ಕಾಲ ನಾಗೇಂದ್ರರ ಡಾಲರ್ಸ್ ಕಾಲೋನಿಯಲ್ಲಿರುವ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿತ್ತು. ಗುರುವಾರ ರಾತ್ರಿ ದಾಳಿ ಮುಗಿಸಿ ತೆರಳಿದ್ದ ಇಡಿ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ನಾಗೇಂದ್ರ ನಿವಾಸಕ್ಕೆ ಪುನಃ ಬಂದು ನಾಗೇಂದ್ರ ಅವರನ್ನು ವಶಕ್ಕೆ ಪಡೆದು ಬಳಿಕ ಅಧಿಕೃತ ಬಂಧನ ಮಾಡಿದ್ದರು.

ಬಂಧನದ ಬಳಿಕ ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಾಯಿತು. ಬಿ.ನಾಗೇಂದ್ರರನ್ನು ಇಡಿ ಕಚೇರಿಯಿಂದ ಕರೆದೊಯ್ದು ಬೆಂಗಳೂರಿನ ಸಂಪಿಗೆಹಳ್ಳಿಯ ನ್ಯಾಯಾಧೀಶರ ನಿವಾಸದಲ್ಲಿ ಜಡ್ಜ್​​ ಎದುರು ಹಾಜರುಪಡಿಸಲಾಗಿದ್ದು ಜುಲೈ 18ರವರೆಗೆ ಇಡಿ ಕಸ್ಟಡಿಗೆ ನೀಡಿ ನ್ಯಾ.ಸಂತೋಷ್​ ಗಜಾನನ ಭಟ್​ ಆದೇಶ ಹೊರಡಿಸಿದ್ದಾರೆ.

ರಾಜಕೀಯ ಅಸ್ತ್ರವಾಗಬಾರದು: ಡಾ ಜಿ ಪರಮೇಶ್ವರ್

ಈ ಘಟನೆ ಸಂಬಂಧ ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ʻʻನಿಗಮದ ಅಕ್ರಮದ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ಮಾಡುತ್ತಿದಾರೆ. ಇಡಿ ಅಧಿಕಾರಿಗಳು ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತಾರೆ. ಮಾಹಿತಿಗಳ ಆಧಾರದ ಮೇಲೆ ಬಿ.ನಾಗೇಂದ್ರರನ್ನು ಬಂಧಿಸಿದ್ದಾರೆ. ರಾಜಕೀಯವಾಗಿ ಇದನ್ನು ಉಪಯೋಗಿಸಬಾರದು. ಕೇಂದ್ರದ ತನಿಖಾ ಸಂಸ್ಥೆಗಳು ರಾಜಕೀಯ ಅಸ್ತ್ರಗಳಾಗಬಾರದು. ತನಿಖೆಗೆ ನಮ್ಮದೇನು‌ ತಕರಾರು ಇಲ್ಲʼʼ ಎಂದು ಹೇಳಿದ್ದಾರೆ.

ʻʻನಾವೂ ಸಹ ಪ್ರಕರಣದ​ ತನಿಖೆಗೆ ಎಸ್​ಐಟಿ ರಚನೆ ಮಾಡಿದ್ದೇವೆ. ನಾಗೇಂದ್ರ, ದದ್ದಲ್‌ ಅವರನ್ನು ಕರೆದು ಎಸ್​ಐಟಿ ವಿಚಾರಣೆ ನಡೆಸಿದೆ. ಸಿಬಿಐ, ಇಡಿ ರಾಜಕೀಯ ಪಕ್ಷಗಳ ರೀತಿ ಕೆಲಸ ಮಾಡಬಾರದು. ದದ್ದಲ್ ಎಲ್ಲೂ ಹೋಗಿಲ್ಲ, ಇಲ್ಲೇ ಓಡಾಡಿಕೊಂಡು ಇದ್ದಾರೆʼʼ ಎಂದರು.

Tags:    

Similar News