ವಾಲ್ಮೀಕಿ ನಿಗಮ ಹಗರಣ| ಮಾಜಿ ಸಚಿವ ಬಿ.ನಾಗೇಂದ್ರ ಬಂಧನ

Update: 2024-07-12 13:18 GMT

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಸತತ 7 ಗಂಟೆ ವಿಚಾರಣೆ ಬಳಿಕ ಮಾಜಿ ಸಚಿವ ಬಿ.ನಾಗೇಂದ್ರರನ್ನು  ಜಾರಿ ನಿರ್ದೇಶನಾಲಯ (ಇಡಿ) ಬಂಧನ ಮಾಡಿದೆ.  ಮಾಜಿ ಸಚಿವರನ್ನು ಕೋರ್ಟ್‌ಗೆ ಹಾಜರುಪಡಿಸಲು ಇಡಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಾಗೇಂದ್ರ ಅವರು ಈ ಹಿಂದೆ ಅಕ್ರಮ ಗಣಿ ಹಗರಣ  ಪ್ರಕರಣಕ್ಕೆ ಸಂಬಂಧಿಸಿ  2013ರಲ್ಲಿ  ಸಿಬಿಐ ನಿಂದ ಬಂಧನಕ್ಕೆ ಒಳಗಾಗಿದ್ದರು. ಬಳಿಕ  2014ರ ಡಿಸೆಂಬರ್ ನಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ಜಾಮೀನಿನ ಆಧಾರದ ಮೇಲೆ ನಾಗೇಂದ್ರ ಜೈಲಿಂದ ಬಿಡುಗಡೆಯಾಗಿದ್ದರು. ಈಗ ಎರಡನೇ ಬಾರಿ ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿ ಕೇಂದ್ರದ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದಾರೆ.

ನಿರಂತರ 40 ಗಂಟೆಗಳ ತಪಾಸಣೆ ಹಾಗೂ ತನಿಖೆಯ ಬಳಿಕ, ವಾಲ್ಮೀಕಿ ನಿಗಮ ಹಗರಣ ಕುರಿತು ಹೆಚ್ಚಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಶುಕ್ರವಾರ ಬೆಳಗ್ಗೆ ವಶಕ್ಕೆ ಪಡೆಯಲಾಗಿತ್ತು.

ವಾಲ್ಮೀಕಿ ನಿಗಮದಲ್ಲಿ ನಡೆದ 185 ಕೋಟಿ ರೂಪಾಯಿಗಳ ಹಗರಣದ ಬಗ್ಗೆ ಯಾವುದೇ ಸುಳಿವು ತಮಗಿಲ್ಲ ಎಂದೇ ನಾಗೇಂದ್ರ ಹೇಳಿದ್ದರು. ಆದರೆ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್‌ ಹೇಳಿಕೆಯಿಂದಾಗಿ ನಾಗೇಂದ್ರ ಹೇಳಿಕೆಯ ಬಗ್ಗೆ ಅನುಮಾನ ಮೂಡಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ಕರೆದೊಯ್ಯಲಾಗಿತ್ತು. ಇದೀಗ ಸುದೀರ್ಘ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ.

ಬೆಂಗಳೂರಿನ ಇಡಿ ಕಚೇರಿಯಲ್ಲಿ ಅಧಿಕಾರಿಗಳು ಅವರನ್ನು ಪ್ರಶ್ನಿಸಲಾಗಿತ್ತು. ನಾಗೇಂದ್ರ ಸಿಎ ಹರೀಶ್‌ ಕೂಡ ಗುರುವಾರದಿಂದ ಇಡಿ ವಶದಲ್ಲಿದ್ದಾರೆ. ಯೂನಿಯನ್‌ ಬ್ಯಾಂಕ್‌ನಲ್ಲಿ ಸುಳ್ಳು ದಾಖಲೆ ನೀಡಿ ಅಕ್ರಮ ಖಾತೆ ತೆರೆದು ಕೋಟ್ಯಂತರ ರೂಪಾಯಿ ನಿಗಮದ ಹಣವನ್ನು ಅಲ್ಲಿಗೆ ವರ್ಗಾಯಿಸಿದ ಕುರಿತು ಹರೀಶ್‌ ಹೇಳಿಕೆಯಲ್ಲಿ ಕೆಲವು ಸಾಕ್ಷಿಗಳು ದೊರೆತಿವೆ. ಬ್ಯಾಂಕ್‌ ಸಿಸಿಟಿವಿ ರೆಕಾರ್ಡ್‌ಗಳನ್ನು ಚೆಕ್‌ ಮಾಡಿದಾಗಲೂ, ನಾಗೇಂದ್ರ ಸಿಎ ಹಾಗೂ ಶಾಸಕ ದದ್ದಲ್‌ ಸಿಎ ಅಲ್ಲಿಗೆ ಬಂದು ಹೋದ ಕುರಿತು ದಾಖಲೆ ಲಭ್ಯವಾಗಿದೆ. 50 ಲಕ್ಷ ಡೀಲ್‌ ನಡೆಸಲಾಗಿರುವ ಕುರಿತು ಬಂಧಿತರಾಗಿರುವ ಬ್ಯಾಂಕ್‌ ಅಧಿಕಾರಿಗಳು ಬಾಯಿ ಬಿಟ್ಟಿದ್ದಾರೆ. ಹೀಗಾಗಿ ಈಗ ಹೆಚ್ಚಿನ ತನಿಖೆಯ ಉರುಳು ನಾಗೇಂದ್ರ ಕೊರಳಿಗೆ ಸುತ್ತಿಕೊಂಡಿದೆ ಎನ್ನುವ ಮಾಹಿತಿ ಮೂಲಗಳಿಂದ ದೊರಕಿದೆ.

ಬುಧವಾರವಷ್ಟೇ ಮಾಜಿ ಸಚಿವ ಬಿ.ಎನ್‌ ನಾಗೇಂದ್ರ, ದದ್ದಲ್ ಅವರ ಆಪ್ತರು ಹಾಗೂ ಇತರ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನ ಕಲೆಹಾಕಿತ್ತು. 2ನೇ ದಿನವಾದ ಗುರುವಾರವೂ ದಾಳಿ ಮುಂದುವರಿದಿತ್ತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರು, ಬಳ್ಳಾರಿ, ರಾಯಚೂರು ಸೇರಿ ವಿವಿಧೆಡೆ ಶೋಧ ನಡೆಸಿದ್ದರು. ಬಳಿಕ ಮಾಜಿ ಮಂತ್ರಿ ನಾಗೇಂದ್ರ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮತ್ತು ಅವರ ಆಪ್ತರನ್ನು ಅವರವರ ಮನೆಗಳಲ್ಲೇ ಅಗತ್ಯ ದಾಖಲೆಗಳನ್ನು ಮುಂದಿಟ್ಟುಕೊಂಡು ವಿಚಾರಣೆಗೆ ಒಳಪಡಿಸಿದ್ದರು.

ಆರೋಪಿ ಸತ್ಯನಾರಾಯಣ್‌ನಿಂದ ವಾಲ್ಮೀಕಿ ನಿಗಮದ ಎಂ.ಡಿ. ಪದ್ಮನಾಭ್ ಹಣ ತಂದಿದ್ದರು ಎನ್ನಲಾಗಿದೆ. ಆ ಹಣದಲ್ಲಿ ನಾಗೇಂದ್ರ ಪಿಎ ಹರೀಶ್‌ 25 ಲಕ್ಷ ಹಣ ಪಡೆದಿದ್ದ. ದದ್ದಲ್ ಪಿಎ ಪಂಪಣ್ಣ ಕೂಡ 55 ಲಕ್ಷ ಹಣ ಪಡೆದಿದ್ದ. ಈ ಬಗ್ಗೆ ಪರಿಶೀಲನೆ ವೇಳೆ ಹರೀಶ್ ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಆತನನ್ನು ಇಡಿ ವಶಕ್ಕೆ ಪಡೆದಿದೆ. ಪ್ರಕರಣದಲ್ಲಿ ಸಚಿವ ನಾಗೇಂದ್ರ ಪರ 50ರಿಂದ 60 ಕೋಟಿ ವ್ಯವಹಾರ ನಡೆದಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆದಿದೆ.

ನಾಗೇಂದ್ರ ಅವರಿಗೆ ಸೇರಿದ ಡಾಲರ್ಸ್ ಕಾಲೋನಿಯ ಮನೆ ಮೇಲೆ ದಾಳಿ ಮಾಡಲಾಗಿದೆ. ಅವರ ಆಸ್ತಿಗಳಿರುವ ಬಿಇಎಲ್ ರೋಡ್, ಮತ್ತಿಕೆರೆ ಹಾಗೂ ಮಲ್ಲೇಶ್ವರಂ ಸೇರಿದಂತೆ ಬೆಂಗಳೂರಿನಲ್ಲಿ ನಾಲ್ಕು ಕಡೆ ದಾಳಿಗಳು ನಡೆದಿವೆ. ಬಳ್ಳಾರಿಯ ಅವರ ಮನೆಯ ಮೇಲೂ ದಾಳಿ ನಡೆಸಲಾಗಿದೆ. ಬೆಂಗಳೂರು ಹೊರತುಪಡಿಸಿ ರಾಯಚೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಸಿಬಿಐ ಮಧ್ಯೆ ಪ್ರವೇಶಿಸಬಹುದು ಎಂಬ ಮಾಹಿತಿ ದೊರೆತಿತ್ತು.

Tags:    

Similar News