ವಾಲ್ಮೀಕಿ ನಿಗಮ ಹಗರಣ | ಮಾಜಿ ಸಚಿವ ನಾಗೇಂದ್ರ, ಶಾಸಕ ದದ್ದಲ್ ಮನೆ ಮೇಲೆ ಇಡಿ ದಾಳಿ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬುಧವಾರ ಬೆಳ್ಳಂಬೆಳಗ್ಗೆ ಇಬ್ಬರೂ ನಾಯಕರ ಮನೆಗಳ ಮೇಲೆ ಇಡಿ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ನಿಗಮದ ಎಂಡಿ ಜೆ.ಜೆ.ಪದ್ಮನಾಭ್, ಲೆಕ್ಕಪರಿಶೋಧಕ ಪರಶುರಾಮ್ ಮನೆ ಮೇಲೂ ದಾಳಿ ನಡೆಸಲಾಗಿದೆ.
ದದ್ದಲ್ ಅವರಿಗೆ ಸೇರಿದ ರಾಯಚೂರಿನ ಎರಡನೇ ವಾರ್ಡಿನ ಆಶಾಪುರ ರಸ್ತೆಯಲ್ಲಿರುವ ಮನೆ ಹಾಗೂ ಆರ್‌ಆರ್ (ರಾಮ್ ರಹೀಮ್) ಕಾಲೊನಿಯಲ್ಲಿರುವ ಮನೆಯ ಮೇಲೆ ದಾಳಿ ನಡೆಸಿರುವ ಮೂವರು ಅಧಿಕಾರಿಗಳ ತಂಡ, ಬೆಳಗ್ಗೆ 7 ಗಂಟೆಯಿಂದ ಮನೆಯಲ್ಲಿರುವ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಬಳ್ಳಾರಿಯ ನೆಹರು ಕಾಲೊನಿಯಲ್ಲಿರುವ ಬಿ.ನಾಗೇಂದ್ರ ಮನೆ ಮೇಲೂ ಬೆಳಗಿನಜಾವ 3ರಿಂದಲೇ 4 ಅಧಿಕಾರಿಗಳಿದ್ದ ತಂಡ ದಾಳಿ ಮಾಡಿದೆ. ನಾಗೇಂದ್ರ ಆಪ್ತರ ಮಾಹಿತಿ ಸಂಗ್ರಹಿಸುತ್ತಿರುವ ಇಡಿ ಅಧಿಕಾರಿಗಳು, ನಾಗೇಂದ್ರರ ಮನೆಯಲ್ಲಿರುವ ದಾಖಲೆಗಳನ್ನೂ ಪರಿಶೀಲಿಸುತ್ತಿದ್ದಾರೆ. ಸ್ಥಳೀಯ ಪೊಲೀಸರ ನೆರವು ಪಡೆಯದ ಇಡಿ, ಸಿಆರ್ಪಿಎಫ್ ಯೋಧರ ಸಹಕಾರದಿಂದ ದಾಳಿ ನಡೆಸಿದೆ. ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ರಾಮ್ಕ್ವ್ ಅಪಾರ್ಟ್ಮೆಂಟ್ನಲ್ಲಿರುವ ನಾಗೇಂದ್ರ ಅವರ ಮನೆ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಅದೇ ರೀತಿ ಬಸವನಗೌಡ ದದ್ದಲ್ ನಿವಾಸವಲ್ಲದೆ, ಬೆಂಗಳೂರು ನಗರದ ಯಲಹಂಕ, ಕೋರಮಂಗಲ ಸೇರಿದಂತೆ ಏಕಕಾಲದಲ್ಲಿ 18 ಕಡೆಗಳಲ್ಲಿ ದಾಳಿ ಮಾಡಿ ಮಹತ್ವದ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದರ ಜೊತೆಗೆ ನಿಗಮದ ಎಂಡಿ ಜೆ.ಜೆ.ಪದ್ಮನಾಭ್, ಲೆಕ್ಕಪರಿಶೋಧಕ ಪರಶುರಾಮ್ ಮನೆ ಮೇಲೂ ದಾಳಿ ನಡೆಸಲಾಗಿದೆ. ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್, ಸತ್ಯನಾರಾಯಣ್ ವರ್ಮಾ ಸೇರಿ ಹಲವರ ಮನೆ, ಕಚೇರಿಯಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಗಳೂರಿನ ಪದ್ಮನಾಭ್ ನಿವಾಸ, ಹೈದರಾಬಾದ್‌ನಲ್ಲಿರುವ ಸತ್ಯನಾರಾಯಣ್ ವರ್ಮಾ ನಿವಾಸ ಕಚೇರಿ ಸೇರಿದಂತೆ ಒಟ್ಟು 18 ಸ್ಥಳಗಳಲ್ಲಿ ಏಕಕಾಲಕ್ಕೆ ಇಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಹಗರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಹಾಗೂ ದದ್ದಲ್ ಇಬ್ಬರೂ ಮಂಗಳವಾರ ಬೆಂಗಳೂರಿನ ಎಸ್‌ಐಟಿ ಕಚೇರಿಗೆ ಹಾಜರಾಗಿ ಐದು ತಾಸಿಗೂ ಹೆಚ್ಚು ಕಾಲ ವಿಚಾರಣೆ ಎದುರಿಸಿದ್ದರು. ಇಂದು ಕೂಡ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಹೇಳಲಾಗಿದೆ.