ವಾಲ್ಮೀಕಿ ನಿಗಮ ಹಗರಣ | ಸಿಬಿಐ ತನಿಖೆ ಆರಂಭ: ಯಾವುದೇ ಕ್ಷಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೊದಲ ವಿಕೆಟ್‌ ಉರುಳುವುದು ನಿಶ್ಚಿತವಾಗಿದ್ದು, ಯಾವುದೇ ಕ್ಷಣದಲ್ಲಿ ಸಚಿವ ಬಿ ನಾಗೇಂದ್ರ ರಾಜೀನಾಮೆ ನೀಡುವ ಸಾಧ್ಯತೆ ಇದೆ.;

Update: 2024-06-06 07:08 GMT

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೊದಲ ವಿಕೆಟ್‌ ಉರುಳುವುದು ನಿಶ್ಚಿತವಾಗಿದ್ದು, ಯಾವುದೇ ಕ್ಷಣದಲ್ಲಿ ಸಚಿವ ಬಿ ನಾಗೇಂದ್ರ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ರಾಜ್ಯಾದ್ಯಂತ ಭಾರೀ ಸದ್ದು ಮಾಡಿರುವ 187 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಿಬಿಐ ಪ್ರಕರಣದ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಎಸ್‌ ಐಟಿ ತನಿಖೆಯ ಮೂಲಕ ಪ್ರಕರಣದ ಸಿಬಿಐಗೆ ಹಸ್ತಾಂತರವಾಗುವುದನ್ನು ತಡೆಯುವ ಯತ್ನ ಮಾಡಿದ್ದ ರಾಜ್ಯ ಕಾಂಗ್ರೆಸ್‌ ಸರ್ಕಾರ ಇದೀಗ ಇಕ್ಕಟ್ಟಿಗೆ ಸಿಲುಕಿದ್ದು,  ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ ನಾಗೇಂದ್ರ ಅವರ ರಾಜೀನಾಮೆ ಪಡೆದು ಬೀಸುವ ದೊಣ್ಣೆಯಿಂದ ಪಾರಾಗುವ ಯತ್ನವನ್ನು ಸರ್ಕಾರ ಮಾಡಿದೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಈಗಾಗಲೇ ರಾಜೀನಾಮೆ ನೀಡುವಂತೆ ನಾಗೇಂದ್ರ ಅವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸಚಿವರ ರಾಜೀನಾಮೆಯ ವಿಷಯವನ್ನು ʼದ ಫೆಡರಲ್‌ ಕರ್ನಾಟಕʼಕ್ಕೆ ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿದ್ದು, ಸಚಿವರ ಆಪ್ತರಾದ ನಾಗರಾಜ ನೆಕ್ಕಂಟಿ ಮತ್ತು ನಾಗೇಶ್ವರ್‌ ರಾವ್ ಬಂಧನ‌ ಹಾಗೂ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಮುಂದೆ ಎದುರಾಗಬಹುದಾದ ಇನ್ನಷ್ಟು ಮುಜಗರದಿಂದ ಪಾರಾಗಲು ಮುಖ್ಯಮಂತ್ರಿಗಳು ಸಚಿವರ ರಾಜೀನಾಮೆ ಪಡೆಯಲು ನಿರ್ಧರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಬಿ ನಾಗೇಂದ್ರ ಅವರಿಗೆ ಸೂಚನೆ ನೀಡಿದ್ದು, ಸಿಎಂ ಮತ್ತು ಡಿಸಿಎಂ ಸೂಚನೆ ಮೇರೆಗೆ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಪ್ರಕರಣದ ಹಿನ್ನೆಲೆ

ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್ ಪಿ. (52) ಅವರು ಶಿವಮೊಗ್ಗದ ವಿನೋಬ ನಗರದ ಕೆಂಚಪ್ಪ ಲೇಔಟ್ ಬಳಿಯಿರುವ ತಮ್ಮ ನಿವಾಸದಲ್ಲಿ ಮೇ 26ರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಚಂದ್ರಶೇಖರನ್ ಆತ್ಮಹತ್ಯೆಗೂ ಮೊದಲು ವಾಲ್ಮೀಕಿ ನಿಗಮದಲ್ಲಿ 85 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ನಿಗಮದ ಅಧಿಕಾರಿಗಳ ವಿರುದ್ಧ 5 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ.

ಅಲ್ಲದೆ ಈ ಅಕ್ರಮದಲ್ಲಿ ನಿಗಮದ ಎಂಡಿ ಜೆ.ಜಿ.ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ ದುರುಗಣ್ಣನವರ್, ಯೂನಿಯನ್ ಬ್ಯಾಂಕ್‌ ಮ್ಯಾನೇಜರ್ ಶುಸ್ಮಿತಾ ರಾವುಲ್ ಪಾತ್ರವಿದೆ ಎಂದು ಉಲ್ಲೇಖಿಸಿದ್ದಾರೆ. ನಿಗಮದ ಎಂಡಿ ಅನುದಾನವನ್ನು ಒತ್ತಾಯಪೂರ್ವಕವಾಗಿ ವರ್ಗಾಯಿಸಿದ್ದಾರೆ. ನಮಗೆ ಇದರ ಒಳಸಂಚು ಅರ್ಥವೇ ಆಗಲಿಲ್ಲ. ನಿಗಮಕ್ಕೆ ಇನ್ನೂ ಬ್ಯಾಂಕ್ ಪಾಸ್ಬುಕ್ ಹಾಗೂ ಚೆಕ್ ಬುಕ್ ನೀಡಿಲ್ಲ. ಈ ಕುರಿತು ಬ್ಯಾಂಕ್ ಮ್ಯಾನೇಜರ್ ಸರಿಯಾದ ಉತ್ತರ ನೀಡಿಲ್ಲ ಎಂದೂ ಉಲ್ಲೇಖಿಸಿದ್ದಾರೆ.

ನಾನು ನಿಗಮಕ್ಕೆ ಮೋಸ ಮಾಡಿಲ್ಲ, ಅವ್ಯವಹಾರದಲ್ಲಿ ಭಾಗಿಯಾಗಿಲ್ಲ. ವಂಚನೆಯನ್ನೂ ಮಾಡಿಲ್ಲ. ಆದರೆ, ನಿಗಮದ ಹಣ ನಿಯಮಬಾಹಿರವಾಗಿ ಹಣ ವರ್ಗಾವಣೆ ಆಗಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಕೆಲಸದ ಒತ್ತಡದಲ್ಲಿ ನಾನು ಮಾಡಿರುವ ತಪ್ಪೇನೆಂದರೆ, ಖಾತೆಯ ಚೆಕ್ ಬುಕ್ ಮತ್ತು ಕ್ಯಾಶ್ ಪುಸ್ತಕ ಮುಕ್ತಾಯಗೊಳಿಸಿರುವುದು ಎಂದು ತಮ್ಮ ಡೆತ್‌ ನೋಟ್‌ನಲ್ಲಿ ಬರೆದಿದ್ದಾರೆ.

ಪ್ರಕರಣದ ತನಿಖೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಎಸ್‌ಐಟಿ ರಚಿಸಿದ್ದು, ಈಗಾಗಲೇ ಸಚಿವ ಬಿ ನಾಗೇಂದ್ರ ಅವರ ಇಬ್ಬರು ಆಪ್ತರು, ನಿಗಮದ ಉನ್ನತ ಅಧಿಕಾರಿಗಳು ಮತ್ತು ತೆಲಂಗಾಣ ಸಹಕಾರ ಸಂಘದ ಅಧ್ಯಕ್ಷ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಈ ನಡುವೆ, ಅಕ್ರಮ ಹಣ ವರ್ಗಾವಣೆಯ ಮೊತ್ತ ಮೂರು ಕೋಟಿಗೂ ಅಧಿಕ ಇರುವ ಹಿನ್ನೆಲೆಯಲ್ಲಿ ನಿಯಮದಂತೆ ಸಿಬಿಐ ತನಿಖೆ ನಡೆಸುವಂತೆ ಯೂನಿಯನ್‌ ಬ್ಯಾಂಕ್‌ ಅಧಿಕಾರಿಗಳು ಸಿಬಿಐಗೆ ಕಳೆದ ವಾರವೇ ಪತ್ರ ಬರೆದಿದ್ದರು.

Tags:    

Similar News