ಧರ್ಮಸ್ಥಳ ಪ್ರಕರಣಕ್ಕೆ ಅಮಿತ್ ಶಾ ಪ್ರವೇಶ? ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ 9 ಸ್ವಾಮೀಜಿಗಳಿಂದ ಮನವಿ

ದ ಫೆಡರಲ್​ ಕರ್ನಾಟಕದ ಜತೆ ಮಾತನಾಡಿದ ಹುಬ್ಬಳ್ಳಿಯ ವರೂರಿನ ನವಗ್ರಹ ತೀರ್ಥಕ್ಷೇತ್ರದ ಜೈನ ಮುನಿ ಆಚಾರ್ಯ ಗುಣಧರ ನಂದಿ ಮಹಾರಾಜರು ಅವರು ಈ ಮಾಹಿತಿ ನೀಡಿದ್ದಾರೆ.;

Update: 2025-08-30 10:44 GMT

ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು ಮತ್ತು ಕ್ಷೇತ್ರದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಲು, ರಾಜ್ಯದ ಒಂಬತ್ತು ಪ್ರಮುಖ ಮಠಾಧೀಶರ ನಿಯೋಗವು ಸೆಪ್ಟೆಂಬರ್​ 3ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದೆ.

ಈ ಬೆಳವಣಿಗೆಯಿಂದಾಗಿ, ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಧರ್ಮಸ್ಥಳ ಪ್ರಕರಣವು ಇದೀಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲಿದ್ದು, ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ಪ್ರವೇಶ ಮಾಡುವ ಸಾಧ್ಯತೆಗಳಿವೆ. 

ದ ಫೆಡರಲ್​ ಕರ್ನಾಟಕದ ಜತೆ ಮಾತನಾಡಿದ ಹುಬ್ಬಳ್ಳಿಯ ವರೂರಿನ ನವಗ್ರಹ ತೀರ್ಥಕ್ಷೇತ್ರದ ಜೈನ ಮುನಿ ಆಚಾರ್ಯ ಗುಣಧರ ನಂದಿ ಮಹಾರಾಜರು ಅವರು ಈ ಮಾಹಿತಿ ನೀಡಿದ್ದಾರೆ. ನಿಯೋಗದಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಜ್ರದೇಹಿ ಸ್ವಾಮೀಜಿ ಮತ್ತು ವಚನಾನಂದ ಸ್ವಾಮೀಜಿಗಳು ಇರಲಿದ್ದಾರೆ ಎಂಬುದಾಗಿ ಅವರು ಹೇಳಿದ್ದಾರೆ. ಸೆಪ್ಟೆಂಬರ್ 3ರಂದು ರಾತ್ರಿ 8 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೇಟಿಗೆ ಸಮಯ ನಿಗದಿಪಡಿಸಿದ್ದಾರೆ ಎಂಬುದಾಗಿಯೂ ಅವರು ಹೇಳಿದರು.

ಸ್ವಾಮೀಜಿಗಳ ನಿಯೋಗದ ಪ್ರಮುಖ ಬೇಡಿಕೆಗಳು

ಕೇಂದ್ರ ಗೃಹ ಸಚಿವರ ಮುಂದೆ ನಿಯೋಗವು ಮೂರು ಪ್ರಮುಖ ಮನವಿಗಳನ್ನು ಇಡಲು ಸಿದ್ಧತೆ ನಡೆಸಿದೆ. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು ಮತ್ತು ಇತರ ಆರೋಪಗಳ ಕುರಿತು ನಿಷ್ಪಕ್ಷಪಾತ ಉನ್ನತ ಮಟ್ಟದ ತನಿಖೆ ನಡೆಸಬೇಕು. ಧರ್ಮಸ್ಥಳ ಸೇರಿದಂತೆ ರಾಜ್ಯದ ಪ್ರಮುಖ ಧಾರ್ಮಿಕ ಸಂಸ್ಥೆಗಳ ಘನತೆಗೆ ಧಕ್ಕೆ ತರಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಇದರ ಹಿಂದೆ ದೊಡ್ಡ ಮಟ್ಟದ ಹಣಕಾಸಿನ ವ್ಯವಹಾರ ಅಡಗಿದೆ ಎಂಬ ಅನುಮಾನವಿದ್ದು, ಈ ಸಂಚಿನ ಬಗ್ಗೆಯೂ ತನಿಖೆ ನಡೆಸಬೇಕು. ಧಾರ್ಮಿಕ ಕೇಂದ್ರಗಳ ಮೇಲೆ ನಡೆಯುತ್ತಿರುವ ಅಪಪ್ರಚಾರ ತಡೆದು, ಕ್ಷೇತ್ರದ ಪಾವಿತ್ರ್ಯ ರಕ್ಷಿಸಬೇಕು ಎಂದು ಸ್ವಾಮೀಜಿಗಳ ನಿಯೋಗ ಮನವಿ ಮಾಡಲಿದೆ.

ಮುನಿ ಪಟ್ಟತ್ಯಾಗ ಮಾಡುವೆ

ಫೆಡರಲ್ ಕರ್ನಾಟಕದ ಜತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ವೀರೇಂದ್ರ ಹೆಗ್ಗಡೆಯವರ ಮೇಲೆ ಮಾಡುತ್ತಿರುವ ಅಪಪ್ರಚಾರ ನಿಲ್ಲಬೇಕು. ಅವರ ಮಾನ ಹಾನಿ ಮಾಡಬಾರದು. ಅವರು ಈ ವಿಚಾರದಲ್ಲಿ ಪರಿಶುದ್ಧರು. ಒಂದು ವೇಳೆ ಅವರು ತಪ್ಪಿತಸ್ಥರು ಎಂದು ಏನಾದರೂ ಘೋಷಣೆಯಾದರೆ ನಾನೇ ಅವರ ವಿರುದ್ಧ ಮಾತನಾಡುವೆ ಮತ್ತು ನನ್ನ ಮುನಿ ಪಟ್ಟಕ್ಕೆ ತ್ಯಜಿಸುವೆ ಎಂದು ಅವರು ಸವಾಲು ಹಾಕಿದ್ದಾರೆ.

ಹೋರಾಟಗಳು ಅಹಿಂಸಾತ್ಮಕವಾಗಿರಬೇಕು. ಹೋರಾಟಗಾರರು ಬಾಯಿಗೆ ಬಂದಂತೆ ಮಾತನಾಡುವುದು ಅನಗತ್ಯ. ಮಹಾತ್ಮ ಗಾಂಧೀಜಿ ಅವರು ನಮ್ಮ ದೇಶಕ್ಕೆ ಅಹಿಂಸಾತ್ಮಕ ಹೋರಾಟಕ್ಕೆ ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.

Tags:    

Similar News