Union Budget 2025 | ಕೇಂದ್ರ ಬಜೆಟ್‌: ಕರ್ನಾಟಕದ ಜನ ಕೇಳಿದ್ದೇನು? ರಾಜ್ಯಕ್ಕೆ ಸಿಕ್ಕಿದ್ದೇನು?

ಆದರೆ, ಶನಿವಾರ ಕೇಂದ್ರ ಬಜೆಟ್ ಮಂಡನೆ ಮುಗಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಅವರು ದಣಿವಾರಿಸಿಕೊಳ್ಳಲು ನೀರು ಕುಡಿಯುವ ಹೊತ್ತಿಗೆ, ಅವರು ಪ್ರತಿನಿಧಿಸುತ್ತಿರುವ ಕರ್ನಾಟಕ ರಾಜ್ಯದ ಬಜೆಟ್ ನಿರೀಕ್ಷೆಗಳು ಬಾಯಾರಿ ಅಸುನೀಗಿದ್ದವು.;

Update: 2025-02-01 13:03 GMT

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಲೋಕಸಭೆಯಲ್ಲಿ 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ.

ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಎಂಟನೇ ಬಜೆಟ್ ಇದು. ದುಬಾರಿ ಜಿಎಸ್ಟಿ ಮತ್ತು ವೈಯಕ್ತಿಕ ತೆರಿಗೆಗಳಿಂದ ದೇಶದ ಮಧ್ಯಮ ವರ್ಗ ಮತ್ತು ಬಡವರ ಜನಜೀವನವೇ ದುಸ್ತರವಾಗಿರುವ ಹೊತ್ತಿನಲ್ಲಿ ಹಣಕಾಸು ಸಚಿವರ ಈ ಬಜೆಟ್ ಬಗ್ಗೆ ಸಹಜವಾಗೇ ನಿರೀಕ್ಷೆಗಳು ಗರಿಗೆದರಿದ್ದವು.

ದೇಶದ ಒಟ್ಟು ತೆರಿಗೆ ಕೊಡುಗೆಯಲ್ಲಿ ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ನಂತರದ ಸ್ಥಾನದಲ್ಲಿರುವ ಕರ್ನಾಟಕ ಕೂಡ ಈ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಅದರಲ್ಲೂ ಮುಖ್ಯವಾಗಿ ಪ್ರಾದೇಶಿಕ ಅಸಮಾನತೆ ಮತ್ತು ನೀರಾವರಿ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಬಜೆಟ್ ಮೂಲಕ ರಾಜ್ಯದ ನೆರವಿಗೆ ಬರಲಿದೆ. ಜೊತೆಗೆ 15ನೇ ಹಣಕಾಸು ಆಯೋಗದ ಶಿಫಾರಸು ಜಾರಿ ಮತ್ತು ಜಿಎಸ್ಟಿ ತೆರಿಗೆ ಪಾಲು ಹಂಚಿಕೆಯ ವಿಷಯದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಬಜೆಟ್ ಸಮಾಧಾನಕರ ಭರವಸೆಯಾಗಬಹುದು ಎಂಬ ನಿರೀಕ್ಷೆ ಕೂಡ ಕರ್ನಾಟಕದ್ದಾಗಿತ್ತು.

ಆ ಹಿನ್ನೆಲೆಯಲ್ಲಿಯೇ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ನಡೆಸಿದ ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ತನ್ನ ಪ್ರಮುಖ ಬೇಡಿಕೆ ಮತ್ತು ಸಲಹೆಗಳನ್ನು ಮಂಡಿಸಿತ್ತು.

ಪ್ರಮುಖವಾಗಿ ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಮತ್ತು ಜಾಗತಿಕ ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮಘಟ್ಟ ಪ್ರದೇಶಗಳ ಅಭಿವೃದ್ಧಿಗಾಗಿ ವಿಶೇಷ ಹೊಂದಾಣಿಕೆ ಅನುದಾನ ನೀಡಬೇಕು, ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷಿ ಭದ್ರಾ ಮೇಲ್ಡಂಡೆ ಯೋಜನೆಗೆ ಕೇಂದ್ರ ಭರವಸೆ ನೀಡಿರುವ 5300 ಕೋಟಿ ರೂ, ಅನುದಾನ ಬಿಡುಗಡೆ ಮಾಡಬೇಕು, ರಾಜ್ಯದ ದಶಕಗಳ ಬೇಡಿಕೆಯಾದ ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗೆ ಅನುಮೋದನೆ ನೀಡಬೇಕು, 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ 11,495 ಕೋಟಿ ರೂ ವಿಶೇಷ ಅನುದಾನವನ್ನು ಬಿಡುಗಡೆ ಮಾಡಬೇಕು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನವನ್ನು ಕ್ರಮವಾಗಿ 5000 ಮತ್ತು 2000 ರೂ. ಹೆಚ್ಚಿಸಬೇಕು, ಪ್ರಧಾನಮಂತ್ರಿ ಆವಾಸ್ ಯೋಜನೆಯ ಸಹಾಯಧನವನ್ನು ನಗರಪ್ರದೇಶದಲ್ಲಿ 1.5ರಿಂದ 5 ಲಕ್ಷಕ್ಕೂ, ಗ್ರಾಮೀಣ ಭಾಗದಲ್ಲಿ 72 ಸಾವಿರದಿಂದ 3 ಲಕ್ಷ ರೂ.ಗಳಿಗೂ ಹೆಚ್ಚಿಸಬೇಕು ಹಾಗೂ ವೃದ್ಧಾಪ್ಯ, ವಿಧನಾ ಮತ್ತು ದೈಹಿಕ ವಿಶೇಷಚೇತನರಿಗೆ ನೀಡುವ ಪಿಂಚಣಿಯನ್ನು ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರ ಕೋರಿತ್ತು.

ಈ ಪ್ರಮುಖ ಏಳು ಬೇಡಿಕೆಗಳಲ್ಲದೆ, ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಕೇಂದ್ರದ ಅನುದಾನದ ಪಾಲು ಹೆಚ್ಚಳ, ಬೆಂಬಲ ಬೆಲೆ ಯೋಜನೆ ಬಾಕಿ ಮೊತ್ತ ಬಿಡುಗಡೆಗೆ ಅನುದಾನ ಘೋಷಣೆ, ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ಆರ್ಥಿಕ ನೆರವು ಹೆಚ್ಚಿಸುವುದು, ಬೆಂಗಳೂರು ನಗರಾಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ನೆರವು ಸೇರಿದಂತೆ ಇತರೆ ಹಲವು ಬೇಡಿಕೆಗಳನ್ನು ರಾಜ್ಯ ಸರ್ಕಾರ ಕೇಂದ್ರದ ಹಣಕಾಸು ಸಚಿವರ ಮುಂದಿಟ್ಟಿತ್ತು.

ಆದರೆ, ಶನಿವಾರ ಕೇಂದ್ರ ಬಜೆಟ್ ಮಂಡನೆ ಮುಗಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಅವರು ದಣಿವಾರಿಸಿಕೊಳ್ಳಲು ನೀರು ಕುಡಿಯುವ ಹೊತ್ತಿಗೆ, ಅವರು ಪ್ರತಿನಿಧಿಸುತ್ತಿರುವ ಕರ್ನಾಟಕ ರಾಜ್ಯದ ಬಜೆಟ್ ನಿರೀಕ್ಷೆಗಳು ಬಾಯಾರಿ ಅಸುನೀಗಿದ್ದವು.

ಏಕೆಂದರೆ, ರಾಜ್ಯದ ಸಾಲು ಸಾಲು ಬೇಡಿಕೆಗಳ ಪೈಕಿ ಒಂದೇ ಒಂದು ಬೇಡಿಕೆಗೂ ತಮ್ಮ 60 ಪುಟಗಳ ಬಜೆಟ್ಟಿನಲ್ಲಿ ಒಂದು ಪದದ ಸ್ಥಾನವನ್ನೂ ಹಣಕಾಸು ಸಚಿವರು ಕೊಟ್ಟಿಲ್ಲ. ಅಷ್ಟೇ ಅಲ್ಲದೆ, ಇಡೀ ಬಜೆಟ್ ಭಾಷಣದುದ್ದಕ್ಕೂ ಒಂದೇ ಒಂದು ಬಾರಿಯೂ ಕರ್ನಾಟಕದ ಹೆಸರನ್ನು ಕೂಡ ಸಚಿವರು ಉಚ್ಚರಿಸುವ ಅಗತ್ಯ ಬೀಳದ ಮಟ್ಟಿಗೆ ಬಜೆಟ್ನಲ್ಲಿ ರಾಜ್ಯವನ್ನು ಬದಿಗೆ ಸರಿಸಿದ್ದಾರೆ. ರಾಜ್ಯ ಸರ್ಕಾರ, ರಾಜ್ಯದ ಉದ್ಯಮ ವಲಯ, ಸೇವಾ ವಲಯದ ಬೇಡಿಕೆಗಳಿಗಾಗಲೀ, ಕೃಷಿ ವಲಯದ ನಿರ್ದಿಷ್ಟ ನಿರೀಕ್ಷೆಗಳಿಗಾಗಲೀ ಈ ಬಾರಿಯ ಬಜೆಟ್ ಸೊಪ್ಪು ಹಾಕಿಲ್ಲ.

ಮುಂದುವರಿದ ಚೊಂಬು ಅಭಿಯಾನ

ಆ ಹಿನ್ನೆಲೆಯಲ್ಲಿಯೇ ರಾಜ್ಯದ ರಾಜಕೀಯ ಮಾತ್ರವಲ್ಲ; ಉದ್ಯಮ, ಕೃಷಿ ಮತ್ತು ಸೇವಾ ವಲಯದಿಂದಲೂ ಈ ಬಾರಿಯ ಬಜೆಟ್ ಕರ್ನಾಟಕಕ್ಕೆ ಕೊಟ್ಟಿರುವುದು ಏನು ಎಂಬ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಚುನಾವಣಾ ಹೊಸ್ತಿಲಲ್ಲಿರುವ ಬಿಹಾರ, ಪ್ರಧಾನಮಂತ್ರಿಗಳ ತವರು ಗುಜರಾತ್, ಪ್ರಬಲ ಮೈತ್ರಿಪಕ್ಷ ಟಿಡಿಪಿಯ ಕಾರಣಕ್ಕಾಗಿ ಆಂಧ್ರಪ್ರದೇಶ, ಜನಾಂಗೀಯ ಸಂಘರ್ಷದ ಹಿನ್ನೆಲೆಯಲ್ಲಿ ಬಿಜೆಪಿ ನೆಲೆ ಕಳೆದುಕೊಳ್ಳುವ ಆತಂಕ ಇರುವ ಅಸ್ಸಾಂ ರಾಜ್ಯಗಳಿಗೆ ಭಾರೀ ಕೊಡುಗೆಗಳನ್ನು ಘೋಷಿಸಿರುವ ಹಣಕಾಸು ಸಚಿವರು, ಸ್ವತಃ ತಾವೇ ಪ್ರತಿನಿಧಿಸುವ ಮತ್ತು ದೇಶದ ತೆರಿಗೆ ಮತ್ತು ಅಭಿವೃದ್ಧಿ ವಿಷಯಗಳಲ್ಲಿ ಆರ್ಥಿಕತೆಗೆ ಬಲ ತುಂಬುವ ಕರ್ನಾಟಕಕ್ಕೆ ಮಾತ್ರ ಯಾವ ಘೋಷಣೆಯನ್ನೂ ಮಾಡದೇ ನಿರ್ಲಕ್ಷಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ರಾಜಕೀಯ ಸೇಡಿನ ಕ್ರಮವಾಗಿ ಹೀಗೆ ಅನ್ಯಾಯ ಮಾಡಲಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.

ಬಜೆಟ್ ನಿರೀಕ್ಷೆಗಳ ಕುರಿತು ಈ ಮೊದಲೇ ಕೇಂದ್ರಕ್ಕೆ ಪತ್ರ ಬರೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರ ಚೊಂಬು ಅಭಿಯಾನವನ್ನು ಮುಂದುವರಿಸಿದೆ. ರಾಜ್ಯದ ಯಾವೊಂದು ಬೇಡಿಕೆಗೂ ಸ್ಪಂದನೆ ಸಿಕ್ಕಿಲ್ಲ. ಕರ್ನಾಟಕ ಮತ್ತು ಕನ್ನಡಿಗರ ವಿರುದ್ಧ ನರೇಂದ್ರ ಮೋದಿಯವರ ಸರ್ಕಾರದ ತಾರತಮ್ಯ ಧೋರಣೆ ಮುಂದುವರಿದಿದೆ ಎಂದು ಕೇಂದ್ರ ಬಜೆಟ್ಗೆ ಪ್ರತಿಕ್ರಿಯಿಸಿದ್ದಾರೆ.

ಬಜೆಟ್ ಮುನ್ನಾ ದಿನ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಸಿಎಂ, ಈ ಬಜೆಟ್ ಬಗ್ಗೆ ನಮಗೆ ಯಾವುದೇ ನಿರೀಕ್ಷೆಗಳಿಲ್ಲ. ಏಕೆಂದರೆ ನಾವು ಬೇಡಿಕೆಗಳನ್ನು ಮುಂದಿಟ್ಟಿದ್ದರೂ ಅವರು ಯಾವುದೇ ಬೇಡಿಕೆಯನ್ನಾಗಲೀ ನಿರೀಕ್ಷೆಯನ್ನಾಗಲೀ ಈಡೇಸುತ್ತಾರೆ ಎನ್ನುವ ವಿಶ್ವಾಸವಿಲ್ಲ. ಹಿಂದಿನಂತೆಯೇ ಈ ಬಾರಿಯೂ ಅವರು ರಾಜ್ಯವನ್ನು ನಿರ್ಲಕ್ಷಿಸುತ್ತಾರೆ ಎಂದು ಹೇಳಿದ್ದರು. ಇದೀಗ ಕೇಂದ್ರ ಬಜೆಟ್ ಅವರ ಆ ಮಾತನ್ನು ನಿಜ ಮಾಡಿದಂತಿದೆ.

ಕರ್ನಾಟಕದವರು ಕಡ್ಲೆ ಬೀಜ ತಿನ್ನೋಕೆ ಇರೋದಾ?

ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೂಡ ಬಜೆಟ್ಗೆ ಪ್ರತಿಕ್ರಿಯಿಸಿದ್ದು, ಈ ಬಜೆಟ್ನ ಈ ದಿನ ಕರ್ನಾಟಕದ ಪಾಲಿಗೆ ಕರಾಳ ದಿನ. ಕರ್ನಾಟಕದ ಯಾವ ಬೇಡಿಕೆಯೂ ಈಡೇರಿಲ್ಲ. ಕರ್ನಾಟಕಕ್ಕೆ ನ್ಯಾಯ ಕೊಡುವ ಕೆಲಸ ಆಗಿಲ್ಲ. ಕರ್ನಾಟಕ ತೆರಿಗೆ ಬೇರೆ ರಾಜ್ಯದ ಪಾಲಾಗುತ್ತಿದೆ. ರಾಜ್ಯಕ್ಕೆ ಏನೂ ವಾಪಸ್ ಸಿಗುತ್ತಿಲ್ಲ. ಬಿಹಾರ ರಾಜ್ಯಕ್ಕೆ ಐದಾರು ಯೋಜನೆ ಕೊಟ್ಟಿದ್ದಾರೆ. ಹಾಗಾದ್ರೆ ಕರ್ನಾಟಕದವರು ಕಡ್ಲೆ ಬೀಜ ತಿನ್ನೋಕೆ ಇರೋದಾ? ಬಜೆಟನಲ್ಲಿ ಕರ್ನಾಟಕಕ್ಕೆ ಬರೀ ಚೊಂಬು ಸಿಕ್ಕಿದೆ. ಇದು ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ದ್ರೋಹ ಎಂದು ಕಿಡಿಕಾರಿದ್ದಾರೆ.

ರಾಜ್ಯ ಕಾಂಗ್ರೆಸ್ ನಾಯಕರು ಸಹಜವಾಗೇ ಕೇಂದ್ರದ ಬಜೆಟ್ ವಿರುದ್ಧ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡದೇ ಇರುವುದು ಮತ್ತು ರಾಜ್ಯದ ಬೇಡಿಕೆಗಳಿಗೆ ಸ್ಪಂದಿಸದೇ ಇರುವುದನ್ನು ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ರಾಜ್ಯ ಬಿಜೆಪಿ ನಾಯಕರು ಅದೇ ಬಜೆಟ್ ಮಧ್ಯಮವರ್ಗದವರ ಸ್ನೇಹಿ, ರೈತಸ್ನೇಹಿ ಮತ್ತು ಉದ್ಯಮ ಪರ ಎಂದು ಬಣ್ಣಿಸುತ್ತಿದ್ದಾರೆ. ಆದರೆ, ರಾಜ್ಯಕ್ಕೆ ಯಾವುದೇ ಕೊಡುಗೆ ನೀಡದ ಬಜೆಟ್ ಅನ್ಯಾಯದ ಬಗ್ಗೆ ಮಾತ್ರ ಬಿಜೆಪಿ ನಾಯಕರು ಮುಗುಮ್ಮಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮತ್ತಿತರರು ಕೇಂದ್ರ ಬಜೆಟ್ ಬಣ್ಣಿಸಿ ಹೇಳಿಕೆ ನೀಡಿದ್ದರೂ, ರಾಜ್ಯಕ್ಕಾಗಿರುವ ಅನ್ಯಾಯವ ಬಗ್ಗೆ ಮಾತ್ರ ಚಕಾರವೆತ್ತಿಲ್ಲ.

ಒಟ್ಟಾರೆ, ಕಳೆದ ಬಜೆಟ್ ಮಾದರಿಯಲ್ಲೇ ಈ ಬಜೆಟ್ ಕೂಡ ʼಚೊಂಬು ಕೊಟ್ಟಿದೆʼ ಎಂಬ ರಾಜ್ಯ ಕಾಂಗ್ರೆಸ್ ನಾಯಕರ ವ್ಯಂಗ್ಯವನ್ನು ನಿಜ ಮಾಡುವಂತೆ, ರಾಜ್ಯದ ಯಾವ ಬೇಡಿಕೆ, ಯಾವ ಅಗತ್ಯಗಳಿಗೂ ಸ್ಪಂದನೆ ನೀಡಿಲ್ಲ. ಆ ಅರ್ಥದಲ್ಲಿ ಕೇಂದ್ರದ ಈ ಬಾರಿಯ ಬಜೆಟ್ ಕೂಡ ಕರ್ನಾಟಕದ ಪಾಲಿಗೆ ʼಖಾಲಿ ಚೊಂಬುʼ ಎಂಬಂತಾಗಿದೆ!

Tags:    

Similar News