ಯುಕೆಪಿ ಹಂತ-3 ಯೋಜನೆಗೆ ಸರ್ಕಾರ ಬದ್ಧ, ಶೀಘ್ರದಲ್ಲೇ ಅಂತಿಮ ತೀರ್ಮಾನ: ಡಿಸಿಎಂ

ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಜಲಶಕ್ತಿ ಸಚಿವರಲ್ಲಿ ಮನವಿ ಮಾಡಿದ್ದೇನೆ. ಅವರೂ ಕೂಡ ಶೀಘ್ರದಲ್ಲೇ ಸಭೆ ನಿಗದಿಪಡಿಸುವುದಾಗಿ ಡಿಸಿಎಂ ಭರವಸೆ ನೀಡಿದ್ದಾರೆ,;

Update: 2025-09-03 15:00 GMT

ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ಮೂರನೇ ಹಂತವನ್ನು ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಈ ಕುರಿತು ಎರಡು-ಮೂರು ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ನಡೆದ ಯುಕೆಪಿ ಹಂತ-3ರ ಅನುಷ್ಠಾನಕ್ಕೆ ಸಂಬಂಧಿಸಿದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಈ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಜಲಶಕ್ತಿ ಸಚಿವರಲ್ಲಿ ಮನವಿ ಮಾಡಿದ್ದೇನೆ. ಅವರೂ ಕೂಡ ಶೀಘ್ರದಲ್ಲೇ ಸಭೆ ನಿಗದಿಪಡಿಸುವುದಾಗಿ ಭರವಸೆ ನೀಡಿದ್ದಾರೆ," ಎಂದು ಹೇಳಿದರು.

ಭೂಪರಿಹಾರದ ಸವಾಲು ಮತ್ತು ಸರ್ಕಾರದ ನಿಲುವು

"ಭೂಸ್ವಾಧೀನ, ಪುನರ್ವಸತಿ, ಮತ್ತು ಭೂಪರಿಹಾರದ ಬಗ್ಗೆ ಮೂರ್ನಾಲ್ಕು ಸುತ್ತಿನ ಚರ್ಚೆ ನಡೆಸಿದ್ದೇವೆ. ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ, ಪ್ರತಿ ಎಕರೆ ನೀರಾವರಿ ಜಮೀನಿಗೆ 24 ಲಕ್ಷ ರೂಪಾಯಿ ಮತ್ತು ಒಣ ಭೂಮಿಗೆ 20 ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸಲಾಗಿತ್ತು. ಆದರೆ, ಇದನ್ನು ರೈತರು ಒಪ್ಪದೆ, ಧರಣಿ ನಡೆಸಿದ್ದರು. ಇದೀಗ, ನ್ಯಾಯಾಲಯವು ಹೆಚ್ಚು ಪರಿಹಾರ ನೀಡುವಂತೆ ತೀರ್ಪು ನೀಡಿದೆ, ಆದರೆ ಅಷ್ಟು ಮೊತ್ತವನ್ನು ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಚರ್ಚಿಸಲಾಗಿದೆ," ಎಂದು ಶಿವಕುಮಾರ್ ವಿವರಿಸಿದರು.

"ಕೃಷ್ಣಾ ಮೇಲ್ದಂಡೆ ವಿಚಾರವಾಗಿ ರೈತರು ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು ಮತ್ತು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುವುದು. ವಿಜಯಪುರ ಭಾಗದ ರೈತರು ಕೂಡ ನ್ಯಾಯಯುತ ಪರಿಹಾರ ನೀಡಿದರೆ ಒಪ್ಪುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮಾಹಿತಿ ನೀಡಿದ್ದೇನೆ. ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲೂ ಈ ವಿಷಯ ಚರ್ಚೆಗೆ ಬರಲಿದೆ," ಎಂದು ಅವರು ಹೇಳಿದರು.

ಧಾರ್ಮಿಕ ಕಾರ್ಯಗಳಿಗೆ ತಲೆ ಹಾಕುವುದಿಲ್ಲ

ಅರಮನೆ ಮೈದಾನದಲ್ಲಿ ನಡೆಯಲಿರುವ ಈದ್ ಮಿಲಾದ್ ಧಾರ್ಮಿಕ ಸಮಾರಂಭದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ನನಗೆ ಈ ಬಗ್ಗೆ ತಿಳಿದಿಲ್ಲ. ದೇಶದ ಹಿತಕ್ಕಾಗಿ ಮತ್ತು ಧಾರ್ಮಿಕ ಹಿತಕ್ಕಾಗಿ ನಡೆಯುವ ಕಾರ್ಯಗಳಿಗೆ ನಾವು ತಲೆಹಾಕುವುದಿಲ್ಲ. ಈ ಹಿಂದೆಯೂ ಅಂತರರಾಷ್ಟ್ರೀಯ ಮಟ್ಟದ ಧರ್ಮ ಪ್ರಚಾರಕರು ಬೆಂಗಳೂರಿಗೆ ಬಂದು ಭಾಷಣ ಮಾಡಿದ ಉದಾಹರಣೆಗಳಿವೆ," ಎಂದು ಸ್ಪಷ್ಟಪಡಿಸಿದರು. 

Tags:    

Similar News