ಉಡುಪಿ ಲಾಕಪ್‌ಡೆತ್ | ಬ್ರಹ್ಮಾವರ ಠಾಣೆಯಲ್ಲಿ ಕೇರಳ ಮೂಲದ ವ್ಯಕ್ತಿ ಸಾವು
ಇದು ಲಾಕಪ್ ಡೆತ್ ಪ್ರಕರಣವಾಗಿರುವುದರಿಂದ ನಿಯಮದಂತೆ ಸಿಐಡಿ ತನಿಖೆ ನಡೆಯಲಿದೆ ಎಂದು ಉಡುಪಿ ಎಸ್ಪಿ ಅರುಣ್ ಮಾಹಿತಿ ನೀಡಿದ್ದಾರೆ.;
ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಪ್ರಕರಣ ಸಂಭವಿಸಿದೆ.
ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ದೂರಿನ ಮೇಲೆ ಬ್ರಹ್ಮಾವರ ಪೊಲೀಸರು ಬಂಧಿಸಿದ್ದ ಕೇರಳ ಮೂಲದ ವ್ಯಕ್ತಿ ಠಾಣೆಯಲ್ಲಿಯೇ ಲಾಕ್ಅಪ್‌ನಲ್ಲಿಯೇ ಮೃತಪಟ್ಟಿದ್ದಾನೆ.
ಮೃತ ಆರೋಪಿಯನ್ನು ಕೇರಳದ ಕೊಲ್ಲಂ ಜಿಲ್ಲೆಯ ಬಿಜು ಮೋಹನ್ ಎಂದು ಗುರುತಿಸಲಾಗಿದೆ. 45 ವರ್ಷದ ಬಿಜು ಮೋಹನ್ ವಿರುದ್ಧ ಚೇರ್ಕಾಡಿ ಗ್ರಾಮದ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.
ಚೇರ್ಕಾಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಬ್ರಹ್ಮಾವರ ಪೊಲೀಸ್ ಠಾಣೆಗೆ ಶನಿವಾರ ದೂರವಾಣಿ ಕರೆ ಬಂದಿತ್ತು. ಕರೆಯ ಹಿನ್ನೆಲೆಯಲ್ಲಿ ಪೊಲೀಸರು ಚೇರ್ಕಾಡಿ ಗ್ರಾಮಕ್ಕೆ ತೆರಳಿ ವ್ಯಕ್ತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಲಾಕ್ಅಪ್‌ನಲ್ಲಿ ಕೂಡಿಹಾಕಿದ್ದರು.
ಪೊಲೀಸ್ ಲಾಕ್ಅಪ್‌ನಲ್ಲಿ ಇದ್ದ ವ್ಯಕ್ತಿ ರಾತ್ರಿ 3.45ರ ಸುಮಾರಿಗೆ ಗೋಡೆಗೆ ತಲೆ ಬಡಿದುಕೊಂಡಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಆತನನ್ನು ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿನ ವೈದ್ಯರು ಆತ ಸಾವು ಕಂಡಿರುವುದಾಗಿ ಹೇಳಿದ್ದಾರೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಕೆ ಅರುಣ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿ ಕೂಲಿ ಕೆಲಸಕ್ಕಾಗಿ ಕೇರಳದಿಂದ ಬ್ರಹ್ಮಾವರಕ್ಕೆ ಬಂದಿದ್ದ. ಹಾಗಾಗಿ ಆತನ ಕುಟುಂಬದವರಿಗೆ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದೇವೆ. ಅವರು ಬಂದು ದೂರು ನೀಡಿದ ಬಳಿಕ ಮುಂದಿನ ತನಿಖೆ ಮತ್ತು ಕ್ರಮ ಜರುಗಲಿದೆ ಎಂದು ಹೇಳಿರುವ ಎಸ್ಪಿ, ಇದು ಲಾಕಪ್ ಡೆತ್ ಪ್ರಕರಣವಾಗಿರುವುದರಿಂದ ನಿಯಮದಂತೆ ಸಿಐಡಿ ತನಿಖೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.