ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟ | ಮತ್ತಿಬ್ಬರು ಸಾವು; ಮೃತರ ಸಂಖ್ಯೆ 8ಕ್ಕೆ ಏರಿಕೆ
ಡಿ.22 ರಂದು ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಸಿಲಿಂಡರ್ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಒಂಭತ್ತು ಮಂದಿ ಮಾಲಾಧಾರಿಗಳು ಗಾಯಗೊಂಡಿದ್ದರು. ಸೋಮವಾರ ರಾತ್ರಿ ಹಾಗೂ ಮಂಗಳವಾರ ಮತ್ತಿಬ್ಬರು ಮೃತಪಟ್ಟಿದ್ದು, ಘಟನೆಯಲ್ಲಿ ಮಡಿದವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ಹುಬ್ಬಳ್ಳಿಯಲ್ಲಿ ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಡಿ.22 ರಂದು ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಒಂಭತ್ತು ಮಂದಿ ಮಾಲಾಧಾರಿಗಳು ಗಾಯಗೊಂಡಿದ್ದರು. ಸೋಮವಾರ ರಾತ್ರಿ ಹಾಗೂ ಮಂಗಳವಾರ ಮತ್ತಿಬ್ಬರು ಮೃತಪಟ್ಟಿದ್ದು, ಘಟನೆಯಲ್ಲಿ ಮಡಿದವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ಮಾಲಾಧಾರಿಗಳಾದ ಲಿಂಗರಾಜು ಬಿರನೂರು, ಪ್ರಕಾಶ್ ಬಾರಕೇರ, ವಿನಾಯಕ್ ಬಾರಕೇರ, ತೇಜಸ್ ಸತಾರೆ, ಶಂಕರ್ ಚವ್ಹಾಣ್, ಮಂಜುನಾಥ್ ವಾಗ್ಮೋರೆ, ನಿಜಲಿಂಗಪ್ಪ ಬೇಪೂರ, ರಾಜು ಮೂಗೇರಿ, ಸಂಜಯ್ ಸವದತ್ತಿ, ಪ್ರವೀಣ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು. ಹುಬ್ಬಳ್ಳಿಯ ಉಣಕಲ್ ನಿವಾಸಿ ಪ್ರಕಾಶ ಬಾರಕೇರ (42) ಮಂಗಳವಾರ ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ ತೇಜಸ್ ಸತಾರೆ (27) ಮೃತಪಟ್ಟಿದ್ದರು. ಬದುಕುಳಿದ ಕೊನೆಯ ಗಾಯಾಳು ಸ್ಥಿತಿಯೂ ಗಂಭೀರವಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಹುಬ್ಬಳ್ಳಿಯ ಅಚ್ಚವ್ವನ ಕಾಲೊನಿಯ ಈಶ್ವರ ದೇವಸ್ಥಾನದಲ್ಲಿ ಸಂಭವಿಸಿದ್ದ ಭೀಕರ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡವರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಬೆಂಗಳೂರು ಸೇರಿದಂತೆ ವಿವಿಧೆಡೆಯ ತಜ್ಞ ವೈದ್ಯರನ್ನು ನಿಯೋಜಿಸಲಾಗಿತ್ತು.
ಕಿಮ್ಸ್ ಆಸ್ಪತ್ರೆ ನಿರ್ದೇಶಕ ಎಸ್.ಎಫ್. ಕಮ್ಮಾರ ನೇತೃತ್ವದಲ್ಲಿ ವೈದ್ಯರ ತಂಡ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಮೃತರಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.
ಉಣಕಲ್ ನಿವಾಸಿಗಳಾದ ಪ್ರಕಾಶ್ ಬಾರಕೇರ ಹಾಗೂ ಅವರ ಪುತ್ರ ವಿನಾಯಕ ಬಾರಕೇರ ಅಯ್ಯಪ್ಪ ಮಾಲೆ ಧರಿಸಿದ್ದರು. ಸಿಲಿಂಡರ್ ಸ್ಫೋಟದ ವೇಳೆ ಇಬ್ಬರೂ ಗಂಭೀರ ಗಾಯಗೊಂಡಿದ್ದರು. ಈ ಪೈಕಿ ಮಂಗಳವಾರ ಬೆಳಿಗ್ಗೆ ಪ್ರಕಾಶ್ ಬಾರಕೇರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಮಗ ವಿನಾಯಕ ಬಾರಕೇರ ಶೇ.40 ರಷ್ಟು ಸುಟ್ಟಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಮುಂದುವರಿದಿದೆ. ಕಡಿಮೆ ಪ್ರಮಾಣದ ಸುಟ್ಟ ಗಾಯಗಳಾಗಿರುವ ಕಾರಣ ವಿನಾಯಕ್ ಬಾರಕೇರ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಪ್ರಕಾಶ್ ಬಾರಕೇರ ಕುಟುಂಬ ಆಸ್ಪತ್ರೆಯ ಎದುರು ರೋಧಿಸುತ್ತಿತ್ತು. ಮನೆಯ ಯಜಮಾನನ್ನು ಕಳೆದುಕೊಂಡ ಕುಟುಂಬ ಈಗ ಮಗನ ಸ್ಥಿತಿಯು ಬಗ್ಗೆ ಆತಂಕಗೊಂಡಿದೆ.
ಡಿ.22 ರಂದು ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, ಊಟ ಮಾಡಿ ಮಲಗಿದ್ದರು. ರಾತ್ರಿ 1.30 ರ ಸುಮಾರಿಗೆ ಅನಿಲ ಸೋರಿಕೆಯಾಗಿ, ದೇವರ ಮುಂದೆ ಹಚ್ಚಿಟ್ಟಿದ್ದ ದೀಪದ ಬೆಂಕಿ ತಗುಲಿ ಸಿಲಿಂಡರ್ ಸ್ಫೋಟಗೊಂಡಿತ್ತು. ದೇವಸ್ಥಾನದ ಕೊಠಡಿಯಲ್ಲಿ ಮಲಗಿದ್ದ ಒಂಭತ್ತೂ ಮಂದಿ ತೀವ್ರ ಗಾಯಗೊಂಡಿದ್ದರು.