ಕೂಡ್ಲಗಿ: ಓವರ್‌ಟೇಕ್ ಭರಾಟೆಯಲ್ಲಿ ಲಾರಿಗೆ ಬಸ್ ಡಿಕ್ಕಿ, ಇಬ್ಬರ ದುರ್ಮರಣ
ಗಾಯಗೊಂಡವರನ್ನು ಸೈಯದ್, ಅರುಣ್, ಮಂಜುನಾಥ್, ಹನುಮಗೌಡ, ವಿಶ್ವೇಶ, ಬಾಬುಜಾನ್ ಹಾಗೂ ಸುನೀಲ್ ಎಂದು ಗುರುತಿಸಲಾಗಿದ್ದು, ಮೃತರ ವಿವರ ಪತ್ತೆಯಾಗಿಲ್ಲ. ಡಿಕ್ಕಿಯ ರಭಸಕ್ಕೆ ಬಸ್ ಮುಂಭಾಗ ಹಾಗೂ ಲಾರಿ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ.;
ಓವರ್‌ಟೇಕ್ ಮಾಡುವ ಭರದಲ್ಲಿ ಖಾಸಗಿ ಬಸ್‌ವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟು, ಎಂಟು ಮಂದಿ ಗಾಯಗೊಂಡಿರುವ ದಾರುಣ ಘಟನೆ ತಾಲೂಕಿನ ಬಿಷ್ಣಹಳ್ಳಿ ಬಳಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ.
ಮುದಗಲ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ 'ಸುಗಮ' ಸಂಸ್ಥೆಗೆ ಸೇರಿದ ಖಾಸಗಿ ಬಸ್, ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಅಪಘಾತಕ್ಕೀಡಾಗಿದೆ. ಲಾರಿಯೊಂದನ್ನು ಓವರ್‌ಟೇಕ್ ಮಾಡಲು ಯತ್ನಿಸಿದ ಚಾಲಕ, ಅತೀವೇಗ ಮತ್ತು ಅಜಾಗರೂಕತೆಯಿಂದ ಮುಂದೆ ಸಾಗುತ್ತಿದ್ದ ಮತ್ತೊಂದು ಲಾರಿಗೆ ಹಿಂಬದಿಯಿಂದ ರಭಸವಾಗಿ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ರಭಸಕ್ಕೆ ಬಸ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಗೊಂಡ ಎಂಟು ಮಂದಿಯನ್ನು ಸೈಯದ್, ಅರುಣ್, ಮಂಜುನಾಥ್, ಹನುಮಗೌಡ, ವಿಶ್ವೇಶ, ಬಾಬುಜಾನ್ ಹಾಗೂ ಸುನೀಲ್ ಎಂದು ಗುರುತಿಸಲಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಪಘಾತದ ತೀವ್ರತೆಗೆ ಬಸ್‌ನ ಮುಂಭಾಗ ಮತ್ತು ಲಾರಿಯ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ.
ಘಟನಾ ಸ್ಥಳಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್., ಕೂಡ್ಲಿಗಿ ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ, ಕೊಟ್ಟೂರು ಸಿಪಿಐ ದುರುಗಪ್ಪ ಹಾಗೂ ಕಾನಹೊಸಹಳ್ಳಿ ಪಿಎಸ್‌ಐ ಸಿದ್ದರಾಮ ಬಿದರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸ್ ಚಾಲಕನ ವಿರುದ್ಧ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.